ತಿಂಡಿ ಮಾರಾಟ ತಂದ ಯಶಸ್ಸು

By | March 15, 2017

ಕಷ್ಟದಿಂದ ಪಾರಾಗಲು ಕೈಸಾಲ ಮಾಡಿ ಕೈಸುಟ್ಟುಕೊಂಡವರೆಷ್ಟೊ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಜ್ಯೋತಿ ಕೂಡ ಕೈಸಾಲದ ಸುಳಿಯಲ್ಲಿ ಸಿಲುಕಿದ್ದರು. ಪತಿ ಪಂಚಾಕ್ಷರಿಯವರು ಖಾಸಗಿ ಬಸ್ ನಿರ್ವಾಹಕರಾಗಿದ್ದರೂ ಜೀವನದ ಬಂಡಿ ಸಾಗುವುದೇ ಕಷ್ಟವಾಗಿತ್ತು. ಇಂತಹ ಸ್ಥಿತಿಯಲ್ಲಿ ಅವರ ನೆರವಿಗೆ ಬಂದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸ್ವ- ಉದ್ಯೋಗದ ಆಲೋಚನೆ.

ಮದ್ದೂರು ತಾಲೂಕಿನ ಬೆಸಗರಹಳ್ಳಿ ವಲಯದ (ಕಾರ್ಯಕ್ಷೇತ್ರ) ಜ್ಞಾನವಿಕಾಸ ಕೇಂದ್ರದ ಕೈವಲ್ಯರಾಮೇಶ್ವರ ತಂಡದ ಸದಸ್ಯೆಯಾದ ಜ್ಯೋತಿ, ಮೊದಲು ಮಾಡಿದ ಕೆಲಸವೆಂದರೆ ಯೋಜನೆಯಿಂದ ರೂ. 5000 ಸಾಲ ಪಡೆದು ಕೈಸಾಲವನ್ನು ತೀರಿಸಿ ಬಿಡದೇ ಕಾಡುತ್ತಿದ್ದ ಬಡ್ಡಿಯ ಸುಳಿಯಿಂದ ತಪ್ಪಿಸಿಕೊಂಡದ್ದು.
ಸರ್ಕಾರಿ ಬಸ್ ಗಳ ಒತ್ತಡದಿಂದ ಖಾಸಗಿ ಬಸ್ ಗಳ ಆದಾಯ ಕಡಿಮೆಯಾಗಿ ಪತಿಗೆ ಜೀವನ ನಿರ್ವಹಣೆ ಕಷ್ಟವಾದಾಗ, ಕುಟುಂಬಕ್ಕೆ ಆಧಾರವಾಗಲೆಂದು ಸಂಘದಿಂದ ರೂ. 20,000 ಸಾಲ ಪಡೆದು ಸಣ್ಣದೊಂದು ಕಿರಾಣಿ ಅಂಗಡಿ ಆರಂಭಿಸಿದರು. ಅದೇ ಅಂಗಡಿಯ ಮುಂದೆ ಸಂಜೆ ವೇಳೆ ಜ್ಯೋತಿ, ಸಿಹಿ ಮತ್ತು ಖಾರದ ತಿಂಡಿಗಳನ್ನು ಮಾಡಿ ಮಾರಲಾರಂಭಿಸಿದರು. ಮುಂದಿನ ಹಂತವಾಗಿ ರೂ.30,000 ಸಾಲ ಪಡೆದು ಮದ್ದೂರು ತಾಲೂಕಿನ ಸಂತೆಗಳಲ್ಲೂ ವ್ಯಾಪಾರ ಆರಂಭಿಸಿದರು.
ತಿಂಡಿ ತಯಾರಿ ಅಂದಮೇಲೆ ವಿದ್ಯುತ್ ನ ಸಮಸ್ಯೆ ಬಂದೇ ಬರುತ್ತದೆ. ಆದರೆ ಅದಕ್ಕೂ ಪಂಚಾಕ್ಷರಿ- ಜ್ಯೋತಿ ದಂಪತಿ ಆಗಲೇ ಪರಿಹಾರ ಕಂಡುಕೊಂಡಿದ್ದರು. ಯೋಜನೆಯಿಂದ ರೂ. 12,000 ಸಾಲ ಪಡೆದುಕೊಂಡು ಸೋಲಾರ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರಿಂದ ಸಂತೆಯ ಹಿಂದಿನ ದಿನ ರಾತ್ರಿ ತಿಂಡಿ ತಯಾರಿಸಿಕೊಂಡು ಇಬ್ಬರೂ ಸಂತೆಯಲ್ಲಿ ವ್ಯಾಪಾರ ಮಾಡಿ ತಿಂಗಳಿಗೆ ರೂ. 12,000 ವರೆಗೆ ಲಾಭ ಗಳಿಸುತ್ತಿದ್ದಾರೆ.
ಇಬ್ಬರ ದುಡಿಮೆಯಿಂದ ಈಗ ಜೀವನ ನಿರ್ವಹಣೆ ಅಷ್ಟೇನೂ ಕಷ್ಟವಾಗುತ್ತಿಲ್ಲ. ಮಕ್ಕಳ ಶಿಕ್ಷಣ ಯಾವ ಸಮಸ್ಯೆಯಿಲ್ಲದೆ ಮುಂದುವರಿಯುತ್ತಿದೆ. ಹಾಗೆಯೇ ಜ್ಯೋತಿ ಯೋಜನೆಯ ಸುವಿಧಾ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಾ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇವರು ಯೋಜನೆಯ ಸದ್ಭಳಕೆಯಿಂದ ಯಶ ಕಂಡಿದ್ದಾರೆ.