Community HealthDharmasthalaNews

ಪಾನಮುಕ್ತರ ಶತದಿನೋತ್ಸವ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ

ಧರ್ಮಸ್ಥಳ: “ದುಶ್ಚಟದ ಜೀವನ ದೌರ್ಬಲ್ಯ ಮತ್ತು ದೋಷದ ಬದುಕಾಗಿದೆ. ಇದರಿಂದ ಮದ್ಯವರ್ಜನ ಶಿಬಿರದ ಮೂಲಕ ಅಂತರಂಗ ಶುದ್ಧಿ ಪಡೆದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡುವ ಅವಕಾಶ ಪಡೆದ ನೀವು ಯೋಗ್ಯರು ಆಗಿದ್ದೀರಿ. ಸತತ ಪ್ರಯತ್ನ, ಹಟ ಸಾಧನೆ ಮಾಡಿ 100 ದಿನ ಪಾನಮುಕ್ತ ಜೀವನವನ್ನು ಅನುಭವಿಸಿ ಸಂಸಾರದ ಜೊತೆಯಲ್ಲಿ ಸುಖಾನುಭವ ಪಡೆಯುತ್ತಿರುವ ನಿಮಗೆ ದೇವರ ಆಶೀರ್ವಾದ ಇರಲಿ. ಒಕ್ಟೋಪಸ್, ಮೊಸಳೆ ಮುಂತಾದ ಜೀವಿಗಳು ಹಿಡಿಯುತ್ತವೆ, ಬಿಡಲ್ಲ. ಇದೇ ರೀತಿ ಮದ್ಯಪಾನ ವ್ಯಕ್ತಿಯನ್ನು, ಕುಟುಂಬವನ್ನು ಕಬಳಿಸಿ ಬಿಡುತ್ತದೆ. ಇದಕ್ಕಾಗಿ ಶಿಬಿರಗಳಲ್ಲಿ ಮಾನಸಿಕ ಪರಿವರ್ತನೆ, ಆತ್ಮಾವಲೋಕನ, ಸಲಹೆ ನೀಡಿ ದೃಢತೆ ಬರುವಂತೆ ಮಾಹಿತಿ ನೀಡಲಾಗುತ್ತದೆ. ಒಮ್ಮೆ ಕುಡಿತ ಬಿಟ್ಟವರು ಎಂದಿಗೂ ಮಗದೊಮ್ಮೆ ಆರಂಭಿಸಬಾರದು. ಆರೋಗ್ಯ, ಸಾಂಸಾರಿಕ ಸುಖ, ಸಾಮಾಜಿಕ ಗೌರವ, ಅಂತರಂಗ ಶುದ್ಧಿ, ಸಂಸಾರ, ಸಂಸ್ಕಾರ, ಇಂದ್ರಿಯಗಳ ಹತೋಟಿ ಮತ್ತು ಅಗ್ನಿ ಪರೀಕ್ಷೆಯೊಂದಿಗೆ ಜೀವನ ನಡೆಸಬೇಕು ಹಾಗೂ ಸಾರ್ವಕಾಲಿಕ ಸಂತೋಷವನ್ನು ಸದಾ ಪಡೆಯಬೇಕು” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಿಸಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿಯಲ್ಲಿ ನಡೆದ ಪಾನಮುಕ್ತರ ಶತದಿನೋತ್ಸವ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜ್ಯದ ಕಾರವಾರ, ಚಿಂತಾಮಣಿ, ತುರುವೇಕೆರೆ, ಹುಕ್ಕೇರಿ, ಬೈಂದೂರು, ಬೀಳಗಿ, ಬೆಳ್ತಂಗಡಿ, ಬೇಲೂರು, ಕಾಸರಗೋಡು ಕಡೆಗಳಿಂದ ಬಂದಂತಹ 600ಕ್ಕೂ ಮಿಕ್ಕಿದ ನವಜೀವನ ಸಮಿತಿ ಸದಸ್ಯರು ಮತ್ತು ಅವರ ಕುಟುಂಬಸ್ಥರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಪಾನಮುಕ್ತರಿಗೆ ನವಜೀವನದ ಗುರುತುಚೀಟಿ ವಿತರಣೆ ಮಾಡಲಾಯಿತು. ಶತದಿನೋತ್ಸವದ ಮಾಹಿತಿಯನ್ನು ನೀಡಿ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಕಾರ್ಯಕ್ರಮದಲ್ಲಿ ಬೈಂದೂರಿನ ಮಂಜುನಾಥ ಪೈ, ರಾಘವೇಂದ್ರ ಉಡುಪ, ಬೀಳಗಿಯ ಮಲ್ಲಪ್ಪ ತೋಳಮಟ್ಟಿ, ಬೆಳ್ತಂಗಡಿಯ ಶ್ರೀನಿವಾಸ ರಾವ್, ಬೇಬಿ ಚೆರಿಯನ್, ಡಿ.ಎ. ರಹಿಮಾನ್, ಕಾಸರಗೋಡಿನ ಜಿಲ್ಲಾಧ್ಯಕ್ಷರಾದ ಶ್ರೀ ಅಶ್ವಥ್ ಪೂಜಾರಿ, ಸೂರಜ್ ಶೆಟ್ಟಿ, ಚಿಂತಾಮಣಿಯ ಕುಪೇಂದ್ರಪ್ಪ, ತುರುವೆಕೆರೆಯ ಲೋಕೇಶ್, ಹೀಗೆ ವಿವಿಧ ಗಣ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಸಂಘಟನೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕರವರು ಮಾಡಿದ್ದು, ಯೋಜನಾಧಿಕಾರಿ ಜಯಕರ ಶೆಟ್ಟಿ, ಶಿಬಿರಾಧಿಕಾರಿಗಳಾದ ನಂದಕುಮಾರ್, ವಿದ್ಯಾಧರ್, ದಿವಾಕರ್, ಮಾಧವ, ಆರೋಗ್ಯ ಸಹಾಯಕಿಯರಾದ ಚಿತ್ರಾ, ನೇತ್ರಾವತಿ ಮತ್ತು ಫಿಲೋಮಿನಾ ರವರು ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಸಹಕರಿಸಿದರು. 

Leave a Reply

Your email address will not be published. Required fields are marked *