AgricultureStudy Tourssuccess storyTraining

ಮನೆಯಂಗಳದಲ್ಲಿ ಹೂವಿನ ಕೃಷಿ

ಹತ್ತಾರು ಎಕರೆ ಜಮೀನು ಹೊಂದಿರುವವರು ಸಣ್ಣ ಆದಾಯ ತಂದುಕೊಡಬಲ್ಲ ಕೃಷಿ ಚಟುವಟಿಕೆಗಳ ಕಡೆಗೆ ಗಮನ ಹರಿಸುವುದು ಬಹಳೇ ವಿರಳ. ಆದರೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹಾಲಿವಾಣ ಗ್ರಾಮದ ಕೆ,ಬಿ ತಿಪ್ಪೇಶ್ ಮನೆಯಂಗಳದಲ್ಲಿ ಮಲ್ಲಿಗೆ ಹೂವಿನ ಕೃಷಿ ಕೈಗೊಂಡು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇವರದು ಆರು ಎಕರೆ ಜಮೀನು. ಮೂರು ಎಕರೆಯಲ್ಲಿ ಭತ್ತ ಕೃಷಿ ಮಾಡುತ್ತಿದ್ದಾರೆ. ಉಳಿದ ಮೂರು ಎಕರೆಯಲ್ಲಿ ಅಡಿಕೆ ಕೃಷಿ ಮಾಡುತ್ತಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸರ್ವಜ್ಞ ಪ್ರಗತಿಬಂಧು ತಂಡದ ಸದಸ್ಯರಾದ ಇವರು ಕೊಕ್ಕನೂರು ಗ್ರಾಮದಲ್ಲಿ ನಡೆದ ಹೂವಿನ ಕೃಷಿ ರೈತಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡು ತಾವೂ ಸಹ ಹೂವಿನ ಕೃಷಿ ಕೈಗೊಳ್ಳಬೇಕೆಂದು ಮನಸ್ಸು ಮಾಡಿದರು. ಧರ್ಮಸ್ಥಳ ಯೋಜನೆಯ ನೆರವಿನಿಂದ ಗಿಡಗಳನ್ನು ತರಿಸಿಕೊಂಡು ಕಾಲೆಕರೆಯಲ್ಲಿ ಗುಲಾಬಿ ಕೃಷಿ, ಐದು ಗುಂಟೆಯಲ್ಲಿ ಕಾಕಡ ಮಲ್ಲಿಗೆ ಬೆಳೆಸಿದ್ದಾರೆ.
ಕಾಲೆಕರೆಯಲ್ಲಿ ಮುಳ್ಳು ಹೈಬ್ರಿಡ್ ತಳಿಯ 300 ಗುಲಾಬಿ ಗಿಡಗಳನ್ನು ನಾಟಿ ಮಾಡಿದ್ದಾರೆ. ಗಿಡದಿಂದ ಗಿಡ ಐದು ಅಡಿ, ಸಾಲಿನಿಂದ ಸಾಲಿಗೆ ಆರು ಅಡಿ ಅಂತರದಲ್ಲಿ ಬೆಳೆಸಿದ್ದಾರೆ. ಮೇ-ಜೂನ್ ತಿಂಗಳು ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ನಿರಂತರ ಆದಾಯ ಪಡೆಯುತ್ತಿದ್ದಾರೆ. ದಿನ ನಿತ್ಯ 200-250 ಹೂ ಕೊಯ್ಲಿಗೆ ಸಿಗುತ್ತಿದೆ. ಒಂದು ಹೂವಿಗೆ ಒಂದು ರೂಪಾಯಿಯಂತೆ ದರ ಸಿಗುತ್ತಿದೆ. ಮಾಸಿಕ 4500-5000 ಗುಲಾಬಿ ಹೂ ಸಿಗುತ್ತಿದೆ.
ಮನೆಯ ಪಕ್ಕದಲ್ಲಿಯೇ 100 ಕಾಕಡ ಮಲ್ಲಿಗೆ ಗಿಡ ಬೆಳೆಸಿದ್ದಾರೆ. ದಿನವೊಂದಕ್ಕೆ 2-3 ಕೀ ಗ್ರಾಂ ಹೂ ಕೊಯ್ಲಿಗೆ ಸಿಗುತ್ತಿದೆ. ಡಿಸೆಂಬರ್-ಜನವರಿ ವೇಳೆಗೆ ದಿನ ನಿತ್ಯ 4-5 ಕಿಲೋ ಹೂ ಹರಿದ ಉದಾಹರಣೆಯೂ ಇದೆ ಎನ್ನುತ್ತಾರೆ. ಬೆರಳೆಣಿಕೆಯಷ್ಟು ಕಾಕಡ ಗಿಡಗಳು ತಿಂಗಳೊಂದಕ್ಕೆ 8-10,000 ರೂ ಆದಾಯ ತಂದುಕೊಡುತ್ತಿವೆ. ಹತ್ತಿರದ ಮಲೆಬೆನ್ನೂರು ಮಾರುಕಟ್ಟೆಗೆ ಹೂವುಗಳನ್ನು ತಲುಪಿಸುತ್ತಾರೆ. ಯೋಜನೆಯ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ನೀಡಿದ ಮಾಹಿತಿಯಿಂದ ಹೂವಿನ ಕೃಷಿ ಸಾಧ್ಯವಾಯಿತು ಎನ್ನುತ್ತಾರೆ ತಿಪ್ಪೇಶ್.

Leave a Reply

Your email address will not be published. Required fields are marked *