Community HealthEventsNews

ಜಾಗೃತಿ ಅಣ್ಣ ಜಾಗೃತಿ ಮಿತ್ರ ಪ್ರಶಸ್ತಿ ಪ್ರಧಾನ

ಧಾರವಾಡ ಜಿಲ್ಲೆಯಲ್ಲಿನ  105 ಮಂದಿ ಈಗ ಮದ್ಯ ಮುಕ್ತರಾಗಿದ್ದಾರೆ. ಉತ್ತಮ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಳೆಯ ದುಶ್ಚಟಗಳಿಂದ ಕೂಡಿರುವ ನರಕ ಜೀವನಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ತಾವು ಬಿಡುವುದಲ್ಲದೇ ಇತರರನ್ನು ಕೂಡ ಕುಡಿತ ಬಿಡುವಂತೆ ಮಾಡುವಲ್ಲಿ ಹಲವರು ಯಶಸ್ವಿಯಾಗಿದ್ದಾರೆ. ಹಾಗಾಗಿ ಅವರನ್ನು ಗುರುತಿಸಲು ಇಂದು ಜಾಗೃತಿ ಅಣ್ಣ ಹಾಗೂ ಜಾಗೃತಿ ಮಿತ್ರ ಪ್ರಶಸ್ತಿ ನೀಡಿದ್ದೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಧಾರವಾಡದ ರಾಯಾಪುರದಲ್ಲಿನ ಮಹಿಳಾ ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ ನಡೆದ ಮದ್ಯವರ್ಜನ ಶಿಭಿರದ ಕುಟುಂಬ ದಿನದ ಸಮಾರಂಭದಲ್ಲಿ ಮಾತನಾಡಿದರು.
ಎಲ್ಲವೂ ನಡೆಯುತ್ತಿರುವುದು ಮನಸ್ಸಿನಿಂದ ಮನಸ್ಸಿನ ಭಾವನೆ ಅನೇಕ ಪರಿವರ್ತನೆಗೆ ಕಾರಣವಾಗುತ್ತದೆ. ಬೇರೆ ಬೇರೆ ಧರ್ಮದವರು ತಮ್ಮ ವಿಶೇಷ ಹಬ್ಬದ ದಿನಗಳಲ್ಲಿ ಕೆಲವು ಕಟ್ಟುನಿಟ್ಟಿನ ಪಾಲನೆ ಮಾಡುವುದಿದೆ. ದೃಢ ಮನಸ್ಸಿನಿಂದ ಅವುಗಳನ್ನು ಮಾಡುತ್ತಿರುತ್ತಾರೆ. ಹಾಗೆಯೆ ಮಧ್ಯಪಾನ ಬಿಡುವವರು ದೃಢವಾಗಿರಬೇಕು. ಯಾವುದೇ ಜಾತಿ, ಧರ್ಮ ಇಲ್ಲದವರು ಎಂದರೆ ಮದ್ಯಪಾನ ಮಾಡುವವರು. ಅವರು ಯಾವತ್ತೂ ಒಟ್ಟಾಗಿ ಇರುತ್ತಾರೆ. ಹಾಗಗಿ ಮದ್ಯಪಾನ ಬಿಡುವುದು ಸುಲಭವಲ್ಲ. ಪಂಚೇಂದ್ರೀಯಗಳು ಎಲ್ಲವನ್ನೂ ಸೋಲಿಸುತ್ತವೆ. ಕಣ್ಣಿಗೆ ನೋಡಿದ ತಕ್ಷಣ ಬೇಕೆನ್ನಿಸುತ್ತದೆ. ಕಿವಿಗೆ ಕೇಳಿದ ತಕ್ಷಣ ಬೇಕೆನ್ನಿಸುತ್ತದೆ. ನಾಲಿಗೆಗೆ ಚಪಲಕ್ಕಾಗಿ ಬೇಕೆನ್ನಿಸುತ್ತದೆ. ಹಾಗಾಗಿ ಮದ್ಯಪಾನ ಬಿಡುವುದು ಸರಳವಲ್ಲ. ದೃಢ ನಿರ್ಧಾರ ಬೇಕು. ಪಂಚೇಂದ್ರೀಯಗಳ ಆಕರ್ಷಣೆಗೆ ಬಲಿಯಾದರೆ ಸಾಯುವ ಪರಿಸ್ಥಿತಿ ಬರಬಹುದು. ಯಾರಾದರೂ ಕುಡಿಯಲು ಒತ್ತಾಯ ಮಾಡಿದರೆ ದೂರ ಸರಿಯಿರಿ. ಅವರ ಒತ್ತಾಯಕ್ಕೆ ಮಣಿದು ನೀವು ಕುಡಿಯಲು ಆರಂಭಿಸಿದರೆ ಅದು ಅವರ ಕ್ಷಣಿಕ ಗೆಲುವು. ಅದು ನಿಮ್ಮ ಶಾಶ್ವತ ಸೋಲು ಆಗುತ್ತದೆ.
ಕೆಲವು ಸಂದರ್ಭಗಳಲ್ಲಿ ಮಹಿಳೆಯರೂ ಗಂಡನ ಕುಡಿತಕ್ಕೆ ಕಾರಣವಾಗುವುದಿದೆ. ಮಹಿಳೆಯರು ಪ್ರೀತಿ, ಪ್ರೇಮ, ವಿಶ್ವಾಸ, ಗೌರವದಿಂದ ಗಂಡನನ್ನು ಬದಲಾವಣೆ ಮಾಡಬೇಕು. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಸಾಂಸಾರಿಕ ಆರೋಗ್ಯದಿಂದ ಇರಬೇಕು. ನಿಮ್ಮನ್ನು ಪುನಃ ದುಶ್ಚಟಗಳಿಗೆ ಸೆಳೆಯುವ ಮಂದಿಯ ಶಕ್ತಿಗೆ, ಮದ್ಯಪಾನ ತಯಾರಿಸುವವರ ಒತ್ತಾಯಕ್ಕೆ ಶರಣಾಗಬೇಡಿ. ಎಲ್ಲರೂ ಮದ್ಯ ಮರೆತು ಉತ್ತಮ ಜೀವನ ಕಟ್ಟಿಕೊಳ್ಳಿ ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀಜಗದ್ಗುರು ಚನ್ನಬಸವಾನಂದ ಸ್ವಾಮೀಜಿಗಳು ಚನ್ನ ಬಸವೇಶ್ವರ ಜ್ಞಾನಪೀಠ ಕುಳವಿ ಅವರು ಮಾತನಾಡಿ ಧರ್ಮಸ್ಥಳ ಯೋಜನೆ ಲಕ್ಷಾಂತರ ಕುಟುಂಬಗಳ ಪಾಲಿಗೆ ಬೆಳಕಾಗಿದೆ. ಮದ್ಯಪಾನ ಮಾಡುವವರ ಮನಒಲಿಸಿ ಕುಡಿತ ಬಿಡುವಂತೆ ಮಾಡುತ್ತಿರುವುದು, ಅವರ ಕುಟುಂಬಗಳಲ್ಲಿ ನೆಮ್ಮದಿ ಮನೆ ಮಾಡುವಂತೆ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.

