success storyWomen Empowerment

ಕಸೂತಿ ಕೌಶಲ್ಯ ತಂದಿತು ಆರ್ಥಿಕ ಸಾಫಲ್ಯ

ಕುಟುಂಬದ ಆಭಿವೃದ್ಧಿಯು ಆರ್ಥಿಕ ಅಭಿವೃದ್ಧಿಯ ಮೇಲೆ ಅವಲಂಭಿತವಾಗಿರುವುದು. ಹಿಂದಿನ ದಿನಗಳಲ್ಲಿ ಕುಟುಂಬಕ್ಕೆ ಆ ಮನೆಯ ಯಜಮಾನ ಒಬ್ಬರು ದುಡಿದರೆ ಕುಟುಂಬದ ರಥವ ಎಳೆಯಬಹುದಿತ್ತು. ಹಾಗೇ ‘ಉದ್ಯೋಗಂ ಪುರುಷ ಲಕ್ಷಣಂ’ ಎನ್ನುವವದಾಗಿತ್ತು. ಆದರೆ ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಒಬ್ಬರ ದುಡಿಮೆಯಿಂದ ನೆಮ್ಮದಿಯ ಜೀವನ ಸಾಗಿಸಲು ಕಷ್ಟಕರವಾದ ಪರಿಸ್ಥಿತಿಯು ನಿರ್ಮಾಣವಾಗಿದ್ದು ‘ಉದ್ಯೋಗಂ ಮನುಷ್ಯ ಲಕ್ಷಣಂ’ ಎನ್ನುವ ಮಾತನ್ನು ಅನ್ವಯಿಸುವುದು ಅಗತ್ಯವಾಗಿರುವುದು. ಅದರಲ್ಲೂ ಜನಸಂಖ್ಯೆಯ ಅರ್ಧದಷ್ಟು ಪುರಷರ ಸರಿಸಮಾನರಾಗಿ ಮಹಿಳೆಯರು ಇದ್ದು, ಹೆಚ್ಚಿನ ಮಹಿಳೆಯರು ಮನೆಯಲ್ಲಿಯ ಕೌಟುಂಬಿಕ ಜವಾಬ್ದಾರಿಯಲ್ಲಿ ಗಮನಿಸಿಕೊಂಡು ನಿರ್ವಹಿಸುತ್ತಾ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವುದು ನಾವೆಲ್ಲ ಇತ್ತೀಚೆಗೆ ನೋಡುತ್ತಿರುವೆವು.

ಆದಾಯದ ಉದ್ಯೋಗಕ್ಕಾಗಿ ಕೆಲವರು ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗದಲ್ಲಿ ತೊಡಗಿಸಿಕೊಂಡರೆ, ಮತ್ತೆ ಕೆಲವರು ತರಬೇತಿಗಳನ್ನು ಮಾಡಿಕೊಂಡು ಅಲ್ಪ ಬಂಡವಾಳವನ್ನು ಹಾಕಿಕೊಂಡು ವಸ್ತುಗಳನ್ನು ಉತ್ಪಾದಿಸಿ, ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ ಇವೆರಡಕ್ಕೂ ಹೊರತಾಗಿ ಬಂಡವಾಳರಹಿತ, ಕೌಶಲ್ಯಾಧಾರಿತ ಸೇವೆಯಲ್ಲಿ ತೊಡಗಿಸಿಕೊಂಡವರು ಕೂಡಾ ಕುಟುಂಬದ ಅಭಿವೃದ್ಧಿಗೆ ಪಾಲುದಾರರಾಗಿರುವುದು ಹಮ್ಮೆಯ ವಿಷಯವೇ ಸರಿ. ಇಂತಹ ಸೇವಾಧಾರಿತ ಉದ್ಯೋಗದಲ್ಲಿ ತೊಡಗಿಸಿಕೊಂಡ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಅಮ್ಮಿನಬಾವಿಯ ಮುಸ್ಲಿಂ ಮಹಿಳೆಯರ ಸಮುದಾಯವನ್ನು ಒಮ್ಮೆ ನೋಡಲೇ ಬೇಕು.

ಅಮ್ಮಿನಬಾವಿಯಲ್ಲಿ ಹೆಚ್ಚು ಕೃಷಿಕರೇ ಇರುವುದು. ಮಳೆಯಾಧಾರಿತ ಕೃಷಿಯಲ್ಲಿ ಹೆಚ್ಚಿನ ಜನರು ತಮ್ಮನ್ನು ತೊಡಗಿಸಿಕೊಂಡಿಹರು. ಇದಕ್ಕೆ ಮಹಿಳೆಯರೇನು ಹೊರತಾಗಿಲ್ಲ. ಬರಗಾಲದ ಈ ಸನ್ನಿವೇಶದಲ್ಲಿ ಬಹಳಷ್ಟು ಮಹಿಳೆಯರು ಈ ಉದ್ಯೋಗದಿಂದಲೂ ವಂಚಿತರಾಗಿ ಕೌಟುಂಬಿಕ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವರು. ಆದರೆ ಇದೇ ಭಾಗದ ಕೆಲವು ಮುಸ್ಲಿಂ ಸಮುದಾಯದ ಪುರುಷರು ಗೌಂಡಿ, ಮೇಸ್ತ್ರಿ, ಗಾರೆ ಕಟ್ಟಡ ಕೆಲಸಕ್ಕೆ ಹೋಗುವವರಿದ್ದಾರೆ. ಇಂತಹ ವೃತ್ತಿಯಲ್ಲಿ ತೊಡಗಿಸಿಕೊಂಡವರ ಪತ್ನಿಯರು ತಮ್ಮನ್ನು ತಾವು ಆಲಸ್ಯದಿಂದ ದೂರ ತೆಗೆದುಕೊಂಡು ಹೋಗಿದ್ದಾರೆ. ಇವರು ಮನೆಯ ಬಿಡುವಿನ ವೇಳೆಯಲ್ಲಿ ಕಲಿತ ‘ಕಸೂತಿ ಕಲೆ’ಯಿಂದ ಜೀವನವನ್ನು ಹೆಣೆದುಕೊಂಡಿದ್ದಾರೆ.

ಹೌದು ಹೆಚ್ಚಿಗೆ ಓದಿಲ್ಲದ, ಬಂಡವಾಳಕ್ಕೂ ಕೈ ಸುಟ್ಟುಕೊಳ್ಳದ ಆರ್ಥಿಕ ಪರಿಸ್ಥಿತಿಯನ್ನು ಹೊಂದಿದ ಧರ್ಮಸ್ಥಳ ‘ದೂದನಾನ ಸ್ವ ಸಹಾಯ ಸಂಘ’ದ ಹೆಂಗೆಳೆಯರು, 2009ರಲ್ಲಿ ಸಂಘವನ್ನು ಪ್ರಾರಂಭಿಸಿದರು. ಆಗ ತಾನೇ ಮನೆಯಿಂದ ಹೊರಗಡೆ ಬಂದು ಸಂಘದ ಸಭೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಂಡ ಇವರು ನೆರೆಯ ಯಜಮಾನರೊಬ್ಬರ ನೀಡಿದ ಮಾಹಿತಿಯಂತೆ ‘ಕಸೂತಿ’ ಕಲೆಯ ತರಬೇತಿಯ ಅವಕಾಶವನ್ನು ಗಿಟ್ಟಿಸಿಕೊಂಡರು. ತನ್ಮೂಲಕ ಇವರು 8 ವರ್ಷದಿಂದಲೂ ಈ ಕಲೆಯಿಂದ ನಿರಂತರ ಆದಾಯದೊಂದಿಗೆ ಕ್ರಿಯಾಶೀಲರನ್ನಾಗಿಸಿರುವುದು.

ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಆದರೆ ಈ ಸಂಘದ ಮಹಿಳೆಯರಾದ ರುಕ್ಕಯ್ಯ, ರಿಯಾನ ಮತ್ತು ಶಕೀಲಾ ಇವರೊಂದಿಗೆ ಒಟ್ಟು 30ಜನರು ಆಗ ಮನದೇಶಿ ಸಂಸ್ಥೆಯಿಂದ ಈ ತರಬೇತಿಯನ್ನು ಪಡೆದುಕೊಂಡವರಲ್ಲಿ ಮೂವರು. ಈಗ ಈ ಮೂವರು ತಲಾ 10 ರಿಂದ 15 ಜನರು ಒಳಗೊಂಡು ಗುಂಪಿನಲ್ಲಿ ಈ ಕಲೆಯನ್ನು ಆದಾಯಮೂಲವಾಗಿಸಿಕೊಂಡು ಜೀವನಮಟ್ಟವನ್ನು ಸುಧಾರಿಸಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇವರು ಕೆಲವು ಆಸಕ್ತ ಮಹಿಳೆಯರಿಗೆ ತಾವು ಕಲಿತ ವಿದ್ಯೆಯನ್ನು ಉಚಿತವಾಗಿ ತರಬೇತಿ ನೀಡಿದ್ದಾರೆ.

