“ಹಲವು ಬಾರಿ ಒಂದೇ ನಿರ್ದಿಷ್ಠ ಸ್ಥಳ, ಜೀವಿ ಅಥವಾ ವಸ್ತುವನ್ನು ನೋಡಿದಾಗ ನಮಗೆ ಪ್ರತಿಬಾರಿಯೂ ಒಂದೊಂದು ಆಲೋಚನೆ ಹಾಗೂ ವಿಶೇಷತೆಗಳನ್ನು ಕಾಣುತ್ತೇವೆ. ನಾವು ಬೆಳೆದಂತೆ ನಮ್ಮ ಆಲೋಚನಾ ಶಕ್ತಿಯು ಬೆಳೆಯುತ್ತಾ ಹೋಗುತ್ತದೆ. ಇದಕ್ಕೆ ಕಾರಣ ನಮ್ಮ ಸುತ್ತಮುತ್ತಲಿನ ಪರಿಸರ, ಅನುಭವ ಮತ್ತು ಸಮಯ. ಇವು ನಮ್ಮಲ್ಲಿ ಜ್ಞಾನದ ಪರಿಪಕ್ವತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಮಯವನ್ನು ಸದುಪಯೋಗಪಡಿಸಿಕೊಂಡು ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು. ನಮ್ಮಲ್ಲಿನ ಜ್ಞಾನ ಪರಿಪಕ್ವವಾದಾಗ ಮಾತ್ರ ಜೀವನ ಸುಲಭ ಸಾಧ್ಯ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ದೇಶ್ಪಾಂಡೆ ಫೌಂಡೇಶನ್ ವತಿಯಿಂದ ಲೀಡ್ ಪ್ರಯಾಣ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ವಿವಿಧ ರಾಜ್ಯಗಳ 135 ಮಂದಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಯಶಸ್ಸಿನ ಹಿಂದೆ ಹೋಗದೆ ಬದ್ಧತೆಯಿಂದ ಕೆಲಸ ಕರ್ತವ್ಯ ನಿರ್ವಹಿಸಿದಲ್ಲಿ ಯಶಸ್ಸು ತಾನಾಗೇ ನಮ್ಮ ಹಿಂದೆ ಬರುತ್ತದೆ. ನಮ್ಮ ಕೌಟುಂಬಿಕ ಜೀವನದ ಜೊತೆಗೆ ಸಾಮಾಜಿಕ, ಔದ್ಯೋಗಿಕ ಜೀವನವನ್ನೂ ಪ್ರೀತಿಸಿ, ಪಾಲಿಸಿದರೆ ಯಾರೂ ಕೂಡ ಯಶಸ್ಸಿನೆಡೆಗೆ ಸಾಗಬಹುದು ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್.ಮಂಜುನಾಥ್ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿ, ಕ್ಷೇತ್ರದ ಚರ್ತುದಾನಗಳ ಪರಂಪರೆ ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸಿಕೊಳ್ಳುವ ಬಗ್ಗೆ ವಿಶೇಷ ಮಾಹಿತಿ ನೀಡಿದರು.
ದೇಶ್ಪಾಂಡೆ ಫೌಂಡೇಶನ್ ವತಿಯಿಂದ ಪ್ರತಿವರ್ಷವೂ ನಡೆಸಿಕೊಡುವ ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯು ಆಯೋಜಿಸುತ್ತದೆ. ಲೀಡ್ ಪ್ರಯಾಣ ತಂಡವು ದಿನಾಂಕ.23.01.2019 ರಿಂದ ದಿನಾಂಕ.25.01.2019 ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಳ ಹಾಗೂ ಪ್ರೇಕ್ಷಣಿಯ ಸ್ಥಳಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು, ಸಿರಿ ಗ್ರಾಮೋದ್ಯೋಗ ಸಂಸ್ಥೆ, ರುಡ್ಸೆಟ್, ಸ್ವ-ಸಹಾಯ/ ಜ್ಞಾನವಿಕಾಸ ಸಂಘಗಳ ಭೇಟಿ, ಜನಜಾಗೃತಿ ವೇದಿಕೆ ಭೇಟಿ ಮಾಡಿ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಲೀಡ್ ಪ್ರಯಾಣ ತಂಡ ಭೇಟಿ
