success storyWomen Empowerment

ಬದುಕು ಬೆಳಗಿದ ಕರ್ಪೂರ

ಅದು ಹುಬ್ಬಳ್ಳಿ ತಾಲೂಕಿನ ಗೋಪನಕೊಪ್ಪದ ಶಿವ ಕಾಲೊನಿ. ಆ ವಠಾರದಲ್ಲಿ ಕಾಲಿಡುತ್ತಿದ್ದಂತೆ ಕರ್ಪೂರದ ಸುವಾಸನೆ ಒಂದೇ ಸಮನೆ ಮೂಗಿಗೆ ಅಡರುತ್ತಿತ್ತು. ಏನಿರಬಹುದಪ್ಪಾ ಇದು ಎಂಬ ಕುತೂಹಲ ನನ್ನಲ್ಲಿ ಹೆಚ್ಚಾಯಿತು. ಅಷ್ಟು ಹೊತ್ತಿಗೆ ಅಲ್ಲಿಯೇ ಸೈಕಲ್‍ನಲ್ಲಿ ಬರುತ್ತಿದ್ದ ಇಬ್ಬರು ಬಾಲಕರು ಎದುರಾದರು. ಅವರನ್ನು ನಿಲ್ಲಿಸಿ, “ಏನಿದು ಇಷ್ಟೊಂದು ಕರ್ಪೂರದ ಪರಿಮಳ ಬರುತ್ತಿದೆ? ಯಾವುದಾದ್ರೂ ಪೂಜೆ ನಡೆಯುತ್ತಿದೆಯಾ?’’ ಎಂದು ಕೇಳಿದೆ. “ಸಾರ್, ಅದೋ ಅಲ್ನೋಡಿ; ಆ ಕಟ್ಟಡದ ಮೂರನೆ ಮಹಡಿ ಕಾಣಿಸುತ್ತಿದೆಯಲ್ಲ. ಅಲ್ಲಿರೋ ವಿಮಲಕ್ಕನ ಮನೆಯಲ್ಲಿ ಕರ್ಪೂರ ತಯಾರಿಸ್ತಾರೆ. ಅಲ್ಲಿಂದ ಬರ್ತಿರೋ ಪರಿಮಳ ಇದು’’ ಎಂದು ಹೇಳುತ್ತಲೇ ಹೊರಟು ಹೋದರು.

ಮೂರನೆಯ ಮಹಡಿಯಲ್ಲಿರುವ ವಿಮಲ ಅವರ ಮನೆಗೆ ತೆರಳಿದೆ. ಕೋಣೆಗಳಲ್ಲಿದ್ದ ದೊಡ್ಡ ಪಾತ್ರೆಗಳಲ್ಲಿ ಕರ್ಪೂರಗಳನ್ನು ಪೂರ್ತಿಯಾಗಿ ಪೇರಿಸಿ ಇಡಲಾಗಿತ್ತು. ಆಗಷ್ಟೇ ಮಾಡಿಟ್ಟಿರುವುದರಿಂದ ಅವು ಮುತ್ತಿನ ಮಣಿಗಳಂತೆ ಫಳಫಳ ಹೊಳೆಯುತ್ತಿದ್ದವು. ವಿಮಲ ಮಹಾಜನ ಶೆಟ್ಟರ್ ಕರ್ಪೂರ ತಯಾರಿಸುವ ಕೊಠಡಿಗೆ ಕರೆದುಕೊಂಡು ಹೋಗಿ ಮಾತಿಗಿಳಿದರು.

ಇಬ್ಬರು ಮಕ್ಕಳು, ಜೊತೆಗೆ ತಾಯಿ ಇರುವ ಪುಟ್ಟ ಸಂಸಾರವದು. ಮನೆಯ ಎಲ್ಲ ಜವಾಬ್ದಾರಿ ಇವರ ಹೆಗಲಮೇಲಿದೆ. ಹೀಗಾಗಿ ಕಳೆದ ಮೂರು ವರ್ಷಗಳ ಹಿಂದಿನವರೆಗೂ ಗಂಧ, ಕುಂಕುಮವನ್ನು ಪ್ಯಾಕ್ ಮಾಡಿ ಅಂಗಡಿಗಳಿಗೆ ಕೊಡುವ ಕೆಲಸವನ್ನು ಮಾಡುತ್ತಿದ್ದರು. ಆದರೆ ಇದರ ಆದಾಯ ಸಂಸಾರದ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಹತ್ತಿರದ ಶಾಪ್‍ವೊಂದರಲ್ಲಿ ಕಂಪ್ಯೂಟರ್ ಕಲಿಸಲು ತೆರಳಿದರು. ಆದರೆ ಮನೆಯನ್ನು ನೋಡಿಕೊಳ್ಳುವುದು ಕಷ್ಟವೆಂದು ಆ ಕೆಲಸವನ್ನು ಬಿಟ್ಟರು. ಆದರೆ ಮನೆಯಲ್ಲಿಯೇ ಇದ್ದುಕೊಂಡು ಏನಾದರೂ ಸ್ವಉದ್ಯೋಗ ಮಾಡುವ ಬಗ್ಗೆ ಯೋಚಿಸುತ್ತಿದ್ದರು. ಕರ್ಪೂರ ತಯಾರಿಯ ಬಗ್ಗೆ ಎಂದೋ ಕೇಳಿ ತಿಳಿದುಕೊಂಡಿದ್ದ ಇವರಿಗೆ ಇದೇ ಕೆಲಸವನ್ನು ಮಾಡಿದರೆ ಹೇಗೆ ಎಂಬ ಯೋಚನೆ ಬಂತು. ತಯಾರಿಗೆ ಬೇಕಾದ ಕಚ್ಚಾವಸ್ತು ಎಲ್ಲಿ ಸಿಗುತ್ತದೆ? ಏನೇನು ಪರಿಕರಗಳ ಬೇಕು? ಮಾರಾಟ ಮಾಡುವುದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಿದ್ದವು. ಹುಬ್ಬಳ್ಳಿಯಲ್ಲಿರುವ ತಯಾರಕರಲ್ಲಿ ವಿಚಾರಿಸಿ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು. ಸ್ವಂತವಾಗಿ ಕರ್ಪೂರವನ್ನು ತಯಾರಿಸಬೇಕಾದರೆ ಯಂತ್ರ ಅಳವಡಿಸಬೇಕು. ಆಗ ಮಾರುಕಟ್ಟೆಯಲ್ಲಿ ಈ ಯಂತ್ರಕ್ಕೆ ಸುಮಾರು ಒಂದೂವರೆ ಲಕ್ಷ ರೂಪಾಯಿ ದರವಿತ್ತು. ಈಗ ಸಾಲ ಮಾಡಿಕೊಂಡು ಕುಳಿತರೆ ಜೀವನ ನಿರ್ವಹಣೆ ಕಷ್ಟವಾದೀತು ಎಂದು ಯೋಚಿಸಿ ಕರ್ಪೂರ ತಯಾರಿಯ ಪ್ರಯತ್ನವನ್ನು ಕೈಬಿಟ್ಟು ಹುಬ್ಬಳ್ಳಿಯ ಗಂಟಿಕೇರಿ ಓಣಿಯಲ್ಲಿರುವ ಕರ್ಪೂರದ ಫ್ಯಾಕ್ಟರಿಗೆ ತೆರಳಿ ಕೆ.ಜಿ.ಗಟ್ಟಲೆ ಕರ್ಪೂರಗಳನ್ನು ಮನೆಗೆ ತಂದು ಪ್ಯಾಕ್ ಮಾಡಿ ತಾವೇ ಮಾರಾಟ ಮಾಡಲಾರಂಭಿಸಿದರು. ಕೈತುಂಬಾ ಆದಾಯ ದೊರೆಯಿತು. ಆದರೆ ಬಸ್ಸಿನಲ್ಲಿ ಅಥವಾ ವಾಹನಗಳನ್ನು ಬಾಡಿಗೆಗೆ ಗೊತ್ತು ಮಾಡಿ ಕರ್ಪೂರಗಳನ್ನು ತರಿಸಿಕೊಳ್ಳುವುದು, ಮಾಡಿದ ಪ್ಯಾಕೆಟ್‍ಗಳನ್ನು ಮಾರಾಟ ಮಾಡಲು ಸಾಗಿಸುವುದು ದಿನಗಳೆದಂತೆ ಕಷ್ಟವಾಗತೊಡಗಿತು.

ಊರಿನಲ್ಲಿರುವ ಕೆಲ ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳಿಗೆ ಸೇರಿ ಅಲ್ಲಿಂದ ಮಾಹಿತಿ ಪಡೆದು, ಯೋಜನೆಯ ಆರ್ಥಿಕ ಸಹಕಾರದೊಂದಿಗೆ ಬದುಕಿನಲ್ಲಿ ಪ್ರಗತಿ ಹೊಂದಿದ್ದರು. ಅವರಂತೆ ತಾನೂ ಆಗಬೇಕೆಂಬ ತುಡಿತದಿಂದ ವಿಮಲಾ ಗ್ರಾಮಾಭಿವೃದ್ಧಿ ಯೋಜನೆಯ ‘ಶಿವ ಸ್ವಸಹಾಯ ಸಂಘ’ವನ್ನು ಸೇರಿದರು. ಸ್ವಉದ್ಯೋಗ ವಿಸ್ತರಿಸಿಕೊಳ್ಳಲು, ಕರ್ಪೂರ ತಯಾರಿಯ ಯಂತ್ರವನ್ನು ಖರೀದಿಸಲು ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕ್‍ನಿಂದ ಸಾಲವನ್ನು ಒದಗಿಸಿಕೊಟ್ಟಿತು.

ಹಬ್ಬದ ವೇಳೆ ಬೇಡಿಕೆ

ಕರ್ಪೂರಗಳಿಗೆ ವರ್ಷವಿಡೀ ಬೇಡಿಕೆ ಇದೆ. ಆದರೆ ಗಣೇಶೋತ್ಸವ, ಶ್ರಾವಣ ಮಾಸದ ಹಬ್ಬಗಳು, ನವರಾತ್ರಿ, ದೀಪಾವಳಿಯ ಸಂದರ್ಭದಲ್ಲಿ ಇನ್ನೂ ಹೆಚ್ಚು. “ಈ ಸಂದರ್ಭಗಳಲ್ಲಿ ಮಾತ್ರ ತಡರಾತ್ರಿಯವರೆಗೂ ಕೆಲಸ ಮಾಡುತ್ತೇವೆ. ಆದಾಯವೂ ಹೆಚ್ಚಾಗಿರುತ್ತದೆ ಎನ್ನುತ್ತಾರೆ’’ ವಿಮಲಾ.

ಮಾರುಕಟ್ಟೆ

ಕರ್ಪೂರವನ್ನು ಧಾರವಾಡ, ನವನಗರ, ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ಹೋಲ್‍ಸೇಲ್ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹತ್ತು ಗ್ರಾಂನ ಒಂದು ಪ್ಯಾಕೆಟ್‍ಗೆ ಐದು ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಈ ಒಂದು ಪ್ಯಾಕೆಟ್ ತಯಾರಿಗೆ ಇವರಿಗೆ ಸುಮಾರು ಎರಡು ರೂಪಾಯಿ ಖರ್ಚಾಗುತ್ತದೆ. ಅರ್ಧ ಕೆ.ಜಿ. ಕರ್ಪೂರವನ್ನು 210 ರೂ.ಗೆ ಮಾರಾಟ ಮಾಡುತ್ತಾರೆ. ಕರ್ಪೂರ ತಯಾರಿಯ ಜೊತೆಗೆ ಗಂಧ ಹಾಗೂ ಕುಂಕುಮ ಪ್ಯಾಕೆಟ್‍ಗಳನ್ನು ಮಾಡುವ ಕೆಲಸವನ್ನೂ ಇವರು ಮಾಡುತ್ತಿದ್ದಾರೆ. ಇದೀಗ ವಿಮಲಾರಿಗೆ ತಿಂಗಳಿಗೆ ಕನಿಷ್ಟ ಹದಿನೈದು ಸಾವಿರ ರೂಪಾಯಿ ಆದಾಯ ಬರುತ್ತಿದೆ. ಇದರಿಂದ ತನ್ನ ಕುಟುಂಬದ ನಿರ್ವಹಣೆಯೂ ಸುಲಭವಾಗಿದೆ.

“ನನ್ನ ಉದ್ಯಮದಲ್ಲಿ ನಾನೇ ಉದ್ಯೋಗಿ – ನಾನೇ ಮಾಲಕಿ ಎನ್ನಲು ಹೆಮ್ಮೆಯಾಗುತ್ತಿದೆ. ಸ್ವಉದ್ಯೋಗದೊಂದಿಗೆ ಸ್ವಾವಲಂಬಿಗಳಾಗುವ ಕನಸನ್ನು ನನಸಾಗಿಸಿಕೊಳ್ಳಲು ಗ್ರಾಮಾಭಿವೃದ್ಧಿ ಯೋಜನೆಯು ಉತ್ತಮ ತಳಪಾಯ ಹಾಕಿಕೊಡುತ್ತದೆ. ಇತರ ಮಹಿಳೆಯರು ಯೋಜನೆಯ ಸಹಕಾರದಿಂದ ಹೊಲಿಗೆ, ಅಗರಬತ್ತಿ, ಮೇಣದ ಬತ್ತಿ, ಬಟ್ಟೆಯ ಹಾರಗಳ ತಯಾರಿ ಮುಂತಾದ ಗೃಹೋದ್ಯಮಗಳನ್ನು ಮಾಡಬಹುದಾಗಿದೆ’’ ಎನ್ನುವ ವಿಮಲರ ಅನುಭವದ ಮಾತು ಎಲ್ಲರಿಗೂ ಪ್ರೇರಣದಾಯಿ.

