ರೊಕ್ಕ ತಂದುಕೊಟ್ಟ ರೊಟ್ಟಿ ವ್ಯಾಪಾರ

By | March 16, 2017


ರಾಯಚೂರು ಜಿಲ್ಲೆಯ ಪಗಡದಿನ್ನಿ ತಾಲೂಕಿನ ಗುಡದೂರು ಗ್ರಾಮದ ಮಲ್ಕಜಮ್ಮನವರ ಸ್ವ-ಉದ್ಯೋಗದ ಕನಸು ಕನಸಾಗಿಯೇ ಉಳಿದಿತ್ತು. ಕೂಲಿ ಕೆಲಸದಿಂದ ಬರುತ್ತಿದ್ದ ಹಣದಿಂದ ಸಂಸಾರ ಸಾಗಿಸುವುದು ಕಷ್ಟವಾಗಿತ್ತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ರೊಟ್ಟಿ ವ್ಯಾಪಾರ ಅವರ ಕೈ ಹಿಡಿದಿದೆ.

ಕೂಲಿ ಕೆಲಸಕ್ಕೆ ವಿರಾಮ ಹೇಳಿ ಸಂಘ ಸೇರಿದ ಮಲ್ಕಜಮ್ಮ ಅವರಿಗೆ ಪರ್ಯಾಯ ಆದಾಯ ಮೂಲ ಅನಿವಾರ್ಯವಾಗಿತ್ತು. ಆಗ ಅವರಿಗೆ ಹೊಳೆದಿದ್ದೇ ರೊಟ್ಟಿ ವ್ಯಾಪಾರ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ. 50,000 ಪ್ರಗತಿನಿಧಿ ಪಡೆದು ರೊಟ್ಟಿ ವ್ಯಾಪಾರ ಆರಂಭಿಸಿದ ಇವರೀಗ ದಿನಕ್ಕೆ ರೂ. 600 ರಿಂದ ರೂ. 900 ಆದಾಯ ಪಡೆಯುತ್ತಿದ್ದಾರೆ. ಆದಾಯದ ಮೂಲವೇ ಇಲ್ಲದಿದ್ದ ಇವರ ಬದುಕಲ್ಲಿ ಇದೊಂದು ಮಹತ್ತರ ಬದಲಾವಣೆಯೇ ಸರಿ.

ಸಂಘಕ್ಕೆ ಸೇರಿದ ನಂತರ ದೊರೆತ ಮಾಹಿತಿ ಸ್ವ-ಉದ್ಯೋಗಕ್ಕೆ ತುಂಬಾ ಸಹಕಾರಿಯಾಯಿತು. ಸ್ಥಳೀಯವಾಗಿ ಹೆಚ್ಚು ಬೇಡಿಕೆಯಿರುವ ಜೋಳದ ರೊಟ್ಟಿಯ ವ್ಯಾಪಾರದ ಕುರಿತು ಆಸಕ್ತಿ ಮೂಡಿತು. ನನ್ನ ಅಭಿಲಾಷೆಯನ್ನು ಯೋಜನೆಯ ಕಾರ್ಯಕರ್ತರಲ್ಲಿ ಹೇಳಿಕೊಂಡಾಗ ಅವರು ಪ್ರಗತಿನಿಧಿ ದೊರಕಿಸಲು ಒಪ್ಪಿಕೊಂಡರು. ಪ್ರಗತಿನಿಧಿಯ ಸಹಾಯದಿಂದ ರೊಟ್ಟಿ ತಯಾರಿ ಯಂತ್ರವನ್ನು ಖರೀದಿಸಿ ದಿನಕ್ಕೆ 150 ರಿಂದ 200 ರೊಟ್ಟಿಗಳನ್ನು ನಾನೇ ತಯಾರಿಸುತ್ತೇನೆ.ಇವುಗಳನ್ನು ರೊಟ್ಟಿ ವ್ಯಾಪಾರಿಗಳು ಮನೆಯಿಂದಲೇ ಖರೀದಿಸುತ್ತಾರೆ. ಇದು ಸಂಸಾರ ನಡೆಸಲು ತುಂಬಾ ಸಹಕಾರಿಯಾಗಿದೆ, ಎನ್ನುತ್ತಾರೆ ಮಲ್ಕಜಮ್ಮ.

ಅಂತೂ 4 ಜನ ಸದಸ್ಯರಿರುವ ಇವರ ಸಂಸಾರ ಸುಖವಾಗಿದೆ. ಸ್ವ-ಪ್ರಯತ್ನ, ಯೋಜನೆಯ ಸಹಾಯದಿಂದ ಪುಡಿಗಾಸಿಗೂ ಪಡಿಪಾಟಲು ಪಡುತ್ತಿದ್ದ ಈ ಕುಟುಂಬದ ಗೋಳು ತಪ್ಪಿದಂತಾಗಿದೆ.