Community HealthDharmasthalaNews

15ನೇ ವರ್ಷಕ್ಕೆ ಕಾಲಿಟ್ಟ ಸಂಪೂರ್ಣ ಸುರಕ್ಷಾ ಕಾರ್ಯಕ್ರಮ

ಸ್ವಸಹಾಯ ಸಂಘಗಳ ಸದಸ್ಯರ ಆರೋಗ್ಯ ರಕ್ಷಣೆಗಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಆಶಯದ ಕಾರ್ಯಕ್ರಮವಾಗಿ ಹೊರಹೊಮ್ಮಿರುವ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮಾ ಕಾರ್ಯಕ್ರಮವು 14 ವರ್ಷಗಳ ಯಶಸ್ವಿ ಸೇವೆಯನ್ನು ಪೂರೈಸಿ, 2018-19ರ ಸಾಲಿಗೆ ಪುನಃ ಅನುಷ್ಠಾನಗೊಳ್ಳಲಿದೆ. ಈ ಅವಧಿಯಲ್ಲಿ ಸುಮಾರು 9 ಲಕ್ಷ ಸದಸ್ಯರಿಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸಿ, ರೂ. 421.00 ಕೋಟಿ ಮೊತ್ತದ ಸೌಲಭ್ಯವನ್ನು ಸಂಪೂರ್ಣ ಸುರಕ್ಷಾ ಕಾರ್ಯಕ್ರಮದನ್ವಯ ವಿತರಿಸಲಾಗಿದೆ. ಪ್ರಾರಂಭದ ದಿನಗಳಲ್ಲಿ ರಾಷ್ಟ್ರದಲ್ಲಿಯೇ ಮೊದಲ ಸಮುದಾಯ ವಿಮಾ ಕಾರ್ಯಕ್ರಮ ಎಂದು ಹೆಸರು ಪಡೆದ ಈ ಯೋಜನೆಯು ಕೇಂದ್ರ ಸರಕಾರದ ಯೂನಿವರ್ಸಲ್ ಆರೋಗ್ಯ ವಿಮಾ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಸುರಕ್ಷಾ ಬಿಮಾ ಯೋಜನೆಗಳಿಗೂ ಮಾರ್ಗದರ್ಶಿ ಯೋಜನೆಯಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಸದಸ್ಯರ ಸಹಭಾಗಿತ್ವದಲ್ಲಿ ಯೋಜನೆಯ ಅನುದಾನದೊಂದಿಗೆ ಅನುಷ್ಠಾನಗೊಳ್ಳುತ್ತಿರುವ ಈ ಕಾರ್ಯಕ್ರಮಕ್ಕೆ 2018-19ರ ಸಾಲಿಗೆ ಸುಮಾರು 10 ಲಕ್ಷ ಸದಸ್ಯರು ನೋಂದಾವಣೆಗೊಂಡಿದ್ದು, ಇದಕ್ಕೆ ಬೇಕಾದ ವಿಮಾ ಪ್ರಿಮಿಯಂ ಮೊತ್ತ ರೂ. 47.00 ಕೋಟಿಯನ್ನು ವಿಮಾ ಕಂಪೆನಿಗಳಿಗೆ ಇಂದು ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ವಿತರಿಸಿದರು. ಈ ಸಮಯ ಹಾಜರಿದ್ದ ಓರಿಯಂಟಲ್ ವಿಮಾ ಕಂಪೆನಿಯ ಉಪಮಹಾಪ್ರಬಂಧಕರಾದ ಜ್ಯೋತಿನಾಥನ್, ಪ್ರಾದೇಶಿಕ ಪ್ರಬಂಧಕರಾದ ಮೀರಾ ಪಾರ್ಥಸಾರಥಿ, ಮುಖ್ಯ ಪ್ರಬಂಧಕರಾದ ಸುರೇಶ್ ಬಲರಾಮ್, ನ್ಯಾಷನಲ್ ವಿಮಾ ಕಂಪೆನಿಯ ಮುಖ್ಯ ಪ್ರಬಂಧಕರಾದ ಪ್ರತಿಭಾ ಶೆಟ್ಟಿ, ನ್ಯೂ ಇಂಡಿಯಾ ವಿಮಾ ಕಂಪೆನಿಯ ಮುಖ್ಯ ಪ್ರಬಂಧಕರಾದ ಶೋಭಾ ರಾಜಗಿರಿ, ಎನ್. ಪ್ರಭು, ಸೇಸಪ್ಪ ನಾಯ್ಕ ಮುಂತಾದವರು ಹಾಜರಿದ್ದು ವಿಮಾ ಪ್ರಿಮಿಯಮ್‍ಗಳನ್ನು ಸ್ವೀಕರಿಸಿದರು. ಇದೇ ಸಂದರ್ಭ ಯೋಜನೆಯ ಟ್ರಸ್ಟಿಯವರಾದ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್.ಮಂಜುನಾಥ್, ಸಂಪೂರ್ಣ ಸುರಕ್ಷಾ ನಿರ್ದೇಶಕರಾದ ಅಬ್ರಹಾಂ, ಯೋಜನಾಧಿಕಾರಿ ಶಿವಪ್ರಸಾದ್ ಮತ್ತಿತರರು ಹಾಜರಿದ್ದರು. 2018-19ರ ಸಾಲಿಗೆ ನಗದುರಹಿತ ಚಿಕಿತ್ಸೆ ನೀಡಲು 140 ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು, ಸಂಪೂರ್ಣ ಸುರಕ್ಷಾ ಪಾಲಿಸಿದಾರರು ಮತ್ತು ಅವರ ಕುಟುಂಬದ ಸದಸ್ಯರು ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಸದ್ರಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿದ ಡಾ| ಹೆಗ್ಗಡೆಯವರು ಈ ಕಾರ್ಯಕ್ರಮವು ಜನರಲ್ಲಿ ವಿಶೇಷ ಚೈತನ್ಯವನ್ನು ನೀಡಿದೆ ಎಂದು ಉಲ್ಲೇಖಿಸಿದರು.

Leave a Reply

Your email address will not be published. Required fields are marked *