ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೊರಬ ತಾಲ್ಲೂಕು ಮತ್ತು ಕೆರೆ ಅಭಿವೃದ್ಧಿ ಸಮಿತಿ ಹಾಯ ಇವರ ಸಹಭಾಗಿತ್ವದಲ್ಲಿ “ನಮ್ಮೂರು – ನಮ್ಮಕೆರೆ” ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಿದೆ “ಕೆಂಗಟ್ಟೆ ಕೆರೆ ಹಸ್ತಾಂತರ ಕಾರ್ಯಕ್ರಮ” ವು ದಿನಾಂಕ: 07.08.2017 ರಂದು ಜರುಗಿತು.
ಕಾರ್ಯಕ್ರಮದ ಮೊದಲು ಅತಿಥಿಗಳು ಹಾಗೂ ಊರಿನ ಗ್ರಾಮಸ್ಥರು ಹಾಗೂ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿ ಕೆಂಗಟೆ ಕೆರೆಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಜಿ.ಪಂ ಸದಸ್ಯರಾದ ಶ್ರೀ ಶಿವಲಿಂಗೇ ಗೌಡರು ನಾಮಫಲಕ ಅನಾವರಣ ಮಾಡಿದರು. ನಂತರ ಹಾಯದ ಕೆಂಚಮ್ಮ ಹನುಮಂತಪ್ಪ ದೇವಸ್ಥಾನ ವಠಾರದಲ್ಲಿ ಸಭಾ ಕಾರ್ಯಕ್ರಮವು ಜರುಗಿತು.
ಗೇಂಡ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ರಮೇಶ್ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ‘ಗೇಂಡ್ಲಾ ಪಂಚಾಯತ್ ವ್ಯಾಪ್ತಿಯ ಹಾಯ ಗ್ರಾಮದಲ್ಲಿ ಕೆರೆ ಹೂಳೆತ್ತಲು ಪೂಜ್ಯ ವೀರೆಂದ್ರ ಹೆಗ್ಗಡೆಯವರು ರೂ. 10 ಲಕ್ಷ ನೀಡಿರುವುದು. ಸಂತೋಷದ ವಿಷಯವಾಗಿದೆ.. ಕಾಮಗಾರಿ ಉತ್ತಮವಾಗಿ ಜರುಗಿದ್ದು, ದಂಡಾವತಿ ನದಿಯಿಂದ ಪೈಪ್ ಲೈನ್ ಮೂಲಕ ಈ ಕೆಂಗಟ್ಟೆ ಕೆರೆಗೆ ನೀರು ತುಂಬಿಸಲು ಗ್ರಾಮ ಪಂಚಾಯತ್ನಿಂದ ಅನುದಾನ ಒದಗಿಸಲಾಗಿದೆ ಎಂದರು.’ ನಾಮಫಲಕ ಅನಾವರಣ ಮಾಡಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಶಿವಲಿಂಗೇ ಗೌಡರವರು ಮಾತನಾಡಿ “ಡಾ|| ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಯೋಜನೆಯ ಮೂಲಕ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಸರಕಾರಿ ಕಾರ್ಯಕ್ರಮಗಳಿಗೂ ಮಾದರಿಯಾಗಿದೆ. ಸರಕಾರ ಮಾಡಬೇಕಾಗಿ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಸರಕಾರಿ ಯೋಜನೆಗಳಲ್ಲಿ ಕಾಮಗಾರಿಗೆ ಮಂಜೂರಾದ ಪೂರ್ತಿ ಮೊತ್ತ ವಿನಿಯೋಗವಾಗುವುದು ಅನುಮಾ. ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆದ ಈ ಕಾಮಗಾರಿಯಲ್ಲಿ 10 ಲಕ್ಷಕ್ಕೆ, 15 ಲಕ್ಷಕ್ಕೂ ಮಿಕ್ಕಿದ ಕೆಲಸವಾಗಿದೆ.” ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಶಿವರಾಯ ಪ್ರಭುರವರು ಕೆಂಗಟ್ಟೆ ಕೆರೆಗೆ ಸಂಬಂಧಿಸಿದ ದಾಖಲಾತಿಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿ ಮಾತನಾಡಿದರು. “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 6 ಕೆರೆಗಳನ್ನು ಪುನಶ್ಚೇತನಗೊಳಿಸಲು ಆಯ್ಕೆ ಮಾಡಿ ಕಾಮಗಾರಿ ಮುಗಿಸಲಾಗಿದೆ. ಹಾಯ ಗ್ರಾಮದಲ್ಲಿ ಊರಿನವರು ಹಾಗೂ ಕೆರೆ ಅಭಿವೃದ್ಧಿ ಸಮಿತಿಯವರು ಈ ಕಾಮಗಾರಿಯನ್ನು ಉತ್ತಮ ಸ್ಪಂದನೆ ನೀಡಿರುವುದರಿಂದ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಮಾಡಲು ಸಹಕಾರಿಯಾಯಿತು. ಎಂದರು. ಜಿಲ್ಲೆಯಲ್ಲಿ ಮುಂದಿನ ವರ್ಷ ಮತ್ತಷ್ಟು ಕೆರೆಗಳನ್ನು ಆಯ್ಕೆಮಾಡಿ ಹೂಳು ತೆಗೆದು ಪುನಶ್ಚೇತನಗೊಳಿಸಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸೊರಬ ತಾಲ್ಲೂಕಿನ ಯೋಜನಾಧಿಕಾರಿ ಶ್ರೀ ರಮೇಶ್ ಪಿ.ಕೆಯವರು “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಪ್ರಸ್ತುತ ವರ್ಷ ನಮ್ಮೂರು ನಮ್ಮ ಕೆರೆ ಯೋಜನೆಯಡಿಯಲ್ಲಿ ಪ್ರಥಮ ಹಂತದಲ್ಲಿ ರಾಜ್ಯದಾದ್ಯಂತ ಒಟ್ಟು 82 ಕೆರೆಗಳನ್ನು ಆಯ್ಕೆ ಮಾಡಿ ಪುನಶ್ಚೇತನ ಮಾಡುವ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕಾಗಿ ಪೂಜ್ಯ ಹೆಗ್ಗಡೆಯವರು ಒಟ್ಟು 10 ಕೋಟಿ ಅನುದಾನ ಮೀಸಲಿಟ್ಟಿರುತ್ತಾರೆ. ಸೊರಬ ತಾಲ್ಲೂಕಿನಲ್ಲಿ ಪ್ರಥಮ ಹಂತದಲ್ಲಿ ಹಾಯ ಕೆಂಗಟ್ಟೆ ಕೆರೆಯನ್ನು ಆಯ್ಕೆ ಮಾಡಿ ಹೂಳೆತ್ತುವ ಕೆಲಸ ಮಾಡಲಾಗಿದೆ. ಒಟ್ಟು 12 ಲಕ್ಷದ ಕಾಮಗಾರಿ ನಡೆದಿದ್ದು, ರೂ. 10 ಲಕ್ಷ ಧರ್ಮಸ್ಥಳ ಯೋಜನೆ ಹಾಗೂ ರೂ. 2 ಲಕ್ಷವನ್ನು ಕೆರೆಯ ಫಲವತ್ತಾದ ಮಣ್ಣು ಮಾರಾಟ ಮಾಡಿ ಸ್ಥಳೀಯ ದೇಣಿಗೆಯ ರೂಪದಲ್ಲಿ ಸಂಗ್ರಹಿಸಲಾಗಿದೆ. 4 ಎಕ್ರೆ ಪ್ರದೇಶದ ಹೂಳು ತೆಗೆದಿದ್ದು ಸುಮಾರು 9000 ಟ್ಯ್ರಾಕ್ಟರ್ ಲೋಡು ಮಣ್ಣು ಮೇಲೆತ್ತಲಾಗಿದೆ. ಕೆರೆ ಏರಿ ರಿಪೇರಿ, ಕೆರೆ ಏರಿ ರಸ್ತೆ ಅಗಲೀಕರಣ ಕೆರೆಯ ಏರಿಗೆ ಕಲ್ಲು ಕಟ್ಟಿರುವುದು. ರಾಜ ಕಾಲುವೆ ರಿಪೇರಿ ಕೆರೆಯ ಸುತ್ತಮುತ್ತ 220 ಗಿಡಗಳ ನಾಟಿ, ಕೆರೆಗೆ ಮೀನು ಮರಿ ಬಿಡುವುದು ಮೊದಲಾದ ಕಾಮಗಾರಿಗಳನ್ನು ನಡೆಸಲಾಗಿದೆ. ಗ್ರಾಮಸ್ಥರು, ಕೆರೆ ಸಮಿತಿಯವರು ಯೋಜನೆಯ ಕಾರ್ಯಕರ್ತರು ಪ್ರತಿನಿತ್ಯ ಹಾಜರಿದ್ದು, ಕಾಮಗಾರಿಯ ಮೇಲ್ವಿಚಾರಣೆ ನೋಡಿಕೊಂಡಿರುವುದರಿಂದ 100% ಸಾಧನೆ ಸಾಧ್ಯವಾಗಿದೆ.” ಎಂದರು. ಹಾಯ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಗಂಗಪ್ಪನವರು ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ರೇಣುಕಾ ಮಂಜುನಾಥ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಆದ್ಯಕ್ಷ ಶ್ರೀ ಚೌಟಿ ಚಂದ್ರಶೇಖರ್ ಪಾಟೀಲ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಜಯಮ್ಮ, ಸದಸ್ಯರಾದ ಶ್ರೀಮತಿ ನಾಗರತ್ನ, ಲಕ್ಷ್ಮಮ್ಮ ಮತ್ತು ಪುಟ್ಟಪ್ಪ, ಶಿವಾಜಿ ಗೌಡ, ಅಕ್ಬರ್ ಸಾಬ್, ಗೇಂಡ್ಲಾ ಸೋಮಣ್ಣ, ದೇವರಾಜ್ ವಕೀಲರು ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತತ್ತೂರು ಚಾಟಿಕೊಪ್ಪ ಶ್ರೀ ವೀರಭದ್ರೇರ್ಶವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ರೂ. 2 ಲಕ್ಷ ಡಿ.ಡಿ ಹಾಗೂ ಶಿಡ್ಡಿಹಳ್ಳಿ ಶ್ರೀ ಈಶ್ವರ ಬಸವೇಶ್ವರ ದೇವಸ್ಥಾನಕ್ಕೆ ರೂ. 50 ಸಾವಿರ ಡಿ.ಡಿ ಯನ್ನು ವಿತರಿಸಲಾಯಿತು. ಶ್ರೀ ಅಕ್ಬರ್ ಸಾಬ್ ಊರಿನವರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದರು. ಕುಪ್ಪಗಡ್ಡೆ ವಲಯ ಮೇಲ್ವಿಚಾರಕ ಶ್ರೀ ರವಿಕುಮಾರ್ ಸ್ವಾಗತಿಸಿ, ಕೆರೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶ್ರೀ ಜಾನಕಪ್ಪ ವಂದಿಸಿದರು. ಕೃಷಿ ಮೇಲ್ವಿಚಾರಕ ಶ್ರೀ ಮಹಾಂತೇಶ್ ಕಾರ್ಯಕ್ರಮ ನಿರೂಪಿಸಿದರು.