ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ರತ್ನಶ್ರೀ ಜ್ಞಾನವಿಕಾಸದ ಸದಸ್ಯೆಯಾಗಿರುವ ಶಾಂತ ಕೇಂದ್ರಕ್ಕೆ ಸೇರ್ಪಡೆಯಾಗಿದ್ದು 2002 ರಲ್ಲಿ. ಕೇಂದ್ರದ ಸಂಪೂರ್ಣ ಲಾಭ ಪಡೆದುಕೊಂಡ ಇವರು, ಅಲ್ಲಿ ದೊರೆಯುವ ಮಾಹಿತಿಯನ್ನು ಬಳಸಿಕೊಂಡು ತಮ್ಮ ಜೀವನದಲ್ಲಿ ಪರಿವರ್ತನೆ ಕಂಡುಕೊಂಡರು.
ಮೊದಲು ಪತಿಯ ಗಾರೆ ಕೆಲಸ ಹಾಗೂ ತನ್ನ ಕೂಲಿಯಲ್ಲಿ ಜೀವನ ಸಾಗಿಸುತ್ತಿದ್ದ ಶಾಂತಾರ ಕುಟುಂಬಕ್ಕೆ ಸಿಗುತ್ತಿದ್ದ ಆದಾಯ ಮಕ್ಕಳ ವಿದ್ಯಾಭ್ಯಾಸಕ್ಕೂ ಸಾಲುತ್ತಿರಲಿಲ್ಲ. ಹೀಗಾಗಿ ಕೂಲಿ ಕೆಲಸ ಮಾಡುತ್ತಿದ್ದ ಶಾಂತ, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ನಿರ್ಧರಿಸಿ ಟೈಲರಿಂಗ್ ತರಬೇತಿ ಪಡೆದು, ವೃತ್ತಿ ಆರಂಭಿಸಿದರು. ಇದರಿಂದ ಬಂದ ಧೈರ್ಯ ಶಾಂತಾರಲ್ಲಿ ಆತ್ಮವಿಶ್ವಾಸ ಮೂಡಿಸಿತು. ಹಣಕಾಸಿನ ವ್ಯವಸ್ಥೆ ಮಾಡಿಕೊಂಡ ಇವರು ವ್ಯಾಪಾರ, ಫ್ಯಾನ್ಸಿ ಸ್ಟೋರ್ ಹಾಕಿದರು. ಇದರಿಂದ ದಿನಕ್ಕೆ ಸುಮಾರು ರೂ. 1000 ದಷ್ಟು ಆದಾಯ ಬರುತ್ತಿತ್ತು. ಇವರ ಮುಂದಿನ ಯೋಜನೆ ಸ್ವಂತ ಮನೆ ನಿರ್ಮಾಣ. ಮಕ್ಕಳ ಶಿಕ್ಷಣಕ್ಕೆ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಬಲವೇ ಕಾರಣ ಎನ್ನುತ್ತಾರೆ ಶಾಂತಾ ದಂಪತಿ.
ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಮಲ್ಲೇಸರ ಗ್ರಾಮದ ಗೀತಾ ಕೃಷ್ಣಮೂರ್ತಿಯವರು ರತ್ನಶ್ರೀ ಕೇಂದ್ರದ ಸದಸ್ಯೆ. ಇವರ ಪತಿ ಸ್ಥಳೀಯ ನರ್ಸರಿಯೊಂದರಲ್ಲಿ ಉದ್ಯೋಗಿ. ಗೀತಾ ಅವರಿಗೆ ಸ್ವಂತ ಉದ್ಯೋಗ ಮಾಡಬೇಕೆಂಬ ಇಚ್ಚೆಯಿದ್ದರೂ, ಮೊದಲು ಧೈರ್ಯ ಸಾಕಾಗಲಿಲ್ಲ. ಇದಕ್ಕಾಗಿ ಕೇಂದ್ರದಿಂದ ಸಾಕಷ್ಟು ಮಾಹಿತಿ ಪಡೆದುಕೊಂಡ ಇವರು ಪತಿಯ ಸಹಕಾರದಿಂದ ಸ್ವಂತ ನರ್ಸರಿ ಆರಂಭಿಸಿದರು. ಮೊದಲ ಹಂತವಾಗಿ ಯೋಜನೆಯಿಂದ ರೂ. 1,20,000 ಸಾಲ ಪಡೆದು ತಮ್ಮ ಒಂದು ಎಕರೆ ಜಾಗದಲ್ಲಿ ನರ್ಸರಿ ಆರಂಭಿಸಿದರು.
ನರ್ಸರಿಯನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಿದ ಇವರು, ಈಗ ನೀಲಗಿರಿ, ಅಡಕೆ, ಸಿಲ್ವರ್ ಗಿಡ, ಅಕೇಶಿಯಾ ಸೇರಿದಂತೆ ಒಟ್ಟು 5,000 ಗಿಡ ಹಾಕಿದ್ದಾರೆ. ಇದರಿಂದ ಪ್ರತಿ ತಿಂಗಳು ಸುಮಾರು ರೂ. 5000 ಆದಾಯ ಪಡೆಯುತ್ತಿದ್ದಾರೆ. ಅಲ್ಲದೆ ಅಡಕೆ ಕೃಷಿ, ಕಾಳು ಮೆಣಸು ಕೃಷಿ ಮಾಡುತ್ತಿದ್ದಾರೆ. “ಯೋಜನೆಯ ನೆರವಿನಿಂದ ನರ್ಸರಿಯನ್ನು ಅಭಿವೃದ್ಧಿಪಡಿಸಿದ್ದು ಸಾಕಷ್ಟು ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸುವ ಗುರಿಯಿದೆ ಎನ್ನುತ್ತಾರೆ,” ಗೀತಾ ಕೃಷ್ಣಮೂರ್ತಿ.