ಸಂಸಾರಕ್ಕೆ ಆಧಾರವಾದ ಬಟ್ಟೆ ವ್ಯಾಪಾರ

By | March 20, 2017

ಕಾರಣಾಂತರಗಳಿಂದ ತವರು ಮನೆಯಲ್ಲಿದ್ದ ಬಾಗಲಕೋಟೆ ಜಿಲ್ಲೆಯ ಮದರಖಂಡಿ ಗ್ರಾಮದ ಶ್ರೀಮತಿ ಯಶೋಧಾ ವೆಂಕಪ್ಪ ಮಾಳೆದ ಸ್ವಾಭಿಮಾನಿ. ಯಾರ ಹಂಗೂ ಬೇಡ ಎಂದು ಹೊಲಿಗೆ ಮಾಡಿಕೊಂಡಿದ್ದ ಅವರಿಗೆ ಎಂಟು ಮಂದಿಯ ಕುಟುಂಬಕ್ಕೆ ಈ ಆದಾಯ ಸಾಲದೇನೋ ಅನಿಸಿತು. ಆಗ ಹೊಳೆದದ್ದೇ ಸ್ವ-ಸಹಾಯ ಸಂಘದ ಯೋಚನೆ.
ಯಶೋಧಾರ 3 ವರ್ಷಗಳ ಹಿಂದೆ 10 ಮಂದಿ ಸದಸ್ಯರನ್ನು ಸೇರಿಸಿಕೊಂಡು ಶಾಂಭವಿ ಸ್ವ-ಸಹಾಯ ಸಂಘ ರಚಿಸಿ, ಗ್ರಾಮಾಭಿವೃದ್ಧಿ ಯೋಜನೆಯ ನಿಯಮದಂತೆ ಶಿಸ್ತುಬದ್ಧವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಸಂಘದ ಸಂಯೋಜಕರಾಗಿ ಆಯ್ಕೆಯಾಗಿರುವ ಅವರು, ಸಂಘದ ದಾಖಲಾತಿ ಒಕ್ಕೂಟ ಸಭೆಯಲ್ಲಿ ತಪ್ಪದೆ ಭಾಗವಹಿಸಿ ಅಭಿವೃದ್ಧಿಯ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಬೆಳವಣಿಗೆಯಿಂದ ಯಶೋಧಾ ಅವರ ಸ್ವ-ಉದ್ಯೋಗದ ಕನಸಿಗೆ ರೆಕ್ಕೆ ಪುಕ್ಕ ಬಂದಿದೆ. ಮೊದಲ ಹಂತವಾಗಿ ಸಂಘದಿಂದ ರೂ.10,000 ಪ್ರಗತಿನಿಧಿ ಪಡೆದು, ಬಟ್ಟೆ ವ್ಯಾಪಾರ ಆರಂಭಿಸಿದರು. ನಂತರ ರೂ. 20,000 ಪಡೆದು ಯೋಜನೆಯನ್ನು ವಿಸ್ತರಿಸಿದರು. ಮೂರನೇ ಹಂತದಲ್ಲಿ ರೂ. 50,000 ಪ್ರಗತಿನಿಧಿ ಪಡೆದುಕೊಂಡ ಅವರು ದೊಡ್ಡ ಮಟ್ಟದ ವ್ಯಾಪಾರ ಆರಂಭಿಸಿದರು. ಇದರಿಂದ ತಿಂಗಳಿಗೆ ರೂ. 10,000 ದಿಂದ ರೂ. 15,000 ವರೆಗೆ ಆದಾಯ ಪಡೆಯುತ್ತಿದ್ದಾರೆ.
ಈಗ ಆದಾಯ ವೃದ್ಧಿಯಾಗಿರುವುದರಿಂದ ಸಂಸಾರ ನಿರ್ವಹಣೆ ಕಷ್ಟವಾಗುತ್ತಿಲ್ಲ. ಪತಿಯ ಸಹಕಾರದಿಂದ ವ್ಯಾಪಾರ ಉತ್ತಮವಾಗಿ ನಡೆಯುತ್ತಿದೆ, ಎನ್ನುವ ಅವರು ಗ್ರಾಮಾಭಿವೃದ್ಧಿ ಯೋಜನೆಯನ್ನು ಕೃತಜ್ಞತೆಯಿಂದ ನೆನೆಸಿಕೊಳ್ಳುತ್ತಾರೆ.