ಹೆಬ್ರಿಯಲ್ಲಿ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ

Posted on Posted in Agriculture, News, Training

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ತಾಲೂಕು ಹೆಬ್ರಿ ವಲಯಮಟ್ಟದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ಹೆಬ್ರಿ ಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಜೂನ್ 22 ರಂದು ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ನಿರ್ದೇಶಕ ಪುರುಷೋತ್ತಮ್ ಪಿ.ಕೆ, ಕೃಷಿ ಯಂತ್ರಗಳ ಬಳಕೆಯಿಂದ ಕೂಲಿಯಾಳುಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಮಳೆಕೊಯ್ಲು, ಕೃಷಿ ಹೊಂಡ, ಜಲಮರುಪೂರಣ, ಇಂಗುಗುಂಡಿ, ಮಣ್ಣಿನ ಸಂರಕ್ಷಣೆ ಹಾಗೂ ಗಿಡಗಳ ರಕ್ಷಣೆ ಎಲ್ಲರ ಜವಾಬ್ದಾರಿ, ಎಂದರು.

ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಯುವಕರ ನಿರಾಸಕ್ತಿಯಿಂದಾಗಿ ಇತ್ತೀಚೆಗೆ ಕೃಷಿ ಚಟುವಟಿಕೆಗಳು ಕುಂಟಿತವಾಗುತ್ತಿವೆ. ಹೀಗೆ ಆದರೆ ಮುಂದೊಂದು ದಿನ ತುತ್ತು ಅನ್ನಕ್ಕೂ ಬರ ಬಂದೀತು, ಎಂದು ಎಚ್ಚರಿಸಿದರು. ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಹೆಗ್ಡೆ ಸರಕಾರ ಹಾಗೂ ಇತರ ಸಂಸ್ಥೆಗಳು ನೆರವು ನೀಡುವ ಮುಖಾಂತರ ರೈತರನ್ನು ಉತ್ತೇಜಿಸಬೇಕು, ಎಂದರು.

ಉಡುಪಿ ಸಿಎಚ್‍ಎಸ್‍ಸಿ ಸಮನ್ವಯಾಧಿಕಾರಿ ಬಿ. ಅಶೋಕ್ ಹೊಲಗಳ ಉಳುಮೆಗೆ ಟ್ರಾಕ್ಟರ್ ಬಳಕೆ ಹಾಗೂ ಚಾಪೆಮಡಿ ಮಾಡಿ ಬಿತ್ತನೆಗೆ ಮಿಷಿನ್ ನಾಟಿ ಹಾಗೂ ಕಟಾವಿಗೆ ಕಂಬೈನ್ ಹಾರ್ವೆಸ್ಟರ್ ಬಳಕೆಯಿಂದ ಭತ್ತದ ಬೇಸಾಯದಲ್ಲಿ ಪೂರ್ತಿಯಾಗಿ ಯಾಂತ್ರೀಕರಣ ಅಳವಡಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಉಪಾಧ್ಯಕ್ಷ ಮುದ್ದು ಕೃಷ್ಣ, ಉದ್ಯಮಿ ಭೋಜ ಕುಲಾಲ್, ವಲಯ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ಸೇವಾಪ್ರತಿನಿಧಿ ಹಾಗೂ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.