AgricultureNews

ವಿಶ್ವ ಪರಿಸರ ದಿನಾಚರಣೆ – ಸಸಿ ವಿತರಣೆ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ

ತಿ.ನರಸೀಪುರ-ಬಿಳಿಗೆರೆಹುಂಡಿ ದಾಸೋಹ ಮಠದ ಶ್ರೀಗುರುಸ್ವಾಮಿಗಳು ಉದ್ಘಾಟನೆ ಮಾಡಿ ಗಿಡಗಳನ್ನು ವಿತರಣೆ ಮಾಡುವುದರೊಂದಿಗೆ ಯೋಜನೆಯ ಕಾರ್ಯಕ್ರಮಗಳ ಕುರಿತು ಶುಭ ಹಾರೈಸಿದರು.
ಮುಖ್ಯ ಅತಿಥಿಗಳು ಸಂಜೀವ್ ನಾಯ್ಕ್, ಯೋಜನಾಧಿಕಾರಿಗಳು, ತಿ.ನರಸೀಪುರ ತಾಲೂಕು ಇವರು “ವೃಕ್ಷೋ ರಕ್ಷತಿ ರಕ್ಷಿತಃ” ಇಂದು ಮರಗಳನ್ನು ಹೆಚ್ಚಾಗಿ ಪೀಠೋಪಕರಣಗಳಿಗಾಗಿ ಕಡಿಯುತ್ತಿದ್ದು, ಮರಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ. ಇದರಿಂದ ಶುದ್ಧಗಾಳಿಯೂ ದೊರೆಯುವುದು ಕೂಡ ಕಷ್ಟವಾಗುವ ಪರಿಸ್ಥಿತಿ ಎದುರಾಗಿದ್ದು, ಇನ್ನೂ ಮಳೆಬೆಳೆಯೂ ಕಡಿಮೆ ಆಗಿರುವುದನ್ನು ಗಮನಿಸಬಹುದು. ಇದಕ್ಕೆ ಮೂಲ ಕಾರಣ ಪರಿಸರ ಸಂರಕ್ಷಣೆಯನ್ನು ಮಾಡದಿರುವುದು ಹಾಗೂ ಪರಿಸರ ಸಂರಕ್ಷಣೆಯ ಮುಖೇನ ಗಿಡಗಳನ್ನು ಬೆಳೆಸಲು ಸಹಕರಿಸದೇ ಇರುವುದು ಹಾಗೂ ಪಾಲನೆ ಪೋಷಣೆಯ ಕೊರತೆ. ಆದ್ದರಿಂದ, ಸಾಧ್ಯವಾದಷ್ಟೂ ಗಿಡಗಳನ್ನು ನೆಡುವುದು, ಸಾಧ್ಯವಾದರೆ ಸೀಡ್ ಬಾಲ್‍ಗಳನ್ನು ಮಾಡಿ ಮಳೆಗಾಲದಲ್ಲಿ ಕಾಡು ಪ್ರದೇಶ ಹಾಗೂ ಬಯಲು ಪ್ರದೇಶದಲ್ಲಿ ಬಿಸಾಡುವುದು ನಾವು ಪರಿಸರಕ್ಕೆ ಕೊಡುವ ಕೊಡುಗೆ ಎಂದು ಹೇಳಿದರು.ಧರ್ಮಸ್ಥಳದ ನಿಯಮಗಳ ಬಗ್ಗೆ ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಪರಿಸರ ಸ್ವಚ್ಛತೆ, ಮನೆಯ ಒಳಗೆ ಹಾಗೂ ಹೊರಗಿನ ಸ್ವಚ್ಛತೆಗಳ ಬಗ್ಗೆ ತಿಳಿಸಿದರು. “ಮನೆಗೊಂದು ಗಿಡ ಊರಿಗೊಂದು ವನ” ಎಂಬ ಗಾದೆಯಂತೆ ಗಿಡಗಳನ್ನು ನೆಡುವ ಮುಖೇನ ಪರಿಸರ ಕಾಪಾಡಲು ಮುಂದಾಗಬೇಕು. ಯಾವುದೇ ಒಂದು ಗಿಡಗಳನ್ನು ನಮ್ಮ ಮಕ್ಕಳ ರೀತಿ ಬೆಳೆಸಿ ಪೋಷಿಸಬೇಕೆಂದು ಹೇಳಿದರು.

ಸಿದ್ದರಾಜು, ಮುಖ್ಯ ಶಿಕ್ಷಕರು, ಬಿಳಿಗೆರೆಹುಂಡಿ:-
ಜೂನ್ 05ನೇ ದಿನವನ್ನು ವಿಶ್ವ ಪರಿಸರ ದಿನಾಚರಣೆಯೆಂದು ಆಚರಿಸಲಾಗುತ್ತದೆ. ಪರಿಸರ ದಿನಾಚರಣೆಯನ್ನು ಆಚರಿಸಬೇಕೆಂಬ ನಿರ್ಧಾರವನ್ನು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು. ತದನಂತರ ಪ್ರಪಂಚಾಧ್ಯಂತ ಗಿಡ ನೆಡುವ ಸಂಭ್ರಮವನ್ನು ಆಚರಿಸಲಾಗುತ್ತಿದೆ. ನೆಲ, ಮಣ್ಣು, ಬೆಳೆ, ಹಣ್ಣು ಹಂಪಲು ಹೀಗೆ ಎಲ್ಲವೂ ಉಳಿಯುವಂತಾಗಲು ಈ ದಿನವನ್ನು ಜಾಗೃತ ದಿನವೆಂದು ಆಚರಿಸಲಾಗುತ್ತಿದೆ. ಆದ್ದರಿಂದ, ಪರಿಸರ ಸ್ನೇಹಿ ಜೀವನ ಕ್ರಮ ಅಳವಡಿಸಿಕೊಳ್ಳಿ, ಜಲಮಾಲಿನ್ಯ, ಶಬ್ದಮಾಲಿನ್ಯ, ವಾಯುಮಾಲಿನ್ಯಗಳಿಗೆ ಮನುಷ್ಯನೇ ಮೂಲ ಕಾರಣ. ಪರಿಸರ ಸ್ನೇಹಿ ಬಟ್ಟೆ ತೊಡುಗೆಗಳು, ಪ್ಲಾಸ್ಟಿಕ್ ಬಳಸದೇ ಎಲ್ಲೆಂದರಲ್ಲಿ ಬಿಸಾಕದೇ ಇರುವುದು ಆದಷ್ಟೂ ಕಡಿಮೆ ಕಸದ ಉತ್ಪತ್ತಿ, ನೀರಿನ ಮಿತವ್ಯಯ ಬಳಕೆ, ರಾಸಾಯನಿಕಗಳನ್ನು ಬಳಸದೇ ಇರುವುದು, ಬಯಲು ಮಲವಿಸರ್ಜನೆ ತಡೆಗಟ್ಟುವುದರಿಂದ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವುದು ಕೂಡ ಪರಿಸರ ಸ್ನೇಹಿ ಕಾರ್ಯಕ್ರಮಗಳೇ. ಈ ಎಲ್ಲಾ ಕೆಲಸಗಳನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವೆಂದು ಮಾಡಿದರೆ ಪರಿಸರ ಸಂರಕ್ಷಣೆಗೆ ಇದೇ ನಾವು ಕೊಡುವ ಉಡುಗೊರೆ ಹಾಗೂ ನಮ್ಮ ಮುಂದಿನ ಪೀಳಿಗೆ ನಾವು ಕೊಡುವ ಒಂದು ಅಮೂಲ್ಯ ಸಂಪತ್ತು ಎಂದು ತಿಳಿಸಿದರು.

ಅಶ್ವಿನ್ ಕುಮಾರ್, ಗ್ರಾಮಪಂಚಾಯಿತ್ ಅಧ್ಯಕ್ಷರು.
ಯೋಜನೆಯ ಕಾರ್ಯಕ್ರಮಗಳ ಕುರಿತು ಶುಭ ಹಾರೈಸಿದರು.

ಕಿರಗಸೂರು ಶಂಕರ್, ಜನಜಾಗೃತಿ ವೇದಿಕೆ ಸದಸ್ಯರು.
ನಮ್ಮ ಸುತ್ತಮುತ್ತಲಿನ ಪ್ರದೇಶವೇ ಪರಿಸರ. ಈ ಪರಿಸರವೂ ಮರಗಿಡಗಳು ಹಾಗೂ ಪ್ರಾಣಿ ಪಕ್ಷಿಗಳಿಂದ ಕೂಡಿದೆ. ಇದರೊಂದಿಗೆ ಮಾನವನು ಅನ್ಯೋನ್ಯತೆಯಿಂದ ಜೀವಿಸುತ್ತಾನೆ. ಇವೆಲ್ಲದರ ನಡುವೆ ಮಾನವರು ತನ್ನ ಸ್ವಾರ್ಥತೆಯನ್ನು ತೋರಿಸುತ್ತಾನೆ. ಪರಿಸರದ ಬಗೆಗಿನ ಕಾಳಜಿ ಕೇವಲ ಪರಿಸರ ದಿನಾಚರಣೆಯ ದಿನದಂದು ಮಾತ್ರ ಇರದೇ ಪ್ರತಿ ದಿನವು ಪರಿಸರ ದಿನಾಚರಣೆಯಾಗಬೇಕು ಎಂದರು. ಪರಿಸರದ ಸಂರಕ್ಷಣೆಗೆಂದು ಯೋಜನೆಯಿಂದ ನೀಡುತ್ತಿರುವ ಗಿಡಗಳನ್ನು ಇಂದಿನ ದಿನ ನೆಡುವುದು ಮಾತ್ರವಲ್ಲ ಅದನ್ನು ಸರಿಯಾಗಿ ನೀರು ಮತ್ತು ಗೊಬ್ಬರ ಹಾಕಿ ಬೆಳೆಸಬೇಕು ಪರಿಸರ ಸಂರಕ್ಷಣೆ ನಮ್ಮ ಹೊಣೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ನಾರಾಯಣ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ.ಟಿ, ಗ್ರಾಮಪಂಚಾಯಿತಿ ಸದಸ್ಯರಾದ ನಾಗರತ್ನ, ಒಕ್ಕೂಟದ ಅಧ್ಯಕ್ಷರಾದ ಮಹದೇವಮ್ಮ ಹಾಗೂ ತಿ.ನರಸೀಪುರ ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *