‘ಕ್ರಿಯಾಶೀಲತೆಯು ವೃಧ್ಧಾಪ್ಯವನ್ನು ಓಡಿಸುವುದರಲ್ಲಿ ಸಂಶಯವೇ ಇಲ್ಲ.’ ‘ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ಎಂದೂ ಮುಪ್ಪಿಲ್ಲ’ ಎಂಬುದಕ್ಕೆ ಉದಾಹರಣೆಯೇ ಶ್ರೀಮತಿ ಸುರೇಖಾ ನಾಯ್ಕ. ಮೂಲತಃ ಮಂಗಳೂರಿನ ಪ್ರಾಂತ್ಯದವರಾದ ಇವರು ನೆಲಸಿರುವುದು ನವಲಗುಂದ ತಾಲ್ಲೂಕಿನ ಭದ್ರಾಪುರದಲ್ಲಿ. ಪತಿಯು ಕೂಡಾ ಮೂಲತಃ ಮಂಗಳೂರಿನ ಭಾಗದವರೇ ಆಗಿದ್ದು, ತಂದೆಯ 50 ವರ್ಷದ ಹಳೆಯ ಹೋಟೆಲ್ ಉದ್ಯಮವನ್ನು ಸಣ್ಣ ವಯಸ್ಸಿನಲ್ಲಿಯೇ ಸಹೋದರರೊಂದಿಗೆ ನಿರ್ವಹಿಸುತ್ತಿರುವವರು.
ಕೇವಲ ಎಸ್.ಎಸ.ಎಲ್.ಸಿ. ವಿದ್ಯಾಭ್ಯಾಸ ಮಾಡಿದ ಶ್ರೀಮತಿ ಸುರೇಖಾರವರು ಬಹಳ ಸೌಮ್ಯ ಮತ್ತು ಮೃಧು ಸ್ವಭಾವದವರು. ಕೂಡು ಕುಟುಂಬದೊಂದಿಗೆ ಮನೆಯ ಜವಾಬ್ದಾರಿಯಲ್ಲಿಯೇ ನಿರತರಾದ ಇವರು ಆಲಸ್ಯಕ್ಕೆ ಎಂದು ಮನೆ ಮಾಡಿದವರಲ್ಲ. ಹೀಗೆ ಮನೆಯಲ್ಲಿ ಬಿಡುವಿನ ವೇಳೆಯಲ್ಲಿ ಕಿರಾಣಿ ಸ್ವ ಉದ್ಯೋಗವನ್ನು ನಿರ್ವಹಿಸಿದವರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು 2009ರಲ್ಲಿ ನವಲಗುಂದದ ಭದ್ರಾಪುರಕ್ಕೆ ವಿಸ್ತರಣೆಯಾದಾಗ ‘ಧರ್ಮದೇವತೆ’ ಸ್ವ ಸಹಾಯ ಸಂಘದ ಸದಸ್ಯೆಯಾಗಿ ಸೇರಿ ಪ್ರಯೋಜನವನ್ನು ಪಡೆದವರು. ತಮ್ಮ ಪತಿಯ ಹೋಟೆಲ್ ಉದ್ಯಮಕ್ಕೆ, ತಮ್ಮ ಕಿರಾಣಿ ಉದ್ಯೋಗಕ್ಕಾಗಿ ಹಂತ ಹಂತವಾಗಿ ರೂ.10 ಸಾವಿರ, ರೂ.20 ಸಾವಿರ, ರೂ.30 ಸಾವಿರ ಮತ್ತು 50 ಸಾವಿರಗಳು ಒಟ್ಟು ಸೇರಿ ರೂ.1.10 ಲಕ್ಷಗಳನ್ನು ಬಳಸಿಕೊಂಡು ವಾರದ ಸಾಲದ ಕಂತುಗಳನ್ನು ಕಟ್ಟಿ ಸಾಲ ಮುಕ್ತಾಯಿಸಿದ್ದಾರೆ.
