Uncategorized

ಕಸದಿಂದ ರಸ, ಬದುಕಾಯಿತು ಹಸ – ಬಳಸಿ ಬಿಸಾಡುವ ಚೀಲಗಳಿಂದ ಬದುಕು ಕಟ್ಟಿಕೊಂಡರು

IMG_20151116_153019_1448619775322

ಇಂದಿನ ಕಾಲದಲ್ಲಿ ಸ್ವ ಉದ್ಯೋಗ ಕೈಗೊಳ್ಳಬೇಕೆಂದರೆ ಅವಕಾಶಗಳಿಗೇನು ಕೊರತೆಯಿಲ್ಲ. ಆದರೂ ಸೂಕ್ತ ಉದ್ಯೋಗದ ಹುಡುಕಾಟದಲ್ಲಿ ಅದೇಷ್ಟೋ ಮಂದಿ ತಮ್ಮ ಅರ್ಧ ಆಯಸ್ಸನ್ನೇ ಸವೆಸಿ ಬಿಡುತ್ತಾರೆ. ತಮಗೊಪ್ಪುವ ಉದ್ಯೋಗ ಸಿಗದೇ ಇನ್ನಾರದೋ ಒತ್ತಾಯಕ್ಕೆ ಒಲ್ಲದ ಮನಸ್ಸಿನಿಂದ ಯಾವುದೋ ಒಂದು ಉದ್ಯೋಗ ಆರಂಭಿಸಿ ನಿರೀಕ್ಷಿತ ಲಾಭ ಸಿಗದೇ ಕೈ ಸುಟ್ಟುಕೊಂಡು ಸುಮ್ಮನಾಗುತ್ತಾರೆ.

ಆದರೆ ಮನಸ್ಸೊಂದಿದ್ದರೆ ಮಾರ್ಗವೂ ಉಂಟು… ಎಂಬ ಅಣ್ಣಾವ್ರ ಹಾಡಿನಂತೆ ಬಳಸಿ ಬಿಸಾಡುವ ನಿರುಪಯುಕ್ತ ಚೀಲಗಳಿಂದ ಕೃಷಿ ಹಾಗೂ ಇತರ ಕಾರ್ಯಗಳಿಗೆ ಬಳಕೆಯಾಗುವ ತಾಡಪತ್ರಿಗಳ ತಯಾರಿಕೆಯೊಂದಿಗೆ ತಮ್ಮ ಉಪಜೀವನ ನಡೆಸುತ್ತಿದ್ದಾರೆ ನವಲಗುಂದ ನಗರದ ಫಾತೀಮಾ ಬಾಬಾಜಾನ ಮಕಾಂದಾರ. ನೋಡಲು ತೀರಾ ಅಲಕ್ಷಿಸಬಹುದಾದ ಸ್ವ ಉದ್ಯೋಗದಿಂದ ಜೀವನ ನಡೆಸಬಹುದು. ನಾವು ಕಣ್ತೆರೆದು ನೋಡಿದರೆ ನಮ್ಮ ಮುಂದೆ ಸಾವಿರಾರು ಉದ್ಯೋಗವಕಾಶಗಳಿವೆ ಎಂಬುದಕ್ಕೆ ಇವರ ಉದ್ಯೋಗ ನಿದರ್ಶನವಾಗುತ್ತದೆ.

ಸರ್ ಸಂಘದಾಗ ಸಿಗೋ 50-60 ಸಾವಿರ ಹಣ ನಮ್ಗ ಎದಕ್ಕೂ ಸಾಲಂಗಿಲ್ರಿ… ಒಂದು ಸೀಜನ್ ಗೆ 3 ರಿಂದ 4 ಲಕ್ಷ ಬಂಡವಾಳ ಬೇಕ್ರೀ. ಎಂಬ ಮಾತನ್ನು ಅವರ ಬಾಯಿಂದ ಕೇಳಿದಾಗಲೇ ಆ ಉದ್ಯೋಗದ ಅಗಾಧತೆ ನನಗೆ ಅರ್ಥವಾಗಿದ್ದು. ಸದಸ್ಯರು ಪಡೆದ ಸಾಲದ ವಿನಿಯೋಗ ಪರಿಶೀಲನೆಗೆಂದು ಮನೆಬೇಟಿಗೆ ತೆರಳಿದಾಗ ದಾರಿ ಬದಿಯಲ್ಲಿ ಪ್ಲಾಸಿಕ್ (ನೈಲಾನ್) ಚೀಲಗಳ ರಾಶಿಯನ್ನು ಕಂಡು ಕೂತುಹಲಕ್ಕಾಗಿ ಪ್ರಶ್ನಿಸಿದಾಗಲೇ ಇವರ ಉದ್ಯೋಗ ನನ್ನ ಅರಿವಿಗೆ ಬಂದದ್ದು.
ತಾವು ಕಟ್ಟಿಕೊಂಡ ಶ್ರೀ ಶಾನೂರು ಬಾಬಾ ಸ್ವ ಸಹಾಯ ಸಂಘದಿಂದ 3 ಕಂತುಗಳಲ್ಲಿ ರೂ. 85000/- ಪ್ರಗತಿನಿಧಿ ಸಾಲ ಪಡೆದಿರುವ ಇವರು ತಾಡಪತ್ರಿ ತಯಾರಿಕೆಯ ಉದ್ಯೋಗವನ್ನು ಕುಟುಂಬದ ಉದ್ಯೋಗವನ್ನಾಗಿಸಿಕೊಂಡಿದ್ದಾರೆ. ಒಟ್ಟು ಈ ಉದ್ಯೋಗಕ್ಕೆ 2,50,000/- ರೂ ಬಂಡವಾಳ ತೊಡಗಿಸಿಕೊಂಡಿರುವ ಇವರು ಉಳಿತಾಯ 10 ರೂ. ಸೇರಿ 1110/- ರೂ ಪ್ರತಿವಾರ ಸಂಘಕ್ಕೆ ಕಟ್ಟುತ್ತಾರೆ. ಪ್ರಸ್ತುತ ಇವರ ಚಾಲ್ತಿ ಸಾಲ ಕೇವಲ 38000 ರೂ ಮೊತ್ತ ಮಾತ್ರ.

ತಾಡಪತ್ರಿ ತಯಾರಿಕೆಗೆ ಬೇಕಾದ ಕಚ್ಚಾ ಚೀಲಗಳನ್ನು ದೂರದ ಗೋವಾ, ಮಂಗಳೂರು ಹಾಗೂ ಹುಬ್ಬಳ್ಳಿ ಯಿಂದ ಖರೀದಿಸಿ ಲಾರಿಯ ಮೂಲಕ ತರುತ್ತಾರೆ. ಸ್ಥಳದಲ್ಲಿ ಪ್ರತಿ ಚೀಲಕ್ಕೆ ರೂ 6-7 ಕೊಟ್ಟು ಖರೀದಿಸುತ್ತಾರೆ. ಖರೀದಿಸಿ ತಂದ ಚೀಲವನ್ನು ಬಿಡಿಸಿ ಚೀಲಗಳನ್ನು ಜೋಡಿಸಿ ಹೊಲೆದು ಬೇಕಾದ ಅಳತೆಯ ತಾಡಪತ್ರಿಗಳನ್ನು ತಯಾರಿಸುತ್ತಾರೆ. ಹೀಗೆ ತಯಾರಿಸಿದ ತಾಡಪತ್ರಿಗಳನ್ನು ನಗರದ ಸಂತೆಗಳಲ್ಲಿ, ಹಳ್ಳಿಗಳಿಗೆ ವಾಹನಗಳ ಮೇಲೆ ಹೊತ್ತೊಯ್ದು ಮಾರಾಟ ಮಾಡುತ್ತಾರೆ. ಕೃಷಿಕರು ಹೆಚ್ಚಿರುವ ಪ್ರದೇಶವಾಗಿದ್ದರಿಂದ ತಯಾರಿಸಿದ ತಾಡಪತ್ರಿಗಳಿಗೆ ಯಥೇಚ್ಚವಾದ ಮಾರುಕಟ್ಟೆಯಿದೆ. ದಿನಕ್ಕೆ ಕನಿಷ್ಠ 1500-2000 ರೂ. ವರೆಗೂ ವಾಪಾರ ಮಾಡುತ್ತಾರೆ. ಇದರಲ್ಲಿ ಅರ್ಧದಷ್ಟನ್ನು ಎಂದರೆ 800 ರಿಂದ 1000 ವರೆಗೆ ಲಾಭ ದೊರೆಯುತ್ತದೆ ಎನ್ನುತ್ತಾರೆ.

IMG_20151116_152906_1448619774523

ಇವರ ಉದ್ಯೋಗ ನಿರ್ವಹಿಸಲು ಪತಿ, ಮಕ್ಕಳ ಸಹಕಾರವಿದೆ. ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ತಾಡಪತ್ರಿ ತಯಾರಿಕೆಯ ಕಾರ್ಯದಲ್ಲಿ ತೊಡಗುತ್ತಾರೆ. ಕಳೆದ 5 ವರ್ಷಗಳಿಂದ ಈ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿರುವ ಇವರು ತಾಡಪತ್ರಿಗಳಿಗೆ ವಿಫುಲ ಬೇಡಿಕೆಯಿರುವುದರಿಂದ ಬಂಡವಾಳ ಇನ್ನಷ್ಟು ದೊರೆತರೆ ಉದ್ಯೋಗ ಇನ್ನಷ್ಟು ವಿಸ್ತರಿಸಬಹುದೆಂಬ ಇರಾದೆ ಹೊಂದಿದ್ದಾರೆ. ಇವರು ಸ್ವ ಉದ್ಯೋಗದಿಂದ ಆಥರ್ಿಕವಾಗಿ ದಿನೇ ದಿನೇ ಸಬಲರಾಗುತ್ತಿದ್ದು ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗಿದೆ ಎನ್ನುತ್ತಾರೆ. ಸಕಾಲದಲ್ಲಿ ಬಂಡವಾಳ, ಮಾರ್ಗದರ್ಶನ ನೀಡುತ್ತೀರುವ ಯೋಜನೆಯ ಮಾರ್ಗದರ್ಶನದಲ್ಲಿ ತಾವು ಕಟ್ಟಿಕೊಂಡಿರುವ ಶ್ರೀ ಶಾನೂರು ಬಾಬಾ ಸಂಘವನ್ನು ನೆನೆಯುತ್ತಾರೆ. ಇವರಷ್ಟೇ ಅಲ್ಲದೇ ಇವರದೇ ಸಂಘದಲ್ಲಿ ಐದಾರು ಜನ ಇದೇ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲಸವಿಲ್ಲವೆಂದು ದಿನಾ ಕೆಲಸ ಹುಡುಕುತ್ತಾ ಅಲೆದಾಡುತ್ತಿರುವ ಅದೆಷ್ಟೋ ಯುವಕ ಯುವತಿಯರಿಗೆ ಕಸದಿಂದ ರಸ ತಯಾರಿಸುವ ಇವರ ಉದ್ಯೋಗ ಪ್ರೇರಣೆಯಾಗಲಿ ಎಂಬುದಷ್ಟೇ ನಮ್ಮ ಆಶಯ.

-ಗಣಪತಿ ಮಾಳಂಜೀ

Leave a Reply

Your email address will not be published. Required fields are marked *