Community HealthDharmasthalaNews

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ 122ನೇ ವಿಶೇಷ ಮದ್ಯವರ್ಜನ ಶಿಬಿರ

ಉಜಿರೆ, ಸೆ.24: ಮನುಷ್ಯನಲ್ಲಿ ಹಲವಾರು ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳಿವೆ. ಒಳ್ಳೆಯ ಅಭ್ಯಾಸಗಳಾದ ಯೋಗ, ದೇವರ ಪೂಜೆ, ರೋಗಿಗಳ ಭೇಟಿ, ಸಮಾಜ ಸೇವೆ ನಮ್ಮನ್ನು ಗೆಲ್ಲಿಸುತ್ತದೆ. ಕೆಟ್ಟ ಅಭ್ಯಾಸಗಳಾದ ಜೂಜಾಟ, ವ್ಯಸನಗಳು, ರೌಡಿಸಂ ಮುಂತಾದ ಅಭ್ಯಾಸಗಳು ನಮ್ಮನ್ನು ಸೋಲಿಸುತ್ತದೆ. ಮದ್ಯಪಾನ ಕೆಟ್ಟ ಅಭ್ಯಾಸಗಳಲ್ಲಿ ಒಂದಾಗಿದ್ದು, ಬಹಳಷ್ಟು ಇತರ ವ್ಯಸನಗಳಿಗೆ ಪ್ರೇರಣೆ ನೀಡಬಲ್ಲ ಕೆಟ್ಟ ಚಾಳಿಯಾಗಿರುತ್ತದೆ. ಮನುಷ್ಯನ ಶಕ್ತಿ, ಧ್ಯೆರ್ಯ ಮತ್ತು ಸ್ವಾಮಿತ್ವವನ್ನು ನಾಶ ಮಾಡಿ ರೋಗಗ್ರಸ್ಥರನ್ನಾಗಿ ಮಾಡುವುದೇ ಇದರ ಪ್ರಮುಖ ಗುಣ. ಕುಡುಕ ತಂದೆಯನ್ನು ಮಗ ಇಷ್ಟ ಪಡಲ್ಲ. ವ್ಯಸನವುಳ್ಳ ಮೇಸ್ಟ್ರು ವಿದ್ಯಾರ್ಥಿಗಳಿಗೆ ಇಷ್ಟವಿಲ್ಲ. ಕೆಟ್ಟ ಅಭ್ಯಾಸಗಳಿಂದ ಕೌರವರು ನಾಶವಾದರು. ಒಳ್ಳೆಯ ಗುಣಗಳಿಂದ ಪಾಂಡವರು ಯಶಸ್ವಿಯಾದರು. ಈ ಎಲ್ಲಾ ಗುಣಗಳು ಮನಸ್ಸಿನ ಮೇಲೆ ಹತೋಟಿ ಸಾಧಿಸುವುದರಿಂದ ಬರುತ್ತದೆ. ಈ ಮನಸ್ಸಿನ ಮೇಲೆ ಜಯ ಸಾಧಿಸಲು ಪ್ರೇರಣೆ ನೀಡುವುದೇ ಶಿಬಿರದ ಉದ್ದೇಶವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯ ಪಟ್ಟರು. ಅವರು ಉಜಿರೆಯ ಲಾೈಲದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 122ನೇ ವಿಶೇಷ ಮದ್ಯವರ್ಜನ ಶಿಬಿರದ 65 ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ವೇದಿಕೆಯ ರಾಜ್ಯಾದ್ಯಂತ ವಾರ್ಷಿಕವಾಗಿ 150 ಶಿಬಿರಗಳನ್ನು ಹಮ್ಮಿಕೊಂಡು 10,000ಕ್ಕೂ ಮಿಕ್ಕಿದ ಮದ್ಯವ್ಯಸನಿಗಳಿಗೆ ಸಮುದಾಯ ಶಿಬಿರಗಳ ಮೂಲಕ ಚಿಕಿತ್ಸೆ ಮತ್ತು ಸಲಹೆ ನೀಡುತ್ತಾ ಬಂದಿದೆ. ಈ ಎಲ್ಲಾ ಶಿಬಿರಗಳ ಶಿಬಿರಾರ್ಥಿಗಳು ಶತದಿನೋತ್ಸವದಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದವನ್ನು ಪಡೆಯುವುದರ ಜೊತೆಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಭಾಗ್ಯ ಪಡೆದುಕೊಳ್ಳುತ್ತಾರೆ. ಇದರ ಹೊರತಾಗಿ ಉಜಿರೆಯ ವ್ಯಸನಮುಕ್ತಿ ಕೇಂದ್ರದಲ್ಲಿ ವಾರ್ಷಿಕವಾಗಿ 25 ಶಿಬಿರಗಳನ್ನು ನಡೆಸಿ 1,500 ಶಿಬಿರಾರ್ಥಿಗಳನ್ನು ಮನಪರಿವರ್ತನೆ ಮಾಡುವ ಕೆಲಸ ಸಮರ್ಪಕವಾಗಿ ನಡೆಸಲಾಗುತ್ತಿದೆ. ಈ ಶಿಬಿರಗಳಿಗೆ ಡಾ| ಹೆಗ್ಗಡೆಯವರು ಭೇಟಿ ನೀಡಿ ಮಾಹಿತಿ ನೀಡುತ್ತಿರುವುದು ವಿಶೇಷವಾಗಿದೆ ಎಂದು ರಾಜ್ಯ ವೇದಿಕೆಯ ಕಾರ್ಯದರ್ಶಿ ಶ್ರೀ ವಿವೇಕ್ ವಿ. ಪಾೈಸ್ ತಿಳಿಸಿರುತ್ತಾರೆ. ಈ ಶಿಬಿರದಲ್ಲಿ ವೈಜ್ಞಾನಿಕವಾದ ಚಿಕಿತ್ಸೆ, ಆಧ್ಯಾತ್ಮಿಕತೆ, ನೈತಿಕತೆ, ಜೀವನ ಮೌಲ್ಯ, ನಾಯಕತ್ವ, ಸೌಹಾರ್ದತೆ ಹಾಗೂ ಸಾಮಾಜಿಕ ಸ್ಥಾನಮಾನದ ಕುರಿತಾದ ವಿಷಯಗಳಲ್ಲಿ ಪರಿಣತಿ ಉಳ್ಳವರನ್ನು ಕರೆಸಿ ಮಾಹಿತಿ ನೀಡಲಾಗುತ್ತಿದೆ. ಮನೋದೈಹಿಕ ಚಿಕಿತ್ಸೆಯನ್ನು ನುರಿತ ವೈದ್ಯರಿಂದ ದೊರಕಿಸಿ ಕೊಟ್ಟು ಕೇವಲ 8 ದಿನಗಳಲ್ಲಿ ಸಂಪೂರ್ಣ ಪರಿವರ್ತನೆಗೊಳ್ಳಲು ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಮೂಲಕ ಗೌಪ್ಯವಾಗಿ ವ್ಯಸನಮುಕ್ತರಾಗಲು ಬಹಳಷ್ಟು ಮಂದಿ ಈ ಕಾರ್ಯಕ್ರಮಕ್ಕೆ ದಾಖಲಾಗುತ್ತಿರುವುದು ವಿಶೇಷವಾಗಿದೆ. ಈ ಶಿಬಿರದಲ್ಲಿ ಓರ್ವ ವೈದ್ಯರು, 2 ವಕೀಲರು, 3 ಶಿಕ್ಷಕರು, 2 ಅಭಿಯಂತರರು, 7 ಸರಕಾರಿ ನೌಕರರು, 20 ಸ್ವ ಉದ್ಯೋಗಿಗಳು, 25 ಕೃಷಿಕರು ಮತ್ತಿತರ ಮಂದಿ ಭಾಗವಹಿಸಿರುತ್ತಾರೆ. ರಾಜ್ಯದ ವಿವಿಧೆಡೆಗಳಿಂದ ಬಂದ ಶಿಬಿರಾರ್ಥಿಗಳು ಶಿಬಿರದಲ್ಲಿ ಸಹೋದರತೆಯಿಂದ ಪಾಲ್ಗೊಂಡು ಪಾನಮುಕ್ತ ಜೀವನದ ಸಂಕಲ್ಪ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್, ಶಿಬಿರಾಧಿಕಾರಿ ನಾಗೇಶ್ ವೈ, ಮಾಧವ, ನಾಗರಾಜ್, ಆರೋಗ್ಯ ಸಹಾಯಕಿ ಫಿಲೋಮಿನಾ, ಸಲಹೆಗಾರರಾದ ಚೈತನ್ಯ ಉಪಸ್ಥಿತರಿದ್ದರು. 

 

ಶ್ರೀ ವಿವೇಕ್ ವಿ. ಪಾೈಸ್

One thought on “ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ 122ನೇ ವಿಶೇಷ ಮದ್ಯವರ್ಜನ ಶಿಬಿರ

Leave a Reply

Your email address will not be published. Required fields are marked *