ಕಸೂತಿ ಕಲೆಯ ಆದಾಯದ ನೆಲೆಯಾಗಿದ್ದು ಹೇಗೆ?: ಹೆಚ್ಚಾಗಿ ತರಬೇತಿ ಪಡೆದ ನಂತರ ಕೆಲವರು ತಮ್ಮ ಮನೆಯವರಿಗೋ, ಸಂಬಂಧಿಕರಿಗೋ ಆ ಕಲೆಯಿಂದ ಉಡಗೋರೆಯನ್ನು ಕೊಟ್ಟು ಕಲೆಯನ್ನು ಗಂಟುಕಟ್ಟಿ ಇಟ್ಟು ಬಿಡುವುದು ಸಹಜವೇ ಸರಿ. ಆದರೆ ಈ ಮಹಿಳೆಯರು ಹಾಗೆ ಮಾಡಲಿಲ್ಲ. ಈ ಕಲೆಯನ್ನು ಕಲಿಸಿದ ಶಿಕ್ಷಕಿಯ ಸಹಾಯದಿಂದ ಇದನ್ನು ನಿರಂತರ ಆದಾಯ ತರುವಲ್ಲಿ ಒಂದು ಸಂಸ್ಥೆಗೆ ಏಜೆಂಟ್ ಆಗಿ ಸೇವೆಸಲ್ಲಿಸುವಂತೆ ಮಾಡಿಕೊಂಡರು. ಅದುವೇ ‘ಐ.ಡಿ.ಎಫ್’ ಸಂಸ್ಥೆಯ ‘ಕ್ರೈ ಕ್ರಾಫ್ಟ್’ ಎಂದು ಈ ಮಹಿಳೆಯರು ಹೇಳುತ್ತಾರೆ. ಈ ಸಂಸ್ಥೆಯಲ್ಲಿ ಸೀರೆಗೆ ಅಚ್ಚು ಹಾಕಿ ಅದನ್ನು ಇವರಿಗೆ ಕೊಡುತ್ತಾರೆ. ವಾರಕ್ಕೆ ಒಂದು ಬಾರಿ ಈ ಮೂವರು ಸುಮಾರು 40 ಜನರಿಗೆ 2 ದಿನಕ್ಕೆ ಒಂದು ಸೀರೆಯ ಕಸೂತಿ ಕಲೆ ಹಾಕುವಲ್ಲಿ ಅನುಕೂಲವಾಗುವಂತೆ 20 ರಿಂದ 30 ಸೀರೆಗಳನ್ನು ತೆಗೆದುಕೊಂಡು ಹೋಗಿ ಮರಳಿ ಸಂಸ್ಥೆಗೆ ತಂದು ನೀಡುತ್ತಾರೆ. ಎಲ್ಲರ ಆದಾಯವನ್ನು ಇವರಿಗೆ ಮೊದಲು ಹಣದ ರೂಪದಲ್ಲಿ ನೀಡುತ್ತಿದ್ದ ಸಂಸ್ಥೆ ಈಗ ಆಧಾರಲಿಂಕ್ ಚೆಕ್
ಮೂಲಕ ಹಣವನ್ನು ತಿಂಗಳಿಗೊಮ್ಮೆ ಪಾವತಿಸುತ್ತಿರುವ ಕುರಿತು ತಿಳಿಸಿದರು. ಸೇವೆಯಲ್ಲಿ ತೊಡಗಿಸಿದ ಪ್ರತಿಯೊಬ್ಬರು ಕನಿಷ್ಠ ರೂ.3000/- ರಿಂದ ಗರಿಷ್ಟ ರೂ.5000/- ಆದಾಯ ಪಡೆಯುತ್ತಿರುವ ಕುರಿತು ಹೆಮ್ಮೆಯನ್ನು ವ್ಯಕ್ತಪಡಿಸಿದರು.

