Communnity DevelopmentDharmasthalaNews

ಅಭೂತಪೂರ್ವ ಯಶಸ್ಸು ಕಂಡ ನಮ್ಮೂರು ನಮ್ಮ ಶ್ರದ್ದಾ ಕೇಂದ್ರ ಕಾರ್ಯಕ್ರಮ

ರಾಮ ರಾಜ್ಯದ ಕನಸು ಕಂಡ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸ್ಸನ್ನು ನನಸಾಗಿಸಲು ‘ಹಳ್ಳಿಯ ಉದ್ಧಾರವೇ ದೇಶದ ಉದ್ಧಾರ’ ಎಂಬ ತತ್ವದ ಅನುಷ್ಠಾನಕ್ಕೆ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಂಡು ಯಶಸ್ವಿ ಕಂಡವರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು.
ಚತುರ್ವಿದ ದಾನಗಳಿಗೆ ಹೆಸರುವಾಸಿಯಾದ ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಚ್ಚತೆಯ ಸಂಕೇತವೂ ಹೌದು. ಸ್ವಚ್ಚತೆಯಿದ್ದಲ್ಲಿ ಭಗವಂತನಿದ್ದಾನೆ ಎಂಬಂತೆ ಶ್ರೀ ಕ್ಷೇತ್ರದಲ್ಲಿ ಅನಾದಿಕಾಲದಿಂದಲೂ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬರಲಾಗದೆ, ಪರಿಣಾಮವಾಗಿ ರಾಷ್ಟ್ರಮಟ್ಟದಲ್ಲಿ “ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಚ್ಚ ಧಾರ್ಮಿಕ ನಗರಿ” ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ನಮ್ಮ ದೇಶದ ಪ್ರಧಾನಿಗಳ ಪರಿಕಲ್ಪನೆಯ ಸ್ವಚ್ಚ ಭಾರತ ಅಭಿಯಾನಕ್ಕೆ ಕೈ ಜೋಡಿಸಿದ ಪೂಜ್ಯರು ಕರ್ನಾಟಕ ರಾಜ್ಯದ ಎಲ್ಲಾ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಚತೆಗೆ ಗಮನ ಹರಿಸುವಂತೆ ಪ್ರೇರಣೆ, ಮಾರ್ಗದರ್ಶನ ನೀಡಿದರು. ಈ ಮೂಲಕ ಸಮಸ್ತ ಜನತೆಯಲ್ಲಿ ನಮ್ಮ ಊರಿನ ಶ್ರದ್ಧಾ ಕೇಂದ್ರಗಳ ಸ್ವಚ್ಚತೆಯನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಎಂಬ ಅರುವು ಮೂಡಿಸಲು “ನಮ್ಮೂರು ನಮ್ಮ ಶ್ರದ್ಧಾಕೇಂದ್ರ” ಎಂಬ ಧ್ಯೇಯ ವಾಕ್ಯದಂತೆ ಹಳ್ಳಿ ಹಳ್ಳಿಯಲ್ಲಿಯೂ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ಥಳೀಯ ಸಂಘಟನೆ, ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳ ಸಹಕಾರದ ಸಹಭಾಗಿತ್ವದೊಂದಿಗೆ ಕಳೆದ ಮೂರು ವರ್ಷಗಳಿಂದ ಮಕರ ಸಂಕ್ರಮಣ ಹಾಗೂ ಸ್ವಾತಂತ್ರ್ಯೋತ್ಸವದ ವಿಶೇಷ ಸಂದರ್ಭಗಳಲ್ಲಿ ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ವಚ್ಚತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗಿದೆ.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಲ್.ಹೆಚ್ ಮಂಜುನಾಥ್‍ರವರ ಮಾರ್ಗದರ್ಶನದಂತೆ ಇದೇ ಆಗಸ್ಟ್ 8 ರಿಂದ 15ರ ವರೆಗೆ ಸ್ವಚ್ಚತಾ ಅಭಿಯಾನವನ್ನು ‘ಸ್ವಚ್ಚತಾ ಸಪ್ತಾಹವಾಗಿ’ ಅನುಷ್ಠಾನಿಸಲಾಯಿತು. ರಾಜ್ಯದ ಮೂಲೆ ಮೂಲೆಗಳಲ್ಲಿರುವ ಮಂದಿರ, ಮಸೀದಿ, ಚರ್ಚ್‍ಗಳು ಸ್ವಚ್ಚತೆಯಿಂದ ಕಂಗೊಳಿಸಿದವು.
ಪ್ರಾದೇಶಿಕ ನಿರ್ದೇಶಕರು, ನಿರ್ದೇಶಕರು, ಯೋಜನಾಧಿಕಾರಿಗಳು, ಯೋಜನೆಯ ಸಿಬ್ಬಂದಿಗಳು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ತಮ್ಮನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಈ ಮೂಲಕ ಸ್ವಚ್ಚತಾ ಕಾರ್ಯವನ್ನು ನಿರಂತರವಾಗಿ ಹಮ್ಮಿಕೊಂಡು ಧಾರ್ಮಿಕ ಶ್ರದ್ಧಾಕೇಂದ್ರಗಳ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವ ಸಂದೇಶವು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಾಡಿನಾದ್ಯಂತ ಪಸರಿಸಿದಂತಾಗಿದೆ.

ರಾಜ್ಯದ್ಯಾಂತ ನಡೆದ 72ನೇ ಸ್ವಾತಂತ್ರ್ಯೊತ್ಸವದ ಸಂದರ್ಭದಲ್ಲಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದು ,ಅಭೂತಪೂರ್ವ ಯಶಸ್ಸನ್ನು ಸಾಧಿಸಲಾಗಿದೆ. ನಮ್ಮ ಗ್ರಾಮದ ಶ್ರದ್ಧಾಕೇಂದ್ರಗಳ ಸ್ವಚ್ಛತೆಯನ್ನು ನಡೆಸುವುದು ನಮ್ಮ ಜವಾಬ್ದಾರಿಯೆಂಬ ಅರಿವು ಜನರಲ್ಲಿ ಮೂಢಲಾರಾಂಬಿಸಿದೆ.ಇದರ ಪರಿಣಾಮವಾಗಿ ನಾಡಿನ ಎಲ್ಲಾ ಮಂದಿರ, ಮಸೀದಿ ಚರ್ಚ್‍ಗಳಲ್ಲಿ ಜಾತಿ ಮತ ಧರ್ಮ ಭೇದ ಮರೆತು ಜನರು ಭಾಗವಹಿಸಿದ್ದನ್ನು ಕಂಡುಕೊಳ್ಳಲಾಗಿದೆ.ಕಳೆದ ಮೂರು ವರ್ಷಗಳಿಂದ ಮಕರ ಸಂಕ್ರಾತಿ ಹಾಗೂ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗಿದ್ದು ರಾಜ್ಯದ ಒಟ್ಟು 10,281 ಶ್ರದ್ಧಾ ಕೇಂದ್ರಗಳು ಸ್ವಚ್ಛತೆಯ ಕಡೆಗೆ ಗಮನ ಹರಿಸಿದ್ದು 3,96,674 ಸ್ವಯಂ ಸೇವಕರು ಈ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯೋಜನೆಯ ಎಲ್ಲಾ ಸಿಬ್ಬಂದಿಗಳು, ಸ್ವಸಹಾಯ ಸಂಘದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಕೃತಜ್ಞತಾ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *