‘ಹೆಣ್ಣು ಅಬಲೆಯಲ್ಲ ಸಬಲೆ’ ಎಂಬ ವಿಚಾರವನ್ನು ಮನದಟ್ಟು ಮಾಡಿದವರು ಶ್ರೀಮತಿ ಅಮೀನಾರು. ಇವರು ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನೆಲಸಿದ್ದು, ಕುಟುಂಬದಲ್ಲಿ ಸಾಕಷ್ಟು ನೋವನ್ನು ಅನುಭವಿಸಿ ಅದರಿಂದ ಹೊರಬರುವಲ್ಲಿ ಸಾಧಿಸಿ ಕುಟುಂಬದ ಆರ್ಥಿಕ ಸಂಕಷ್ಠವನ್ನು ಮೆಟ್ಟಿ ನಿಂತವರು. ಜೀವನ ರಥಕ್ಕೆ ದಂಪತಿಗಳ ಎರಡು ಗಾಲಿ ಬೇಕು ಆದರೆ ಒಂದೇ ಗಾಲಿಯಲ್ಲಿ ಓಡಿಸುವ ಅದೇಷ್ಟೋ ಹೆಣ್ಣು ಮಕ್ಕಳಲ್ಲಿ ಇವರು ಒಬ್ಬರು. ಮದುವೆಯಾದರೂ ಪತಿಯ ಆಸರೆ ಇಲ್ಲದೆ, ಹೆತ್ತ ತಾಯಿಯೊಂದಿಗೆ ಜೀವನ ಸಾಗಿಸುತ್ತಾ, ಇತರೆ ಒಂಟಿ ಮಹಿಳೆಯರಿಗೆ ದಾರಿದೀಪವಾಗಿಹರು. ಮಿತ ಭಾಷಿ, ಸಮಯಪ್ರಜ್ಞೆ, ಸರಳತೆ ಮತ್ತು ಸದಾ ಕ್ರಿಯಾಶೀಲತೆಯಿಂದ ಇರುವ ಅಮೀನಾವರು, ಬಿರುಬಿಸಿಲಿನ ಗುಡ್ಡದ ಏರಿಯ ಪಕ್ಕದ ಕಾದ ತಗಡುಗಳ ಕಿರಿದಾದ ಗೂಡಿನಲ್ಲಿ ಶ್ರಮದ ಬೆವರು ಸುರಿಸಿ ಜೀವನ ರಥವ ಎಳೆಯುತ್ತಿರುವುದು ಇವರ ವ್ಯಕ್ತಿತ್ವದ ವಿಶೇಷ.
ಅಮೀನಾ ಹಲವಾರು ಸಂಸ್ಥೆಗಳ ಸ್ವ ಸಹಾಯ ಸಂಘದೊಂದಿಗೆ ಆರ್ಥಿಕ ಸಹಾಯವನ್ನು ಸಣ್ಣ ಪ್ರಮಾಣದಲ್ಲಿ ಪಡೆದು ಟೇಲರಿಂಗ್ ವೃತ್ತಿಯೊಂದಿಗೆ ಬಟ್ಟೆ ವ್ಯಾಪಾರವನ್ನು ಪ್ರಾರಂಭಿಸಿದರೂ ಕೇವಲ ರೂ.30 ರಿಂದ 40 ಸಾವಿರ ಬಂಡವಾಳದಷ್ಟು ಮಾತ್ರವಾಗಿತ್ತು. 2 ವರ್ಷದ ನಂತರ ಅಂದರೆ 2014ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಕ್ಕೆ ಸೇರ್ಪಡೆಗೊಂಡ ನಂತರ ಸಾಲದ ರೂಪದ ಆರ್ಥಿಕ ಸಹಾಯದೊಂದಿಗೆ 3 ವರ್ಷದಲ್ಲಿ ರೂ.1.40 ಲಕ್ಷ ಸಾಲವನ್ನು ಪಡೆದುಕೊಂಡಿರುವರು. ಎಲ್ಲ ಸಾಲವನ್ನು ವಾರ ವಾರ ಬರುವ ಸಣ್ಣ ಸಣ್ಣ ಕಂತುಗಳ ಜೊತೆಗೆ ಎಲ್ಲ ಸಾಲವನ್ನು ತೀರಿಸಿ, ಕೇವಲ 35000/- ಚಾಲ್ತಿ ಸಾಲವನ್ನು ಮಾತ್ರ ಹೊಂದಿದ್ದಾರೆ. ಜೊತೆಗೆ ರೂ.1.50 ಲಕ್ಷದ ಬಂಡವಾಳವನ್ನು ಸಧ್ಯದಲ್ಲಿ ಗಳಿಸಿರುತ್ತಾರೆ.
ಈ ಗಳಿಕೆಯು ಯಾವುದೇ ಪೂರ್ವಜರ ಆಸ್ತಿಯು ಅಲ್ಲ, ಗಂಡನ ಆರ್ಥಿಕ ಸಹಾಯವು ಅಲ್ಲ. ಕೇವಲ ತನಗೆ ಗೊತ್ತಿರುವ ಟೇಲರಿಂಗ ವಿದ್ಯೆ ಮತ್ತು ಬಟ್ಟೆ ವ್ಯಾಪಾರದಿಂದ ಮಾತ್ರ ಗಳಿಸಿದ್ದು ಆಗಿರುತ್ತದೆ. ಅಂದರೆ ದಿನ ನಿತ್ಯ ಇವರು ಬಟ್ಟೆ ಹೊಲಿಯುವ ಮುಖೇನ ಅಂದರೆ ಕೇವಲ ದಿನಕ್ಕೆ 2 ಡ್ರೆಸ್‍ಗಳನ್ನು ಮಾತ್ರ ಇವರು ಹೊಲಿಯುವ ಮುಖೇನ ರೂ.600/- ರಿಂದ 700/-ಗಳನ್ನು ಆದಾಯವಾಗಿಸಿಕೊಂಡು ಇದರಿಂದ ನಿಯಮಿತವಾಗಿ ಮಾಸಿಕ ರೂ.7000/- ಆದಾಯಗಳನ್ನು ಪಡೆಯುತ್ತಿದ್ದಾರೆ. ಅಲ್ಲದೇ ರೆಡಿಮೇಡ್ ಬಟ್ಟೆ ವ್ಯಾಪಾರದಲ್ಲಿಯೂ 2 ರಿಂದ 3 ತಿಂಗಳಿಗೆ ಸುಮಾರು 50 ಸಾವಿರದ ವರೆಗೂ ಬಟ್ಟೆಗಳನ್ನು ತೆಗೆದುಕೊಂಡು ಬಂದು ವ್ಯಾಪಾರಮಾಡಿ ಅಂದಾಜು ರೂ.8000/-ಗಳನ್ನು ಸೇರಿ ಒಟ್ಟು ಅಂದಾಜು ರೂ.15000/- ವರೆಗೂ ಪಡೆಯುತ್ತಿರುವ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ.
ಹೀಗೆ ಸಣ್ಣದಾದ ಉದ್ಯೋಗದೊಂದಿಗೆ ಸಣ್ಣ ಸಣ್ಣ ವಾರದ ಕಂತುಗಳನ್ನು ಕಟ್ಟುವುದರೊಂದಿಗೆ ಜೀವನದ ಆರ್ಥಿಕ ಮುಗ್ಗಟ್ಟನ್ನು ಹೊರದೂಡಿಸಿರುವರು. ದೊಡ್ಡ ಬಂಡವಾಳವನ್ನು ಹೊಂದಿ ನೆಮ್ಮದಿಯಿಂದ ಕುಟುಂಬದ ಖರ್ಚನ್ನು ನೀಗಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಸಂಘಟನಾ ಸ್ವ ಸಹಾಯ ಸಂಘದಿಂದ ಒಗ್ಗಟ್ಟು ಮೂಢಿರುವುದು, ಆರ್ಥಿಕ ಅಭಿವೃದ್ಧಿ ಆಗಿಹುದು, ಮಾತು ಮತ್ತು ವ್ಯವಹಾರಿಕ ಸಂಪರ್ಕವು ಮೂಢಿರುವುದು ಎಂದು ಹೆಮ್ಮೆಯಿಂದ ಹೇಳುತ್ತಾರೆ ಶ್ರೀಮತಿ ಅಮೀನಾವರು.
Article by Vishala Mallapur, MJVTI, Dharwad