AgricultureStudy Tourssuccess story

ಭತ್ತ ಬೇಸಾಯದಲ್ಲಿ ಸರಳ ಮಾದರಿ ಅಧಿಕ ಆದಾಯಕ್ಕೊಂದು ದಾರಿ

ಭತ್ತ ಕೃಷಿಯಲ್ಲಿ ಕೆಲಸ ಕಡಿಮೆಯಾದಷ್ಟು ರೈತರಿಗೊಂದಿಷ್ಟು ಕಾಸು ಜೇಬಲ್ಲುಳಿಯುತ್ತದೆ. ವರ್ಷ ಕಳೆದಂತೆ ಭೂಮಿಯಲ್ಲಿ ಇಳುವರಿ ಕುಂಠಿತವಾಗುತ್ತಿದೆ ಎನ್ನುವ ಆತಂಕ ರೈತರಲ್ಲಿರುವಾಗ ಕಡಿತಗೊಂಡ ಇಳುವರಿಯ ಆದಾಯದ ನಷ್ಟ ತುಂಬಿಕೊಳ್ಳಲು ಖರ್ಚಿನಲ್ಲಿ ಅಲ್ಪ ಸ್ವಲ್ಪ ಉಳಿಸಲೇಬೇಕು. ವಿಪರೀತ ರಸಗೊಬ್ಬರದ ಬಳಕೆ ಇಳುವರಿ ಕಡಿಮೆಯಾಗಲು ಕಾರಣ ಎನ್ನುವ ಸತ್ಯ ಅರಿವಿದ್ದಾಗಲೂ ರೈತರು ಹೆಚ್ಚು ರಸಗೊಬ್ಬರ ಉಣಿಸಲು ಮೀನಾಮೇಷ ಎಣಿಸುವುದಿಲ್ಲ. ಉಳಿದ ಬೆಳೆಗಿಂತ ಭತ್ತ ಕೃಷಿಯಲ್ಲಿ ರಸಗೊಬ್ಬರ ಬಳಕೆಯಲ್ಲಿ ಪೈಪೋಟಿ ಹೆಚ್ಚು. ‘ಮುಂದಿನ ದಿನದ ಆಲೋಚನೆ ಈಗೇಕೆ? ಪ್ರಸ್ತುತ ಹಣದ ಕಂತೆ ಎಣಿಸಿದರಾಯಿತು’ ಎನ್ನುವ ಮನೋಭಾವ ಹಲವರದು. ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ ಕರಿಬಸಪ್ಪ ಇವರದು. ಕಡಿಮೆ ಖರ್ಚಿನಲ್ಲಿ ಭತ್ತ ಕೃಷಿ ಕೈಗೊಂಡು ಅಧಿಕ ಲಾಭ ಗಳಿಸುತ್ತಿದ್ದಾರೆ.

ಪಿ, ಎಮ್, ಕರಿಬಸಪ್ಪ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನಲ್ಕುದುರೆ ಗ್ರಾಮದವರು. ಇವರದು ನಾಲ್ಕು ಎಕರೆ ಜಮೀನು. ಭತ್ತ ಕೃಷಿ ಮಾಡುತ್ತಿದ್ದ್ತಾರೆ. ಭತ್ತ ಕೃಷಿಯನ್ನು ಲಾಭದಾಯಕವಾಗಿ ಮಾಡಬೇಕಾದರೆ ಯಾಂತ್ರಿಕ್ರತ ನಾಟಿ ಸುಲಭ ಪರಿಹಾರ ಎನ್ನುವುದು ಇವರ ಅನುಭವದ ನುಡಿ. ಬಹಳ ವರ್ಷಗಳಿಂದ ಸಾಮಾನ್ಯ ಮಾದರಿಯಲ್ಲಿ ಭತ್ತ ಕೃಷಿ ಮಾಡುತ್ತಿದ್ದ ಇವರಿಗೆ ಭತ್ತ ಕೃಷಿ ಬೇಸರ ತರಿಸಿತ್ತು. ಹಾಗಾಗಿ ಪರ್ಯಾಯ ಆಲೋಚನೆಯಲ್ಲಿದ್ದರು. ಕುಂದಾಪುರ ತಾಲೂಕಿಗೆ ರಾಜ್ಯ ಅದ್ಯಯನ ಪ್ರವಾಸಕ್ಕೆ ಹೋಗಿದ್ದ ಇವರು ಅಲ್ಲಿನ ಯಂತ್ರ ನಾಟಿ ವಿಧಾನವನ್ನು ಅದ್ಯಯನ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಆರ್ಥಿಕ ಸಹಕಾರ ಪಡೆದು ಯಂತ್ರ ಖರೀದಿಸಿ ತಂದರು. ಆರಂಭದಲ್ಲಿ ಇದರಲ್ಲಿ ಹಲವು ತೊಡಕುಗಳು ಎದುರಾದವು. ಆದಾಗ್ಯೂ ಅವುಗಳಿಗೆ ಸುಲಭ ಪರ್ಯಾಯ ಕ್ರಮಗಳನ್ನು ಕಂಡುಕೊಂಡು ಯಶಸ್ವಿಯಾಗಿ ಭತ್ತ ಕೃಷಿ ಮಾಡುತ್ತಿದ್ದಾರೆ.
ಯಾಂತ್ರಿಕೃತ ಭತ್ತ ಬೇಸಾಯದಿಂದ ಹೆಚ್ಚಿನ ಉಳಿತಾಯ ಸಾದ್ಯವಿದೆ ಎನ್ನುವುದು ಇವರ ಅಭಿಪ್ರಾಯ. ಉಳುಮೆ, ಬೀಜ ಗೊಬ್ಬರ, ಕಟಾವು, ಕೂಲಿ ವೆಚ್ಚ ಸೇರಿ 12,000 ರೂ ಖರ್ಚು ಮಾಡುತ್ತಾರೆ. ಯಂತ್ರವು ಸಾಲು ನಾಟಿ ಮಾಡುವುದರಿಂದ ರೋಗಗಳು ಬಹಳ ಕಡಿಮೆ. ಒಂದು ಬಾರಿ ಮಾತ್ರ ಸಿಂಪಡಣೆ ಮಾಡುತ್ತಾರೆ. ರಸಗೊಬ್ಬರ ಕಡಿಮೆ ಬಳಸುತ್ತಾರೆ. ಒಂದು ಎಕರೆಗೆ 32-35 ಕ್ವಿಂಟಾಲ್ ಇಳುವರಿ ಪಡೆಯುತ್ತಿದ್ದಾರೆ. ಕಳೆದ ವರ್ಷದ ಬೆಳೆಯಲ್ಲಿ ಕ್ವಿಂಟಾಲ್ ಭತ್ತಕ್ಕೆ 1700 ರೂಪಾಯಿ ದರ ಸಿಕ್ಕಿದ್ದು 61,200 ರೂಪಾಯಿ ಆದಾಯ ಗಳಿಸಿದ್ದಾರೆ. ಖರ್ಚು ಕಳೆದು 49,200 ಲಾಭ ದೊರೆತಿದೆ. ಸಾಮಾನ್ಯ ಪದ್ದತಿಯ ಬೇಸಾಯದಲ್ಲಿ 25,000 ರೂಪಾಯಿ ಲಾಭ ಗಳಿಸಲೂ ಪರದಾಡಬೇಕಾಗುತ್ತಿತ್ತು ಎನ್ನುವ ಅಭಿಪ್ರಾಯ ಇವರದು.

Leave a Reply

Your email address will not be published. Required fields are marked *