Agriculturesuccess storyWomen Empowerment

ಕೃಷಿಯಿಂದ ಗೆದ್ದ ಶ್ರೀಮತಿ ವೇದಾವತಿ ಬಿನ್ ರಾಜಣ್ಣ

ವೇದಾವತಿ, ಅವರ ಗಂಡ, ಅತ್ತೆ, ಮೂರು ಜನ ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳು ಒಟ್ಟು 7 ಜನರಿಂದ ಕೂಡಿದ ಆರ್ಥಿಕವಾಗಿ ಬಡತನದಿಂದ ಕೂಡಿದ ತುಂಬು ಕುಟುಂಬವೆಂದು ಹೇಳಬಹುದು. ಇವರ ಕುಟುಂಬ ನಿರ್ವಹಣೆ ಮಾಡಲು ಆಸರೆಯಾಗಿದ್ದು ಒಂದು ಎಕರೆ ಕೃಷಿ ಭೂಮಿ ಹಾಗೂ ವೇದಾವತಿ ಮತ್ತು ರಾಜಣ್ಣನವರ ದಿನಗೂಲಿ. ದಿನಗಳೆದಂತೆ ಮಕ್ಕಳು ದೊಡ್ಡವರಾದಂತೆ ಅವರ ವಿದ್ಯಾಭ್ಯಾಸ ಹಾಗೂ ಕುಟುಂಬ ನಿರ್ವಹಣೆಯು ಕಷ್ಟವಾಗತೊಡಗಿತು. ಅಂತಹ ಸಂದರ್ಭದಲ್ಲಿ ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದ 1 ಎಕರೆ ಜಮೀನನ್ನು ರೂ 40,000.00 ಕ್ಕೆ ಭೋಗ್ಯಕ್ಕೆ ಹಾಕಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬ ನಿರ್ವಹಣೆ ಮಾರ್ಗವನ್ನು ಕಂಡುಕೊಂಡರು. ಮುಂದೆ ಮಕ್ಕಳು ಬೆಳೆದು ದೊಡ್ಡವರಾದರು. ಅಷ್ಟಕಷ್ಟು ಶಿಕ್ಷಣವನ್ನು ಪೂರೈಸಿದರು.

ನಂತರ ಅವರ ಇಬ್ಬರು ಹಿರಿಯ ಮಕ್ಕಳು ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಗ್ಲಾಸ್ ಫಿಟ್ಟಿಂಗ್ ಮಾಡುವ ಕೆಲಸವನ್ನು ಪ್ರಾರಂಭಿಸಿದರು. ಆದರೆ ಅವರ ದುಡಿಮೆಯಲ್ಲಿ ಉಳಿದ ಸಹೋದರ ಮತ್ತು ಸಹೋದರಿಯ ವಿದ್ಯಾಭ್ಯಾಸದ ಜೊತೆಗೆ ಕುಟುಂಬ ನಿರ್ವಹಣೆಯನ್ನು ಮಾಡಿ ರೂ.40,000.00 ಉಳಿಸುವುದು ಅಸಾಧ್ಯವಾಯಿತು. ಅಲ್ಲದೆ ಪುನಃ ಜಮೀನು ಹಿಂಪಡೆದು ಕೃಷಿ ಮಾಡಬೇಕೆಂಬ ಕನಸು ಕೈಗೂಡುವುದೂ ವಿಳಂಬವಾಗತೊಡಗಿತು.ಇಂತಹ ಸಂದರ್ಭದಲ್ಲಿ ಅಂದರೆ 2012ನೇ ಇಸವಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಯಳಂದೂರು ತಾಲೂಕಿಗೆ ವಿಸ್ತರಣೆಯಾಯಿತು. ಆಗ ಯೋಜನೆಯ ಸೇವಾಪ್ರತಿನಿಧಿಗಳು ಹಾಗೂ ವಲಯದ ಮೇಲ್ವಿಚಾರಕರಿಂದ ಮಾಹಿತಿಯನ್ನು ಕೇಳಿ ಒಲ್ಲ್ಲದ ಮನಸ್ಸಿನಿಂದ 13 ಜನ ಸೇರಿ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ತ್ರಿಪುರಾಂಬ ಸ್ವ-ಸಹಾಯ ಸಂಘವನ್ನು ರಚಿಸಿದರು. ಪ್ರತಿ ವಾರ ತಲಾ 10.00 ರೂ ಉಳಿತಾಯವನ್ನು ಮಾಡಲು ಪ್ರಾರಂಭಿಸಿದರು. ಸದಸ್ಯರಾದ ಆರಂಭದಲ್ಲಿ ವೇದಾವತಿಯವರು ರೂ.10,000.00 ಸಾಲ ಪಡೆದು ಚಿಕ್ಕ ಕೈ ಸಾಲವನ್ನು ತೀರಿಸಿದರು. ನಂತರ ವಾರದ ಕಂತಿನಲ್ಲಿ ಸಂಘಕ್ಕೆ ಮರುಪಾವತಿಸಲು ತಮ್ಮ ಮಕ್ಕಳ ದುಡಿಮೆ ಹಾಗೂ ತಾನು ಮತ್ತು ತನ್ನ ಗಂಡನ ದುಡಿಮೆಯಿಂದ ಸರಾಗವಾಗಿ ಯಾವುದೇ ತೊಂದರೆಯಿಲ್ಲದೆ ಮರುಪಾವತಿಸಿದರು. ಇದರ ಬಗ್ಗೆ ವೇದಾವತಿಯವರ ಮಾತಿನಲ್ಲೇ ಹೇಳುವುದಾದರೆ, ತಾವು ಪಡೆದ ರೂ
10,000.00 ಇಲ್ಲಿಯವರೆಗೆ ಕೇವಲ ಬಡ್ಡಿ ಮಾತ್ರ ಹೋಗುತ್ತಿದ್ದು ಅಸಲು ಹಣ ಹಾಗೆ ಉಳಿಯುತ್ತಿತು. (ಅಂದರೆ ಕೈ ಸಾಲ ಪಡೆದುಕೊಂಡ ನಿರ್ದಿಷ್ಟ ಅವಧಿಗೆ ಸಾಲ ನೀಡಿದವರಿಗೆ ಬಡ್ಡಿ ಕಟ್ಟಿದರೆ ಸಾಕು ಎನುತ್ತಾರೆ) ಆದರೆ ಸಂಘದಲ್ಲಿ ಬಡ್ಡಿಯ ಜೊತೆಗೆ ವಾರದಲ್ಲಿಯೇ ಅಸಲು ಕೂಡಾ ತೀರುವದರಿಂದ ನಮಗೆ ಸಾಲ ಸಂಪೂರ್ಣ ಮುಕ್ತಾಯವಾಗುವುದು ಗೊತ್ತೇ ಆಗುವುದಿಲ್ಲ ಎಂದು ಹೇಳುತ್ತಾರೆ. ಬದುಕಿನಲ್ಲಾದ ಬದಲಾವಣೆಯಿಂದ ಸ್ಪೂರ್ತಿಗೊಂಡ ವೇದಾವತಿಯವರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಅವಧಿಯಲ್ಲಿ ಭೋಗ್ಯಕ್ಕೆ ಹಾಕಿದ ಜಮೀನನ್ನು ಹಿಂಪಡೆದು ಪುನಃ ತಮ್ಮ ಕುಟುಂಬವನ್ನು ಕೃಷಿ ಕುಟುಂಬವನ್ನಾಗಿಸಲು ತೀರ್ಮಾನಿಸುತ್ತಾರೆ. ಅದರಂತೆ ಆ ವಿಷಯವನ್ನು ಪ್ರಥಮವಾಗಿ ತಂಡದ ಸದಸ್ಯರಲ್ಲಿ ಹೇಳಿಕೊಳ್ಳುತ್ತಾರೆ. ನಂತರ ಅವರ ಈ ಕನಸಿಗೆ ಸ್ಪಂದಿಸಿದ ತಂಡದ ಇತರೆ ಸದಸ್ಯರು ವಲಯದ ಮೇಲ್ವಿಚಾರಕರಾದ ಶ್ರೀ ಆನಂದರವರಲ್ಲಿ ತಮ್ಮ ಜಮೀನನ್ನು ಭೋಗ್ಯಕ್ಕೆ ಹಾಕಿರುವುದಾಗಿಯೂ ಮತ್ತು ಪುನಃ ಕೃಷಿ ಮಾಡುವ ಕುರಿತು
ತೀರ್ಮಾನಿಸಿರುವುದಾಗಿಯೂ ಹಾಗೂ ಭೋಗ್ಯಕ್ಕೆ ಹಾಕಿರುವ ಜಮೀನನ್ನು ಹಿಂಪಡೆಯಲು ಹಣಕಾಸಿನ ಅಡಚಣೆ ಇರುವದಾಗಿಯೂ ತಿಳಿಸಿದರು. ಇವರ ಸಮಸ್ಯೆಯನ್ನು ಸಂಪೂರ್ಣವಾಗಿ ತಿಳಿದುಕೊಂಡ ಮೇಲ್ವಿಚಾರಕರು ಯೋಜನೆಯ ನಿಯಮಗಳಿಗೆ ಅನುಗುಣವಾಗಿ ರೂ.40,000.00 ಗಳನ್ನು ಮಂಜೂರು ಮಾಡಿಸಿಕೊಟ್ಟರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ನಮ್ಮ ಜಮೀನು ನಮ್ಮ ಕೈ ಸೇರಿತು ಅಂತಾರೆ ವೇದಾವತಿಯವರು.

ಕುಟುಂಬಕ್ಕೆ ಆಸರೆಯಾಗಿದ್ದ ಜಮೀನನ್ನು ಬೇರೊಬ್ಬರಿಗೆ ಭೋಗ್ಯಕ್ಕೆ ಹಾಕಿ ಕೃಷಿಕರಾದ ವೇದಾವತಿ ಇನ್ನೊಬ್ಬರಲ್ಲಿ ದಿನಗೂಲಿ ಆಳಾಗಿ ದುಡಿಯುತ್ತಿದ್ದರು. ಬದುಕಿನ ಬಂಡಿಯ ಭರವಸೆಯೇ ಕಮರಿ ಹೋಗಿತ್ತು. ಮಕ್ಕಳ ಗ್ಲಾಸ್ ಫಿಟ್ಟಿಂಗ್ ಕೆಲಸದಿಂದ ಬರುತ್ತಿದ್ದ ಆದಾಯ ಕುಟುಂಬ ನಿರ್ವಹಿಸಲು ಸಾಕಾಗುತ್ತಿತ್ತೇ ಹೊರತು ಹೊಸ ಕನಸಿಗೆ ಆಧಾರವೇ ಇರಲಿಲ್ಲ. ಅಂತಹ ಅವಧಿಯಲ್ಲಿ ಕಮರಿ ಹೋಗಿದ್ದ ಬದುಕಿನ ಬಂಡಿಗೆ ಆಸರೆಯಾಗಿ ಗ್ರಾಮಾಭಿವೃದ್ಧಿ ಯೋಜನೆಯು ಭೋಗ್ಯಕ್ಕೆ ನೀಡಿದ್ದ ಜಮೀನನ್ನು ಪುನಃ ಹಿಂದಕ್ಕೆ ಪಡೆದುಕೊಳ್ಳುವಲ್ಲಿ ಸಹಕಾರವನ್ನು ನೀಡಿರುತ್ತದೆ. ಆ ಜಮೀನಿನಲ್ಲಿ ಸಮಗ್ರ ಕೃಷಿ ಅಳವಡಿಸಿ ಲಾಭಗಳಿಸಿ ಕುಟುಂಬವನ್ನು ಮುನ್ನಡೆಸಿದರೆ ವೇದಾವತಿಯವರು ಪಟ್ಟ ಶ್ರಮಕ್ಕೊಂದು ಅರ್ಥ ಬಂದಂತಾಗುತ್ತದೆ.

ಮುಂದಿನ ಗುರಿ:
– ಸದ್ರಿಯವರು ಹಿಂಪಡೆದ ತಮ್ಮ ಜಮೀನಿನಲ್ಲಿ ಕೃಷಿ ಕಾರ್ಯಗಳನ್ನು ಪ್ರಾರಂಭಿಸುವುದು.
– ತಮ್ಮ ಮಕ್ಕಳ ಮದುವೆ ಮಾಡುವುದು
– ಮನೆ ಕಟ್ಟಿಸುವುದು.
– ಮಗಳಿಗೆ ಟೈಲರಿಂಗ್ ಕಲಿಸುವುದು.
– ಇನ್ನೊಬ್ಬ ಮಗನಿಗೆ ಶಿಕ್ಷಣ ಕೊಡಿಸುವುದು.

Leave a Reply

Your email address will not be published. Required fields are marked *