ಯಾದಗಿರಿ ತಾಲ್ಲೂಕಿನ ಚಿರಂಜೀವಿ ನಗರ ಸಮೀಪವಿರುವ ಕುಷ್ಠರೋಗಿ ಕಾಲೊನಿಯಲ್ಲಿ ವಾಸವಿರುವ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿತರಿಸಲಾಯಿತು. ಕಾಲೊನಿಯಲ್ಲಿ ಒಟ್ಟು ಹನ್ನೆರಡು ಕುಟುಂಬಗಳು ವಾಸವಾಗಿದ್ದು ಹೆಚ್ಚಿನ ಕುಟುಂಬಗಳು ಭಿಕ್ಷೆ ಬೇಡಿ ಹೊತ್ತಿನ ಊಟ ಗಳಿಸಿಕೊಳ್ಳುತ್ತಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರಗಳು ಮುಚ್ಚಲ್ಪಟ್ಟಿದ್ದರಿಂದ ಜನರ ಸಂಚಾರಕ್ಕೆ ನಿರ್ಬಂಧ ಹೇರಿದ್ದರಿಂದ ಶ್ರದ್ಧಾ ಕೇಂದ್ರಗಳಿಗೆ ಜನರು ಬಾರದೇ ಕುಷ್ಠರೋಗಿಗಳ ಭಿಕ್ಷಾಪಾತ್ರೆ ಬರಿದಾಗಿಯೇ ಉಳಿದಿತ್ತು .
ದೇವಸ್ಥಾನಕ್ಕೆ ಬಂದವರು ನೀಡುವ ಹಣ್ಣು ಹಂಪಲು, ಉಪಾಹಾರ, ಕಿರುಕಾಣಿಕೆಯನ್ನು ನಂಬಿಕೊಂಡಿದ್ದ ಕುಷ್ಠರೋಗಿಗಳು ಹಸಿವಿನಿಂದ ಹೈರಾಣಾಗಿದ್ದರು. ಈ ಕಾಯಿಲೆಯ ಬಗ್ಗೆ ಭೀತಿ ಇರುವ ಕಾರಣದಿಂದ ಅವರು ವಾಸವಾಗಿರುವ ಕಾಲನಿಗೆ ಯಾವುದೇ ಸೌಲಭ್ಯಗಳನ್ನು ತಲುಪಿಸಲು ಯಾರೂ ಮುಂದೆ ಬಂದಿರಲಿಲ್ಲ. ಕೆಲಸವೂ ಇಲ್ಲದೇ, ಭಿಕ್ಷೆಯಿಂದ ಗಳಿಸಲು ಅನುಕೂಲಕರ ವಾತಾವರಣವಿಲ್ಲದೇ ಸಂತ್ರಸ್ತರಾಗಿದ್ದ ಈ ಕುಟುಂಬಗಳನ್ನು ಗುರುತಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಷ್ಠರೋಗಿ ಕಾಲೊನಿಯಲ್ಲಿ ವಾಸವಿರುವ ಎಲ್ಲ ಕುಟುಂಬಗಳಿಗೆ ದವಸ ಧಾನ್ಯಗಳನ್ನು ನೀಡಿ ಹಸಿವು ನೀಗಿಸಿದೆ.
ನಾವಿರುವ ಸ್ಥಳಕ್ಕೆ ಹೆಜ್ಜೆಯಿಡಲು ಹಿಂದೆ ಮುಂದೆ ನೋಡುವ ಜನರಿರುವಾಗ ಮನೆ ಬಾಗಿಲಿಗೆ ತೆರಳಿ ಏನೇನು ವಸ್ತುಗಳು ಬೇಕು ಎಂದು ನಮ್ಮಿಂದಲೇ ವಿಚಾರಿಸಿ, ಬೇಡಿಕೆ ಇಟ್ಟ ವಸ್ತುಗಳನ್ನು ಮನೆ ಬಾಗಿಲಲ್ಲಿ ಪೂರೈಸಿ ಪ್ರತಿಯೊಬ್ಬರ ಆರೋಗ್ಯವನ್ನು ವಿಚಾರಿಸಿ ಕೊರೋನಾದಿಂದ ರಕ್ಷಣೆಯ ಬಗ್ಗೆಯೂ ಮಾಹಿತಿಯನ್ನು ನೀಡಿ ಹೋದ ಧರ್ಮಸ್ಥಳದ ಕಾರ್ಯಕರ್ತರಿಗೆ ಭಾವುಕರಾಗಿ ಅಭಿನಂದನೆ ಸಲ್ಲಿಸಿದರು ಕುಷ್ಠರೋಗಿಯಲ್ಲೊಬ್ಬರಾದ ರಾಯಪ್ಪ. ಭಿಕ್ಷೆ ಬೇಡಲೆಂದು ದೇವಸ್ಥಾನದ ಎದುರಲ್ಲಿ ಕೂಡ್ರುತ್ತಿದ್ದ ಕುಷ್ಠರೋಗಿಗಳು ಲಾಕ್ ಡೌನ್ ನಿಮಿತ್ತ ಇದ್ದಕ್ಕಿದ್ದಂತೆ ಮರೆಯಾದಾಗ ಇವರೆಲ್ಲಾ ಎಲ್ಲಿದ್ದಾರೆ? ಎಂದು ಹುಡುಕಿ ಹೊರಟ ಯಾದಗಿರಿ ತಾಲ್ಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಶಿವಲೀಲಾ ಅವರು ಯಾರೂಬ್ಬರೂ ತೆರಳಲು ಭಯಪಡುವ ಪ್ರದೇಶಕ್ಕೆ ಭೇಟಿ ನೀಡಿ ಹಸಿದು ಕುಳಿತ ಕುಷ್ಠ ರೋಗಿಗಳನ್ನು ಗುರುತಿಸಿ ಧರ್ಮಸ್ಥಳದಿಂದ ಸಹಾಯಹಸ್ತ ದೊರೆಯುವಂತೆ ಮಾಡಿದ್ದಾರೆ.
ಆಹಾರ ಧಾನ್ಯಗಳ ಕಿಟ್ ಗಳನ್ನು ಎಎಸ್ಐ ರಾಮಣ್ಣ , ಜಿಲ್ಲಾ ನಿರ್ದೇಶಕರಾದ ಶ್ರೀ ದಿನೇಶ್ , ಸ್ಥಳೀಯ ಮುಖಂಡರಾದ ಶ್ರೀ ಬಸವಂತರೆಡ್ಡಿ , ಯೋಜನಾಧಿಕಾರಿ ಶ್ರೀ ರಾಘವೇಂದ್ರ ಪಟಗಾರ ವಿತರಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಶಿವಲೀಲಾ ಸೇವಾ ಪ್ರತಿನಿಧಿ ನೇಹಾ ಉಪಸ್ಥಿತರಿದ್ದರು.
ಕುಷ್ಠ ರೋಗಿಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ
