Uncategorized

ಬದುಕು ಭದ್ರವಾಗಿರಲಿ…….

ಮನುಷ್ಯನ ಜೀವನ ನೀರಿನ ಮೇಲಿನ ಗುಳ್ಳೆಯಂತೆ, ಹಗ್ಗದ ಮೇಲಿನ ನಡಿಗೆಯಂತೆ, ಯಾವಾಗ ಏನಾಗುತ್ತದೋ ಎಂದು ಹೇಳುವುದು ಕಷ್ಟ. ಕೆಲವೊಂದು ಬಾರಿ ಸಂಕಷ್ಟಗಳು ಪದೇ ಪದೇ ಬಂದೆರಗಿ ಜೀವನವನ್ನು ದುಸ್ತರವನ್ನಾಗಿಸುತ್ತದೆ. ಯಾಕಾದರೂ ಬದುಕಬೇಕು, ದೇವರು ಯಾಕೆ ಹೀಗೆ ಮಾಡಿದ ಅಂತ ಅನಿಸುವುದೂ ಇದೆ. ‘ಸಂಕಟ ಬಂದಾಗ ವೆಂಕಟರಮಣ’ ಅಂತ ಒಬ್ಬನು ಹೇಳಿದರೆ ‘ದೇವರಿಗೆ ನಾನು ಇಷ್ಟು ಮಾಡಿದ್ದೂ ನನಗೆ ಕಷ್ಟ ಕೊಡ್ತಾನಲ್ಲ ಅಂತ’ ದೇವರನ್ನು ಪ್ರಶ್ನಿಸುವವರೂ ಅನೇಕರು. ಜೀವನ ಸ್ವಾಭಾವಿಕವಾಗಿ ನಡೆಯುತ್ತಿರುತ್ತದೆ. ಮನುಷ್ಯ ಎಷ್ಟೇ ಯೋಜನೆ-ಯೋಚನೆ ಹಾಕಿಕೊಂಡರೂ ವಿಧಿಯ ಯೋಜನೆ ಬೇರೆಯೇ ಇರುತ್ತದೆ. ಏನೇ ಆದರೂ ಬದುಕು ಸಾಗಿಸಲೇಬೇಕು. ಅದಕ್ಕೋಸ್ಕರ ಬದುಕಿಗಾಗಿ ಭದ್ರತೆಗಳನ್ನು ಮಾಡಿಸುವುದು ಬುದ್ಧಿವಂತರ ಲಕ್ಷಣ.
ಬದುಕು ಭದ್ರವಾಗಿಡುವುದು ಹೇಗೆ? ಇಂದಿನ ಯುಗದಲ್ಲಿ ಸರಕಾರಗಳು ಜನರ ಯೋಗ ಕ್ಷೇಮಕ್ಕಾಗಿ ಹಲವಾರು ಭದ್ರತಾ ಯೋಜನೆಗಳನ್ನು ಹೊರತಂದಿದೆ. ದೈನಂದಿನ ಜೀವನದ ಆಹಾರ ಅಗತ್ಯದ ಪೂರೈಕೆಗಾಗಿ ‘ಸಾರ್ವಜನಿಕ ವಿತರಣಾ ಪದ್ಧತಿ’ (Public Distribution System) ಅತೀ ಕಡಿಮೆ ದರದಲ್ಲಿ ಆಹಾರ ಧಾನ್ಯಗಳ ಪೂರೈಕೆ ನಡೆಯುತ್ತಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿ, ಬಾಣಂತಿಯರ ಆರೈಕೆಗಾಗಿ ವಿಶೇಷ ಆರೋಗ್ಯ ತಪಾಸಣೆ, ಆರೈಕೆಗಾಗಿ ಮೊಟ್ಟೆ, ತರಕಾರಿ, ಪೌಷ್ಠಿಕ ಆಹಾರ ಇತ್ಯಾದಿಗಳ ಸರಬರಾಜು, ಜೊತೆಗೆ ನವಜಾತ ಶಿಶುಗಳಿಗೆ ಆಹಾರ, ಹೆಣ್ಣು ಮಕ್ಕಳು, ಹದಿಹರೆಯದ ಹೆಣ್ಣು ಮಕ್ಕಳ ಆರೋಗ್ಯಕ್ಕಾಗಿ ಆಹಾರ ಸರಬರಾಜು ಇದೆ. ನವಜಾತ ಹೆಣ್ಣು ಶಿಶುಗಳ ಹೆಸರಿನಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ ಸರಕಾರ ನಿಗದಿತ ಮೊತ್ತವನ್ನು ಹೂಡಿಕೆ ಮಾಡಿ ಎರಡು ಹೆಣ್ಣು ಮಕ್ಕಳಿಗೆ ರೂ. 1 ಲಕ್ಷದಷ್ಟು ಮೊತ್ತ ಪ್ರತೀ ಮಕ್ಕಳಿಗೆ 18 ವಯಸ್ಸು ತುಂಬುವಾಗ ಲಭ್ಯವಾಗುತ್ತದೆ. ಅದೇ ರೀತಿಯಲ್ಲಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯು ಅಂಚೆ ಇಲಾಖೆಯಿಂದ ಅನುಷ್ಠಾನಿಸಲ್ಪಡುತ್ತಿದ್ದು, ಹೆಣ್ಣು ಮಕ್ಕಳಿಗಾಗಿ ಕಿರು ಉಳಿತಾಯಗಳನ್ನು ಈ ಖಾತೆಗೆ ಜಮೆ ಮಾಡಿ ಮಗುವಿನ ಭವಿಷ್ಯಕ್ಕಾಗಿ ಕೂಡಿಡಬಹುದು.

ಪಿಎಂಜೆಜೆಬಿವೈ:
ಹೆಚ್ಚಿನ ಕುಟುಂಬಗಳು ಡೋಲಾಯಮಾನ ಪರಿಸ್ಥಿತಿಗೆ ಬರುವುದು ಕುಟುಂಬದ ಯಜಮಾನ ಅಥವಾ ಕುಟುಂಬದ ಆದಾಯ ತರುವ ವ್ಯಕ್ತಿ ಅಕಾಲಿಕ ಮರಣಕ್ಕೆ ಒಳಗಾದಾಗ. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಆರ್ಥಿಕ ಸಂಕಷ್ಟಕ್ಕೆ ಬಲಿಯಾಗುತ್ತಾರೆ. ಇಂತಹ ಆರ್ಥಿಕ ಸಂಕಷ್ಟಗಳಿಂದ ಪಾರಾಗಲು ಭಾರತ ಸರಕಾರವು ಪ್ರಧಾನಮಂತ್ರಿಗಳ ಜೀವನ ಜ್ಯೋತಿ ಭಿಮಾ ಯೋಜನೆಯನ್ನು ರೂಪಿಸಿದೆ. ಸ್ವಯಂಚಾಲಿತವಾಗಿ ಪ್ರತೀ ವರ್ಷ ರೂ. 330/- ಮೊತ್ತವು ಆಯಾ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಈ ಯೋಜನೆಗೆ ರವಾನೆಯಾಗಲಿದ್ದು, 18 ರಿಂದ 50 ವಯೋಮಿತಿಯೊಳಗಿನ ವ್ಯಕ್ತಿಗಳಿಗೆ ಅವಕಾಶವಿದೆ. ಯಾವುದೇ ಕಾರಣದಿಂದ ಮರಣ ಹೊಂದಿದಲ್ಲಿ ರೂ. 2 ಲಕ್ಷದವರೆಗೆ ಮೊತ್ತ ಕುಟುಂಬಕ್ಕೆ ದೊರಕುತ್ತದೆ. ರಾಷ್ಟ್ರೀಕೃತ ಯಾ ಖಾಸಗೀ ಬ್ಯಾಂಕ್‍ನಲ್ಲಿ ಉಳಿತಾಯ ಖಾತೆ ಹೊಂದಿದ ಎಲ್ಲರೂ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು.

ಪಿಎಂಜೆಎಸ್‍ಬಿವೈ:
ಪ್ರಧಾನ ಮಂತ್ರಿಗಳ ಜೀವನ ಸುರಕ್ಷಾ ಭಿಮಾ ಯೋಜನೆಯ ಪ್ರಕಾರ 18 ರಿಂದ 70 ವಯೋಮಿತಿಯೊಳಗಿನ ವ್ಯಕ್ತಿಗಳಿಗೆ ಲಭ್ಯವಿದ್ದು, ಯಾವುದೇ ಅಪಘಾತಕ್ಕೀಡಾಗಿ ಮರಣ ಹೊಂದಿದರೆ ರೂ.2 ಲಕ್ಷದವರೆಗೆ ಆರ್ಥಿಕ ಸೌಲಭ್ಯ ದೊರಕುತ್ತದೆ. ಅಪಘಾತದಲ್ಲಿ ಮುಖ್ಯ ಅಂಗಾಂಗಗಳನ್ನು ಕಳೆದುಕೊಂಡರೂ ಮೊತ್ತ ಲಭ್ಯವಿರುತ್ತದೆ.

ಇವೆರಡೂ ಯೋಜನೆಗಳು 1 ಜೂನ್‍ನಿಂದ 31 ಮೇ ತಿಂಗಳವರೆಗೆ ಚಾಲ್ತಿಯಲ್ಲಿರುತ್ತದೆ. ಪ್ರತೀ ವರ್ಷ ನವೀಕರಣ ಮಾಡಬೇಕಾಗುತ್ತದೆ. ಬ್ಯಾಂಕ್ ಖಾತೆ ಇದ್ದಲ್ಲಿ ಬ್ಯಾಂಕ್‍ನಿಂದ ನೇರವಾಗಿ ವಿಮಾ ಕಂತು ಈ ಯೋಜನೆಗಳಿಗೆ ಜಮೆಯಾಗುತ್ತದೆ. ಕುಟುಂಬದ ಪ್ರತಿಯೊಬ್ಬರಿಗೂ ಇವೆರಡೂ ಯೋಜನೆಗಳಿಗೆ ನೋಂದಾವಣೆ ಮಾಡಿದರೆ ಉತ್ತಮ.

ಎಪಿವೈ:
ಪಿಂಚಣಿ ಎನ್ನುವುದು ಸಂಘಟಿತ ವಲಯದ ಕಾರ್ಮಿಕರಿಗೆ ಹಾಗೂ ನೌಕರರಿಗೆ ಲಭ್ಯವಿದೆ. ವೃತ್ತ್ತಿಯಿಂದ ನಿವೃತ್ತಿಯಾಗುವಾಗ ಜೀವನ ನಿರ್ವಹಣೆಗೆ ಪಿಂಚಣಿ ಲಭ್ಯವಿರುತ್ತದೆ. ಆದರೆ ಅಸಂಘಟಿತ ವಲಯದ ಸದಸ್ಯರಿಗೆ ಭಾರತ ಸರಕಾರವು “ಅಟಲ್ ಪಿಂಚಣಿ ಯೋಜನೆ”ಯನ್ನು ಹೊರತಂದಿದೆ. ಈ ಯೋಜನೆಯನ್ವಯ 18 ರಿಂದ 40 ವಯಸ್ಸಿನೊಳಗಿನ ಸದಸ್ಯರು ಈ ಯೋಜನೆಗೆ ನೋಂದಾಯಿಸಬಹುದು. ಕನಿಷ್ಠ ರೂ. 1000/- ಗರಿಷ್ಠ ರೂ. 12,000/- ಪ್ರತೀ ವರ್ಷಕ್ಕೆ ಮೊತ್ತ ವಿನಿಯೋಗ ಮಾಡಬಹುದು. 60 ವಯಸ್ಸು ಆರಂಭವಾಗುವಾಗ ಪಿಂಚಣಿ ಖಾತೆಯಲ್ಲಿ ಲಭ್ಯವಿರುವ ಮೊತ್ತದ ಆಧಾರದಲ್ಲಿ ಪ್ರತೀ ತಿಂಗಳು ಪಿಂಚಣಿ ಮೊತ್ತ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಗರಿಷ್ಠ ಪ್ರಮಾಣದಲ್ಲಿ ಪಿಂಚಣಿ ಸಿಗಬೇಕಾದಲ್ಲಿ ನಿರಂತರವಾಗಿ ಪಿಂಚಣಿ ಖಾತೆಗೆ ಮೊತ್ತ ಜಮೆ ಮಾಡುವುದು ಅವಶ್ಯಕ.

ಜೀವ ವಿಮೆ:
ಜೀವಭದ್ರತೆಗಾಗಿ ನಮ್ಮ ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯು ಅನೇಕ ಅತ್ಯಾಕರ್ಷಕ ಯೋಜನೆಗಳನ್ನು ಹೊರತಂದಿರುತ್ತದೆ. ಕುಟುಂಬದ ಪ್ರತಿಯೊಬ್ಬರು ಜೀವ ವಿಮೆಯನ್ನು ಮಾಡಿಸಬೇಕು. ಜೀವ ವಿಮೆಯಲ್ಲಿ ತೊಡಗಿಸಿದ ಮೊತ್ತವು ನಿಗದಿತ ಅವಧಿಯ ನಂತರ ಸಂಪೂರ್ಣ ಮೊತ್ತ ಪಾಲಿಸಿದಾರರಿಗೆ ನಿಗದಿತ ಬಡ್ಡಿ ದರದೊಂದಿಗೆ ಹಿಂತಿರುಗಿಸಲಾಗಿರುತ್ತದೆ. ಜೀವ ವಿಮೆಯನ್ನು ಎಲ್ಲರೂ ಮಾಡಸಬೇಕಾದುದು ಬಹಳ ಮುಖ್ಯ. ಭಾರತೀಯ ಜೀವ ವಿಮಾ ಸಂಸ್ಥೆಯು ಕಾಯಿದೆಯನ್ವಯ ಭಾರತ ಸರಕಾರದ ಸ್ವಾಮ್ಯತೆಗೆ ಒಳಪಟ್ಟಿದೆ. ಇದರ ಮೂಲಕ ಮಾಡಿಸುವಂತಹ ಜೀವ ವಿಮೆಯು ಗ್ರಾಹಕ ಉಪಯೋಗಿಯಾಗಿರುತ್ತದೆ. ಖಾಸಗಿ ಕ್ಷೇತ್ರದಲ್ಲಿ ಹಲವಾರು ಬ್ಯಾಂಕ್ ಪ್ರಾಯೋಜಿತ ಜೀವ ವಿಮೆಗಳೂ ಕೂಡಾ ಲಭ್ಯವಿರುತ್ತದೆ.

ಆರೋಗ್ಯ ವಿಮೆ:
ಆರೋಗ್ಯ ಏರುಪೇರು ಆದಾಗ ಕುಟುಂಬದ ಮೇಲೆ ಆರ್ಥಿಕ ಹೊಡೆತ ಉಂಟಾಗಿ ಆರ್ಥಿಕವಾಗಿ ಹಿನ್ನಡೆಯುಂಟಾಗುತ್ತದೆ. ಆಸ್ಪತ್ರೆ ಚಿಕಿತ್ಸಾ ವೆಚ್ಚಗಳು, ಪರಿಶೋಧನಾ ವೆಚ್ಚಗಳು ಸಾಮಾನ್ಯ ಜನರ ಕೈಗೆಟಕುವುದಿಲ್ಲ. ತಾನು ಜೀವನ ಪೂರ್ತಿ ದುಡಿದು ಕೂಡಿಟ್ಟ ದುಡ್ಡು ಒಂದು ಕ್ಷಣದಲ್ಲಿ ಕೈಜಾರಿ ಹೋಗುವಂತಹ ಪರಿಸ್ಥಿತಿ. ಒಂದೆಡೆ ಆರೋಗ್ಯದ ಚಿಂತೆಯಾದರೆ ಇನ್ನೊಂದೆಡೆ ನಾಳೆ ಏನು ಎಂಬ ಚಿಂತೆ. ಇದಕ್ಕೆ ಪರಿಹಾರವಾಗಿ ಭಾರತ ಸರಕಾರವು “ಆಯುಷ್ಮಾನ್ ಭಾರತ್’ ಎಂಬ ಯೋಜನೆಯಡಿಯಲ್ಲಿ ರೂ. 5 ಲಕ್ಷ ಮೊತ್ತದ ಆಸ್ಪತ್ರೆ ವೆಚ್ಚವನ್ನು ಭರಿಸುವ ಸೌಲಭ್ಯವನ್ನು ಹೊರತಂದಿದೆ. ಬಿಪಿಎಲ್ ಕುಟುಂಬಗಳಿಗೆ ಉಚಿತ ಆರೋಗ್ಯ ವಿಮೆ ಇದೆ. ಇದರ ಜೊತೆಗೆ ಸಾರ್ವಜನಿಕ ರಂಗದ ಜನರಲ್ ಇನ್ಸೂರೆನ್ಸ್ ಕಂಪೆನಿಗಳು ಮತ್ತು ಖಾಸಗಿ ಕ್ಷೇತ್ರದಲ್ಲಿ ಅನೇಕ ಸಂಸ್ಥೆಗಳು ಆರೋಗ್ಯ ವಿಮಾ ಪಾಲಿಸಿಯನ್ನು ಅನುಷ್ಠಾನ ಮಾಡುತ್ತಿದೆ. ಕುಟುಂಬದ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಮಾಡಿದರೆ ಅನಾರೋಗ್ಯದಿಂದ ಉಂಟಾಗುವ ಆರ್ಥಿಕ ಸಂಕಷ್ಟಗಳಿಂದ ಪಾರಾಗಬಹುದು.

ಕಿರು ಠೇವಣಿಗಳು :
“ಜೀವನೋಪಾಯಕ್ಕಾಗಿ ಕಿರು ಉಳಿತಾಯ” ನೀರಿನ ಬುಗ್ಗೆಯಂತೆ ಯಾವತ್ತಿಗೂ ಆಸರೆಯಾಗಿರುತ್ತದೆ. ಪ್ರತೀ ದಿನದ /ತಿಂಗಳ ಆದಾಯದಲ್ಲಿ ಕನಿಷ್ಠ ಉಳಿತಾಯವು ಜೀವನವನ್ನು ತಂಪಾಗಿಸುತ್ತದೆ. ದೀರ್ಘ ಕಾಲದ ಯೋಜನೆಗಳಿಗಾಗಿ ದೊಡ್ಡ ಪ್ರಮಾಣದ ನಿರಖು ಠೇವಣಿಗಳನ್ನು ಅಗತ್ಯವಾಗಿ ಮಾಡಬೇಕು. ಇವು ನಮಗೆ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಆಪತ್ಕಾಲದಲ್ಲಿ ಆಪತ್ಥ್ಧನವಾಗಿ ರಕ್ಷಿಸುತ್ತದೆ.

ಅನಗತ್ಯ ಖರ್ಚುಗಳ ನಿಯಂತ್ರಣ/ಖರ್ಚುಗಳು ವಿನಿಯೋಗ ಆಗಬೇಕು:
ಬದುಕನ್ನು ಭದ್ರವಾಗಿಸುವಲ್ಲಿ ಉಳಿತಾಯ ಪ್ರಜ್ಞೆ ನಮಗೆ ಸಹಕಾರಿಯಾಗುತ್ತದೆ. ಅಂದರೆ ಅನಗತ್ಯ ಖರ್ಚು, ಯೋಚನೆ ಇಲ್ಲದೆ ಖರ್ಚುಗಳು ನಮ್ಮ ಉಳಿತಾಯವನ್ನು ಬರಿದಾಗಿಸುತ್ತದೆ. ಆದಾಯ ಹೆಚ್ಚಾಗುವುದು ಖರ್ಚು ಕಡಿಮೆಯಾದಾಗ ಮಾತ್ರ. ಖರ್ಚು ಯಾವತ್ತಿಗೂ ವಿನಿಯೋಗ ಆಗಬೇಕು. ವಿನಿಯೋಗವು ಕುಟುಂಬದ ಅವಶ್ಯಕತೆಗಳ ಆಧ್ಯತೆಯ ಮೇರೆಗೆ ಇರಬೇಕು.

ಎಚ್ಚರಿಕೆ ಅಗತ್ಯ :
ಬಹಳ ಮುಖ್ಯವಾದ ಅಂಶವೆಂದರೆ ನಮ್ಮ ಉಳಿತಾಯವನ್ನು ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸುವುದು. ಅತ್ಯಗತ್ಯ. ವಿಮೆ ಮಾಡಿಸುವುದಾಗಲೀ, ಮೊತ್ತ ಹೂಡಿಕೆ ಮಾಡುವಾಗ ಸಂಸ್ಥೆಯ ಹಿನ್ನೆಲೆ ತಿಳಿದುಕೊಳ್ಳುವುದು ಅಗತ್ಯ. ಹೆಚ್ಚು ಬಡ್ಡಿದರ ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ ಹಿಂದೆ ಮುಂದೆ ನೋಡದೆ ಹೂಡಿಕೆ ಮಾಡಿ ಮೊತ್ತ ಕಳಕೊಂಡವರು ಅನೇಕರು. ಕೆಲವೊಂದು ಬಾರಿ ಬಂಗಾರದಲ್ಲಿ ಹೂಡಿಕೆ, ಚಿಟ್ ಫಂಡ್ ಹೂಡಿಕೆ ಮಾಡಿ ಕೈಸುಟ್ಟುಕೊಂಡವರು ಅನೇಕರು. ಆದುದರಿಂದ ಮೊತ್ತ ವಿನಿಯೋಗ ಹೂಡಿಕೆ ಮಾಡುವಾಗ ಜಾಗರೂಕತೆ ವಹಿಸುವುದು ಅತೀ ಅಗತ್ಯ.

ಬದುಕು ಭದ್ರವಾಗೋದಕ್ಕೆ ಈ ಕೆಳಗಿನದನ್ನು ಖಂಡಿತವಾಗಿ ಅನುಸರಿಸೋಣ:
• ಕುಟುಂಬದ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ – ಸಂಪೂರ್ಣ ಆರ್ಥಿಕ ವ್ಯವಹಾರಕ್ಕಾಗಿ
• ಕುಟುಂಬದ ಪ್ರತಿಯೊಬ್ಬರಿಗೂ ಪಿಎಂಜೆಜೆಬಿವೈ – 330/- ಪ್ರತೀ ವರ್ಷ
• ಕುಟುಂಬದ ಪ್ರತಿಯೊಬ್ಬರಿಗೂ ಪಿಎಂಎಸ್‍ಬಿವೈ – 12/- ಪ್ರತೀ ವರ್ಷ
• ಕುಟುಂಬದ ಪ್ರತಿಯೊಬ್ಬರಿಗೂ ಜೀವವಿಮೆ- ನಿಗದಿತ ಮೊತ್ತ ಪ್ರೀಮಿಯಂ ಪ್ರತೀ ವರ್ಷ
• ಕುಟುಂಬದ ಪ್ರತಿಯೊಬ್ಬರಿಗೂ ಆಯಷ್ಮಾನ್ ಭಾರತ್ – ಪ್ರತೀ ವರ್ಷ
• ಕುಟುಂಬದ ಪ್ರತಿಯೊಬ್ಬರಿಗೂ ವೈದ್ಯಕೀಯ ವಿಮೆ – ಪ್ರತೀ ವರ್ಷ
• ಕುಟುಂಬದ ಸದಸ್ಯರೆಲ್ಲರಿಗೂ ಪಿಂಚಣಿ – ಪ್ರತೀ ತಿಂಗಳು/ವರ್ಷ ನಿಗದಿತ ಅವಧಿ
• ಹೆಣ್ಣು ಮಗುವಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ – ನಿರಂತರವಾಗಿ ಕಿರು ಉಳಿತಾಯ ಜಮೆ
• ಹೆಣ್ಣು ಮಗುವಿಗಾಗಿ ಭಾಗ್ಯಲಕ್ಷ್ಮೀ ಯೋಜನೆ – ನಿರಖು ಠೇವಣಿ:ಮಗುಹುಟ್ಟಿದ ಸಂದರ್ಭ ಸರಕಾರದ ವತಿಯಿಂದ
• ವಾಹನವಿದ್ದಲ್ಲಿ ವಾಹನ ವಿಮೆ, ಡೈವಿಂಗ್ ಲೈಸನ್ಸ್.

“ಬದುಕಿನ ಸುಸ್ಥಿರತೆ ಆರ್ಥಿಕ ಸದೃಢತೆ” ಧ್ಯೇಯವಾಗಿರಲಿ.

 

ಲೇಖನ:

ಶ್ರೀಮತಿ ಮಮತಾ ಹರೀಶ್ ರಾವ್
ನಿರ್ದೇಶಕಿ
ಸಿಬ್ಬಂದಿ ಹಾಗೂ ಮಾ.ಸಂ.ಅ.ವಿಭಾಗ

Leave a Reply

Your email address will not be published. Required fields are marked *