News

ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ – ರಾಜ್ಯ ಜನಜಾಗೃತಿ ವೇದಿಕೆಯಿಂದ ಖಂಡನೆ

ಬೆಳ್ತಂಗಡಿ, ಸೆ.27: ರಾಜ್ಯದಲ್ಲಿ ಈಗಾಗಲೇ ಹತ್ತು ಸಾವಿರಕ್ಕೂ ಮೀರಿದ ಚಿಲ್ಲರೆ, ಬಾರ್, ಎಂಎಸ್‍ಎಲ್ ಮಳಿಗೆ, ಕ್ಲಬ್, ಸ್ಟಾರ್ ಹೊಟೇಲ್‍ಗಳಲ್ಲಿ ಲೈಸನ್ಸ್ ಇರುವ ಮಳಿಗೆಗಳ ಮೂಲಕ ಮದ್ಯ ಮಾರಾಟ ನಡೆಯುತ್ತದೆ. ಇದಲ್ಲದೆ ಬಹುತೇಕ ಅಂಗಡಿ ಮುಗ್ಗಟ್ಟುಗಳಲ್ಲಿ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ. ಯಾವುದೇ ಪರವಾನಿಗೆ ಇಲ್ಲದೆ ಮದ್ಯಮಾರಾಟ ಮಾಡುವವರು ನಿರಾತಂಕವಾಗಿ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯದಲ್ಲಿ ಅಬಕಾರಿ ಇಲಾಖೆಯವರು ಮದ್ಯ ಮಾರಾಟ ಮಾಡುವ ಏಜೆಂಟರಂತೆ ಕೆಲಸ ನಿರ್ವಹಿಸುತ್ತಿರುವುದು ಗಮನಿಸಲಾಗಿದೆ.
ಇತ್ತೀಚೆಗೆ ಮಾಧ್ಯಮದಲ್ಲಿ ಬಂದ ಮಾಹಿತಿಯಂತೆ ರಾಜ್ಯದಲ್ಲಿ ಮತ್ತೆ ವೈನ್‍ಶಾಪ್‍ಗಳಿಗೆ ಪರವಾನಿಗೆ ನೀಡಲು ತಯಾರಿ ನಡೆಯುತ್ತಿದ್ದು, ಅಬಕಾರಿ ಆಯುಕ್ತರು ಎಲ್ಲಾ ಅಬಕಾರಿ ಉಪ ಆಯುಕ್ತರಿಗೆ ಹೊಸದಾಗಿ ಚಿಲ್ಲರೆ ಮದ್ಯ ಮಾರಾಟದ ಅಂಗಡಿ ತೆರೆಯಲು ಅವಶ್ಯವಿರುವ ಸಿಎಲ್-2 ಸನ್ನದ್ದುಗಳ ಕುರಿತು ಮಾಹಿತಿ ಕ್ರೋಢೀಕರಿಸಿ ಶೀಘ್ರವೇ ಮರುಟಪ್ಪಾಲು ಮಾಡಬೇಕೆಂದು ಕೋರಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇನ್ನಷ್ಟು ಹೊಸ ಮದ್ಯದಂಗಡಿಗಳನ್ನು ತೆರೆಯಲು ಹಿಂಬಾಗಿಲಿನಿಂದ ಕೆಲಸ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಈ ಹಿಂದೆಯೂ ಹಲವಾರು ಬಾರಿ ಸರಕಾರ ಈ ವಿಚಾರದಂತೆ ಪ್ರಸ್ತಾಪಿಸಿ ಜನಜಾಗೃತಿ ವೇದಿಕೆಯ ಮೂಲಕ ರಾಜ್ಯಾದ್ಯಂತ ನಡೆಸಿದ ಹಕ್ಕೊತ್ತಾಯ ಚಳುವಳಿ ಹಾಗೂ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸಿದ ಪ್ರತಿಭಟನೆಯನ್ನು ಹಾಗೂ ರಾಜ್ಯಾದ್ಯಂತ ವಿವಿಧ ಸಂಘ ಸಂಸ್ಥೆಗಳ, ಪ್ರತ್ಯೇಕವಾಗಿ ಮಹಿಳೆಯರ, ಸಮಾಜಪರ ಚಿಂತಕರ, ಸ್ವಾತಂತ್ರ್ಯ ಹೋರಾಟಗಾರರ ಮತ್ತು ಜನರ ತೀವ್ರ ಆಕ್ರೋಶವನ್ನು ಪರಿಗಣಿಸಿ ಯೋಜನೆಯನ್ನು ಕೈಬಿಟ್ಟಿರುತ್ತಾರೆ. ರೈತರ ಸಾಲ ಮನ್ನಾಕ್ಕೆ ಪೂರಕವಾಗಿ ಮದ್ಯದಂಗಡಿಗಳಿಗೆ ಲೈಸನ್ಸ್ ನೀಡಿ ಹಣ ಜೋಡಣೆ ಮಾಡುವ ಗಲೀಜು ಸಂಪ್ರದಾಯಕ್ಕೆ ಸರಕಾರ ಕೈ ಹಾಕಬಾರದು. ಇದರ ಬದಲಿಗೆ ಬಿಹಾರ ರಾಜ್ಯದಲ್ಲಿ ಪಾನನಿಶೇಧ ಜ್ಯಾರಿ ಮಾಡಿದಂತೆ ರಾಜ್ಯದಲ್ಲೂ ಅನುಷ್ಠಾನ ತರಬೇಕು ಎಂದು ವೇದಿಕೆ ಆಗ್ರಹಿಸುತ್ತಿದೆ.
ಜನಜಾಗೃತಿ ವೇದಿಕೆಗೆ ಕಳೆದ 27 ವರ್ಷಗಳಿಂದ ವ್ಯಸನಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ವೇದಿಕೆ ಸ್ಥಾಪಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಗೌರವಾಧ್ಯಕ್ಷತೆಯಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆ, ಹತೋಟಿ, ನಿರ್ವಹಣೆ ಕುರಿತಂತೆ ಶ್ರಮಿಸುತ್ತಿದೆ. ಸರಕಾರ ಹೆಚ್ಚುವರಿ ಮದ್ಯದಂಗಡಿ ನೀಡಿದ್ದಲ್ಲಿ ವೇದಿಕೆಯ ಮೂಲಕ ನಡೆಸಿದ ಈ ಪ್ರಯತ್ನ ಸಫಲತೆಯತ್ತ ಸಾಗಲು ಅಡ್ಡಿಯಾಗುವುದಲ್ಲದೆ, ಈ ನಿಟ್ಟಿನಲ್ಲಿ ದುಡಿದ ಎಲ್ಲರಿಗೂ ಬೇಸರ ತಂದಿದೆ. ಸರಕಾರ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಸಮಾನ ಮನಸ್ಕರೊಂದಿಗೆ ರಾಜ್ಯದಲ್ಲಿ ತೀವ್ರ ಪ್ರತಿಭಟನೆ ನಡೆಸುವ ಅನಿವಾರ್ಯತೆ ಇದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಕೆ. ಸತೀಶ್ ಹೊನ್ನವಳ್ಳಿ, ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾೈಸ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಶ್ರೀ ವಿವೇಕ್ ವಿ. ಪಾೈಸ್

Leave a Reply

Your email address will not be published. Required fields are marked *