ಎಪ್ರಿಲ್-27 : ಇಂದು ತೆರೆಕಂಡ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು ಸೇರಿ ನಿರ್ಮಿಸಿರುವ ಟಿ ಎಸ್ ನಾಗಾಭರಣರವರ ನಿರ್ದೇಶನದ ಕಾನೂರಾಯಣ ಭರ್ಜರಿ ಓಪನಿಂಗ್ ಪಡೆದಿದೆ.ಎಲ್ಲಾ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತದೆ. ಚಿತ್ರ ನೋಡಿದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಯೆ ವ್ಯಕ್ತವಾಗಿದೆ.ಕುಟುಂಬ ಸಮೇತರಾಗಿ ನೋಡುವಂತಹ ಚಿತ್ರವಾಗಿದ್ದು ರಾಜ್ಯದಾದ್ಯಂತ 100 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಗೊಂಡಿದ್ದು ಎಲ್ಲಾ ಕಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಹಳ್ಳಿ ಎಂದ ಮೇಲೆ ಅಲ್ಲಿ ಒಳ್ಳೆಯವರಂತೆ ಕೆಟ್ಟವರು ಇರುತ್ತಾರೆ. ಮುಗ್ದ ರೈತನನ್ನು ಮೋಸ ಮಾಡಿ ಸಾವಿನ ಬಾಯಿಗೆ ತಳ್ಳುವವರು ಇರುತ್ತಾರೆ. ಅದೇ ರೈತರನ್ನ ಸ್ವಾವಂಭಿಗಳನ್ನಾಗಿ, ಸ್ವಾಭಿಮಾನಿಗಳನ್ನಾಗಿ ಮಾಡಬೇಕು ಎಂದು ಪಟತೊಟ್ಟವರು ಇರುತ್ತಾರೆ. ಕೆಟ್ಟವರನ್ನ ಮಟ್ಟ ಹಾಕುತ್ತಾ ಒಳ್ಳೆಯವರ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಾ ಅದರ ಜೊತೆಯಲ್ಲಿ ಸ್ವಸಹಾಯ ಸಂಘಗಳು ರೈತ ಮಹಿಳೆಯರ ಜೀವನಕ್ಕೆ ಶಕ್ತಿ ನೀಡುವ ಬಗೆಯ ಅಚ್ಚುಕಟ್ಟಾದ ಕಥೆಯೇ ಕಾನೂರಾಯಣ.
ರೈತರ ಸ್ವಾವಲಂಬನೆಯೇ ಸಿನಿಮಾ ಗುರಿ :ರೈತರ ಸಾವಿನ ಸಂಖ್ಯೆ ಕಡಿಮೆ ಆಗಬೇಕು, ರೈತ ಸ್ವಾವಲಂಬಿಗಳಾಗಬೇಕು. ಮಹಿಳೆಯರು ಆರ್ಥಿಕ ಶಿಸ್ತು ಹಾಗೂ ಉಳಿತಾಯ ಮಾಡುವುದನ್ನು ಕಲಿತುಕೊಳ್ಳಬೇಕು ಎನ್ನುವ ಸಂದೇಶದೊಂದಿಗೆ ನಿಷ್ಕಲ್ಮಷವಾದ ಪ್ರೀತಿ ಇದು ಕಾನೂರಾಯಣ ಚಿತ್ರದ ಕಥಾವಸ್ತು.
ಹಳ್ಳಿ ಹುಡುಗಿ ಪಾತ್ರಕ್ಕೆ ಜೀವ ತುಂಬಿನ ಸೋನು : ಕಾನೂರಾಯಣ ಸಿನಿಮಾದಲ್ಲಿ ನಟಿ ಸೋನು ಗೌಡ ಡಿ ಗ್ಮಾಮರ್ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಹಳ್ಳಿ ಹುಡುಗಿಯಾಗಿದ್ದುಕೊಂಡು ನಂತರ ಪಂಚಾಯ್ತಿ ಅಧ್ಯಕ್ಷೆಯಾಗಿ ಅಭಿನಯ ಮಾಡಿರೋ ಸೋನು ಆಕ್ಟಿಂಗ್ ನೋಡುಗರಿಗೆ ಇಷ್ಟವಾಗುತ್ತದೆ. ಕಮರ್ಷಿಯಲ್ ಪಾತ್ರಗಳು ಮಾತ್ರವಲ್ಲದೆ ಎಲ್ಲಾ ರೀತಿಯ ಪಾತ್ರಗಳನ್ನೂ ಸೋನು ಗೌಡ ನಿರ್ವಹಿಸಬಲ್ಲರು ಎನ್ನುವುದು ಈ ಚಿತ್ರದಲ್ಲಿ ನಿರೂಪಿಸಿದ್ದಾರೆ.
ಭರವಸೆ ಮೂಡಿಸುವ ನವ ನಾಯಕ : ಚಿತ್ರದಲ್ಲಿ ಮುಖ್ಯ ಪಾತ್ರಗಳು ಹೆಚ್ಚಾಗಿದ್ದು ನವ ನಾಯಕ ಮನು ಹೆಗ್ಡೆ ಅಭಿನಯದ ಮೂಲಕ ಪ್ರೇಕ್ಷಕರನ್ನ ಮೋಡಿ ಮಾಡುತ್ತಾರೆ. ಎರಡನೇ ಸಿನಿಮಾದಲ್ಲೇ ಮನು ಭರವಸೆಯ ನಾಯಕನಾಗಿ ಉಳಿದುಕೊಳ್ಳುವ ಎಲ್ಲಾ ಸಾಧ್ಯತೆಗಳಿದೆ ಎನ್ನುವ ಸೂಚನೆ ನೀಡುತ್ತಾರೆ.ನಾಯಕನಾಗಿ ಸ್ಕಂದ ಅಶೋಕ್ ಸದ್ಯ ಕಿರುತೆರೆಯಲ್ಲಿ ಬಾರಿ ಸದ್ದು ಮಾಡುತ್ತಿರುವ ನಟ ಸ್ಕಂದ ಅಶೋಕ್ ಕಾನೂರಾಯಣ ಸಿನಿಮಾದ ಮುಖ್ಯ ಪಾತ್ರಧಾರಿ. ಸಿಟಿಯಿಂದ ಬಂದು ಹಳ್ಳಿಯ ಜನರನ್ನು ಒಗ್ಗೂಡಿಸುವ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಕ್ಯಾಮೆರಾ ಕೈಚಳಕಕ್ಕೆ ಫುಲ್ ಮಾರ್ಕ್ಸ್ : ಕಾನೂರಾಯಣ ಸಿನಿಮಾಗೆ ಶ್ರೀನಿವಾಸ್ ರಾಮಯ್ಯ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಹಳ್ಳಿಯ ಸೌಂದರ್ಯವನ್ನು ತೆರೆಯಲ್ಲಿ ಕಟ್ಟುಕೊಡುವಲ್ಲಿ ಶ್ರೀನಿವಾಸ್ ಅವರ ಕೈಚಳಕ ತುಂಬಾ ಚೆನ್ನಾಗಿದೆ.
ಹಳ್ಳಿಗೆ ಕರೆದೊಯ್ಯುವ ಸಂಗೀತ : ಕಮರ್ಷಿಯಲ್ ಸಿನಿಮಾಗಳಿಗಿಂತಲೂ ಭಿನ್ನ ಎನ್ನಿಸುವಂತಿರುವ ಸಂಗೀತ ಕೆಲ ದೃಶ್ಯಗಳನ್ನ ಮನಸ್ಸು ಮುಟ್ಟುವಂತೆ ಮಾಡುತ್ತದೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ ಹಳ್ಳಿ ಜಾತ್ರೆ ಸಂಭ್ರಮದಿಂದ ದೂರವಾಗಿರುವ ಸಿಟಿ ಜನರಿಗೆ ಹಾಡುಗಳನ್ನ ನೋಡುವಾಗ ಒಂದು ಸುತ್ತು ಹಳ್ಳಿಗೆ ಹೋಗಿ ಬಂದ ಅನುಭವ ನೀಡುತ್ತೆ.
ಕೊನೆಯ ಮಾತು: ಹಳ್ಳಿ ಸೊಗಡಿನ ಸಿನಿಮಾಗಳು ಕಡಿಮೆ ಆಗುತ್ತಿರುವ ಸಮಯದಲ್ಲಿ ಹಳ್ಳಿಯಲ್ಲಿನ ರಾಜಕೀಯ, ಅಲ್ಲಿನ ಹೆಣ್ಣು ಮಕ್ಕಳ ಪಾಡು, ಸ್ವಸಹಾಯ ಸಂಘದಿಂದಾಗುವ ಉಪಯೋಗ ಇವುಗಳನ್ನೆಲ್ಲಾ ತಿಳಿದುಕೊಳ್ಳಲು ಹಾಗೂ ವರ್ಷ ಪೂರ್ತಿ ಮನೆಯಲ್ಲೇ ಕುಳಿತು ಕೆಲಸ ಮಾಡುವ ಮಹಿಳೆಯರಿಗೆ ಕಾನೂರಾಯಣ ಒಂದು ವಿಶೇಷ ಸಿನಿಮಾ. ಅದರ ಜೊತೆಯಲ್ಲಿ ಸ್ವ-ಸಹಾಯ ಸಂಘದಿಂದ ಸಿನಿಮಾವನ್ನೂ ನಿರ್ಮಾಣ ಮಾಡಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆ.