ಸಮುದಾಯದೊಂದಿಗೆ ಕೆಲಸವನ್ನು ನಿರ್ವಹಿಸುತ್ತಿರುವ ಸಮಾಜ ಸೇವಾ ಕಾರ್ಯಕರ್ತರು ಅಲ್ಲಿನ ಸೂಕ್ಷ್ಮತೆಗಳು, ಸಮಸ್ಯೆಗಳು ಹಾಗೂ ಸವಾಲುಗಳನ್ನು ಸಮರ್ಪಕವಾಗಿ ಅರಿತುಕೊಂಡು ಅವುಗಳಿಗೆ ಸೂಕ್ತ ಪರಿಹಾರವನ್ನು ನೀಡುವ ಮನಸ್ಥಿತಿಯನ್ನು ಬೆಳೆಸಿಕೊಂಡಲ್ಲಿ ಅತ್ಯುತ್ತಮ ಕಾರ್ಯಕರ್ತರಾಗಿ ಮೂಡಿಬರಲು ಸಾಧ್ಯ ಕಛೇರಿಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಯಕರ್ತರು ಕಛೇರಿ ಅವಧಿಯ ಒಟ್ಟು ಎಂಟು ಗಂಟೆಯೂ ಸಮಾನ ಉತ್ಸಾಹದಿಂದ ಕೆಲಸವನ್ನು ಮಾಡಲು ಅಗತ್ಯವಿರುವ ಸ್ವ-ಪ್ರೇರಣೆಯನ್ನು ಪಡೆದುಕೊಂಡು ಉತ್ಸಾಹದಿಂದ ಕೆಲಸ ಮಾಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು.
ದಿನಾಂಕ 10.05.2019ರಂದು ಧಾರವಾಡದ ಜ್ಞಾನವಿಕಾಸ ಕಟ್ಟಡ ಸಮುಚ್ಚಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜ್ಞಾನವಿಕಾಸ ತರಬೇತಿ ಸಂಸ್ಥೆ, ಪ್ರಾದೇಶಿ ಕಚೇರಿ ಧಾರವಾಡ, ಧಾರವಾಡ ಜಿಲ್ಲಾ ಕಚೇರಿ, ಧಾರವಾಡ ಯೋಜನಾ ಕಚೇರಿ, ಕುಂದಗೋಳ ಯೋಜನಾ ಕಚೇರಿ ಹಾಗೂ ಹುಬ್ಬಳ್ಳಿ ಯೋಜನಾ ಕಚೇರಿಯ ಎಲ್ಲ ಕಾರ್ಯಕರ್ತರು ಹಾಗೂ ಕಲ್ಬುರ್ಗಿ ಪ್ರಾದೇಶಿಕ ವ್ಯಾಪ್ತಿಯ ಜ್ಞಾನವಿಕಾಸ ಸಂಯೋಜಕಿಯರನ್ನು ಉದ್ದೇಶಿಸಿ ಮಾರ್ಗದರ್ಶನವನ್ನು ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳಿಗೆ ನೂತನವಾಗಿ ನಿರ್ಮಿಸಲಾದ ವಸತಿ ಗೃಹದ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಜ್ಞಾನವಿಕಾಸ ವಿಕಾಸ ತರಬೇತಿ ಸಂಸ್ಥೆಯ ಪ್ರಗತಿ ಪರಿಶೀಲನೆಯನ್ನು ನಡೆಸಿ ಎಲ್ಲ ಸಿಬ್ಬಂದಿಗಳಿಗೆ ಮಾರ್ಗದರ್ಶನವನ್ನು ನೀಡುತ್ತಾ ಇಲ್ಲಿನ ಕೆಲಸ ಕಾರ್ಯಗಳು ಹಾಗೂ ಆಯೋಜಿಸುತ್ತಿರುವ ವೈವಿಧ್ಯಮಯ ತರಬೇತಿಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ತರಬೇತಿ ಕೇಂದ್ರದ ಕಟ್ಟಡಕ್ಕೆ ಅಳವಡಿಸಲಾಗಿರುವ ಮಳೆ ನೀರು ಸಂಗ್ರಹಾಗಾರ ಹಾಗೂ ಅಡುಗೆ ಮನೆ ತ್ಯಾಜ್ಯದಿಂದ ತಯಾರಿಸಲಾಗುತ್ತಿರುವ ಬಯೋಗ್ಯಾಸ್ ಘಟಕ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಪ್ಯಾಕಿಂಗ್ ಘಟಕವನ್ನು ವೀಕ್ಷಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೇಗೌಡ, ತರಬೇತಿ ಸಂಸ್ಥೆ ನಿರ್ದೇಶಕರಾದ ಡಾ.ಪ್ರಕಾಶ್ ಭಟ್, ಧಾರವಾಡ ಜಿಲ್ಲಾ ನಿರ್ದೇಶಕರಾದ ಶ್ರೀ ಸುರೇಶ್ ಮೊಯ್ಲಿ, ಚಿತ್ರದುರ್ಗ ನಿರ್ದೇಶಕರಾದ ಶ್ರೀ ದಿನೇಶ್ ಎಂ, ಹಾಗೂ ತರಬೇತಿ ಸಂಸ್ಥೆಯ ಉಪನ್ಯಾಸಕರುಗಳು, ಸರ್ವ ಸಿಬ್ಬಂದಿಗಳು ಮತ್ತು ವಿವಿಧ ವಿಭಾಗಗಳ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧಾರವಾಡದ ಜ್ಞಾನವಿಕಾಸ ಕಟ್ಟಡ ಸಮುಚ್ಚಯಕ್ಕೆ ಭೇಟಿ

One thought on “ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧಾರವಾಡದ ಜ್ಞಾನವಿಕಾಸ ಕಟ್ಟಡ ಸಮುಚ್ಚಯಕ್ಕೆ ಭೇಟಿ”
s/oHANUMANTHPPA HALUVARTHI V HEBBALU POST 577556 DAVANAGERE TQ AND DIST