ಬೇಕರಿ ಸ್ವ ಉದ್ಯೋಗ ಅವಕಾಶ: 4 ವರ್ಷಗಳ ಹಿಂದೆ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಮಕ್ಕಳ ವಿದ್ಯಾಭ್ಯಾಸ, ಇತರೆ ಕೌಟುಂಬಿಕ ಖರ್ಚುಗಳನ್ನು ನಿಭಾಯಿಸುವ ಚಿಂತೆಯಲ್ಲಿಯೇ ಇವರಿಗೆ ಸಣ್ಣದಾಗಿ ಪಾಶ್ರ್ವವಾಯುವಿನಿಂದ ಕಾಲಿಗೆ ಸ್ವಲ್ಪ ತೊಂದರೆಯಾಗಿ ಸಹಜವಾಗಿ ನಡೆಯಲು ಸಾಧ್ಯವಾಗದೆ ಹೋಗಿದೆ. ಆದರೂ ಧೃತಿಗೆಡೆದೆ ಹೆಚ್ಚುತ್ತಿರುವ ಕುಟುಂಬದ ಖರ್ಚುಗಳಿಗೆ ಇನ್ನೂ ಹೆಚ್ಚು ಲಾಭದಾಯಕ ಉದ್ಯೋಗವನ್ನು ಮಾಡುವ ಚಿಂತನೆ ಮಾಡಿದರು. ಪೂರಕವಾಗಿ ಹುಬ್ಬಳ್ಳಿ ಅಣ್ಣಿಗೇರಿ ಮಾರ್ಗದಲ್ಲಿ ಭದ್ರಾಪುರದ ಹೆದ್ದಾರಿಗೆ ಹೊಂದಿಕೊಂಡು ಇದ್ದ ಹೋಟೆಲ್ ಪಕ್ಕದಲ್ಲಿ ಇದ್ದ ಕಟ್ಟಡವನ್ನು ರೂ.16000/- ವಾರ್ಷಿಕ ಬಾಡಿಗೆ ಆಧಾರದಲ್ಲಿ ಪಡೆದು ಬೇಕರಿ ವಸ್ತು ಮಾರಾಟ ಮಾಡುವ ಧೈರ್ಯಮಾಡಿದರು. ಸುಮಾರು ರೂ.50 ಸಾವಿರಗಳ ಬೇಕರಿ ಸಾಮಾಗ್ರಿಗಳನ್ನು ಸ್ವ ಸಹಾಯ ಸಂಘದಲ್ಲಿ ಸಾಲವನ್ನಾಗಿ ಪಡೆದುಕೊಂಡು ವಾರದ ಸಾಲದ ಕಂತು ರೂ.1100/- ಗಳನ್ನು ಈ ವ್ಯಾಪಾರದ ಆದಾಯದಿಂದಲೇ ತುಂಬುತ್ತಾ ಸಾಗಿದ್ದಾರೆ.
ವ್ಯವಹಾರಿಕ ಜ್ಞಾನ ವೃದ್ಧಿಗೆ ಶಾಲೆ ಬೇಕಿಲ್ಲ: ಹೋಲ್‍ಸೇಲ್ ಮತ್ತು ರಿಟೇಲ್ ದರದ ವ್ಯತ್ಯಾಸದೊಂದಿಗೆ ಲಾಭದಾಯಕ ಗುಣಮಟ್ಟದ ಬೇಡಿಕೆ ಇರುವ ಬೇಕರಿ ಸಾಮಾಗ್ರಿಗಳನ್ನೆ ಇವರು ಖರೀದಿಸುತ್ತಿದ್ದಾರೆ. ಶಾಲೆ ವಿಶ್ರಾಂತಿ ಗಂಟೆಯ ಸದ್ದಿನಲ್ಲಿಯೇ ಬೇಕರಿ ತುಂಬಾ ಶಾಲಾ ಮಕ್ಕಳ ಕಲರವಕ್ಕೆ ಒಂಚೂರು ಸಿಟ್ಟಾಗದೆ ತಾಳ್ಮೆಯಿಂದ ಪ್ರತಿಯೊಬ್ಬರಿಗೂ ಪ್ರೀತಿಯಿಂದ ನಗುಮುಖದ ಸೇವೆಯನ್ನು ಕೊಡುತ್ತಾ ತಮ್ಮ ಪಾಶ್ವಾವಾಯುವಿನ ಅನಾರೋಗ್ಯವನ್ನೆ ಮರೆತಿದ್ದಾರೆ. ಮಕ್ಕಳ ಸಂತೋಷವನ್ನು ನೋಡುತ್ತಾ ತಮ್ಮ ನಿರಂತರ ಶ್ರಮಕ್ಕೆ ಧಣಿವಾಗದೆ ನಿತ್ಯ ಕಾಯಕವನ್ನು ದೂಡುತ್ತಿದ್ದಾರೆ.
ಪ್ರತಿ ವಾರಕ್ಕೆ ರೂ.8000/- ಬೇಕರಿ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದಾರೆ. ಹೀಗೆ ತಿಂಗಳಿಗೆ ರೂ.32000/-ಗಳ ವ್ಯವಹಾರವನ್ನು ಇವರು ಮಾಡುತ್ತಿದ್ದಾರೆ. ಇದರಲ್ಲಿ ಎಲ್ಲ ಖರ್ಚನ್ನು ಕಳೆದು ಕನಿಷ್ಠ ರೂ.10 ಸಾವಿರಗಳ ಲಾಭ ಇವರು ಹೊಂದುತ್ತಿದ್ದಾರೆ. ಇದರೊಟ್ಟಿಗೆ ಪ್ರತಿ ದಿನ ಸಣ್ಣ ಪುಟ್ಟ ಹೊಲಿಗೆ ಕೆಲಸವನ್ನು ಮಾಡುತ್ತಾ ಮಾಸಿಕವಾಗಿ ರೂ.3000/- ವರೆಗೂ ದುಡಿಯುತ್ತಿರುವರು. ಹೀಗೆ ಕುಟುಂಬದ ಖರ್ಚಿನಲ್ಲಿ ಪತಿಯೊಂದಿಗೆ ತಮ್ಮ ದುಡಿಮೆಯ ಆದಾಯವನ್ನು ಹಾಕುತ್ತಾ, ಅಲ್ಪ ಸ್ವಲ್ಪ ಉಳಿತಾಯವನ್ನು ಮಾಡುತ್ತಾ, ರೂ.20000/- ವರೆಗೂ ವಿಮಾ ಸೌಲಭ್ಯವನ್ನು ಕೂಡಾ ಇದೇ ಸ್ವ ಉದ್ಯೋಗದಿಂದ ಮಾಡಿಕೊಂಡು ಆರ್ಥಿಕ ಭದ್ರತೆಯನ್ನು ರೂಪಿಸಿಕೊಂಡಿದ್ದಾರೆ. ಹೀಗೆ ಈಗ ರೂ.70 ಸಾವಿರ ಮೌಲ್ಯದ ಬಂಡವಾಳವನ್ನು ಚಾಲ್ತಿಯಾಗಿ ಹೊಂದಿದ್ದಾರೆ.
ಸಾಮಾಜಿಕ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲತೆ: ಉದ್ಯೋಗದಲ್ಲಿ ಸದಾ ನಿರತವಿರುವ ಇವರು ಧರ್ಮಸ್ಥಳದ ಮುಖೇನ ಮಹಿಳೆಯರಿಗಾಗಿ ಆಯೋಜಿಸುತ್ತಿರುವ ‘ಹೇಮಾವತಿ’ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಠಿಕ ಆಹಾರ, ಆರೋಗ್ಯ, ಕಾನೂನು ವಿಷಯ, ಸ್ವ ಉದ್ಯೋಗ ಇತರೆ ವಿಚಾರಗಳನ್ನು ತಿಳಿಯಲು ತಪ್ಪದೇ ತಮ್ಮ ಕೆಲಸದ ಮಧ್ಯದಲ್ಲಿ ಬಿಡುವು ಮಾಡಿಕೊಂಡು ಭಾಗವಹಿಸುವರು.
ಆರ್ಥಿಕ ಭದ್ರತೆಯೊಂದಿಗೆ ನೆಮ್ಮದಿಯ ಜೀವನ: ಇವರು ಮೂರು ಮಕ್ಕಳಲ್ಲಿ ಇಬ್ಬರು ಗಂಡು ಮತ್ತು ಒಬ್ಬಳು ಹೆಣ್ಣು ಮಗಳು ಎಲ್ಲರೂ ಐಟಿಐ, ಡಿಪ್ಲೋಮಾ ಮತ್ತು ಬಿಕಾಂ ಕ್ರಮವಾಗಿ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಉದ್ಯೋಗದ ವ್ಯವಹಾರಕ್ಕಾಗಿ ಪತಿಯ, ಮಕ್ಕಳ ಮತ್ತು 90 ವರ್ಷ ವಯಸ್ಸಿನ ಅತ್ತೆಯ ಸಹಕಾರವು ದೊರೆತಿರುವುದಕ್ಕೆ ಇವರು ಬಹಳ ಸಂತೋಷವನ್ನು ವ್ಯಕ್ತಪಡಿಸುತ್ತಾರೆ.