Agriculturesuccess story

“ ಕನಕಾಂಬರದೊಂದಿಗೆ ಅರಳಿದ ಲತಾ’ರ ಬದುಕು ”

“ ಕನಕಾಂಬರದೊಂದಿಗೆ ಅರಳಿದ ಲತಾ’ರ ಬದುಕು ” ಕನಕಾಂಬರ ಕೃಷಿ ರೈತ ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿಸಬಲ್ಲದು. ದಿನನಿತ್ಯ ಆದಾಯ ಗಳಿಸುವಿಕೆಯ ಮೂಲವಾಗಬಲ್ಲದು ಎನ್ನುವುದು ಎಂ. ಲತಾ ವೆಂಕಟಶೆಟ್ಟಿಯವರದು. ಇವರ ಹೂವಿನ ತೋಟವನ್ನು ನೋಡಿದರೆ ಮನಸ್ಸು ಧೃಡಗೊಳ್ಳುತ್ತದೆ. 10 ಗುಂಟೆ( ಕಾಲು ಎಕ್ರೆ) ಯಲ್ಲಿ ಅರಳಿ ನಿಲ್ಲುವ ಕೆಂಪು ಅಬಲೆಯಿಂದಲೂ ದಿನದ ಖರ್ಚು ನೀಗಿ ಉಳಿಕೆಯಾಗುವಷ್ಟು ಮೊತ್ತವನ್ನು ಸಂಪಾದಿಸಲು ಸಾಧ್ಯವಿದೆ ಎಂಬುದನ್ನು ಎಂ ಲತಾ ವೆಂಕಟಶೆಟ್ಟಿ ಸಾಧಿಸಿ ತೋರಿಸಿದ್ದಾರೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಹೋಬಳಿಯ ಬೇಬಿ ಗ್ರಾಮದ ಲತಾ ವೆಂಕಟಶೆಟ್ಟಿ ಇವರು 1 1/2  ಎಕ್ರೆ ಜಮೀನು ಹೊಂದಿರುತ್ತಾರೆ. ಇವರ ಕುಟುಂಬ ಸಣ್ಣ ಕೂಡು ಕುಟುಂಬವಾಗಿರುತ್ತದೆ.  3 ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಆದಾಯ ಪಡೆಯುವ ಬೆಳೆ ಬೆಳೆಯುತ್ತಿದ್ದ ಇವರಿಗೆ ದಿನನಿತ್ಯ ಆದಾಯ ತಂದುಕೊಡಬಲ್ಲ ಬೆಳೆಗಳತ್ತ ಒಲವು. ಯಾವ ಕೃಷಿ ಅಳವಡಿಸಿಕೊಳ್ಳಬೇಕೆಂಬ ಇವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 6 ಜನ ಮಹಿಳೆಯರು ಸೇರಿ ಪ್ರಗತಿಬಂಧು ಶ್ರಮ ವಿನಿಮಯ ಸಂಘ ರಚಿಸಿ ಸ್ವ-ಇಚ್ಚೆಯಿಂದ ಸಲಹೆ ಪಡೆದು ಕಡಿಮೆ ಕೃಷಿ ತಾಕಿನಲ್ಲಿ ಕನಕಾಂಬರ ಕೃಷಿ, ಸೇವಂತಿಗೆ ಕೃಷಿ ಅಳವಡಿಸಿಕೊಂಡರೆ ಮಹಿಳೆಯರು ಸುಲಭದಲ್ಲಿ ನಿರ್ವಹಣೆ ಮಾಡಬಹುದು ಎನ್ನುವ ವಿಚಾರ ತಿಳಿದ ಇವರು, ಗಂಡನ ಸಂಬಳವನ್ನು ಅವಲಂಬಿಸದೆ ತಾನೆ ಸಾಲಲ್ಲಿ ಬದುಕನ್ನು ಸಾದಿಸಬೇಕೆಂಬ ಛಲದಿಂದ  ಕನಕಾಂಬರ ಹೂವಿನ ಗಿಡಗಳನ್ನು ಬೆಳೆಸಲು ನಿರ್ಧರಿಸಿ ಯೋಜನೆಯಿಂದ ಪ್ರಥಮ ಸಾಲ ರೂ. 10000.00 ಪಡೆದು ಪಕ್ಕದ ಊರಿನಿಂದ 2000 ಗಿಡಗಳನ್ನು ಖರೀದಿಸಿ ತಂದರು.

ಕೃಷಿ ಮಾಡುವ ವಿಧಾನ ?

ಗಿಡ ನಾಟಿಯ ಪೂರ್ವ, ಭೂಮಿಯನ್ನು ಆಳವಾಗಿ ಉಳುಮೆ ಮಾಡಿದ್ದಾರೆ. ಸಸಿಯಿಂದ ಸಸಿಯ ನಡುವೆ ಒಂದು ಅಡಿ ಅಂತರ ಇಟ್ಟಿದ್ದಾರೆ. ಸಸಿ ನೆಟ್ಟು ಒಂದು ತಿಂಗಳ ನಂತರ ರಸಗೊಬ್ಬರ ಉಣ್ಣಿಸಿದ್ದಾರೆ, ದಿನ ಬಿಟ್ಟು ದಿನ ನೀರು ಹಾಯಿಸುತ್ತಾರೆ. ಕಳೆ ನಿರ್ವಹಣೆಗೆ ಹೆಚ್ಚಿನ ಗಮನ ವಹಿಸಿ ತಂಡದ ಸದಸ್ಯರೆಲ್ಲರೂ ಸೇರಿ ಚೊಕ್ಕಟವಾಗಿಟ್ಟುಕೊಂಡಿದ್ದಾರೆ.

ಅಷ್ಟೇನು ಎತ್ತರಕ್ಕೆ ಬೆಳೆಯದ ಕನಕಾಂಬರ ಹೂವಿನ ಗಿಡಗಳ ನಿರ್ವಹಣೆ ಬಹಳ ಸುಲಭ. ರೋಗ ಕೀಟಗಳ ನಿರ್ವಹಣೆಗೆ ಗಮನ ಹರಿಸಿದರೆ ಅಂಧದ ಹೂವಿನ ಅಧಿಕ ಇಳುವರಿ ಕೈಸೇರಿದಂತೆಯೇ. ರೋಗ ನಿಯಂತ್ರಣೆಗೆ ವಾರಕ್ಕೊಮ್ಮೆ ಸಿಂಪರಣೆ ಮಾಡುತ್ತಾರೆ. ಹೂವು ಹದಿನೈದು ದಿನಕ್ಕೊಮ್ಮೆ 50 ಕಿ.ಗ್ರಾಂ. ಯೂರಿಯಾ, 50 ಕಿ.ಗ್ರಾಂ. ಡಿ.ಎ.ಪಿ., 1/2 ಟ್ರಾಕ್ಟರ್‍ನಷ್ಟು ಸಗಣಿಗೊಬ್ಬರ ಹಾಗೂ 3 ಪ್ಯಾಕ್ ಜಿಂಕ್‍ನ್ನು ನೀರಿನಲ್ಲಿ ಮಿಶ್ರಣ ಮಾಡಿ ಎರಡು ದಿನಗಳ ಕಾಲ ಸಂಗ್ರಹಿಸಿಡುತ್ತಾರೆ, ದ್ರವ ರೂಪದಲ್ಲಿರುವ ಈ ಮಿಶ್ರಣವನ್ನು ನೀರಿನೊಂದಿಗೆ ಗಿಡಗಳ ಬುಡಕ್ಕೆ ಹರಿದು ಬಿಡುತ್ತಾರೆ. ಪೌಷ್ಟಿಕ ಗೊಬ್ಬರ ಸ್ವಲ್ಪವೂ ವ್ಯರ್ಥವಾಗದೆ ಗಿಡಗಳ ಬುಡ ಸೇರುತ್ತದೆ.

ಅಧಿಕ ಇಳುವರಿ:

ಗಿಡ ನಾಟಿ ಮಾಡಿದ ಆರು ತಿಂಗಳಿನಿಂದ ಇಳುವರಿ ಆರಂಭವಾಗಿದೆ. ಪ್ರಾರಂಭದಲ್ಲಿ ಅರ್ಧ ಕಿ.ಗ್ರಾಂ. ನಷ್ಟು ಹೂವುಗಳು ಸಿಗುತ್ತಿದ್ದವು. ಈಗ ದಿನನಿತ್ಯ 3-4 ಕಿ.ಗ್ರಾಂ. ಕೋಯ್ಲಿಗೆ ಸಿಗುತ್ತಿದೆ. ಫೆಬ್ರವರಿಯಿಂದ ಏಪ್ರಿಲ್ ವರೆಗೆ ಇಳುವರಿಯ ಪ್ರಮಾಣ ಹೆಚ್ಚು. ಪ್ರತಿನಿತ್ಯ 8-10 ಕಿ.ಗ್ರಾಂ. ವರೆಗೆ ಇಳುವರಿ ಸಿಗುತ್ತದೆ ಎನ್ನುತ್ತಾರೆ.

ಐದು ವರ್ಷದ ನಂತರ ಹೂವಿನ ಇಳುವರಿ ಕಡಿಮೆಯಾಗುವುದರಿಂದ ಗಿಡ ಕೀಳುತ್ತೇವೆ.  ಪುನಃ ಬೇರೆ ಸಸಿಗಳನ್ನು ನಾಟಿ ಮಾಡುತ್ತೇವೆ ಎನ್ನುತ್ತಾರೆ. ಇವರು ಹೂವುಗಳನ್ನು ಕೋಯ್ಲು ಮಾಡಿ ಕಟ್ಟಿ ಪತಿಯ ಸಹಕಾರದಿಂದ ಕೆ.ಆರ್.ಎಸ್. ಮಾರುಕಟ್ಟೆ, ಬಲ್ಲೇಮಹಳ್ಳಿ, ಮೈಸೂರು ಮಾರುಕಟ್ಟೆಗೆ ಹೂವನ್ನು ತಲುಪಿಸಿ ಪತಿ ಶಾಲೆಗೆ ಹೋಗುತ್ತಾರೆ. ಕಿ.ಗ್ರಾಂ. ಹೂವಿಗೆ ರೂ. 300.00 ಸಿಗುತ್ತದೆ. ದೀಪಾವಳಿ, ಯುಗಾದಿ, ಗಣೇಶ ಚತುರ್ಥಿಯಂತಹ ಹಬ್ಬದ ದಿನಗಳಲ್ಲಿ ಕಿ.ಗ್ರಾಂ. ಹೂವಿಗೆ 500-700 ರೂ ಸಿಗುತ್ತದೆ. ಸಿಕ್ಕಿರುವ ಉದಾಹರಣೆಯೂ ಇದೆ ಎನ್ನುತ್ತಾರೆ. ವಾರಕ್ಕೆ 10-12 ಕಿ.ಗ್ರಾಂ. ಹೂವು ಸಿಗುತ್ತದೆ. ವಾರಕ್ಕೆ ರೂ.1500.00 – 2000.00 ವರೆಗೆ ಆದಾಯ ಕೈ ಸೇರುತ್ತದೆ. ಹಬ್ಬದ ಸಂಧರ್ಭದಲ್ಲಿ ರೂ. 2000.00 – 3000.00 ಆದಾಯ ಸಿಗುತ್ತದೆ ಎನ್ನುತ್ತಾರೆ. ಕಾಲು ಎಕ್ರೆಯ ಕನಕಾಂಬರ ಕೃಷಿಯಿಂದ ವಾರ್ಷಿಕ ರೂ.50000.00 – 60000.00 ವರೆಗೆ ಆದಾಯ ಸಿಗುತ್ತದೆ ಎನ್ನುತ್ತಾರೆ.

ಜಮೀನಿನ ಇತರೆ ಕೆಲಸಗಳಿಗೆ ಇನ್ನೊಬ್ಬರ ಅವಲಂಬನೆ ಕಡಿಮೆ. ಮನೆಯವರೆ ಸೇರಿ ಹಾಗೂ ತಂಡದ ಸದಸ್ಯರೆ ಸೇರಿ ಮಾಡುತ್ತಿದ್ದಾರೆ.  ಮಹಿಳೆಯರು ಮನಸ್ಸು ಮಾಡಿದರೆ ಕುಟುಂಬದ ಖರ್ಚು ಸರಿದೂಗಿಸಲು ಪರಿಹಾರ (ಮಾರ್ಗ) ವನ್ನು ಕಂಡುಕೊಳ್ಳಬಹುದೆಂದು ಎಲ್ಲರಿಗೂ ಮಾದರಿಯಾಗಿದ್ದಾರೆ. ಸರ್ಕಾರಿ ಶಿಕ್ಷಕನ ಹೆಂಡತಿ ಲತಾ ವೆಂಕಟಶೆಟ್ಟಿ ಹೆಮ್ಮೆ ಪಡುತ್ತಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಆಭಾರಿಯಾಗಿದ್ದೇನೆಂದು ಸಂತಸ ವ್ಯಕ್ತಪಡಿಸುತ್ತಾರೆ.

Leave a Reply

Your email address will not be published. Required fields are marked *