ಕ್ಷೇತ್ರದ ಹಿನ್ನೆಲೆ
ಶ್ರೀ ಕ್ಷೇತ್ರ ಧರ್ಮಸ್ಥಳವು ಶ್ರೀ ಮಂಜುನಾಥ ಸ್ವಾಮಿಯ ಪವಿತ್ರ ಸಾನ್ನಿಧ್ಯ ಇರುವ ಕ್ಷೇತ್ರ. ಶ್ರೀ ಸ್ವಾಮಿಯು ಕ್ಷೇತ್ರದಲ್ಲಿ ನೆಲೆಯಾಗಲು ಧರ್ಮದೇವತೆಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿಯರು ಪ್ರೇರಕರು ಎಂಬುದು ಇಲ್ಲಿಯ ಐತಿಹ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆದುಕೊಂಡು ಬಂದಿರುವ ದೈವಾರಾಧನೆಯ ಸತ್ಪರಂಪರೆಗೆ ಅನುಗುಣವಾಗಿದ್ದುಕೊಂಡೇ ಇಲ್ಲಿನ ಆಚರಣೆಗಳು ನಡೆಯುತ್ತಿವೆ.
ಸುಮಾರು 7 ಶತಮಾನಗಳ ಹಿಂದೆ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಮಲ್ಲರ್ಮಾಡಿ ಒಂದು ಗ್ರಾಮವಾಗಿದ್ದು ಅದಕ್ಕೆ ‘ಕುಡುಮ’ ಎಂಬ ಹೆಸರಿತ್ತು. ಅಲ್ಲಿ ನೆಲ್ಯಾಡಿಬೀಡು ಎಂಬ ಮನೆಯಲ್ಲಿ ಬಿರ್ಮಣ್ಣ ಪೆರ್ಗಡೆ ಎಂಬ ಜೈನ ಯಜಮಾನರು ತಮ್ಮ ಪತ್ನಿ ಅಮ್ಮುಬಲ್ಲಾಳ್ತಿಯವರ ಜೊತೆ ವಾಸವಾಗಿದ್ದರು. ಅವರು ಸರಳರೂ, ಧಾರ್ಮಿಕ ಶ್ರದ್ಧೆಯುಳ್ಳವರೂ ವಾತ್ಸಲ್ಯಮಯಿ ಗಳೂ ಆಗಿದ್ದರು. ಹೀಗೆ ಈ ಪೆರ್ಗಡೆ ಕುಟುಂಬ ಔದಾರ್ಯ ಹಾಗೂ ಅತಿಥಿ ಸತ್ಕಾರಕ್ಕಾಗಿ ಹೆಸರುವಾಸಿಯಾಗಿತ್ತು.
16ನೇ ಶತಮಾನದ ಸುಮಾರಿಗೆ ಆಗ ಧರ್ಮಾಧಿಕಾರಿಗಳಾಗಿದ್ದ ದೇವರಾಜ ಹೆಗ್ಗಡೆಯವರು, ಉಡುಪಿಯ ಶ್ರೀ ವಾದಿರಾಜ ಸ್ವಾಮಿಗಳನ್ನು ಶ್ರೀ ಕ್ಷೇತ್ರವನ್ನು ಸಂದರ್ಸಿಸುವಂತೆ ಆಮಂತ್ರಿಸಿದರು. ಶ್ರೀ ವಾದಿರಾಜ ಸ್ವಾಮಿಗಳು ಶ್ರೀ ಹೆಗ್ಗಡೆಯವರ ದಾನಧರ್ಮಾದಿ ಕಾರ್ಯಗಳಿಂದ ಸಂಪ್ರೀತರಾಗಿ ಕ್ಷೇತ್ರಕ್ಕೆ ‘ಧರ್ಮಸ್ಥಳ-ದಾನಧರ್ಮಗಳ ನೆಲೆ’ ಎಂದು ಹೆಸರಿಟ್ಟರು. ದಾನ ಮತ್ತು ಮತಧರ್ಮ ಸಹಿಷ್ಣುತೆಯ ಬೇರುಗಳನ್ನು ಇಲ್ಲಿ ಸ್ಥಾಪಿಸಿದ ಹೆಗ್ಗಡೆ ಕುಟುಂಬವು ಅದನ್ನು ಸತತವಾಗಿ ಪಾಲಿಸುತ್ತ ಹಾಗೂ ಅಭಿವೃದ್ಧಿ ಪಡಿಸುತ್ತ ಬಂದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳವು ಇವರ ನಿಸ್ವಾರ್ಥ ಸಮರ್ಪಣೆಯ ಫಲವಾಗಿ ಬೆಳೆದಿದೆ.
ಭೂ ಕೈಲಾಸ
ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಜನರ ಪಾಲಿಗೆ ‘ಭೂಮಿಗಿಳಿದ ಕೈಲಾಸ’. ‘ಮಾತುಬಿಡ ಮಂಜುನಾಥ’ ಎಂಬುದು ಇಲ್ಲಿಗೆ ಅನ್ವರ್ಥನಾಮ. ನಾಡಿನ ನಾನಾ ಮೂಲೆಯಿಂದ ಬರುವ ಭಕ್ತ ಜನರು ಮಿಂದು ಪಾವನವಾಗುವ ನೇತ್ರಾವತಿ ನದಿ ತಟಾಕ ಇದು. ಕಲೆ, ಸಾಹಿತ್ಯ, ಸಂಸ್ಕೃತಿ, ದಾನ, ಧರ್ಮಗಳೆಂಬ ಅಖಂಡ ಸತ್ಕಾರ್ಯಗಳ ನೀಲ ಗಗನದಲ್ಲಿ ‘ಧರ್ಮಸ್ಥಳ’ ಎಂಬ ಧ್ರುವನಕ್ಷತ್ರ ಜ್ವಾಜಲ್ಯಮಾನವಾಗಿ ಬೆಳಗಿದೆ.