Agriculturesuccess story

ಕಲ್ಲಪ್ಪರ ಹೊಲದಲ್ಲಿ ಸಿರಿಧಾನ್ಯಗಳ ಅಬ್ಬರ

ಕಲ್ಲಪ್ಪರ ಹೊಲದಲ್ಲಿ ಪ್ರತೀ ವರ್ಷ ಸಿರಿಧಾನ್ಯಗಳು ಅಬ್ಬರಿಸುತ್ತವೆ. ಸಿರಿಧಾನ್ಯ ಕೃಷಿಯಲ್ಲಿ ಇವರಿಗೆ ದಶಕಗಳ ಅನುಭವ. ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದವರು. ಒಂದು ಎಕರೆ ಭೂಮಿಯನ್ನು ಸಿರಿಧಾನ್ಯಗಳಿಗಾಗಿ ಮೀಸಲಿಡುತ್ತಾರೆ. ಒಂದು ಎಕರೆಯಲ್ಲಿ ಸಿರಿಧಾನ್ಯಗಳು ಶಿಸ್ತುಬದ್ದವಾಗಿ ಗುಂಟೆ ಲೆಕ್ಕದಲ್ಲಿ ಸ್ಥಾನ ಪಡೆಯುತ್ತವೆ. ಐದು ಗುಂಟೆ ರಾಗಿ, ಹತ್ತು ಗುಂಟೆ ಬರಗು, ಹತ್ತು ಗುಂಟೆ ನವಣೆ, ಹತ್ತು ಗುಂಟೆ ಕೊರಲೆ, ಹತ್ತು ಗುಂಟೆ ಹಾರಕ, ಐದು ಗುಂಟೆ ಊದಲು, ಹದಿನೈದು ಗುಂಟೆ ಸಾಮೆ ಹೀಗೆ ವೈವಿಧ್ಯಮಯ ಸಿರಿಧಾನ್ಯಗಳನ್ನು ಬಿತ್ತುತ್ತಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿಬಂಧು ಸಂಘದ ಸದಸ್ಯರಾದ ಇವರು ಸಿರಿಧಾನ್ಯ ರೈತ ಒಕ್ಕೂಟದ ಸದಸ್ಯರೂ ಆಗಿರುತ್ತಾರೆ. ಈ ವರ್ಷದ ಜೂನ್ ಎರಡನೆಯ ವಾರ ಇವರು ಬಿತ್ತಿದ್ದ ಸಿರಿಧಾನ್ಯಗಳು ಭರ್ಜರಿ ಫಸಲು ಹೊತ್ತು ಅಬ್ಬರಿಸಿದ್ದವು. ಒಂದೆರಡು ಬಾರಿ ಸುರಿದ ಸಣ್ಣ ಮಳೆಯಲ್ಲಿಯೇ ಹುಲುಸಾಗಿ ಎದ್ದುನಿಂತು ಕಣ್ಣಿಗೆ ಮುಧ ನೀಡಿದ್ದವು. ಸಿರಿಧಾನ್ಯ ಬೀಜಗಳನ್ನು ಬಿತ್ತನೆ ಮಾಡುವ ಪೂರ್ವ ಎಕರೆಗೆ ಹತ್ತು ಟನ್ ಕಾಂಪೋಸ್ಟ ಗೊಬ್ಬರವನ್ನು ಭೂಮಿಗೆ ಸೇರಿಸಿದ್ದಾರೆ. ಎರಡು ಬಾರಿ ಉಳುಮೆ ಮಾಡಿ ಸಾಲಿನಿಂದ ಸಾಲಿಗೆ ಹದಿನೈದು ಇಂಚು, ಗಿಡದಿಂದ ಗಿಡ ನಾಲ್ಕು ಇಂಚು ಅಂತರದಲ್ಲಿ ಮೂರು ತಾಳಿನ ಕೂರಿಗೆಯಿಂದ ಬೀಜ ಬಿತ್ತಿದ್ದರು. ಬಿತ್ತನೆಯಾದ ನಂತರ ಬೀಜಗಳ ಮೇಲೆ ಹುಡಿಯಾದ ಎರೆಗೊಬ್ಬರ ತೆಳುವಾಗಿ ಉದುರಿಸಿದ್ದರು. ಬಿತ್ತಿದ ಇಪ್ಪತ್ತು ದಿನ ಹಾಗೂ ಒಂದುವರೆ ತಿಂಗಳ ನಂತರ ಗಿಡಗಳ ಸಾಲುಗಳ ಮದ್ಯೆ ಎಡೆಕುಂಟೆ ಹೊಡೆದಿದ್ದರು. ಕಳೆ ತೆಗೆದು ಮಣ್ಣು ಸಡಿಲಗೊಳಿಸಿ ಗಿಡಗಳ ಬುಡಕ್ಕೆ ಮಣ್ಣು ಏರಿಸಿಕೊಟ್ಟ ಎಡೆಕುಂಟೆ ಬಲದಿಂದ ಗಿಡಗಳು ಹುಲುಸಾಗಿ ಮೇಲೆದ್ದಿದ್ದವು.

ಬರಗು ಒಂದು ಕ್ವಿಂಟಾಲ್, ರಾಗಿ ಎರಡು ಕ್ವಿಂಟಾಲ್, ನವಣೆ ಎರಡು ಕ್ವಿಂಟಾಲ್, ಕೊರಲೆ ಎರಡುವರೆ ಕ್ವಿಂಟಾಲ್, ಹಾರಕ ಎರಡುವರೆ ಕ್ವಿಂಟಾಲ್, ಊದಲು ಎರಡು ಕ್ವಿಂಟಾಲ್, ಸಾಮೆ ಎರಡು ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ದೊರೆತ ಫಸಲನ್ನು ಬೀಜವಾಗಿ ಮಾರಾಟ ಮಾಡುತ್ತಾರೆ. ಅಕ್ಕಿ ತಯಾರಿಸಿಯೂ ವಿಕೃಯಿಸುತ್ತಾರೆ.

ಕೇವಲ ಒಂದು ಎಕರೆಯಲ್ಲಿ ಸಿರಿಧಾನ್ಯ ಬೆಳೆದರೂ ಉತ್ತಮ ಆದಾಯವೇ ಕೈ ಸೇರುತ್ತಿದೆ. ಊಟಕ್ಕೆ ತಾವು ಸಿರಿಧಾನ್ಯಗಳನ್ನೇ ಬಳಸುತ್ತಿದ್ದುದರಿಂದ ಉತ್ತಮ ಆರೋಗ್ಯವಂತರಾಗಿದ್ದಾರೆ. ತಾವು ಬೆಳೆಯುವುದಲ್ಲದೆ ಇತರ ರೈತರಿಗೂ ಸಿರಿಧಾನ್ಯಗಳ ಮಹತ್ವ ಸಾರುವುದು ಇವರ ವಿಶೇಷತೆ.

Leave a Reply

Your email address will not be published. Required fields are marked *