ಬಂಗಾರವಾದ ಬರಡು ಭೂಮಿ

By | March 10, 2017

ಅನ್ನದಾತನ ಸ್ಥಿತಿ ಶ್ರೀಮಂತನಾದರೂ ಬಡವ ಎಂಬಂತೆ. ಎಕರೆಗಟ್ಟಲೆ ಭೂಮಿಯಿದ್ದರೂ ಕೈಯಲ್ಲಿ ಕಾಸಿಲ್ಲ. ಕೃಷಿ ಭೂಮಿ ಅಭಿವೃದ್ಧಿಪಡಿಸಿ ಆದಾಯ ಪಡೆಯೋಣ ಎಂದರೆ ಬಂಡವಾಳವಿಲ್ಲ. ಬ್ಯಾಂಕ್ಗಳೂ ಇಂತಹ ರೈತರ ಸಹಾಯಕ್ಕೆ ಬರದಿದ್ದಾಗ ಆತ ಕಂಗಾಲಾಗಬಹುದು. ಇದೇ ಸ್ಥಿತಿಯಲ್ಲಿದ್ದ ರೈತನೊಬ್ಬನ ಸಾಧನಾಗಾಥೆ ಇಲ್ಲಿದೆ.

ಹೇಳಿ ಕೇಳಿ ಕುಣಿಗಲ್ ತಾಲೂಕಿನ ಅಮೃತೂರಿನಿಂದ 10 ಕಿ.ಮೀ ದೂರದಲ್ಲಿರುವ ಕಟ್ಟಿಗೆಹಳ್ಳಿ ಗ್ರಾಮ ಬಡತನಕ್ಕೆ ಹೆಸರುವಾಸಿ. ಈ ಊರಿನಲ್ಲಿರುವ ಅನೇಕ ಬಡ ಕುಟುಂಬಗಳಲ್ಲಿ ದೇವರಾಜುರವರ ಕಡು ಬಡತನದಲ್ಲಿದ್ದ ಕುಟುಂಬವೂ ಒಂದಾಗಿತ್ತು. ಇದ್ದ ಐದು ಎಕರೆ ಬರಡು ಭೂಮಿಯಲ್ಲಿ ಯಾವ ಕೃಷಿ ಮಾಡುವುದು ಎಂದು ಈ ಕುಟುಂಬ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾಗಲೇ ನೆರವಿಗೆ ಬಂದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.

ಯೋಜನೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ದೇವರಾಜು, ಶ್ರೀಕಂಠೇಶ್ವರ ಪ್ರಗತಿಬಂಧು ತಂಡ ರಚಿಸಿಕೊಂಡು ಉಳಿತಾಯ ಪ್ರಾರಂಭಿಸಿ ಮೊದಲ ಹಂತವಾಗಿ ರೂ. 10,000 ಪ್ರಗತಿನಿಧಿ ಸಾಲ ಪಡೆದು ಕೃಷಿ ಆರಂಭಿಸಿದರು. ಯಶಸ್ಸಿನ ಬೆನ್ನು ಹತ್ತಿದ ಅವರು, ರೂ. 25,000 ಪ್ರಗತಿನಿಧಿ ಸಾಲ ಪಡೆದು ತಮ್ಮ ಜಮೀನಿಗೆ ತೆಂಗು, ಬಾಳೆ ನಾಟಿ ಮಾಡಿಕೊಂಡರು. ಪ್ರಸ್ತುತ ಇವರು ಬಾಳೆ ಕೃಷಿ, ತೆಂಗು, ನೆಟ್ಟಿ ರಾಗಿ ಕೃಷಿಗೆ ರೂ. 50,000 ಪ್ರಗತಿನಿಧಿ ಪಡೆದುಕೊಂಡಿದ್ದಾರೆ, ಅಲ್ಲದೆ ರೂ 1.00 ಲಕ್ಷ ಪ್ರಗತಿನಿಧಿಗೆ ಮನವಿ ಸಲ್ಲಿಸಿದ್ದಾರೆ.

ದೇವರಾಜು ಒಂದೊಮ್ಮೆ ಬರಡಾಗಿದ್ದ ತಮ್ಮ ಕೃಷಿ ಭೂಮಿಗೆ ಹನಿ ನೀರಾವರಿ ಅಳವಡಿಸಿದ್ದಾರೆ, ಅಲ್ಲದೆ ತಮ್ಮ ತಂಡವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯಲ್ಲಿ ಕಾಲ್ಚಾಚಿ ಮಲಗಿದ್ದ ಬಡತನ ದೂರವಾಗಿದೆ. ಬದುಕಿನಲ್ಲಿ ಆದ ಬದಲಾವಣೆ ಯೋಜನೆಯ ರೂಪದಲ್ಲಿ ದೊರೆತ ಮಂಜುನಾಥನ ಆಶೀರ್ವಾದ, ಎಂದು ಕೃತಜ್ಞತೆ ಅರ್ಪಿಸುತ್ತಾರೆ ದೇವರಾಜು.