ಯಂತ್ರದಿಂದ ಸ್ವತಂತ್ರರಾದರು

ವಿದ್ಯುತ್ ಚಾಲಿತ ಹೊಸ ಯಂತ್ರವನ್ನು ಖರೀದಿಸಿದ ನಂತರ ವಿಮಲರ ಬದುಕು ಹೊಸ ವೇಗವನ್ನು ಪಡೆಯಿತು. ವಿಮಲಾ ಯಂತ್ರದಲ್ಲಿ ಕರ್ಪೂರ ತಯಾರಿಸಲಾರಂಭಿಸಿದರು. ಕರ್ಪೂರವನ್ನು ತಯಾರಿಸಿದ ಕೂಡಲೇ ಪ್ಯಾಕ್ ಮಾಡಬೇಕು. ಇಲ್ಲವಾದರೆ ಕರಗುತ್ತದೆ. ಹೀಗಾಗಿ ತಮ್ಮ ಸಂಘದ ಸದಸ್ಯರುಗಳಾಗಿರುವ ದೀಪಾ ಮತ್ತು ಸೋನಿ ಅವರನ್ನು ಈ ಕೆಲಸಕ್ಕೆ ನೇಮಿಸಿಕೊಂಡರು. ಹತ್ತು ಗ್ರಾಂನ ಸಣ್ಣ ಪ್ಯಾಕೆಟ್‍ಗಳನ್ನು ತಯಾರಿಸಲಾರಂಭಿಸಿದರು. ಈ ಪ್ಯಾಕೆಟ್‍ಗಳಿರುವ ಒಂದು ಕೆ.ಜಿ. ತೂಗುವ ಪ್ಯಾಕ್ ತಯಾರಿಗೆ ಇಬ್ಬರಿಗೂ ತಲಾ ಹತ್ತು ರೂ. ನೀಡಿದರು. ಹಿಂದೆ ಇಡೀ ದಿನ ದುಡಿಯಬೇಕಿತ್ತು. ಆದರೆ ಇದೀಗ ಯಂತ್ರ ಬಂದ ಮೇಲೆ ದಿನಕ್ಕೆ ಐದು ಗಂಟೆ ಕಾಲ ಮಾತ್ರ ಕರ್ಪೂರದ ಕೆಲಸದಲ್ಲಿ ತೊಡಗುತ್ತಾರೆ.

ಸಹಾಯಕಿಯರಿಗೆ ಭಡ್ತಿ !

ಇವರು ತಯಾರಿಸುತ್ತಿರುವ ಕರ್ಪೂರಕ್ಕೆ ಬೇಡಿಕೆ ಹೆಚ್ಚಾದಾಗ ಮನೆಗೆಲಸಗಳೊಂದಿಗೆ ಕಚ್ಚಾವಸ್ತುಗಳು, ಮಾರಾಟದ ಪ್ಯಾಕ್‍ಗಳ ಸಾಗಾಟ ಮುಂತಾದ ಕೆಲಸಗಳು ಕಷ್ಟವೆನಿಸಿದಾಗ ತನಗೆ ಸಹಾಯಕಿಯರಾಗಿ ಕೈಜೋಡಿಸಿದ ದೀಪಾ ಮತ್ತು ಸೋನಿಯವರನ್ನು ಪಾಲು ಬಂಡವಾಳದಾರರನ್ನಾಗಿಸಿದರು. ಪರಿಣಾಮವಾಗಿ ಈಗ ಮೂವರು ಕರ್ಪೂರದ ಉದ್ಯಮಕ್ಕೆ ಒಡತಿಯರಾಗಿದ್ದಾರೆ. ಪ್ರತಿದಿನಕ್ಕೆ ಸುಮಾರು ಹದಿನೈದರಿಂದ ಇಪ್ಪತ್ತು ಕೆ.ಜಿ. ಕರ್ಪೂರಗಳನ್ನು ತಯಾರಿಸುತ್ತಾರೆ. ಬಂದ ಲಾಭವನ್ನು ಮೂರು ಮಂದಿಯೂ ಸಮನಾಗಿ ಹಂಚಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *