NewsTraining

ಕೌಶಲಾಭಿವೃದ್ಧಿ ತರಬೇತಿಗಳ ಉದ್ಘಾಟನಾ ಸಮಾರಂಭ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಂಘದ ಫಲಾನುಭವಿಗಳ ಕುಟುಂಬಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸುಸ್ಥಿರ ಜೀವನವನ್ನು ಸಾಗಿಸಲು ಹಾಗೂ ಸಮಾಜಕ್ಕೆ ಮಾದರಿಯಾಗಿ ಬದುಕಲು ಸಹಕಾರಿಯಾಗುವ ನಿಟ್ಟಿನಲ್ಲಿ ಕೌಶಲಾಭಿವೃದ್ಧಿ ತರಬೇತಿಗಳನ್ನು ಆಯೋಜಿಸುತ್ತಿದೆ. ಈ ಕೌಶಲಾಭಿವೃದ್ಧಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ನಾಲ್ಕು ದಿನಗಳ ಕಾಲ ವ್ಯಾಪಾರ/ಉದ್ದಿಮೆ, ಐದು ದಿನಗಳ ಡಿಸೈನ್‍ಡ್ ಬ್ಲೌಸ್ ಸ್ಟಿಚ್ಚಿಂಗ್ ಮತ್ತು ಕಂಪ್ಯೂಟರ್ ಸೈಬರ್ ಕೆಫೆ ಕೌಶಲಾಭಿವೃದ್ಧಿ ತರಬೇತಿಗಳ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ 21.01.2019 ರಂದು ಜ್ಞಾನವಿಕಾಸ ತರಬೇತಿ ಸಂಸ್ಥೆ ರಾಯಾಪುರ ಧಾರವಾಡ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸದ್ರಿ ತರಬೇತಿಯ ಉದ್ಘಾಟನೆಯನ್ನು ಜ್ಞಾನದ ಪ್ರತೀಕವಾದ ಜ್ಯೋತಿ ಬೆಳಗುವ ಮೂಲಕ ಜ್ಞಾನವಿಕಾಸ ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ| ಪ್ರಕಾಶ್ ಭಟ್ ಇವರು ಚಾಲನೆ ನೀಡಿದರು. ಶಿಬಿರಾರ್ಥಿಗಳನ್ನು ಉದ್ದೇಶಿಸಿ ‘ಕೌಶಲ ತರಬೇತಿಗಳು ನಮ್ಮ ಸ್ವ-ಉದ್ಯೋಗ ಜೀವನಕ್ಕೆ ಬೇಕಾದ ಆತ್ಮವಿಶ್ವಾಸ ತುಂಬುತ್ತವೆ. ಅದರೊಂದಿಗೆ ನಿರ್ದಿಷ್ಟವಾದ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಇತರರಿಗೆ ಮಾದರಿಯಾಗಿ ಗೌರವಪೂರ್ವಕ ಜೀವನ ನಡೆಸಲು ಸಹಕಾರಿಯಾಗಿವೆ. ಇಂತಹ ತರಬೇತಿಗಳನ್ನು ಹಾಗೂ ಜ್ಞಾನದ ಲಾಭವನ್ನು ಜ್ಞಾನವಿಕಾಸ ತರಬೇತಿ ಸಂಸ್ಥೆಯಿಂದ ತಾವೆಲ್ಲರೂ ಪಡೆದು ನಿಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳ್ಳಿ’ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತರಬೇತಿ ಸಂಸ್ಥೆಯ ಶ್ರೀ ಸಂತೋಷ್‍ರಾವ್ ಪಿ, ಉಪನ್ಯಾಸಕರಾದ ಶ್ರೀ ನಿಂಗಪ್ಪ ಜಿ, ಶ್ರೀಮತಿ ವಿಜಯಲಕ್ಷ್ಮಿ ನೆಗಳೂರು, ಹೊಲಿಗೆ ಶಿಕ್ಷಕಿಯಾದ ಶ್ರೀಮತಿ ಜ್ಯೋತಿ ಶಿಗ್ಗಾವಿ ಮತ್ತು ಕಂಪ್ಯೂಟರ್ ಶಿಕ್ಷಕಿಯಾದ ಕು.ಅಶ್ವಿನಿ ನಂದಿಹಳ್ಳಿ ಇವರು ಉಪಸ್ಥಿತರಿದ್ದರು. ಐದು ದಿನಗಳ ಕಾಲ ನಡೆಯಲಿರುವ ವಿವಿಧ ಕೌಶಲಾಭಿವೃದ್ಧಿ ತರಬೇತಿಗಳಲ್ಲಿ ಒಟ್ಟು 71 ಮಂದಿ ತರಬೇತಿಯ ಪ್ರಯೋಜನವನ್ನು ಪಡೆಯಲಿದ್ದಾರೆ.

Leave a Reply

Your email address will not be published. Required fields are marked *