‘ಇಂದಿನ ಉಳಿಕೆ ನಾಳೆಯ ಗಳಿಕೆ’ ಉಳಿತಾಯ ಮನೋಭಾವನೆಯು ಮುಂದಿನ ದಿನಗಳು ಆರ್ಥಿಕ ಭವಿಷ್ಯದ ರೂಪುರೇಷೆ ಎನ್ನಬಹುದು. ಇತ್ತೀಚೆಗೆ ಉಳಿತಾಯ ಮನೋಭಾವನೆಯ ಜೊತೆಗೆ ಆದಾಯಗಳಿಕೆಯ ಚಿಂತನೆಯು ಎಲ್ಲ ಗೃಹಿಣಿಯರಲ್ಲಿ ಮೂಢಿರುವುದು ಆರ್ಥಿಕ ಅಭಿವೃದ್ಧಿಯ ಮೆಟ್ಟಿಲು ಎನ್ನಬಹುದು. ಆದರೆ ಚಿಂತನೆಯು ಛಲವಾದಾಗ ಮಾತ್ರ ಯಶಸ್ಸಿನ ಜೀವನಾಗಬಹುದು. ವಯಸ್ಸು, ಆರೋಗ್ಯ, ಬರಗಾಲ ಇಂತಹ ಯಾವುದೇ ಆತಂಕಗಳು ಅಡ್ಡಿಯಾಗದು ಎನ್ನುವುದಕ್ಕೆ 60ರ ಆಸುಪಾಸಿನಲ್ಲಿರುವ ಶ್ರೀಮತಿ ಶಂಕ್ರವ್ವ ದೇಸಾಯಿಯವರ ಕ್ರಿಯಾಶೀಲ ಆರ್ಥಿಕ ಚಿಂತನವೇ ಇದಕ್ಕೆ ಉದಾಹರಣೆ.
ಸ್ವ ಉದ್ಯೋಗಕ್ಕೆ ಯೋಜನೆಯ ಚಿಂತನೆ ಮಾಡಿದ್ದು ಹೇಗೆ?
ಸತತವಾಗಿ 3 ರಿಂದ 4 ವರ್ಷದವರೆಗೂ ಬರಲಾಲದ ಕ್ಷಾಮವನ್ನೆ ಅನುಭವಿಸುತ್ತಿರುವ ನವಲಗುಂದ ತಾಲ್ಲೂಕಿನ ಭದ್ರಾಪುರ ಗ್ರಾಮಸ್ಥರಲ್ಲಿ ಶ್ರೀಮತಿ ಶಂಕ್ರವ್ವ ಕೂಡಾ ಒಬ್ಬರು. ಇಳಿಯ ವಯಸ್ಸನ್ನು ಪರಿಗಣಿಸದೇ ಯಾವುದಾದರೂ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಕಳೆದ ವರ್ಷ ಪ್ರಾರಂಭಿಸಿಯೇ ಬಿಟ್ಟರು. ಈ ಚಿಂತನೆ ಮೂಡಿದ್ದು ಇವರಿಗೆ ಹೇಮಾವತಿ ಜ್ಞಾನವಿಕಾಸ ಕೇಂದ್ರದಲ್ಲಿ ನೀಡಿದ ‘ಸ್ವ ಉದ್ಯೋಗ’ದ ಮಾಹಿತಿಯಿಂದ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸ್ವ ಸಹಾಯ ಸಂಘದ ಕಾರ್ಯಕ್ರಮದ ಜೊತೆ ಜೊತೆಗೆ ಸಮಾಜಿಕ ಚಿಂತನೆಗಳಾದ ಆರೋಗ್ಯ ಪೌಷ್ಠಿಕ ಆಹಾರ, ಕೌಟುಂಬಿಕ ಸಾಮರಸ್ಯ, ಶಿಕ್ಷಣ, ಸರ್ಕಾರಿ ಸೌಲಭ್ಯಗಳು ಮತ್ತು ಕಾನೂನು ಅಲ್ಲದೇ ಸ್ವ ಉದ್ಯೋಗದ ಮಾಹಿತಿಗಳ ಜಾಗೃತಿಯನ್ನು ಮೂಢಿಸುವಲ್ಲಿ ಪ್ರತಿ ತಿಂಗಳು ಜ್ಞಾನವಿಕಾಸ ಕೇಂದ್ರದ ಹಮ್ಮಿಕೊಳ್ಳುತ್ತಿರುವರು.
ಹೀಗೆ ಸ್ವ ಉದ್ಯೋಗದ ಮಾಹಿತಿಯಿಂದ ಪ್ರಭಾವಿತರಾದ ಶ್ರೀಮತಿ ಶಂಕ್ರವ್ವ ಊರಿನಲ್ಲಿ ಯಾರು ಕೂಡಾ ಕೈಗೊಳ್ಳದ ಖಾರ ಕುಟ್ಟುವ ಯಂತ್ರವನ್ನೆ ಹಾಕಿಕೊಂಡು ಸ್ವ ಉದ್ಯೋಗವನ್ನು ಮಾಡಲು ಇಚ್ಛಿಸಿದರು. ಸ್ವತಃ ಮೆಣಸಿನ ಕೃಷಿಯನ್ನೆ ಮಾಡುತ್ತಿದ್ದ ಇವರು ಈ ಸ್ವ ಉದ್ಯೋಗವನ್ನು ಆಯ್ಕೆ ಮಾಡಿಕೊಂಡರು. ಎರಡನೇ ಮಗನ ಸಹಾಯದಿಂದ ಈ ಉದ್ಯೋಗವನ್ನು ಮಾಡಲು ನಿರ್ಧರಿಸಿ, ವಿಧ್ಯುತ್ ಅಳವಡಿಕೆ ವೆಚ್ಚ ಸೇರಿ ಒಟ್ಟು ಅಂದಾಜು ರೂ.70 ಸಾವಿರಗಳನ್ನು ಖರ್ಚು ಮಾಡಿ 2016ರಲ್ಲಿ ಪ್ರಾರಂಭಿಸಿಯೇ ಬಿಟ್ಟರು.
ಬಂಡವಾಳ ಮತ್ತು ಲಾಭ: 2009ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗಾಯತ್ರಿ ಸ್ವ ಸಹಾಯ ಸಂಘದ ಸದಸ್ಯರಾದ ಇವರು ಇದುವರೆಗೂ ಕೃಷಿಗೆ ಮತ್ತು ಇತರೆ ಚಟುವಟಿಕೆಗಳಿಗೆ ಸಾಲವನ್ನು ಮಾತ್ರ ಪಡೆದಿದ್ದರು. ಆದರೆ ಪ್ರಥಮ ಬಾರಿಗೆ ರೂ.70 ಸಾವಿರಗಳನ್ನು ಈ ಉದ್ಯೋಗಕ್ಕಾಗಿ ಬಳಸಿಕೊಂಡರು. ಒಂದೇ ಸೀಜನ್ ನಲ್ಲಿ ಅಂದರೆ ಒಣ ಮೆಣಸಿನ ಕಾಯಿ ಬಂದ ವೇಳೆ ಸುಮಾರು 1 ರಿಂದ 2 ತಿಂಗಳ ಅವಧಿಯೊಳಗೆ ಅಂದಾಜು 200ಕೆಜಿ ತೂಕದವರೆಗೂ ಮೆಣಸಿನಕಾಯಿಯನ್ನು ಕುಟ್ಟಿ ಪುಡಿ ಮಾಡುವ ಕಾಯಕದಲ್ಲಿ ಇವರು ತಮ್ಮನ್ನು ತೊಡಗಿಸಿಕೊಂಡರು. ಒಟ್ಟು ರೂ. 70 ಸಾವಿರಗಳ ಆದಾಯವನ್ನು ಮಾಡಿಕೊಂಡು ಸಾಲವನ್ನು ಕೂಡಾ ಅವಧಿಗೆ ಪೂರ್ವ ಮರುಪಾವತಿಸುತ್ತಿದ್ದಾರೆ. ಸಣ್ಣ ಪುಟ್ಟ ರಿಪೇರಿ ಖರ್ಚುಗಳನ್ನು ಹೊರತು ಪಡಿಸಿದರೆ ಮುಂದಿನ ವ್ಯವಹಾರದ ಮೊತ್ತವೆಲ್ಲ ಇವರಿಗೆ ಲಾಭವೇ ಆಗುವುದು.
ಬರದ ನಾಡಿನಲ್ಲಿ ಬವಣೆ ಅನುಭವಿಸುವ ಬದಲು ಪರ್ಯಾಯ ಚಿಂತನೆಯ ಅಗತ್ಯವು ಇದೆ. ಅನೇಕ ಕೃಷಿ ಪೂರಕ ಸ್ವ ಉದ್ಯೋಗಗಳನ್ನು ತೊಡಗಿಸಿಕೊಂಡು ಕೌಟುಂಬಿಕ ಆರ್ಥಿಕ ಸಂಕಷ್ಟವನ್ನು ಧೈರ್ಯದಿಂದ ಎದುರಿಸಬಹುದು. ಇಳಿವಯಸ್ಸಿನ ಶಂಕ್ರವ್ವಳಿಗೆ ಸ್ವ ಉದ್ಯೋಗ ಮಾಡಿಕೊಂಡು ಆದಾಯ ಗಳಿಸಿಕೊಳ್ಳಲು ಸಾಧ್ಯವಾಗುವುದಾದರೆ ಇತರರಿಗೆ ಏಕೆ ಸಾಧ್ಯವಿಲ್ಲ? ‘ಮನಸ್ಸಿದ್ದರೆ ಮಾರ್ಗ’ ಎನ್ನುವುದು ಸತ್ಯವಾದ ಗಾದೆ ನುಡಿ ಅಲ್ಲವೇ?