NewsTraining

ನೂತನವಾಗಿ ಆಯ್ಕೆಗೊಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಧರ್ಮಸ್ಥಳದಲ್ಲಿ ಶ್ರೀ ಹೆಗ್ಗಡೆಯವರ ಭೇಟಿ

ಬೆಳ್ತಂಗಡಿ; ಬದುಕಿನಲ್ಲಿ ಅವಕಾಶಗಳಿಗೆ ಯಾವತ್ತೂ ಕೊನೆಯಿಲ್ಲ. ಅವಕಾಶಗಳನ್ನು ಸೃಷ್ಟಿ ಮಾಡಿಕೊಂಡು ಜನತೆಯ ಧ್ವನಿಯಾಗಿ ಚಾರಿತ್ರ್ಯ ಬಿಟ್ಟುಕೊಡದೆ ಕೆಲಸ ಮಾಡುವುದು ಅತೀ ಅಗತ್ಯ. ಅವಕಾಶಗಳ ಬಳಕೆಯ ಮೇಲೆಯೇ ನಮ್ಮ ಯಶಸ್ಸು ನಿಂತಿದೆ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಹೇಳಿದರು.
ಬೆಳ್ತಂಗಡಿಯ ಸಿರಿಕಟ್ಟಡದಲ್ಲಿ ತರಬೇತಿ ಪಡೆಯುತ್ತಿರುವ ನೂತನವಾಗಿ ಆಯ್ಕೆಗೊಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಂಗಳವಾರ ಧರ್ಮಸ್ಥಳದಲ್ಲಿ ಶ್ರೀ ಹೆಗ್ಗಡೆಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಜನತೆಯ ಹಕ್ಕು ಹಾಗೂ ಸೌಲಭ್ಯಗಳು ಯಾವುದೇ ವಂಚನೆಗೆ ಒಳಗಾಗದೆ ಅವರಿಗೆ ದೊರಕುವಂತಾಗಬೇಕು. ಪ್ರಜಾಪ್ರಭುತ್ವದ ಈ ನಾಡಿನಲ್ಲಿ ಕಾರ್ಯಾಂಗ ಸಮರ್ಪಕವಾಗಿ ಕೆಲಸ ಮಾಡದಿದ್ದರೆ, ರಾಜ್ಯಾಂಗ ಸವಾರಿ ಮಾಡುತ್ತದೆ. ಇದಕ್ಕೆ ಅವಕಾಶ ಸಿಗದ ರೀತಿಯಲ್ಲಿ ನಿಮ್ಮ ಕೆಲಸ ನಡೆಯಬೇಕಾಗಿದೆ. ಜನಜೀವನದ ಮೂಲ ಇರುವುದೇ ಗ್ರಾಮೀಣ ಪ್ರದೇಶದಲ್ಲಿ ಎಂದ ಅವರು ಕೇಳುವವರಿಗೆ ಕೇಳುವ ಹಕ್ಕು ಇರುವ ಹಾಗೇ ಕೊಡುವವರಿಗೂ ಕೊಡುವ ಹಕ್ಕು ಅತೀ ಅಗತ್ಯ. ಆತ್ಮಸಾಕ್ಷಿ ಮತ್ತು ಮಾನವೀಯತೆ ಇವೆರಡೂ ನಿಮ್ಮ ಶಕ್ತಿಗಳಾಗಬೇಕು ಎಂದವರು ಹೇಳಿದರು.