ಧಾರವಾಡ ಜಿಲ್ಲೆಯಲ್ಲಿ ಮದ್ಯ ಕುಡಿಯುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಮೊರಬ ಗ್ರಾಮವೊಂದರಲ್ಲೇ ಕುಡಿತ ಬಿಟ್ಟವರ ಸಂಖ್ಯೆ ಇನ್ನೂರಕ್ಕೂ ಅಧಿಕವಿದೆ. ಯಾವುದೇ ಔಷಧಿಗಳನ್ನು ನೀಡದೇ ಮನಸ್ಸು ಪರಿವರ್ತನೆ ಮಾಡುವ ಮೂಲಕ ಇಂತಹ ಕೆಲಸ ಮಾಡಲಾಗಿದೆ. ತಾವು ಕುಡಿತ ಬಿಡುವುದಲ್ಲಿದೇ ಕುಡಿತ ಬಿಟ್ಟವರು ಇನ್ನಿತರರನ್ನೂ ಕುಡಿತ ಬಿಡುವಂತೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ನಿರ್ದೇಶಕ ದಿನೇಶ್ ಎಮ್ ಹೇಳಿದರು.

ಜಿಲ್ಲಾ ಜನಜಾಗ್ರತಿ ವೇದಿಕೆಯ ಅದ್ಯಕ್ಷ ರಾಜಣ್ಣ ಕೊರವಿ, ಪ್ರಾದೇಶಿಕ ನಿರ್ದೇಶಕರಾದ ಜಯಶಂಕರ್ ಶರ್ಮಾ, ಸೀತಾರಾಮ್ ಶೆಟ್ಟಿ, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿಯ ರಾಜ್ಯ

 ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಮಹಾವೀರ ತ ಉಪಾಧ್ಯೆ, ಶಿಭಿರಾಧಿಕಾರಿ ಗಣೇಶ್, ಯೋಜನಾಧಿಕಾರಿ ಉಲ್ಲಾಸ್ ಮೇಸ್ತ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *