Uncategorized

ಕೌಟುಂಬಿಕ/ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ಹಬ್ಬಗಳ ಮಹತ್ವ

Article by:ಶ್ರೀಮತಿ ಮಮತಾ ಹರೀಶ್ ರಾವ್,
ನಿರ್ದೆಶಕಿ, ಮಾನವ ಸಂಪನ್ಮೂಲ ವಿಭಾಗ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ, ಧರ್ಮಸ್ಥಳ

ನಮ್ಮ ದೇಶ ಸಾಂಸ್ಕ್ರತಿಕವಾಗಿ ಸಂಪದ್ಭರಿತ ದೇಶ. ಭಾಷೆ, ವೇಷ- ಭೂಷಣಗಳ ಜೊತೆಗೆ ಆಚಾರ ವಿಚಾರಗಳಲ್ಲೂ ವೈವಿಧ್ಯತೆ ಇಲ್ಲಿನ ವಿಶೇಷ. ಅದರಲ್ಲೂ ಆಗಾಗ ಬರುವ ಹಬ್ಬ ಹರಿದಿನಗಳು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಪರಿ, ಕೌಟುಂಬಿಕ ಜೀವನಕ್ಕೆ ಅಡಿಪಾಯ ಹಾಕುವ ರೀತಿ ಅನನ್ಯ. ಒಂದಕ್ಕಿಂತ ಒಂದು ಭಿನ್ನವಾಗಿರುವ ಈ ಹಬ್ಬಗಳು ನಮ್ಮೊಳಗೆ ಹೊಸ ಜೀವನೋತ್ಸಾಹ ತುಂಬಿ ಮರೆಯಾಗುತ್ತವೆ.

ಯುಗಾದಿ: ಹಿಂದು ಪಂಚಾಂಗದ ಪ್ರಕಾರ ಹೊಸ ವರ್ಷ (ಸಂವತ್ಸರ) ಆರಂಭವಾಗುವುದೇ ಯುಗಾದಿ ಹಬ್ಬದ ಮೂಲಕ. ಹೊಸ ಸಂವತ್ಸರದ ಆಗಮನದ ಸಂದರ್ಭದಲ್ಲಿ ಬೇವು ಮತ್ತು ಬೆಲ್ಲವನ್ನು ಕುಟುಂಬದಲ್ಲಿ ಮತ್ತು ಆಪ್ತರಲ್ಲಿ ಹಂಚಿಕೊಳ್ಳುವುದು ಈ ಸಂವತ್ಸರದಲ್ಲಿ ಬರುವ ಕಷ್ಟ, ಸುಖಗಳನ್ನು ಸಮಾನವಾಗಿ ಸ್ವೀಕರಿಸೋಣ ಎಂಬ ಸಂದೇಶ ನೀಡುತ್ತದೆ. ಬಾಳಲ್ಲಿ ಕಷ್ಟವೇ ಬರಲಿ ಸುಖವೇ ಬರಲಿ ನಾವೆಲ್ಲಾ ಒಂದಾಗಿರೋಣ ಎಂಬ ಆಶ್ವಾಸನೆ ನೀಡುವುದಾಗಿದೆ.

ಮುಂದಿನ ಮೂರು ತಿಂಗಳುಗಳಲ್ಲಿ ಮುಂದಿನ ಆಷಾಢ ಮಾಸ ಬರುವ ಪೂರ್ವದಲ್ಲಿ ಮನೆಯ ದೈವಗಳಿಗೆ ಆಗೇಲು (ತುಳುನಾಡಿನ ಸಂಸ್ಕ್ರತಿಯಲ್ಲಿ) ನೀಡುವ ವಿಧಾನವು ಜಾರಿಯಲ್ಲಿದೆ. ದೇವರ ಕೃಪೆಯ ಜೊತೆಗೆ ದೈವಗಳ ಆಶೀರ್ವಾದವೂ ಅಷ್ಟೇ ಪ್ರಮುಖ ಎಂಬ ನಂಬಿಕೆಯ ಜೊತೆಗೆ ಅರ್ಪಿಸಿದ ಖಾದ್ಯಗಳನ್ನು ಸ್ವೀಕರಿಸಿ ಕುಟುಂಬವನ್ನು ಕೈಬಿಡಬೇಡ ಎಂದು ದೈವವನ್ನು ಬೇಡಿಕೊಳ್ಳುವುದೇ ಈ ಆಚರಣೆ.

ಆಷಾಢ: ನಮ್ಮ ತುಳುನಾಡ ಸಂಸ್ಕ್ರತಿಯಲ್ಲಿ ಇದನ್ನು ಆಟಿ ತಿಂಗಳು ಎಂದು ಕರೆಯುತ್ತೇವೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಅಗಾಧ ಪ್ರಮಾಣದಲ್ಲಿ ಮಳೆಯು ಬರುವುದರಿಂದ ಕಫ, ಪಿತ್ತಗಳಿಂದ ಜ್ವರಗಳು ಬರುವುದು ಸಾಮಾನ್ಯ. ತೀರಾ ತಂಪಿನ ವಾತಾವರಣ ಇರುವುದರಿಂದ ದೇಹದೊಳಗೆ ಉಷ್ಣಾಂಶ ಹೆಚ್ಚಾಗಿರುತ್ತದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ. ಅದಕ್ಕಾಗಿ ಆಟಿ ತಿಂಗಳ ಅಮವಾಸ್ಯೆಯ ದಿನದಂದು ಆಲದ ಮರದ ತೊಗಟೆಯಿಂದ ತಯಾರಿಸಿದ ಮದ್ದನ್ನು ಮುಂಜಾನೆ ಯಾವುದೇ ಆಹಾರ ತೆಗೆದುಕೊಳ್ಳುವ ಪೂರ್ವದಲ್ಲಿ ಕುಡಿಯುವ ಪದ್ದತಿ ಇದೆ. ಈ ಮದ್ದು ದೇಹದೊಳಗೆ ರೋಗ ನಿರೋಧಕ ಶಕ್ತಿಯನ್ನು ತುಂಬುತ್ತದೆ. ಆಟಿ ತಿಂಗಳ ಬಿರುಮಳೆಯಲ್ಲಿ ಹಿಂದೆಲ್ಲಾ ಮನೆಯ ಸದಸ್ಯರು ಆಡುತ್ತಿದ್ದ ಚೆನ್ನಮಣೆ ಆಟ, ಕಲ್ಲಾಟ, ಇಸ್ಪೀಟು ಮನೋರಂಜನೆಯ ಜೊತೆಗೆ ಭಾಂಧವ್ಯ ಬೆಸೆಯುವ ಕೆಲಸ ಮಾಡುತ್ತಿದ್ದವು.

ಶ್ರಾವಣ : ಶ್ರಾವಣ ಮಾಸವನ್ನು ಹಬ್ಬಗಳ ತಿಂಗಳೆಂದೇ ಕರೆಯಬಹುದು. ಈ ತಿಂಗಳ ಆದಿಯಲ್ಲಿ ಬರುವುದೇ ನಾಗರ ಪಂಚಮಿ ಹಬ್ಬ. ನಮ್ಮ ಹಿಂದೂ ಧರ್ಮದಲ್ಲಿ ನಾಗದೇವತೆಗೆ ವಿಶೇಷ ಸ್ಥಾನ. ನಾಗರ ಪಂಚಮಿಯ ದಿನದಂದು ವಿಶೇಷವಾಗಿ ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಅರಶಿನ, ಕೇದಗೆ, ಹಿಂಗಾರ ಹೂಗಳಿಂದ ಪೂಜಿಸಿದರೆ ಕುಟುಂಬಕ್ಕೆ ಸಂತೃಪ್ತಿ. ಪತ್ರೊಡೆ, ಅರಶಿನ ಎಲೆಯ ಸಿಹಿ ಕಡುಬುಗಳನ್ನೊಳಗೊಂಡ ವಿಶೇಷ ಅಡುಗೆ ಮಾಡಲಾಗುತ್ತದೆ.

ಶ್ರಾವಣ ಮಾಸದಲ್ಲಿ ಎಲ್ಲಾ ದಿನಗಳು ಶುಬಳದಿನಗಳೇ. ದೇವಿ ಜಗನ್ಮಾತೆ ಭಕ್ತರ ಮನೆಗೆ ಬರುತ್ತಾಳೆ. ಆಕೆ ಯಾವ ರೂಪದಲ್ಲಿಯಾದರೂ ಬರಬಹುದು ಎಂಬ ನಂಬಿಕೆ ಇದೆ. ಇದಕ್ಕಾಗಿ ಮುಂಜಾನೆ ಮತ್ತು ಸಂಜೆಯ ಹೊತ್ತು ಮನೆಯ ಹೊಸ್ತಿಲಿಗೆ ರಂಗೋಲಿ ಬರೆದು, ಹೂವನಿಟ್ಟು ದೀಪ ಬೆಳಗಿಸಿ ಕಲಶದೊಂದಿಗೆ ದೇವಿಯ ಪೂಜೆ ಮಾಡುತ್ತಾರೆ. ಮನೆಗೆ ಬಂದ ಕನ್ನಿಕೆಯರಿಗೆ, ಮುತೈದೆಯರಿಗೆ ಅರಿಸಿನ ಕುಂಕುಮ ಹೂವು ಬಾಗಿನವಿತ್ತು ಸತ್ಕರಿಸುತ್ತಾರೆ. ಶ್ರಾವಣ ಶುಕ್ರವಾರ, ಮಂಗಳವಾರ ಮತ್ತು ಶನಿವಾರ ವಿಶೇಷವಾಗಿ ದೇವಿಯ ಆರಾಧನೆ ಮಾಡುತ್ತಾರೆ. ಶ್ರಾವಣ ಮಾಸದ ಎರಡನೆಯ ವಾರ ವರ ಮಹಾಲಕ್ಷ್ಮಿ ವ್ರತ ವಿಶೇಷವಾಗಿ ಲಕ್ಷ್ಮಿ ಪೂಜೆಯನ್ನು ಕುಟುಂಬದ ಒಳಿತಿಗಾಗಿ ಮಾಡುತ್ತಾರೆ.

ಇದೇ ಮಾಸದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವು ಬರುತ್ತದೆ. ಶ್ರಾವಣ ಮಾಸದಲ್ಲಿ ರೋಹಿಣಿ ನಕ್ಷತ್ರದಲ್ಲಿ ಹುಟ್ಟಿರುವ ಶ್ರೀ ಕೃಷ್ಣನ ಜನ್ಮ ಆಚರಣೆಯಂದು ಭಕ್ತರು ಉಪವಾಸವಿದ್ದು ಮಧ್ಯರಾತ್ರಿ 12.00 ಗಂಟೆಗೆ ಆಘ್ರ್ಯವನ್ನು ಬಿಟ್ಟು ಬಾಲಕೃಷ್ಣನ ಪೂಜೆಯನ್ನು ಮಾಡಿ ನಂತರ ಆಹಾರ ಸೇವಿಸುತ್ತಾರೆ. ಮರುದಿನ ಶ್ರೀ ಕೃಷ್ಣನ ಹುಟ್ಟಿನ ಸಂಭ್ರಮಾಚರಣೆಯನ್ನು, ಮೊಸರು ಕುಡಿಕೆ ಒಡೆಯುವ ಮೂಲಕ, ಬಣ್ಣದ ವೇಷ ಹಚ್ಚುವ ಮೂಲಕ, ಹುಲಿ ಕರಡಿ ವೇಷ ಹಚ್ಚುವ ಮೂಲಕ, ವಿವಿಧ ನರ್ತನಗಳ ಮೂಲಕ ಆಚರಿಸಲಾಗುತ್ತದೆ. ಈ ಹಬ್ಬವನ್ನು ಕೌಟುಂಬಿಕವಾಗಿ ಮಾತ್ರವಲ್ಲದೆ ಸಾರ್ವಜನಿಕವಾಗಿ ಆಚರಿಸಲಾಗುತ್ತದೆ. ಮಕ್ಕಳ ಮುದ್ದು ಕೃಷ್ಣ ಸ್ಪರ್ಧೆ ಜನ್ಮಾಷ್ಟಮಿಯ ಇನ್ನೊಂದು ಆಕರ್ಷಣೆ.
ಶ್ರಾವಣ ಮಾಸದಲ್ಲಿ ಪ್ರಾಮುಖ್ಯತೆಯನ್ನು ಹೆಚ್ಚಿಸುವಂತೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆ, ರಕ್ಷಾ ಬಂಧನ, ಉಪಾಕರ್ಮದ ಆಚರಣೆಗಳನ್ನು ಪಾಲಿಸಲಾಗುತ್ತದೆ.

ಗಣೇಶ ಚತುರ್ಥಿ: ಭಾದ್ರಪದ ಮಾಸದ ಶುಕ್ಲಚೌತಿ ದಿನದಂದು ಶ್ರೀಗಣೇಶನ ಆರಾಧನೆ ವಿಶೇಷವಾಗಿ ಮಾಡಲಾಗುತ್ತದೆ. ವಿಘ್ನ ವಿನಾಶಕ ಗಣಪತಿಯನ್ನು ಈ ದಿನದಂದು ಪೂಜಿಸಿದರೆ ಕುಟುಂಬಕ್ಕೆ ಬರುವ ತೊಂದರೆಗಳು ನಿವಾರಣೆಯಾಗುತ್ತವೆ. ಕೆಲವೊಂದು ಕುಟುಂಬಗಳಲ್ಲಿ ಗಣೇಶನ ಪ್ರತಿಮೆಯನ್ನು ವಿಶೇಷವಾಗಿ ಪೂಜಿಸಿ ಮೋದಕ, ಪಂಚಕಜ್ಜಾಯ, ಅಷ್ಟದ್ರವ್ಯಗಳನ್ನು ನೈವೇದ್ಯವನ್ನಾಗಿ ಅರ್ಪಿಸಿ ಪ್ರಸಾದ ವಿತರಣೆ ಮಾಡುತ್ತಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನ ಸಂಘಟನೆ ಮಾಡುವ ಉದ್ದೇಶದಿಂದ ಉತ್ತರ ಭಾರತ ಭಾಗದಲ್ಲಿ ಶ್ರೀಮಾನ್ ಬಾಲಗಂಗಾಧರ್ ತಿಲಕ್ ರವರ ನೇತೃತ್ವದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಜಾರಿಗೆ ಬಂತು. ಇಂದಿಗೂ ಕೂಡಾ ಈ ಹಬ್ಬವನ್ನು ವಿಜೃಂಭಣೆಯಿಂದ ಸುಮಾರು 10 ರಿಂದ 15 ದಿನಗಳ ಕಾಲ ಆಚರಿಸಲಾಗುತ್ತದೆ. ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ, ಭಾವನೆಗಳು ಹಚ್ಚ ಹಸಿರಾಗಿಸುವಲ್ಲಿಯೂ ಇಂತಹ ಆಚರಣೆಗಳಿಂದ ಸಾಧ್ಯವಾಗಿದೆ.
ಅನಂತನ ವ್ರತ: ಗಣೇಶ ಚತುರ್ಥಿ ಹಬ್ಬ ಕಳೆದು ಮುಂದಿನ ಚತುರ್ಥಿಯಲ್ಲಿ ಬರುವುದೇ ಅನಂತ ವ್ರತ ಆಚರಣೆ. ಈ ದಿನದಂದು ವಿಷ್ಣುವು ಅನಂತಪದ್ಮ ದೇವರಾಗಿ ಭೂಮಿಯಲ್ಲಿ ಅವತಾರ ತಾಳುತ್ತಾರೆ. ಆದುದರಿಂದ ಅವರ ಆರಾಧನೆಯನ್ನು ಮಾಡಿದರೆ ಸಕಲ ಬೇಡಿಕೆ ಇಷ್ಟಾರ್ಥಗಳನ್ನು ಆರೋಗ್ಯ, ನೆಮ್ಮದಿ, ಸುಖ, ಸಂಪತ್ತನ್ನು ಕರುಣಿಸುತ್ತಾರೆ ಎಂಬ ನಂಬಿಕೆಯಿಂದ ಆಚರಿಸುತ್ತಾರೆ.

