ಮಹಿಳಾ ಸಾಧಕಿಯರಿಗೊಂದು ನಮನ…

By | March 10, 2017


ಸ್ವಾವಲಂಬನೆಯ ಕನಸು ನಿಜವಾದಾಗ…

ಮನಸ್ಸಿದ್ದರೆ ಮಾರ್ಗ ಎಂಬುದು ಬರೀ ಗಾದೆ ಮಾತಾಗಿ ಉಳಿದಿಲ್ಲ. ನಿದರ್ಶನಗಳು ಸಾಕಷ್ಟಿವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ ಬಸವ ಮಹಿಳಾ ಸ್ವಸಹಾಯ ಸಂಘದ ಸದಸ್ಯೆ ಮಲ್ಲಮ್ಮ C/o ಮಹಾಲಿಂಗಪ್ಪ ಅವರಿಗೆ ತಾವೂ ಏಕೆ ಸ್ವಾವಲಂಭಿ ಜೀವನ ಸಾಗಿಸಬಾರದು ಎಂದು ಮನಸ್ಸಾಗಿದ್ದೇ ತಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯತ್ತ ಮುಖ ಮಾಡಿದರು. ಯೋಜನೆಯಿಂದ ರೂ. 70,000 ಪ್ರಗತಿನಿಧಿ ಪಡೆದು, ರೂ. 85,000 ಬಂಡವಾಳ ಹಾಕಿ ಶ್ಯಾವಗೆ ತಯಾರಿಸುವ ಯಂತ್ರ ಖರೀದಿಸಿದರು. ಇವರು ದಿನಕ್ಕೆ 35 ರಿಂದ 40 ಕಿಲೋ ಶ್ಯಾವಗೆಯನ್ನು ಉತ್ಪಾದಿಸುತ್ತಿದ್ದು, ಇದರಿಂದ ಸರಾಸರಿ ರೂ 250 ಆದಾಯ ಗಳಿಸುತ್ತಿದ್ದಾರೆ. ಸ್ವಾವಲಂಭಿ ಜೀವನದತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಬದುಕು ನೀಡಿದ ಟೊಮೆಟೊ ಕ್ರಾಸಿಂಗ್

ರಾಣೆಬೆನ್ನೂರು ತಾಲೂಕಿನ ಕುಪ್ಪೇಲೂರು ವಲಯದ ನಿಟ್ಟೂರು ಗ್ರಾಮದ ವಿಜಯಾ ಬಣಕಾರರವರು ತಮ್ಮ ಎರಡು ಎಕರೆ ಒಣ ಭೂಮಿಯಲ್ಲಿ ಬೆಳೆಯುತ್ತಿದ್ದ ಜೋಳ ಮತ್ತು ಹತ್ತಿಗೆ ಮಳೆಯನ್ನೇ ಆಶ್ರಯಿಸಿದ್ದರು. ಆದರೆ ಸಕಾಲಕ್ಕೆ ಮಳೆಯೂ ಆಗದೆ, ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಯೂ ಸಿಗದೆ ಜೀವನ ನಡೆಸುವುದು ಸವಾಲಾಗಿತ್ತು.

ವಿಜಯಾ ಬಣಕಾರರವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು ಗ್ರಾಮಾಭಿವೃದ್ಧಿ ಯೋಜನೆ ಸೇರಿಕೊಂಡ ನಂತರ. ಉಳಿತಾಯದ ಜೊತೆಗೆ ರೈತ ಕ್ಷೇತ್ರ ಪಾಠಶಾಲೆಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ದೊರೆಯಲಾರಂಭಿಸಿತ್ತು. ಕೃಷಿಯಲ್ಲಿ ಏನಾದರೂ ಸಾಧಿಸಬೇಕೆಂದು ಯೋಚಿಸಿ, ತಮ್ಮ ಪತಿಯ ಸಹಕಾರದೊಂದಿಗೆ ವಿವಿಧ ರೀತಿಯ ಬೀಜೋತ್ಪಾದನೆ ಮಾಡುವ ಬೆಳೆಗಳ ಬಗ್ಗೆ ತಿಳಿದುಕೊಂಡು ಕೊನೆಗೆ ಟೊಮೆಟೊ ಆಯ್ಕೆ ಮಾಡಿಕೊಂಡರು.

ಮೊದಲ ಹಂತದಲ್ಲಿ ರೂ. 10,000 ಪ್ರಗತಿನಿಧಿ ಪಡೆದು, ನಂತರ ರೂ. 30,000 ಪ್ರಗತಿನಿಧಿ ಪಡೆದು ಅಕ್ಕ ಪಕ್ಕದ ಮನೆಯವರ ಸಹಕಾರ ಪಡೆದು ನಾಮಧಾರಿ ಸಿಡ್ಸ್ ಕಂಪನಿಯ ಮಾಹಿತಿಯಂತೆ 30 ದಿನಗಳ ಕಾಲ ಟೊಮೆಟೊ ಕ್ರಾಸಿಂಗ್ ಮಾಡಿ ಉತ್ತಮ ರೀತಿಯ ಇಳುವರಿ ಪಡೆದಿದ್ದಾರೆ. ಕೇವಲ 10 ಗುಂಟೆ ಜಮೀನಿನಲ್ಲಿ ರೂ.1,50,000 ವರೆಗೆ ಆದಾಯ ಗಳಿಸಿ ನೆಮ್ಮದಿಯಿಂದ ಬದುಕುತ್ತಿದ್ದಾರೆ.