success storyUncategorized

ಸರ್ವ ಕೃಷಿ ಪಂಡಿತ ‘ಶ್ಯಾಮಣ್ಣ’

ಶ್ಯಾಮಣ್ಣನ ಬಳಿ ಏನೆಲ್ಲಾ ಕೃಷಿಗಳಿವೆ? ಎಂದು ಕೇಳುವುದಕ್ಕಿಂತ ಏನಿಲ್ಲ! ಎಂದು ಕೇಳುವುದೇ ವಾಸಿ. ಪದವಿ ಕಲಿತ ಮಗನನ್ನು ಕೃಷಿಯಲ್ಲಿ ತೊಡಗುವಂತೆ ಪ್ರೇರೆಪಿಸುವ ಮೂಲಕ ಮುಂದಿನ ಪೀಳಿಗೆಗೂ ಕೃಷಿಯನ್ನು ಉಳಿಸುವ ಪ್ರಯತ್ನವೊಂದು ಇಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದಲ್ಲಿ ತನಗಿರುವ ನಾಲ್ಕು ಎಕರೆ ಜಮೀನು ಈವರೆಗೆ ರಾಸಾಯನಿಕದ ರುಚಿಯನ್ನುಂಡಿಲ್ಲ. 20 ಕ್ವಿಂಟಾಲ್ ಅಡಿಕೆ, 6 ಸಾವಿರ ತೆಂಗಿನಕಾಯಿ, 12 ಕ್ವಿಂಟಾಲ್ ಭತ್ತ, ಹದಿನೈದರಿಂದ ಇಪ್ಪತ್ತು ಬಗೆಯ ತರಕಾರಿಯಿಂದ ಪ್ರತಿವರ್ಷ 4 ರಿಂದ 4.5 ಲಕ್ಷ ರೂಪಾಯಿ ಆದಾಯವನ್ನು ಇವರು ತನ್ನದಾಗಿಸಿಕೊಳ್ಳುತ್ತಾರೆ. ವಿಶೇಷವೆಂದರೆ ಅಡಕೆ, ತೆಂಗಿನ ಬುಡವನ್ನು ಬಿಡಿಸುವ ಪದ್ಧತಿ ಇಲ್ಲಿಲ್ಲ. ಅಡಕೆ ಹಾಳೆ, ತೆಂಗಿನ ಗರಿ, ಚಿಪ್ಪುಗಳೇ ಇವುಗಳಿಗೆ ಪ್ರಮುಖ ಗೊಬ್ಬರ. ಜೊತೆಗೆ ತನ್ನ ಬಳಿಯಿರುವ ಹೈನುಗಾರಿಕೆಯಿಂದಲೇ ತಯಾರಿಸಿದ ಕೊಟ್ಟಿಗೆ ಗೊಬ್ಬರವನ್ನು ನೀಡುತ್ತಾರೆ. ಪ್ರತಿಯೊಂದು ಕೃಷಿಗೂ ನೀರು ಮುಖ್ಯ. ಅದಕ್ಕಾಗಿ ಕೆರೆಯೊಂದನ್ನು ನಿಮರ್ಿಸಿದ್ದಾರೆ. ಇವರು ತನ್ನ ಭೂಮಿಯ ಒಂದು ಇಂಚು ಜಾಗವನ್ನು ಖಾಲಿ ಬಿಟ್ಟವರಲ್ಲ. ಋತುಗಳಿಗನುಸಾರವಾಗಿ ತರಕಾರಿ ಬೆಳೆಯುವಲ್ಲಿ ಇವರು ನಿಪುಣರು. ಇವರು ಬೆಳೆದ ಸಾವಯವ ತರಕಾರಿಗಳಿಗೂ ಸರ್ವ ಋತುಗಳಲ್ಲೂ ಬಹುಬೇಡಿಕೆಯಿದ್ದು ತನ್ನೆಲ್ಲಾ ಕೆಲಸಗಳಿಗೆ ಪದವೀಧರ ಮಗ ದೇವಿಪ್ರಸಾದ್ ಸಾಥ್ ನೀಡುತ್ತಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈರಲ್ಕೆ ‘ಎ’ ಪ್ರಗತಿಬಂಧು ತಂಡದ ಸದಸ್ಯರಾಗಿರುವ ಶ್ಯಾಮಣ್ಣ ಹೆಚ್ಚಿನ ಕೆಲಸಗಳನ್ನು ಯೋಜನೆಯ ಶ್ರಮವಿನಿಮಯದ ಮೂಲಕ ಮಾಡಿ ಮುಗಿಸುವ ಕಾರಣ ಕೂಲಿಯಾಳುಗಳ ಸಮಸ್ಯೆ ಇವರಿಗೆ ಎದುರಾಗಿಲ್ಲ. ಇನ್ನು ಬರುವ ಲಾಭದಲ್ಲೂ ಕಡಿಮೆಯಾಗಿಲ್ಲ. ಗ್ರಾಮಾಭಿವೃದ್ಧಿ ಯೋಜನೆಯ ಪ್ರೇರಣೆಯಿಂದ ಆರಂಭವಾದ ಇವರ ಕೃಷಿ ಕಾಯಕಕ್ಕೆ ಇದೀಗ ಬರೋಬ್ಬರಿ ಇಪ್ಪತ್ತೊಂದು ವರ್ಷ.

200 ಗೇರು, 100 ತೆಂಗಿನ ಮರ, 1000 ಅಡಿಕೆ, 100 ಕೊಕ್ಕೊ ಗಿಡ, 200 ಕರಿಮೆಣಸಿನ ಬಳ್ಳಿ, ಬಾಳೆ, ಲವಂಗ, ಜಾಯಿಕಾಯಿ, ವೆನಿಲ್ಲಾ, ಒಂದುವರೆ ಎಕರೆ ತುಂಬಾ ಭತ್ತ, ಜೊತೆಗೆ ಒಂದು ಎಕರೆ ತುಂಬಾ ದಿನನಿತ್ಯದ ಆದಾಯವನ್ನು ನೀಡಬಲ್ಲ ತರಕಾರಿ ಕೃಷಿಗಳಾದ ಹಾಗಲಕಾಯಿ, ಕುಂಬಳ, ಪಡುವಲ, ಹರಿವೆ, ಬೆಂಡೆ, ತೊಂಡೆ, ಸೋರೆ, ಅಲಸಂಡೆ, ಮುಳ್ಳುಸೌತೆ, ಸಾಂಬಾರು ಸೌತೆ, ಬದನೆ, ಹೀರೆ, ಬಸಳೆ, ಚೀನಿಕಾಯಿ, ಮೆಣಸು, ಜೋಳ, ನೆಲ ಬಸಳೆ, ಸಾಸಿವೆ ಹೀಗೆ ಹದಿನೈದರಿಂದ ಇಪ್ಪತ್ತು ಬಗೆಯ ತರಕಾರಿಗಳಿರುವ ಪಾಠಶಾಲೆಯಿದು. ಗೊಬ್ಬರಕ್ಕಾಗಿ ಐದು ಆಕಳುಗಳು, ಉರುವಲು ಮತ್ತು ಬೆಳಕಿಗಾಗಿ ಸೋಲಾರ್, ಜಲ ಸಂರಕ್ಷಣೆಗಾಗಿ ಇಂಗು ಗುಂಡಿ, ಮಣ್ಣಿನ ತೇವಾಂಶ ಮತತು ಗುಣಮಟ್ಟವನ್ನು ಉಳಿಸಲು ಮಣ್ಣಿಗೆ ಸೂಕ್ತ ಹೊದಿಕೆ ನಿಮರ್ಾಣ, ಎರೆಹುಳ ಗೊಬ್ಬರ, ಕಾಂಪೋಸ್ಟ್, ಹಸಿರೆಲೆ ಗೊಬ್ಬರ, ಜೀವಾಮೃತ ಹೀಗೆ ಸಕಾಲವು ಒಂದೇ ಕಡೆ ಲಭ್ಯ. ಕಳೆದ ಭಾರಿ ಹರಿವೆಯಿಂದಲೇ ಹತ್ತು ಸಾವಿರ ರೂಪಾಯಿ ಆದಾಯವನ್ನು ಗಳಿಸಿದ ಶ್ಯಾಮಣ್ಣ ಸ್ಥಳೀಯ ತರಕಾರಿಗಳನ್ನು ಮಾತ್ರ ಬೆಳೆಯುತ್ತಾರೆ.

ಆಗಾಗ ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಅಧ್ಯಯನಕ್ಕಾಗಿ ಆಸಕ್ತರು ಬರುತ್ತಿದ್ದು ಕೃಷಿಕರೊಮ್ಮೆ ನೋಡಲೇಬೇಕಾದ ಪಾಠಶಾಲೆಯಿದು ಎನ್ನುವುದರಲ್ಲಿ ಎರಡು ಮಾತಿಲ್ಲ. ಇವರ ಸಾಧನೆಯನ್ನು ಗುರುತಿಸಿ ಕೃಷಿ ಇಲಾಖೆಯ ತಾಲೂಕು ಮಟ್ಟದ ‘ಉತ್ತಮ ಕೃಷಿಕ’ ಪ್ರಶಸ್ತಿ, 2013ನೇ ಡಿಸೆಂಬರ್ನಲ್ಲಿ ಮೂಡಬಿದಿರೆಯಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 34ನೇ ರಾಜ್ಯಮಟ್ಟದ ಕೃಷಿಮೇಳದಲ್ಲಿ ಸಣ್ಣ ಹಿಡುವಳಿಯಲ್ಲಿ ಇವರ ಸಾಧನೆಯನ್ನು ಗುರುತಿಸಿ ‘ಕೃಷಿ ಸಾಧಕ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಯಾವುದೇ ಕೃಷಿಯ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಬಲ್ಲ ಶ್ಯಾಮಣ್ಣನವರನ್ನು ನೀವು ಕೂಡಾ ಸಂಪಕರ್ಿಸಬಹುದು

Leave a Reply

Your email address will not be published. Required fields are marked *