ಉದ್ಯೋಗ ಎಂಬುವುದೇ ಯಶಸ್ಸು ನೀಡುವುದಿಲ್ಲ. ಇದರೊಂದಿಗೆ ಸಮಾಜಪರ ಮತ್ತು ಜನಪರ ಚಿಂತನೆ ಅಗತ್ಯ, ನಮ್ಮ ಮನಸ್ಸನ್ನು ಉದ್ಯೋಗದೊಂದಿಗೆ ಹೊಂದಾಣಿಕೆ ಮಾಡಕೊಳ್ಳಬೇಕು. ಹೃದಯಪೂರ್ವಕವಾಗಿ ಕೆಲಸ ನಡೆದಾಗ ಮಾತ್ರ ಉದ್ಯೋಗದ ಮತ್ತು ನಮ್ಮ ಮೂಲ ಉದ್ದೇಶಗಳು ಈಡೇರುತ್ತವೆ. ಜನಪ್ರತಿನಿಧಿಗಳು ಈ ವ್ಯವಸ್ಥೆ ಎಂಬ ವಾಹನದ ಚಾಲಕರು, ನೀವು ಯಂತ್ರಗಳು ಇದರಲ್ಲಿ ಯಾವುದೂ ಕೆಟ್ಟರೂ ವಾಹನ ಚಲಿಸಲಾರದು. ಈ ಬಗ್ಗೆ ಎಚ್ಚರಿಕೆ ಹೆಜ್ಜೆ ಅಗತ್ಯ ಎಂದವರು ತಿಳಿಸಿದರು.
ಜನತೆಗೆ ಮೂಲಭೂತ ಸೌಕರ್ಯ ನೀಡುವ ಜೊತೆಗೆ ಜನತೆಯೂ ಈ ಸಮಾಜದಲ್ಲಿ ಉತ್ತಮ ನಾಗರಿಕರಾಗುವಂತೆ ಪ್ರೇರಣೆ ತುಂಬುವ ಕೆಲಸಗಳು ನಡೆಯಬೇಕಾಗಿದೆ. ವಾಸ್ತವಿಕ ಸತ್ಯಗಳನ್ನು ಅರಿತುಕೊಂಡು ಕೆಲಸ ಮಾಡುವ ಜೊತೆಗೆ ನಿಮ್ಮ ಯೋಚನೆಗಳನ್ನು ಗ್ರಾಮೀಣ ಜನತೆಯ ಅಭಿವೃದ್ಧಿಗಾಗಿ ಮೀಸಲಾಗಿಡಿ. ಈ ಚಿಂತನೆ ಅವರೊಂದಿಗೆ ನಿಮ್ಮನ್ನೂ ಸದೃಢವಾಗಿ ಬೆಳೆಸುವುದರಲ್ಲಿ ಯಾವುದೇ ಸಂದೇಹ ಬೇಡ. ಜನತೆಯ ಅಂತರಂಗ ಅರಿತರೆ ಸಮಸ್ಯೆಗಳ ನಿವಾರಣೆ ಸುಲಭ. ಈ ನಿಟ್ಟಿನಲ್ಲಿ ಗ್ರಾಮೀಣ ಅಭಿವೃದ್ಧಿಯ ಸಾಧನೆಗೆ ಮುಂದಾಗಿ ಎಂದು ಹೆಗ್ಗಡೆಯವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಶುಭ ಕೋರಿದರು.
ದಾವಣಗೆರೆ ಹಾಗೂ ದಕ್ಷಿಣಕನ್ನಡ ಜಿಲ್ಲೆಗೆ ಆಯ್ಕೆಗೊಂಡ 48 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶ್ರೀ ಹಗ್ಗಡೆಯವರ ಭೇಟಿಯಲ್ಲಿ ಪಾಲ್ಗೊಂಡಿದ್ದರು. ಇವರೊಂದಿಗೆ ಲಾಯಿಲ ಗ್ರಾಮೀಣ ಶ್ರೇಷ್ಟತಾ ಕೇಂದ್ರದ ಪ್ರಾಂಶುಪಾಲರಾದ ಚಂದ್ರಶೇಖರ್ ಕಡಬ, ಮೈಸೂರು ಅಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ತರಬೇತಿ ಸಂಯೋಜಕರಾದ ಪತ್ರಕರ್ತ ಮೇಘಾ ಪಾಲೆತ್ತಾಡಿ, ಸುಧಾಮಣಿ ಬೆಳ್ತಂಗಡಿ ಭಾಗವಹಿಸಿದ್ದರು.

ಚಂದ್ರಶೇಖರ್

ಪ್ರಾಂಶುಪಾಲರು

Leave a Reply

Your email address will not be published. Required fields are marked *