success storyWomen Empowerment

ಆತ್ಮವಿಶ್ವಾಸದ ನಡೆ ಯಶಸ್ಸಿನೆಡೆ. . .

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಮಾತು ಕೇಳಿದ್ದೇವೆ. ಆದರೆ ಮಾಡುತ್ತಿರುವ ಸ್ವಂತ ಉದ್ಯೋಗವನ್ನು ಪತಿಯಿಂದಲೇ ಮರೆಮಾಚಿ ಆರ್ಥಿಕ ಭದ್ರತೆ ರೂಪಿಸಿಕೊಂಡ ಲೀಲಾವತಿಯವರ ಕತೆಯನ್ನಮ್ಮೆ ನೀವು ಕೇಳಲೇಬೇಕು.

ಗದಗ್ ಮಸಾರಿ ಭಾಗದಲ್ಲಿ ನೆಲೆಸಿರುವ ಲೀಲಾವತಿ ಸರಳಜೀವಿ. ವ್ಯರ್ಥಾಲಾಪ ಸಹಿಸದ 40ರ ಪ್ರಾಯದ ಇವರು 9ನೇ ತರಗತಿಯವರೆಗೆ ಓದಿದ್ದಾರೆ. ಕೂಡು ಕುಟುಂಬವೆಂದರೆ ಹಾತೊರೆಯುವ ಇವರು, ಹಳ್ಳಿಯಲ್ಲಿರುವ ತಮ್ಮ ಕುಟುಂಬದ ಮಕ್ಕಳನ್ನು ಪೇಟೆಗೆ ಕರೆಸಿಕೊಂಡು ವಿದ್ಯೆಗೆ ಅವಕಾಶ ಮಾಡಿಕೊಟ್ಟ ಮಾತೃಹೃದಯಿ. ಇಷ್ಟಾದರೂ, ನವಲಗುಂದದ ಮುಳಗಾನೂರದಲ್ಲಿ ಶಿಕ್ಷಕರಾಗಿರುವ ಪತಿ ವಾರಕ್ಕೊಮ್ಮೆ ಬಂದುಹೋದ ಬಳಿಕ, ಮಕ್ಕಳು ಶಾಲೆಗೆ ತೆರಳಿದ ನಂತರ ಉಳಿಯುವ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದಾದರೂ ಹೇಗೆ ಅನ್ನೋದು ಅವರ ಚಿಂತೆಯಾಗಿತ್ತು.

ಇದೇ ಸಂದರ್ಭದಲ್ಲಿ ಮನೆಯ ಹತ್ತಿರದಲ್ಲೇ ಒಬ್ಬರು ಸ್ಟೇಷನರಿ ಅಂಗಡಿ ಬಿಟ್ಟು ಕೊಡುವುದಾಗಿ ಹೇಳಿದಾಗ, ಲೀಲಾವತಿಯವರ ಸ್ವ-ಉದ್ಯೋಗ ಆರಂಭಿಸಿಯೇಬಿಟ್ಟರು. ಅದರೆ ಪತಿ ಬೇಡಾ ಎಂದಾರೆಂದು ಆರು ತಿಂಗಳುಗಳ ಕಾಲ ಅವರ ಬಳಿ ವಿಷಯ ತಿಳಿಸಲೇ ಇಲ್ಲ. ಪತಿ ಇರುತ್ತಾರೆಂದು ಶನಿವಾರ ಮಧ್ಯಾಹ್ನದಿಂದ ಸೋಮವಾರದವರೆಗೆ ಅಂಗಡಿ ಮುಚ್ಚಿರುತ್ತಿದ್ದರು. ಆದರೆ ಆರು ತಿಂಗಳ ಬಳಿಕ ಪತಿಗೆ ಬೇರೊಬ್ಬರ ಮೂಲಕ ವಿಷಯ ತಿಳಿದು, ಲೀಲಾವತಿಯವರು ಬೈಸಿಕೊಳ್ಳಬೇಕಾಯಿತು. “ಆದರೆ ನಂತರ ನನ್ನ ಸ್ವ-ಉದ್ಯೋಗಕ್ಕೆ ತುಂಬು ಸಹಕಾರ ನೀಡುತ್ತಿದ್ದಾರೆ,” ಎನ್ನುತ್ತಾರೆ ಲೀಲಾವತಿ.