‘ಕಸೂತಿ’ ಕಲೆಯು ನಿನ್ನೆ ಮೊನ್ನೆಯದಲ್ಲ. ತಲಾತಲಾಂತರಗತವಾಗಿ ರೂಢಿಗತವಾಗಿ ಬಂದಂತಹದ್ದು, ಈ ಕಲೆಯು 5000 ಕ್ಕೂ ಹೆಚ್ಚು ವಿವಿಧ ಹೆಣಿಕೆಗಳನ್ನು ಹೊಂದಲಾಗಿದ್ದು, ಕುರ್ತಾ, ಸಾಂಪ್ರದಾಯಿಕ ನೇಯ್ಗೆಯ ಸೀರೆ, ರವಿಕೆ, ಇತರೆ ವಿನ್ಯಾಸಗಳಿಗೆ ಅನುಗುಣವಾಗಿ ಅಳವಡಿಸಿ ಆ ವಸ್ತ್ರದ ಮೌಲ್ಯವನ್ನು ಕಲಾತ್ಮಕ ಗೊಳಿಸುವುದಾಗಿರುತ್ತದೆ. ಹೀಗೆ ಈ ‘ಮೌಲ್ಯವರ್ಧನ ಕಲೆ’ಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆಯಿರುವುದು ಇವರಿಗೆ ಇದು ನಿರಂತರ ಆದಾಯವಾಗಿದೆ ಎನ್ನುವ ವಿಚಾರ. ಇವರಿಗೆ ಯಾವುದೇ ವಿನ್ಯಾಸವನ್ನು ನೀಡಿದರೂ ಕಿಂಚಿತ್ತು ಕದಲದೇ ನಿರರ್ಗಳವಾಗಿ ಆ ಕಲೆಯಲ್ಲಿಯೇ ಲೀನರಾಗಿ ಕರಗತಮಾಡಿಕೊಂಡಿಹರು ಇವರು. ಈಗಾಗಲೇ ಕರ್ನಾಟಕ ಕಸೂತಿ, ನೇಗಿ ಕಸೂತಿ, ಗಂಟಿ ಕಸೂತಿ, ಲೇಜಿ ಡೇಜಿ, ಸಿಂಧಿ ಟಾಕಾ, ಕಾಂತಾ ವರ್ಕ ಹೀಗೇ ಹಲವಾರು ಕಸೂತಿಯ ಜೀವಕಳೆಯನ್ನು ತುಂಬುತಿಹರ ಇವರು ಕಲೆಯು ಒಂದು ಕಣವು ಅತ್ತಿಂದಿತ್ತಿಲ್ಲ. ಅಷ್ಟೋಂದು ಸ್ಪಷ್ಠ, ಸೂಕ್ಷ್ಮ ಶಿಸ್ತಿನ ಹೆಣಿಕೆಯು ಇವರ ವಿಶೇಷ.

ಧರ್ಮಸ್ಥಳ ಸಂಘದ ಪ್ರಗತಿನಿಧಿಯ ಆರ್ಥಿಕ ಸಹಾಯಕ್ಕೆ ಆಧಾರವಾಯಿತು ಕಸೂತಿ ಆದಾಯ: ನಿರಂತರ ಕಸೂತಿ ಕಲೆಯ ಆದಾಯದಿಂದ ಸಂಘದಲ್ಲಿ ಪಡೆದ ಆರ್ಥಿಕ ಸಾಲವಾದ ಪ್ರಗತಿನಿಧಿಯು ಇವರಿಗೆ ಯಾವುದೇ ತೊಂದರೆ ಇಲ್ಲದೇ ವಾರದ ಕಂತಿಗೆ ಬಾಕಿ ಇರದೇ ಹಣವನ್ನು ಕಟ್ಟುತ್ತಿರುವುದಾಗಿ ಇವರು ಹೇಳುತ್ತಾರೆ. ‚ಅಲ್ಲಿಯ ಆದಾಯ ನಮ್ಮ ಕೌಟುಂಬಿಕ ಮೂಲ ಸೌಕರ್ಯಕ್ಕೆ, ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಯಿತು‛ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಹೀಗೆ ಇವರು ಮೊದಲು 10 ಸಾವಿರ ಸಾಲ ಪಡೆದಾಗ ಕಂತುಗಳನ್ನು ಕಟ್ಟಲು ಹಿಂಜರಿಯುತ್ತಿದ್ದ ಇವರು ಈಗ ರೂ.1 ಲಕ್ಷ ಸಾಲವನ್ನು ಪಡೆಯಲು ಹಿಂಜರಿಯುತ್ತಿರುವುದಿಲ್ಲ. ಹೀಗೆ ಪ್ರಗತಿನಿಧಿ ಸಾಲದ ಅನುಕೂಲತೆಯಿಂದ ಸಣ್ಣ ಸಣ್ಣ ಕಂತುಗಳಲ್ಲಿ ಮರುಪಾವತಿ ಮಾಡುವ ಧೈರ್ಯವನ್ನು ಮಾಡಿ ಸಂಪೂರ್ಣ ಜೀವನಮಟ್ಟವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ.

