ಬಾಟಲಿ ಬಿಟ್ಟು ಬದುಕಿನತ್ತ ಚಿತ್ತ…

By | March 17, 2017

ಕಾಲಕ್ಕೆ ತಕ್ಕಂತೆ ಬದುಕಬೇಕು ಎಂಬ ಮಾತು ರೈತರಿಗೂ ಅನ್ವಯಿಸುತ್ತದೆ. ಈ ಮಾತನ್ನು ಪಾಲಿಸಿ ಯಶಸ್ಸು ಕಂಡವರಲ್ಲಿ ಈಶ್ವರ್ ಕೂಡ ಒಬ್ಬರು. ಅಂದಹಾಗೆ ಈ ಈಶ್ವರ್ ಯಾರು ಎಂಬ ಕುತೂಹಲ ನಿಮಗೆ ಖಂಡಿತ ಇರಬೇಕಲ್ವೆ?

ಮೈಸೂರು ಜಿಲ್ಲೆಯ ನಾರಾಯಣಪುರದ ಈಶ್ವರ್ ಒಂದು ವರ್ಷದ ಹಿಂದೆ ಮಹಾ ಮದ್ಯವ್ಯಸನಿ. ಕೃಷಿಯಿಂದ ಬಂದ ಹಣವೆಲ್ಲಾ ಇರೋದು ಹೆಂಡತಿ ಮಕ್ಕಳಿಗಲ್ಲ ಬದಲಿಗೆ ಹೆಂಡದ ಅಂಗಡಿಗೆ ಎಂದು ಬಲವಾಗಿ ನಂಬಿಕೊಂಡಿದ್ದಾತ. ಕುಡಿದು ಹೊಂಡ ಸೇರುತ್ತಿದ್ದ ಇವರನ್ನು ಉದ್ಧಾರ ಮಾಡಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸೂರಿನಲ್ಲಿ ಹಮ್ಮಿಕೊಂಡಿದ್ದ 1,000 ನೇ ಮದ್ಯವರ್ಜನ ಶಿಬಿರ. ಶಿಬಿರ ಸೇರಿ ಮದ್ಯ ತ್ಯಜಿಸಿ ನವಜೀವನ ನಡೆಸುತ್ತಿದ್ದಾರೆ ಈಶ್ವರ್.

ಆದರೆ ಈಗ ಈಶ್ವರ್ ಸುದ್ದಿಯಲ್ಲಿರುವುದು ಬೇರೊಂದು ಕಾರಣಕ್ಕೆ. ಈ ಬಾರಿ ಜಿಲ್ಲೆಯಲ್ಲಿ ಟೊಮೆಟೊಗೆ ಬೆಲೆಯಿಲ್ಲ ಎಂಬ ಕಾರಣಕ್ಕೆ ಅದರ ಸಹವಾಸಕ್ಕೆ ಯಾರೂ ಹೋಗಿರಲಿಲ್ಲ. ಆದರೆ ಅಂತೆ-ಕಂತೆಗಳಿಗೆೆ ಸೊಪ್ಪು ಹಾಕದ ಈಶ್ವರ್ ತಮ್ಮ 20 ಕುಂಟೆ ಜಾಗದಲ್ಲಿ ಧೈರ್ಯಮಾಡಿ ಟೊಮೆಟೊ ಬೆಳೆದರು. ಎಲ್ಲರ ನಿರೀಕ್ಷೆಗೂ ಮೀರಿ, ಕೇವಲ ರೂ 8000 ಖರ್ಚು ಮಾಡಿದ್ದ ಇವರಿಗೆ ಭರ್ಜರಿ ರೂ. 1,10,000 ಆದಾಯ ಬಂದಿತ್ತು. ಈಗಲೂ ಪ್ರತಿ ಬಾಕ್ಸ್ ಟೊಮೇಟೊವನ್ನು ರೂ. 300 ರಿಂದ ರೂ.350 ಕ್ಕೆ ಮಾರಾಟ ಮಾಡುತ್ತಿರುವ ಇವರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಸಾರಾಯಿಯ ಸಹವಾಸದಿಂದ ತನ್ನನ್ನು ದೂರಮಾಡಿದ ಗ್ರಾಮಾಭಿವೃದ್ಧಿ ಯೋಜನೆಗೆ ಈ ಯಶಸ್ಸಿನ ಶ್ರೇಯ ಸಲ್ಲುತ್ತದೆ ಎನ್ನುತಾರೆ ಈಶ್ವರ್