ಯೋಜನೆಯ ಸಹಕಾರ: ಡಿಸೆಂಬರ್, 2013 ರಲ್ಲಿ ಸ್ಟೇಷನರಿ ಉದ್ಯೋಗವನ್ನು ಆರಂಭಿಸುವ ನಿರ್ಧಾರ ಮಾಡಿದ ಲೀಲಾವತಿಯವರು ಬಂಡವಾಳಕ್ಕೆ ರೂ. 30000 ಮತ್ತು ಅಂಗಡಿ ಮುಂಗಡ ರೂ. 25000, ಹೀಗೆ ಒಟ್ಟು ರೂ. 55,000 ಅಗತ್ಯ ಮತ್ತು ಹೆಚ್ಚುವರಿ ಅಂಗಡಿಯ ಸಾಮಾಗ್ರಿಗಳ ವೆಚ್ಚ ಸೇರಿ ಒಟ್ಟು ರೂ. 1.30 ಲಕ್ಷ ಅಗತ್ಯವಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬನ್ನಿ ಮಹಾಕಾಳಿದೇವಿ ಸ್ವ-ಸಹಾಯ ಸಂಘದ ಸದಸ್ಯೆಯಾಗಿ ರೂ. 40,000 ಮೊತ್ತವನ್ನು ಮೊದಲು ಸಾಲವಾಗಿ ಪಡೆದರು. ಬಾಕಿ ರೂ. 75000 ಗಳ ಸಾಲವನ್ನು ಪರಿಚಯದವರಿಂದ ಪಡೆದರು. ಸಾಲದ ಕಂತನ್ನು, ಸ್ವ-ಸಹಾಯ ಸಂಘದಲ್ಲಿಯ ಕಂತುಗಳನ್ನು ಹಾಗೂ 4 ರಿಂದ 5 ಪಿಗ್ಮಿಗಳಿಗೆ ದಿನನಿತ್ಯ ತಪ್ಪದೇ ಹಣವನ್ನು ಅಂಗಡಿಯಿಂದ ಬಂದ ಲಾಭದಲ್ಲಿಯೇ ನಿರ್ವಹಿಸುತ್ತಿರುವುದಾಗಿ ಹೇಳುತ್ತಾರೆ ಲೀಲಾವತಿ.

ಈವರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಲೇ ರೂ. 2.5 ಲಕ್ಷ ಸಾಲ ಪಡೆದಿದ್ದು, ಮಕ್ಕಳ ಶಿಕ್ಷಣಕ್ಕಾಗಿ ರೂ. 30000 ಉಳಿದಂತೆ ರೂ. 1.20 ಲಕ್ಷ ಸಾಲವನ್ನು ಸ್ಟೇಷನರಿ ಸ್ವ-ಉದ್ಯೋಗಕ್ಕೆ ಬಳಸಿಕೊಂಡಿದ್ದಾರೆ. ಇವರ ಪತಿ ಎಲ್.ಐ.ಸಿ ಬಾಂಡ್ ಮೂಲಕ ರೂ. 50000 ಸಾಲ ತೆಗೆಸಿ ಸ್ವ-ಉದ್ಯೋಗಕ್ಕೆ ನೀಡಿದ್ದಾರೆ. ಕೇವಲ ಗಿಫ್ಟ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇವರು ಈಗ ರೆಡಿಮೇಡ್ ಬಟ್ಟೆಗಳನ್ನೂ ಮಾರುತ್ತಿದ್ದಾರೆ. ರೂ. 2500 ಅಂಗಡಿ ಬಾಡಿಗೆ, ಸಾಗಾಟ ವೆಚ್ಚ, ಎಲ್ಲಾ ವೆಚ್ಚಗಳನ್ನು ಕಳೆದೂ, ಪ್ರತಿ ತಿಂಗಳು ರೂ. 15000 ಆದಾಯ ಗಳಿಸುತ್ತಿದ್ದಾರೆ. ಮೂರು ವರ್ಷ ಬದಲಾವಣೆ, ಜೊತೆಗೆ ಆತ್ಮವಿಶ್ವಾಸ ತಂದುಕೊಟ್ಟಿದೆ. ಈಗ ಅವರ ಅಂಗಡಿಯಲ್ಲಿ ಸುಮಾರು ರೂ.4 ಲಕ್ಷದ ಸಾಮಗ್ರಿಯಿದೆ ಮತ್ತು ರೂ.4.5 ಲಕ್ಷ ಮೌಲ್ಯದ ಜಮೀನು ಖರೀದಿಸಿದ್ದಾರೆ.