ನವರಾತ್ರಿ: ಪೂರ್ವಜರಿಗೆ ಗೌರವ ಸೂಚಿಸುವ ಪಿತೃಪಕ್ಷದ ನಂತರದ ಶುಕ್ಲಪಕ್ಷದಲ್ಲಿ ಶರದ್ ಋತುವಿನ ಆಶ್ವಯುಜ ಮಾಸದ ಪ್ರಥಮ ದಿನದಿಂದ ಒಂಬತ್ತು ದಿನಗಳವರೆಗೆ ಶಕ್ತಿಯ ಆರಾಧನೆಯನ್ನು ಮಾಡಲಾಗುತ್ತದೆ. ಶ್ರೀದೇವಿ ದುರ್ಗೆಯು ಲೋಕ ಕಲ್ಯಾಣಾರ್ಥಕ್ಕಾಗಿ ವಿವಿಧ ರೂಪಗಳಲ್ಲಿ ಅವತರಿಸಿ ದುಷ್ಟ ರಾಕ್ಷಸರನ್ನು ಸಂಹರಿಸಿ ಧರ್ಮಕ್ಕೆ ವಿಜಯವನ್ನು ತಂದುಕೊಡುತ್ತಾಳೆ. ದೇವಿಯ ಈ ವಿವಿಧ ರೂಪಗಳನ್ನು ಆರಾಧನೆ ಮಾಡುವುದೇ ಈ ನವರಾತ್ರಿ ಹಬ್ಬದ ವಿಶೇಷತೆ. ಈ ಆರಾಧನೆಗೆ ವಿಶೇಷ ಶಕ್ತಿಯೂ ಇದೆ. ಇಡೀ ಬ್ರಹ್ಮಾಂಡದ ಶಕ್ತಿಯು ಜಾಗೃತಗೊಳ್ಳುತ್ತದೆ ಎಂದೂ ನಂಬಲಾಗುತ್ತದೆ.
ದೇವಿಯ ಒಂಬತ್ತು ರೂಪಗಳೆಂದರೆ ಶೈಲಪುತ್ರಿ, ಬಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ, ಮತ್ತು ಸಿದ್ಧಿಧಾತ್ರಿ. ನವರಾತ್ರಿಯ ಏಳನೇ ದಿನ ಅಂದರೆ ಸಪ್ತಮಿಯಿಂದ ಮೂರು ದಿನ ದುರ್ಗಾಪೂಜೆ ಎಂದೂ ಮಾಡುತ್ತಾರೆ. ಅಂದರೆ ಮಹಾಕಾಳಿ, ಮಹಾಲಕ್ಷ್ಮೀ, ಮಹಾ ಸರಸ್ವತಿಯ ಪೂಜೆ ಮಾಡುತ್ತಾರೆ. ನವರಾತ್ರಿಯ ಸಪ್ತಮಿಗೆ ವಿಶೇಷ ಸ್ಥಾನವಿದೆ. ಈ ದಿನ ಮೂಲಾ ನಕ್ಷತ್ರವಾಗಿದ್ದು ಪುಸ್ತಕ ಪವಿತ್ರ ಗ್ರಂಥಗಳನ್ನು ಚಿನ್ನ, ಬೆಳ್ಳಿಗಳನ್ನು ಪೂಜೆ ಮಾಡುತ್ತಾರೆ. ಈ ದಿನದಲ್ಲಿ ಶಾರದ ಪೂಜೆ, ಸರಸ್ವತಿ ಪೂಜೆಯನ್ನೂ ಮಾಡಲಾಗುತ್ತದೆ.
ನವರಾತ್ರಿಯ ದಿನ, ದೇವಿಯ ಆರಾಧನೆಯಲ್ಲಿ ಪ್ರತಿ ದಿನ ಒಂದೊಂದು ವಿಧದ ದುರ್ಗಾಪೂಜೆಯನ್ನು ಮಾಡಲಾಗುತ್ತದೆ. ಪ್ರತಿ ದಿನವೂ ಕಿರಿ ವಯಸ್ಸಿನ ಕುಮಾರಿಯರನ್ನು ದೇವಿಯ ರೂಪದಲ್ಲಿ ಆರಾಧಿಸಲಾಗುತ್ತದೆ. ಪಾದಪೂಜೆ ಮಾಡಿ ದಕ್ಷಿಣೆಯನ್ನು ನೀಡಿ ಮೃಷ್ಟಾನ್ನ ಭೋಜನ ನೀಡಲಾಗುತ್ತದೆ. ಒಂಬತ್ತು ದಿನದ ದೇವಿಯ ಆರಾಧನೆಯ ಬಳಿಕ ಹತ್ತನೇ ದಿನ ವಿಜಯ ದಶಮಿ. ದುಷ್ಟ ರಾಕ್ಷಸರನ್ನು ಸಂಹಾರ ಮಾಡಿ ಹತ್ತನೇ ದಿನ ವಿಜಯೋತ್ಸವ ಆಚರಣೆ ಎಂದು ನಂಬಲಾಗುತ್ತದೆ. ಅಲ್ಲದೇ ಇದೇ ದಿನ, ಶ್ರೀರಾಮಚಂದ್ರನು ರಾವಣನ ಸಂಹಾರ ಮಾಡಿದ ದಿನ ಎಂದೂ ಆಚರಿಸಲಾಗುತ್ತದೆ.

ದೀಪಾವಳಿ: ಆಶ್ವಯುಜ ಮಾಸದ ಚತುರ್ದಶಿಯನ್ನು ನರಕ ಚತುರ್ದಶಿ ಮತ್ತು ನಂತರದ ದಿನ ಅಮಾವಾಸ್ಯೆ ಮತ್ತು ಕಾರ್ತಿಕ ಮಾಸದ ಪಾಡ್ಯ ಬಲಿಪಾಡ್ಯಮಿ ಹೀಗೆ ಮೂರು ದಿನಗಳ ಹಬ್ಬದ ಆಚರಣೆಯೇ ದೀಪಾವಳಿ. ಹಬ್ಬಗಳ ರಾಜ ಎಂದೇ ಪ್ರಸಿದ್ಧಿ ಪಡೆದ ಹಬ್ಬ ದೀಪಾವಳಿ. ದೀಪಾವಳಿ ಹಬ್ಬದ ನಿರೀಕ್ಷೆಯೇ ಮೈ ಪುಳಕಗೊಳಿಸುವುದು. ಮೂರು ದಿನವೂ ವಿಶೇಷವಾದ ಅಡುಗೆಯ ಜೊತೆಗೆ ದೀಪಗಳನ್ನು ಹಚ್ಚಿ ಮನೆಯ ಮುಂದೆ ಸುತ್ತಮುತ್ತಲೂ ಇಟ್ಟು ಸಡಗರಪಡುವುದು, ಸಿಡಿಮದ್ದುಗಳನ್ನು ಉರಿಸಿ ಸಂತೋಷಪಡುವುದು. ಇದರ ಜೊತೆಯಲ್ಲಿ ಶ್ರೀಲಕ್ಷ್ಮಿ ಪೂಜೆ, ಆಯುಧ ಪೂಜೆ, ಗೋ ಪೂಜೆ, ಬಲೀಂದ್ರ ಪೂಜೆ, ಬೆಳೆ ಬೆಳೆಯುವ ಗದ್ದೆಗಳಲ್ಲಿ ಪೂಜೆ ಹೀಗೆ ಧಾರ್ಮಿಕ ಆಚರಣೆಗಳು ಇರುತ್ತದೆ.

ಮಹತ್ವ:- ಕತ್ತಲ ನಿವಾರಣೆಗಾಗಿ ಬೆಳಕು, ಅಧರ್ಮದ ವಿರುದ್ದ ಧರ್ಮದ ಜಯ, ಸುಳ್ಳಿನ ವಿರುದ್ದ ಸತ್ಯದ ಜಯ, ದುಷ್ಟಶಕ್ತಿಗಳ ವಿರುದ್ದದ ಜಯ ಎಂದೇ ಬಿಂಬಿತವಾಗಿರುವ ದೀಪಾವಳಿ ಹಬ್ಬ ಅಮವಾಸ್ಯೆಯ ಕತ್ತಲಲ್ಲಿ ದೀಪಗಳ ಬೆಳಕನ್ನು ಪಸರಿಸಿ ಪರಿಸರದಲ್ಲಿ ಬೆಳಕನ್ನು ಮೂಡಿಸುತ್ತದೆ. ಆಶ್ವಯಜ ಮಾಸದ ಚತುರ್ದಶಿ ದಿನದಂದು ಶ್ರೀ ಕೃಷ್ಣನು ನರಕಾಸುರನನ್ನು ವಧಿಸಿ ಜನರನ್ನು ದುಷ್ಟಶಕ್ತಿಯಿಂದ ಮುಕ್ತಿಗೊಳಿಸಿದನು. ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಶ್ರೀ ರಾಮಚಂದ್ರನು ಅಯೋಧ್ಯೆಗೆ ಹಿಂದಿರುಗಿದಾಗ ಪ್ರಜೆಗಳು ದೀಪೋತ್ಸವ ಆಚರಿಸಿದರು ಎಂಬ ನಂಬಿಕೆ ಇದೆ.

ಗೋಪೂಜೆ:- ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ಮಹತ್ವವಿದೆ. ಸ್ವರ್ಗಾಧಿಪತಿ ಇಂದ್ರನ ಆಸ್ಥಾನದಲ್ಲಿ ಕಾಮಧೇನುವಿಗೆ ಮಹತ್ವದ ಸ್ಥಾನವನ್ನು ಕಲ್ಪಿಸಲಾಗಿದೆ. ಅದೇ ರೀತಿಯಲ್ಲಿ ಗೋವುಗಳನ್ನು ಮಾತೆಯೆಂದು ಸಂಭೋಧಿಸಿ ಆಕೆಯ ಸಾತ್ವಿಕ ಗುಣಗಳಿಗೆ ಬಹಳ ಮಹತ್ವ ನಮ್ಮ ಸಂಸ್ಕೃತಿಯಲ್ಲಿದೆ. ತನ್ನ ಹಾಲಿನಿಂದ ಸಮಾಜವನ್ನು ಬಲಿಷ್ಠಗೊಳಿಸುವ, ತನ್ನ ಸೆಗಣಿಯಿಂದ ಕೃಷಿಗಾಗಿ ಗೊಬ್ಬರ ನೀಡುವ, ತನ್ನ ಮೂತ್ರದಿಂದ ಔಷಧಿಯುಕ್ತ ಗುಣವಿರುವ, ಶ್ರೀಕೃಷ್ಣನಿಗೆ ಪ್ರಿಯವಾಗಿರುವ ಮತ್ತು ಎಲ್ಲ ದೇವತೆಗಳು ತನ್ನಲ್ಲಿ ವಾಸಿಸುವಂತಹ ಯೋಗ್ಯತೆಯಿರುವ ಗೋಮಾತೆಯನ್ನು ಪೂಜೆ ಮಾಡುತ್ತಾರೆ.

ಲಕ್ಷ್ಮಿಪೂಜೆ:- ಅಮವಾಸ್ಯೆಯ ದಿನದಂದು ಲಕ್ಷ್ಮಿಯ ಪೂಜೆ ಮಾಡುತ್ತಾರೆ. ದೀಪಗಳ ಬೆಳಕಿನಲ್ಲಿ ತೇಜಸ್ವಿನಿಯಾದ ಲಕ್ಷ್ಮಿಯನ್ನು ಆಹ್ವಾನಿಸಿ ಪೂಜಿಸಲಾಗುತ್ತದೆ. ಇನ್ನೊಂದು ಅರ್ಥದಲ್ಲಿ ರೈತರು ತಾವು ಪರಿಶ್ರಮ ಪಟ್ಟು ಬೆಳಿಸಿದ ಬೆಳೆಯೇ ನಿಜವಾದ ಲಕ್ಷ್ಮೀ ಎಂದು ಪರಿಗಣಿಸಿ ಪೂಜೆ ಮಾಡುತ್ತಾರೆ.

ಬಲಿಪಾಡ್ಯಮಿ:- ಕಾರ್ತಿಕ ಮಾಸದ ಪಾಡ್ಯ ದಿನವನ್ನು ಬಲಿಪಾಡ್ಯಮಿ ಆಚರಿಸಲಾಗುತ್ತದೆ. ಆ ದಿನದಂದು ಭಗವಂತನು ವಾಮನ ರೂಪದಲ್ಲಿ ಅವತರಿಸಿ ಸರ್ವಸ್ವವನ್ನು ಅರ್ಪಿಸಿ ದಾಸನಾಗುವ ಸಿದ್ದಾಂತವನ್ನ್ನು ತೋರಿಸಿದ್ದಾನೆ. ವಾಸ್ತವದಲ್ಲಿ ಬಲಿಯು ಒಬ್ಬ ಅಸುರ ಕುಲದವನಾಗಿದ್ದಾನೆ. ಆದರೆ ಅವನು ತನ್ನ ಉದಾರ ಮನಸ್ಸಿನಿಂದ ಭಗವಂತನಿಗೆ ಶರಣಾಗಿ ಸರ್ವಸ್ವವನ್ನು ತ್ಯಾಗ ಮಾಡಿದ್ದಾನೆ. ಅವನ ರಾಜ್ಯದಲ್ಲಿ ಅಸುರೀ ವೃತ್ತಿಗೆ ಪೂರಕ ವಿಚಾರಗಳನ್ನು ತೊಲಗಿಸಿ ಆ ಸ್ಥಾನದಲ್ಲಿ ತ್ಯಾಗದ ಮನೋಭಾವನೆಯನ್ನು ಮೂಡಿಸಿ ಜನತೆಗೆ ದೈವೀ ವಿಚಾರಗಳನ್ನು ನೀಡಿ ಸುಖ ಹಾಗೂ ಸಮೃದ್ಧಿಯ ಜೀವನವನ್ನು ಪ್ರಧಾನಿಸಿದ್ದಾನೆ. ಬಲಿಯ ಈ ತ್ಯಾಗದ ಮಹತ್ವಕ್ಕಾಗಿ ಬಲಿಯ ಪೂಜೆಯನ್ನು ಮಾಡಲಾಗುತ್ತದೆ.

ತುಳಸಿ ಪೂಜೆ: ದೀಪಾವಳಿ ಹಬ್ಬದ ನಂತರ ಉತ್ಥಾನ ದ್ವಾದಶಿಯಂದು ತುಳಸಿ ಪೂಜೆ ಆಚರಿಸಲಾಗುತ್ತದೆ. ಇದರ ಉದ್ದೇಶ ವಿಷ್ಣು ಮತ್ತು ತುಳಸಿಯ ಮದುವೆಯ ಆಚರಣೆ. ಕಾರ್ತಿಕ ಮಾಸ ಶುಕ್ಲ ಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಇದನ್ನು ಆಚರಿಸಲಾಗುತ್ತದೆ. ತುಳಸಿ ಗಿಡದೊಂದಿಗೆ ಬೆಟ್ಟದ ನೆಲ್ಲಿಕಾಯಿ ಗಿಡವನ್ನು ನೆಟ್ಟು ಪೂಜಿಸುವುದು. ತುಳಸಿ ಕಟ್ಟೆಯನ್ನು ದೀಪಗಳಿಂದ, ರಂಗೋಲಿ ಹೂಗಳಿಂದ, ಮಾವಿನ ಎಲೆಗಳಿಂದ ಅಲಂಕರಿಸಿ ಪೂಜೆ ಮಾಡಲಾಗುತ್ತದೆ.

ರಾಕ್ಷಸ ಜಲಂಧರನ ಪತ್ನಿ ವೃಂದಾ. ಈಕೆಯ ಪತೀವೃತಾ ಶಕ್ತಿಯು ಜಲಂಧರನಿಗೆ ರಕ್ಷೆಯಾಗಿತ್ತು. ಜಲಂಧರನನ್ನು ಶಕ್ತಿಹೀನನ್ನಾಗಿ ಮಾಡುವ ಉದ್ದೇಶದಿಂದ ವಿಷ್ಣುವು ಜಲಂಧರನ ಮಾರುವೇಷದಿಂದ ವೃಂದಾಳ ಬಳಿಗೆ ಹೋಗಿ ವೃಂದಾಳ ಪಾತೀವ್ರತವನ್ನು ಭಂಗ ಮಾಡುತ್ತಾನೆ. ಹೀಗಾಗಿ ವೃಂದಾಳು ವಿಷ್ಣುವಿಗೆ ಪತ್ನಿ ವಿಯೋಗದ ಶಾಪ ನೀಡಿ ಮುಂದಕ್ಕೆ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ತುಳಸಿಯಾಗಿ ಹುಟ್ಟಿದಳು ಎಂಬ ಪ್ರತೀತಿ ಇದೆ. ನಂತರ ರುಕ್ಮಿಣಿಯಾಗಿ ಜನ್ಮ ಪಡೆದು ಶ್ರೀಕೃಷ್ಣನನ್ನು ಕಾರ್ತಿಕ ಶುದ್ಧ ದ್ವಾದಶಿಯಂದು ವರಿಸಿದಳು ಎಂದು ಪುರಾಣದಲ್ಲಿ ಉಲ್ಲೇಖ ಇದೆ. ಹೀಗಾಗಿ ತುಳಸಿ ಪೂಜೆ ಯನ್ನು ಬೆಟ್ಟದ ನೆಲ್ಲಿಕಾಯಿ ಗಿಡವನ್ನು ನೆಟ್ಟು ಮದುವೆ ಮಾಡಿ ಪೂಜೆ ಮಾಡಲಾಗುತ್ತದೆ.

ಹೀಗೆ ಪ್ರತಿಯೊಂದು ಹಬ್ಬದ ಆಚರಣೆಯಲ್ಲೂ ಒಂದೊಂದು ಸಂದೇಶವಿದೆ. ಸಹಬಾಳ್ವೆ, ಸಹಮತ, ಜೀವನ ಮೌಲ್ಯಗಳು, ಪ್ರಕೃತಿ ಸಂರಕ್ಷಣೆ, ಪ್ರಾಣಿ ಸಂರಕ್ಷಣೆ, ದುಷ್ಟ ಶಕ್ತಿ ವಿರುದ್ಧ ಸತ್ಯ ಶಕ್ತಿಯ ಜಯ, ಅನ್ಯಾಯ ಅಧರ್ಮದ ವಿರುದ್ಧ ಧರ್ಮದ ಜಯ ಹೀಗೆ ಅನೇಕ ಸಾರಂಶಗಳನ್ನು ಸಾರುತ್ತದೆ. ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನಗಳ ಅಭಿವೃದ್ಧಿಯ ಭರಾಟೆಯಲ್ಲಿ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ಜನತೆಯಲ್ಲಿ ಗೊಂದಲವೇರ್ಪಟ್ಟಿದೆ. ಆಚರಣೆಗಳು ಕೇವಲ ತಿಂದು ಉಂಡು ಸಂತೋಷಕ್ಕೆ ಇರುವಂತವು ಎಂಬ ಭಾವನೆ ಬೆಳೆಯಲಾರಂಭಿಸಿದೆ. ಹೀಗಾಗಿ ಹಬ್ಬಗಳಿಗೆ ಇರುವ ಪೌರಾಣಿಕ ಹಿನ್ನೆಲೆ, ಸಾರುವ ಸಂದೇಶಗಳ ಬಗ್ಗೆ, ಹಬ್ಬಗಳ ಮಹತ್ವಗಳ ಬಗ್ಗೆ ತಿಳಿಸುವ ಪ್ರಯತ್ನ ಹಿರಿಯರಿಂದ ಆಗಬೇಕಿದೆ

Leave a Reply

Your email address will not be published. Required fields are marked *