ಕುಂದಗೋಳ ತಾಲೂಕಿನ ಎರೆಬೂದಿಹಾಳದ ಕುಡಿಯುವ ನೀರಿನ ಕೆರೆಯಾದ ಪರಮೇಶ್ವರ ಕೆರೆ ಭರ್ತಿ ಹೂಳಿನಿಂದ ತುಂಬಿತ್ತು. ಮುಳ್ಳು ಕಂಟಿಗಳಿಂದ ಮೈತುಂಬಿಕೊಂಡಿತ್ತು. ಜೀವ ಜಲ ತುಂಬಿರಬೇಕಾದ ಸ್ಥಳದಲ್ಲಿ ಕಲ್ಲು, ಮಣ್ಣು ತುಂಬಿದ್ದರಿಂದ ನೀರು ಆರಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಕೆರೆಯ ಹೂಳು ಮುಕ್ತಗೊಳಿಸಿ ಜನರಿಗೆ ನೀರಿನಾಸರೆ ಒದಗಿಸಲು ನಿರ್ಧರಿಸಿದಾಗ ಈ ಕಾರ್ಯಕ್ಕೆ ಊರಿಗೆ ಊರೇ ಸಹಕರಿಸಲು ನಿಂತಿತ್ತು. ಹೂಳು ಮುಕ್ತಗೊಳಿಸಿ ಕೆರೆಯ ಸೌಂದರ್ಯ ಇಮ್ಮಡಿಸುವಲ್ಲಿ ಪ್ರಯತ್ನಿಸಿದ ಎರೆಬೂದಿಹಾಳ ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ್ ಅಗಸಿಬಾಗಿಲು, ಇನ್ನೋರ್ವ ಗ್ರಾಮ ಪಂಚಾಯತ್ ಸದಸ್ಯರಾದ ಬಸವರಾಜ್ ಮಡ್ಲೂರು, ವಿ.ಎಸ್.ಎಸ್ ಬ್ಯಾಂಕ್ನ ಅದ್ಯಕ್ಷರಾದ ಮಂಜುನಾಥ್ ನಾಗಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪರಮೇಶ್ವರಪ್ಪ ಕಾರಡಗಿ, ಮಾದರಿ ಕೃಷಿಕರಾದ ರವಿರೆಡ್ಡಿ, ಸ್ಥಳೀಯರಾದ ಪವಾಡೆಪ್ಪ ಮಾಡಳ್ಳಿ ಅವರು ಹೇಳುವಂತೆ ಧರ್ಮಸ್ಥಳ ಯೋಜನೆ ಬಹಳ ಒಳ್ಳೆಯ ಕೆಲಸ ಮಾಡಿದೆ. ಈ ಬಾರಿ ನಮ್ಮ ಊರಿನ ಕೆರೆ ತುಂಬಿದೆ. ಇದರಿಂದ ಮೂವತ್ತಕ್ಕೂ ಅಧಿಕ ರೈತರು ಹೊಲಗಳಿಗೆ ನೀರು ಹಾಯಿಸಿ ಕೃಷಿ ಮಾಡಿ ಉತ್ತಮ ಫಸಲು ತೆಗೆದಿದ್ದಾರೆ ಎಂದರು.
ಮೂರೆಕರೆ ವಿಸ್ತೀರ್ಣದ ಕೆರೆಯದು. ಹತ್ತು ಸಾವಿರ ಲೋಡ್ ಮಣ್ಣು ಕೆರೆಯಿಂದ ಮೇಲೆತ್ತಲಾಗಿದೆ. ಐನೂರಕ್ಕೂ ಅಧಿಕ ರೈತರು ಕೆರೆಯ ಫಲವತ್ತಾದ ಹೂಳು ಮಣ್ಣನ್ನು ತಮ್ಮ ಹೊಲಕ್ಕೆ ಹೇರಿಸಿಕೊಂಡಿದ್ದಾರೆ. ಹಲವು ಸಾವಿರ ಎಕರೆಗೆ ಫಲವತ್ತಾದ ಮಣ್ಣು ರವಾನೆಗೊಂಡಿದೆ. ಹದಿನೈದಕ್ಕೂ ಅಧಿಕ ಕೊಳವೆ ಬಾವಿಗಳು ರೀ ಚಾರ್ಜ್ ಆಗಿವೆ. ಒಣಗುತ್ತಿದ್ದ ಬೆಳೆ ಉಳಿಸಿಕೊಳ್ಳಲು ಕೆರೆಯ ಸುತ್ತಲಿನ ಹಲವು ರೈತರು ಕೆರೆಯಲ್ಲಿ ತುಂಬಿದ್ದ ನೀರನ್ನೇ ಬಳಸಿಕೊಂಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೆರೆ ಹೂಳೆತ್ತಲು ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಅಡಿಯಲ್ಲಿ ಎಂಟು ಲಕ್ಷಕ್ಕೂ ಅಧಿಕ ಮೊತ್ತ ವಿನಿಯೋಗಿಸಿದೆ.
ಕೆರೆ ಮಣ್ಣಿನಿಂದ ಮುಕ್ತಿಗೊಂಡಿತು ಎರೆಬೂದಿಹಾಳ ಕೆರೆ