ವೃತ್ತಿ ಮತ್ತು ವೈಯುಕ್ತಿಕ ಬದುಕಿನ ಹೊಂದಾಣಿಕೆ: ಲೀಲಾವತಿಯವರು ಪ್ರತಿದಿನ ಮುಂಜಾನೆ 5 ಗಂಟೆಗೆ ಏಳುವ ಸಂಪ್ರದಾಯವನ್ನಿಟ್ಟುಕೊಂಡಿದ್ದಾರೆ. ಯಾರ ಸಹಾಯವೂ ಇಲ್ಲದೆ ಅಡುಗೆ ಸೇರಿದಂತೆ ಮನೆಯ ಕೆಲಸಗಳನ್ನು ಮಾಡಿ ಮುಗಿಸುತ್ತಾರೆ. ಅಂಗಡಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವುದಲ್ಲದೆ, ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ಬಗ್ಗೆಯೂ ಯೋಜನೆ ರೂಪಿಸಿಕೊಂಡಿದ್ದಾರೆ.

“ವ್ಯಾಪಾರದೊಂದಿಗೆ ಹಣಕಾಸಿನ ಹರಿವು ಆತ್ಮವಿಶ್ವಾಸ ತುಂಬಿತು. ವ್ಯಾಪಾರಕ್ಕೆ ಸಂಬಂಧಿಸಿದಂತೆ, ಸಾಲವನ್ನು ಪಡೆಯುವ ಸ್ವತಂತ್ರ ನಿರ್ಧಾರದ ಸಾಮಥ್ರ್ಯ ಹೆಚ್ಚಾಯಿತು. ಗ್ರಾಹಕರಲ್ಲಿ ಮಾತನಾಡುವ ಕಲೆ, ವ್ಯಾಪಾರದ ವಹಿವಾಟಿನ ಜ್ಞಾನದಲ್ಲಿ ಗಮನಾರ್ಹ ಬದಲಾವಣೆಯಾಯಿತು”, ಎಂದು ಲೀಲಾವತಿಯವರೇ ಹೇಳುತ್ತಾರೆ.

ಜ್ಞಾನವಿಕಾಸದ ಮಹಿಮೆ: ಮೊದಲು ಅಂಗಡಿಗೆ ಹೋಗಲು ಹೆದರುತ್ತಿದ್ದ ಇವರು, ಈಗ ತಾವೊಬ್ಬರೇ ಹುಬ್ಬಳ್ಳಿಗೆ ಹೋಗಿ ಬರುತ್ತಾರೆ. ಮಕ್ಕಳು ಬಿಡುವಿನ ವೇಳೆಯಲ್ಲಿ ಇವರ ವ್ಯಾಪಾರಕ್ಕೆ ಸಹಕರಿಸುತ್ತಿದ್ದಾರೆ. ನಾಯಕತ್ವ ಗುಣದೊಂದಿಗೆ ಸ್ವ-ಸಹಾಯ ಸಂಘದ ಒಕ್ಕೂಟದ ಅಧ್ಯಕ್ಷತೆಯ ಸ್ಥಾನವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮಗಳಿಗೆ, ಒಕ್ಕೂಟ ಸಭೆಗಳಿಗೆ ಮಹತ್ವ ನೀಡಿ ತಪ್ಪಿಸದೇ ಪಾಲ್ಗೊಳ್ಳುತ್ತಾರೆ. “ಇಲ್ಲಿ ಸಿಗುವ ಮಾಹಿತಿ ನಮ್ಮ ಜೀವನ ಮತ್ತು ವೃತ್ತಿಗೆ ಪೂರಕವಾಗಿದೆ,” ಎಂದು ಯೋಜನೆಯ ಬಗ್ಗೆ ಕೃತಜ್ಞತಾ ಭಾವ ವ್ಯಕ್ತಪಡಿಸುತ್ತಾರೆ ಲೀಲಾವತಿ.

Article by: Vishala Mallapur, Principal, MJVTI