ಈ ಸೇವಾ ವೃತ್ತಿಯಿಂದ ಬಂದ ಆದಾಯದಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗಿಹುದು. ಕೆಲವರು ಮಕ್ಕಳನ್ನು ಕಾನ್ವೆಂಟ ಶಿಕ್ಷಣ ನೀಡಿರುತ್ತಾರೆ. ಮನೆ ರೀಪೇರಿ, ಮಕ್ಕಳ ಮದುವೆ ಮಾಡಿರುತ್ತಾರೆ. ಬಂಗಾರ ಖರೀದಿ ಕೂಡಾ ಮಾಡಿರುವರು. ಅಲ್ಲದೇ ಪತಿಗೆ, ಮಕ್ಕಳಿಗೆ ಕೆಲಸಕ್ಕೆ ಪೂರಕವಾದ ಗೌಂಡಿ, ಗಾರೆ ಸಲಕರಣೆಗಳನ್ನು ಖರೀದಿಸಿದ್ದಾರೆ. ಮತ್ತೆ ಕೆಲವರು ಜಾಗೆಯನ್ನು ಕೂಡಾ ಖರೀದಿಸಿದ್ದು ಈ ಆದಾಯದಿಂದಲೇ ಎನ್ನುವ ಹೆಮ್ಮೆಯು ಇವರ ಮಾತಿನಲ್ಲಿ ಕಾಣಿಸಿತು.

ಕಸೂತಿಕಲೆಯು ದೂರವಾಗಿಸಿತು ಕನ್ನಡಕ: ಸೂಕ್ಷ್ಮ ಕರಕುಶಲ ಕಲೆಗಳ ನಿರಂತರದಿಂದ ಕಣ್ಣಿನ ದೋಷಗಳು ಉಂಟಾಗುತ್ತವೆ ಎನ್ನುವುದು ವೈಜ್ಞಾನಿಕ ಅಂಶ. ಆದರೆ ಈ ಸಂಘದ ಎಂಟು ಜನರು ಕೂಡಾ ಈ ಕಲೆಯನ್ನು 8 ವರ್ಷದಿಂದ ನಿರಂತರವಾಗಿ ತೊಡಗಿಸಿಕೊಂಡರೂ ಕೂಡಾ ಕನ್ನಡಕವನ್ನು ಧರಿಸದೇ ನಿರ್ವಹಿಸುತ್ತಿದ್ದಾರೆ. ಅದರಲ್ಲೂ ಕೆಲವರು 40ಕ್ಕೆ ಹತ್ತಿರವಾದರು ಚಾಲೀಸು ಹತ್ತಿರವೇ ಸುಳಿಯಗೊಡದಿರುವುದು ವಿಶೇಷವೇ ಸರಿ. ಕಲೆಯು ಕೌಶಲ್ಯಾಧಾರಿತವಾಗಿ, ಪ್ರೀತಿಯಿಂದ ಆಹ್ವಾನಿಸಿದರೆ ಆರೋಗ್ಯವೇ ಭಾಗ್ಯ. ದಿನ ನಿತ್ಯದ ಅಗತ್ಯ ಮನೆಯ ಕೆಲಸಗಳನ್ನು ಕೊನೆಗೊಳಿಸಿ ಬಿಡುವಿನ ವೇಳೆಯಲ್ಲಿ ನಿರ್ವಹಿಸಿ ನೆಮ್ಮದಿಯ ಜೀವನ ಸಾಗಿಸುವಲ್ಲಿ ಸಾಧ್ಯವಾಗಿಸಿಕೊಂಡ ಮಹಿಳೆಯರು ನಿಜಕ್ಕೂ ಮಹಿಳಾ ಗುಂಪುಗಳಿಗೆ ಮಾದರಿಯಾಗಿಹರು. ತಮ್ಮ ಕುಟುಂಬದ ಆರ್ಥಿಕ ಸುಧಾರಣೆಯೊಂದಿಗೆ ಜೀವನಮಟ್ಟ ಸುಧಾರಿಸಿರುವುದಲ್ಲದೇ ಮನೆಯಲ್ಲಿ ಶಂತಿಯುತ ಸಾಮರಸ್ಯ ಮತ್ತು ಆರೋಗ್ಯಭರಿತ ಜೀವನಕ್ಕೆ ದಾರಿ ಮಾಡಿಕೊಂಡಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.

Article by: Vishala Mallapur, MJVTI, Dharwad

Leave a Reply

Your email address will not be published. Required fields are marked *