success storyUncategorizedWomen Empowerment

ಕೂಲಿಯಿಂದ ಸ್ವಂತಿಕೆಯತ್ತ…

ಕೂಲಿಯಿಂದ ಸ್ವಂತಿಕೆಯತ್ತ…

ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದ ಗೀತಾ ಬಿ. ಅವರದ್ದು ಮೂಲತಃ ಬಡ ಕುಟುಂಬ. ದಿನಗೂಲಿಯನ್ನು ಅವಲಂಭಿಸಿದ್ದ ಕುಟುಂಬಕ್ಕೆ ಜೀವನ ನಿರ್ವಹಣೆ ಕಷ್ಟವಾಗಿತ್ತು. ಹಾಗೆಂದು ಗೀತಾ ಅಥವಾ ಅವರ ಪತಿ ಆಕಾಶಕ್ಕೆ ಏಣಿ ಹಾಕಿದವರಲ್ಲ. ಹಂತ ಹಂತವಾಗಿ ಜೀವನದಲ್ಲಿ ಮೇಲೆ ಬರುವ ಪಣ ತೊಟ್ಟಿದ್ದರು.

ಸುಗಟೂರು ವಲಯದ ಪ್ರಕೃತಿ ಜ್ಞಾನವಿಕಾಸ ಕೇಂದ್ರದ ಸದಸ್ಯೆಯಾದ ಗೀತಾ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ತಿಳಿದುಕೊಂಡರು. ಯೋಜನೆಯ ಬಾಪೂಜಿ ಸ್ವ-ಸಹಾಯ ಸಂಘಕ್ಕೆ ಸೇರಿಕೊಂಡ ಅವರು, ಮಹಿಳಾ ಸ್ವ- ಉದ್ಯೋಗದ ಬಗ್ಗೆ ಮಾಹಿತಿ ಪಡೆದುಕೊಂಡರು. ಮೊದಲ ಹಂತವಾಗಿ ಪ್ರಗತಿನಿಧಿ ಪಡೆದುಕೊಂಡು ಚಿಕ್ಕ ಕಿರಾಣಿ ಅಂಗಡಿ ಆರಂಭಿಸಿದರು.

ಅಂಗಡಿಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರುವ ಜೊತೆಗೆ, ಮೊಬೈಲ್ಗಳಿಗೆ ಕರೆನ್ಸಿ, ಟಿ.ವಿ ಸೆಟ್ ಆಫ್ ಬಾಕ್ಸ್ ರಿಚಾರ್ಜ್, ಪಾನ್ ಬೀಡ ಮಡುವುದರಲ್ಲೂ ಯಶಸ್ಸು ಸಾಧಿಸಿದ್ದಾರೆ. ಇವರ ಪತಿ ನಾಟಿ ವೈದ್ಯರೂ ಆಗಿರುವುದರಿಂದ, ಔಷಧ ವ್ಯಾಪಾರವನ್ನೂ ಮಾಡಿ ವಾರಕ್ಕೆ ರೂ. 1,000 ಆದಾಯ ಗಳಿಸುತ್ತಿದ್ದಾರೆ.
ಈ ಹೆಚ್ಚಿನ ಆದಾಯ, ಸಾಲ ಮರುಪಾವತಿ, ಅಂಗಡಿ, ಮನೆ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆಯಾಗುತ್ತಿದೆ. ತಮ್ಮ ಆರ್ಥಿಕ ಸ್ವಾವಲಂಬನೆಗೆ ಪ್ರೇರಣೆಯಾದ ಜ್ಞಾನವಿಕಾಸ ಕಾರ್ಯಕ್ರಮವನ್ನು ಅವರು ಬಹಳಷ್ಟು ಸ್ಮರಿಸುತ್ತಾರೆ.

ಮೊಳಕೆಕಾಳು ವ್ಯಾಪಾರ

ಮುನಿರತ್ನಮ್ಮ ಮಂಜುನಾಥ್ ದೇವನಹಳ್ಳಿ ತಾಲೂಕಿನ ಸಾಮಾನ್ಯ ಕುಟುಂಬದ ಮಹಿಳೆ. ತಮ್ಮ ಇಬ್ಬರು ಮಕ್ಕಳಿರುವ ಕುಟುಂಬಕ್ಕಾಗಿ ಕೂಲಿಯನ್ನೇ ಅವಲಂಬಿಸಿದ್ದ ಈ ದಂಪತಿಯಲ್ಲಿ ಹೊಸ ಆಶಾವಾದ ಮೂಡಿಸಿದ್ದು ಮೊಳಕೆ ಕಾಳು ತಯಾರಿ ಉದ್ಯೋಗ.

ಗ್ರಾಮಾಭಿವೃದ್ಧಿ ಯೋಜನೆ ಸೇರಿದ ನಂತರ ಉಳಿತಾಯವನ್ನು ಹೆಚ್ಚಿಸುತ್ತಾ ಹೋದ ಮುನಿರತ್ನಮ್ಮ ಮೊದಲ ಹಂತದ ಪ್ರಗತಿನಿಧಿಯಾಗಿ ರೂ. 10,000 ಪಡೆದು ಮೊಳಕೆ ಕಾಳು ತಯಾರಿ ಆರಂಭಿಸಿದರು. ಎರಡನೇ ಹಂತದ ಪ್ರಗತಿನಿಧಿಯಾಗಿ ಸ್ವಲ್ಪ ದೊಡ್ಡ ಮೊತ್ತವನ್ನು ಪಡೆದರು. ಇದು ಪತಿ ಮಂಜುನಾಥ್ ಕೂಲಿಗೆ ಹೋಗುವುದನ್ನು ಬಿಟ್ಟು ಮೊಳಕೆ ಕಾಳು ಉದ್ಯೋಗವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಅನುಕೂಲವಾಯಿತು.

ಮನೆಯಲ್ಲಿ ಕಡಲೆ, ಹೆಸರುಕಾಳು, ಹುರಳೀಕಾಳು, ಬಟಾಣಿ, ಮೊಳಕೆ ತರಸಿ ಅದನ್ನು ಪ್ಯಾಕ್ ಮಾಡುತ್ತಾರೆ. ಇವನ್ನು ದ್ವಿಚಕ್ರ ವಾಹನದ ಮೂಲಕ ದೇವನಹಳ್ಳಿಯಲ್ಲಿರುವ ಕೆಲ ಅಂಗಡಿಗಳಿಗೆ ನೀಡುತ್ತಾರೆ. ಇದೀಗ ಇವರು ಮೊಳಕೆ ಕಾಳು ಮಾರಾಟವನ್ನೇ ಸಣ್ಣದೊಂದು ಉದ್ಯಮವಾಗಿ ಬೆಳೆಸಿದ್ದಾರೆ. ಇದರಿಂದಲೇ ಅವರು ರೂ 1000 ವರೆಗೆ ಲಾಭ ಪಡೆಯುತ್ತಿದ್ದಾರೆ.

ಮುನಿರತ್ನಮ್ಮ ದಂಪತಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದರಿಂದ ಕುಟುಂಬ ಪ್ರಗತಿಯತ್ತ ಸಾಗುತ್ತಿದೆ. ಯೋಜನೆಯಿಂದ ದೊರೆತ ಸಹಾಯಕ್ಕೆ ಕೃತಜ್ಞರಾಗಿರುವ ಇವರು ತಮ್ಮ ವ್ಯಾಪಾರಕ್ಕೂ ಶ್ರೀ ಮಂಜುನಾಥ ಸ್ವಾಮಿ ಮೊಳಕೆ ಕಾಳು ವ್ಯಾಪಾರ ಎಂದು ನಾಮಕರಣ ಮಾಡಿದ್ದಾರೆ. ನಾನು ಕೂಲಿ ಬಿಟ್ಟು ಸ್ವಂತ ಉದ್ಯೋಗ ಮಾಡಲು, ಮಂಜುನಾಥ ಸ್ವಾಮಿಯ ಕೃಪೆಯೇ ಕಾರಣ, ಎನ್ನುತ್ತಾರೆ ಮಂಜುನಾಥ್.

Leave a Reply

Your email address will not be published. Required fields are marked *