DharmasthalaNewsTraining

ಜನಜಾಗೃತಿ ವೇದಿಕೆಯ ಕಾರ್ಯಕರ್ತರ ಕಾರ್ಯಾಗಾರ

ಧರ್ಮಸ್ಥಳ, ಮಾ:12: “ಜೀವನದ ಯಶಸ್ವಿಗೆ ಮನುಷ್ಯ ಸಾಧನಾ ಪ್ರೇರಣೆ, ಅಧಿಕಾರ ಪ್ರೇರಣೆ, ಸೇವಾ ಪ್ರೇರಣೆ, ವಿಸ್ತರಣಾ ಪ್ರೇರಣೆ ಎಂಬ ನಾಲ್ಕು ವಿಧದ ಮನಸ್ಥಿತಿಯನ್ನು ಅಳವಡಿಸಿಕೊಂಡು ಗುರಿ ತಲುಪಲು ಪ್ರಯತ್ನಿಸುತ್ತಾನೆ. ಸಾಧನಾ ಪ್ರೇರಣೆಗೆ ಧೀರೂಬಾೈ ಅಂಬಾನಿಯವರು ಉದಾಹರಣೆಯಾದರೆ, ಅಧಿಕಾರ ಪ್ರೇರಣೆಗೆ ರಾಜಕೀಯ ನೇತಾರರು, ಸೇವಾಪ್ರೇರಣೆಗೆ ಬಾಬಾ ಅಮ್ಟೆ, ಮದರ್ ತೆರೇಸಾ ರವರು ಸಾಕ್ಷಿಯಾದರೆ, ವಿಸ್ತರಣಾ ಪ್ರೇರಣೆಗೆ ಗುರಿಯಾಗುವ ಜನರು ಏನನ್ನೂ ಸಾಧಿಸಲಾರರು. ಜನಜಾಗೃತಿ ವೇದಿಕೆಯ ಕಾರ್ಯಕ್ರಮದಲ್ಲಿ ತೊಡಗಿರುವ ಕಾರ್ಯಕರ್ತರು ಸೇವಾ ಪ್ರೇರಣೆಯಿಂದ ಕೆಲಸ ಮಾಡಬೇಕಾಗಿದೆ. ಸಮಾಜ ಸೇವೆಯಲ್ಲಿ ತನ್ನನ್ನು ತಾನು ನಿಸ್ವಾರ್ಥತೆಯಿಂದ ತೊಡಗಿಕೊಳ್ಳಬೇಕಾಗುತ್ತದೆ. ಹತಭಾಗ್ಯ ಕುಟುಂಬಗಳ ಸೇವೆಯೇ ನನ್ನ ಧರ್ಮ ಎಂದು ತಿಳಿದು ಕೆಲಸ ಮಾಡಿದಾಗ ಸೇವೆ ಮಾಡಿದ ತೃಪ್ತಿ ಹಾಗೂ ಮನ:ಶಾಂತಿ ಸಿಗಲು ಸಾಧ್ಯ. ಜನಜಾಗೃತಿ ಕಾರ್ಯಕ್ರಮ ಮಾನವ ಸಂಬಂಧಿತವಾಗಿದೆ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳದ ಜ್ಞಾನವಿಕಾಸ ಸಭಾಂಗಣದಲ್ಲಿ ನಡೆದ ಜನಜಾಗೃತಿ ವೇದಿಕೆಯ ಕಾರ್ಯಕರ್ತರ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮಕ್ಕೆ ಪೂರಕವಾಗಿ ಮಂಗಳೂರಿನ ನಿಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮನೋವೈಜ್ಞಾನಿಕ ವಿಭಾಗದ ಪ್ರಾಯೋಜಕತ್ವದಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳ ವ್ಯಸನಿಗಳಿಗೆ ನೀಡುವ ಚಿಕಿತ್ಸಾ ವಿಧಾನಗಳ ವಿಶೇಷ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಮಾರ್ಚ್ 6ರಿಂದ 8ರವರಗೆ ನಡೆದ ಈ ತರಬೇತಿ ಕಾರ್ಯಾಗಾರದಲ್ಲಿ ಉದ್ಘಾಟಕರಾಗಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಪ್ರೊ. ಡಾ. ಎಂ.ಎಸ್.ಮೂಡಿತ್ತಾಯ ರವರು ಕಾರ್ಯಕ್ರಮಕ್ಕೆ ಶುಭ ಕೋರಿ ‘ವ್ಯಸನಮುಕ್ತ ಜೀವನ ಸಂತೋಷದಾಯಕವಾಗಿದೆ. ವ್ಯಸನದ ನಿರ್ಮೂಲನೆಗೆ ಪ್ರಯತ್ನಿಸುವುದು ಬಹಳ ಅಗತ್ಯ’ ಎಂದು ತಿಳಿಸಿದರು. ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮನೋರೋಗ ವಿಭಾಗದ ಮುಖ್ಯಸ್ಥರಾದ ಡಾ. ಸತೀಶ್ ರಾವ್, ಮತ್ತು ಡಾ. ಶ್ರೀನಿವಾಸ್ ಭಟ್ ಯು., ಡಾ. ಶಿಶಿರ್ ಕುಮಾರ್, ಡಾ. ಅಗ್ನೇಟ್ ಯೇಮನ್, ಡಾ. ಸಂತೋಷ್ ಪ್ರಭು, ಡಾ. ಪ್ರಭಾತ್ ಕೊಂಡಚ, ಡಾ. ಶ್ರೀಪಾದ್, ಡಾ. ಗಾಯತ್ರಿ ಭಟ್, ಡಾ. ಗುಣಸಾಗರಿ ರಾವ್, ಡಾ. ಟಿ.ಎಸ್.ತೋಮಸ್ ಉಪಯುಕ್ತ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿಗಳಾದ ಶ್ರೀ ತಿಮ್ಮಯ್ಯ ನಾಯ್ಕ್, ಶ್ರೀ ಗಣೇಶ್ ಆಚಾರ್ಯ, ಶ್ರೀ ಭಾಸ್ಕರ್ ಎನ್. ಉಪಸ್ಥಿತರಿದ್ದರು. ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮನೋರೋಗ ವಿಭಾಗದ ಸಲಹೆಗಾರರಾದ ಶ್ರೀಮತಿ ಸುಮನಾ ಪಿಂಟೋ ಕಾರ್ಯಕ್ರಮ ನಿರ್ವಹಿಸಿದರು. ಸಮುದಾಯ ಮದ್ಯವರ್ಜನ ಶಿಬಿರಗಳಲ್ಲಿ ಕೆಲಸ ಮಾಡುತ್ತಿರುವ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿಗಳಿಗೆ ಮತ್ತು ಆರೋಗ್ಯ ಸಹಾಯಕರಿಗೆ ತರಬೇತಿಯಿಂದ ಹೆಚ್ಚಿನ ಪ್ರೇರಣೆ ಮತ್ತು ಕೌಶಲ್ಯ ಲಭಿಸಿದಂತಾಗಿದೆ. ಇದೇ ಸಂದರ್ಭದಲ್ಲಿ 2019-2020ನೇ ಸಾಲಿನ ಕ್ರಿಯಾಯೋಜನೆ ಕುರಿತಂತೆ ಚರ್ಚಿಸಲಾಗಿದ್ದು, ಮುಂದಿನ ವರ್ಷದಲ್ಲಿ ರಾಜ್ಯದಾದ್ಯಂತ 161 ಮದ್ಯವರ್ಜನ ಶಿಬಿರಗಳನ್ನು ನಡೆಸಿ ಹತ್ತು ಸಾವಿರಕ್ಕೂ ಮಿಗಿಲಾಗಿ ವ್ಯಸನಿಗಳಿಗೆ ಚಿಕಿತ್ಸೆ ಮತ್ತು ಪ್ರೇರಣೆ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

One thought on “ಜನಜಾಗೃತಿ ವೇದಿಕೆಯ ಕಾರ್ಯಕರ್ತರ ಕಾರ್ಯಾಗಾರ

Leave a Reply

Your email address will not be published. Required fields are marked *