Communnity DevelopmentNews

‘ನಮ್ಮೂರು- ನಮ್ಮ ಕೆರೆ’ – ಮರಳುಗಾಡಿನ ಓಯಸಿಸ್

This article appeared in vishvawani.

ಕೆರೆ-ಕಟ್ಟೆಗಳು ನಾಡಿನ ಜೀವನಾಡಿ. ರೈತಾಪಿ ಜನರ ಉಸಿರು. ಸಾಮೂಹಿಕ ಕ್ರಿಯಾಶೀಲತೆಯ ಸಂಕೇತ. ಎಲ್ಲೋ ಗುಡ್ಡದ ಮೇಲೆ ನೀರಿನ ಒರತೆ ಕಂಡು ಅದಕ್ಕೊಂದು ಪುಷ್ಕರಣಿಯ ಮೂರ್ತರೂಪ ಕೊಟ್ಟ ಹಿರಿಯರ ಯೋಚನಾ ಪರಿ ನಮ್ಮರಿವನ್ನು ಮೀರಿದ್ದು. ಅಂತಹುದನ್ನು ಕಟ್ಟುವುದಿರಲಿ, ಕಟ್ಟಿದ್ದನ್ನು ಉಳಿಸಿಕೊಳ್ಳಲಾಗದಷ್ಟು ಅಸಹಾಯಕತೆ ನಮ್ಮದು. ಆದರೆ, ಸಂಘಟನೆಗೆ ಎಲ್ಲ ಅಸಹಾಯಕತೆಯನ್ನೂ ಮೀರುವ ಶಕ್ತಿಯಿದೆ. ಇದು ‘ನಮ್ಮೂರು- ನಮ್ಮ ಕೆರೆ’ ಯೋಜನೆ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಂಡ ಈ ಅಭಿವೃದ್ಧಿ ಕಾರ್ಯದಿಂದ ರಾಜ್ಯದ ಅನೇಕ ಕೆರೆಗಳು ಪುನಃಶ್ಚೇತನಗೊಂಡಿವೆ. ಬತ್ತಿದ ಅಂತರ್ಜಲ ಉಕ್ಕಿದೆ. ಭೂಮಿ ಮತ್ತೆ ಹಸನಾಗಿದೆ. ಜನರ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿದೆ.

| ಗೊದ್ಲಬೀಳು ಪರಮೇಶ್ವರ

ಕಾಡೆಂದರೆ ನೀರು, ನೀರೆಂದರೆ ಅನ್ನ, ಅನ್ನವೆಂದರೆ ಪ್ರಾಣ -ಇದೇ ಜೀವನಚಕ್ರ. ಎಲ್ಲ ಕಾಲಕ್ಕೂ ನೀರು ಅಮೃತವೆ. ನೀರಿನ ಸೆಲೆಗಳನ್ನು ಮೂಲವಾಗಿಸಿಕೊಂಡೇ ನಮ್ಮ ನಾಗರಿಕತೆ ಬೆಳೆದದ್ದು. ಹೀಗಾಗಿ ಅಂದು ಇಂದು ಮುಂದೂ ನಮಗೆ ಪ್ರಸ್ತುತವೆನಿಸುವುದು ನೀರಾವರಿ ಮತ್ತು ಕೆರೆಗಳ ನಿರ್ವಣ. ಇಂತಹ ಕೆರೆಗಳಿಗೆ ಧಾರ್ವಿುಕ ಆಯಾಮವನ್ನಿತ್ತು ಸಹಸ್ರಾರು ವರ್ಷ ಬಾಳುವಂತೆ ಮಾಡುವ ದೂರಾಲೋಚನೆ ಇಲ್ಲ. ಇಂದೇನಿದ್ದರೂ ಕೆರೆ ಅಂಗಳವನ್ನೇ ಒತ್ತುವರಿ ಮಾಡಿ ಮನೆ ಕಟ್ಟುವ ಜಮಾನ.

ನೀರಿಲ್ಲ ಎಂಬ ಆತಂಕ ನಮ್ಮನ್ನು ಸದಾ ಕಾಡುತ್ತಿದ್ದರೂ ಅಭಾವ ಇದ್ದಾಗ ಎಲ್ಲಿಂದಾದರೂ ನೀರು ಸಿಕ್ಕರೆ ಸಾಕು. ಅದರಾಚೆಯ ಯೋಚನೆ-ಯೋಜನೆ ನಮಗಿಲ್ಲ. ಆದರೂ ಇಂದಿನದು ಇಂದಿಗೆ, ನಾಳೆ ನೋಡೋಣ ಎಂಬ ಅಹಂ.

ನೀರಿನ ಸೆಲೆಯಲ್ಲೇ ಬದುಕು ಶುರುಮಾಡಿದ ನಮಗೆ ಕಾಡು ಬೆಳೆಸಿ ಉಳಿಸುವ ಆಲೋಚನೆ ಹೇಳಿಕೊಟ್ಟಿದ್ದೇ ನಮ್ಮ ಹಿರಿಯರು. ಆದರೆ ಅವರ ಆಚಾರ-ವಿಚಾರಗಳಲ್ಲಿ ಕೊಂಕು ತೆಗೆದು ಅವರು ಬೆಳೆಸಿದ ಆಸ್ತಿಯನ್ನೆಲ್ಲ ಹಾಳುಗೆಡವಿ ದುರ್ಗತಿಗೆ ಕಾರಣರಾಗಿದ್ದೇವೆ. ನಾವಿದ್ದಲ್ಲೇ ನೀರು ಬರಬೇಕೆಂದು ಬಯಸಿ, ಕೆರೆ-ಕುಂಟೆ, ಹಳ್ಳ-ಕೊಳ್ಳ, ಕಲ್ಯಾಣಿ-ಪುಷ್ಕರಣಿಗಳನ್ನು ಹಾಳುಮಾಡಿ, ನಾಗರಿಕತೆ, ಅಭಿವೃದ್ಧಿ ನೆಪದಲ್ಲಿ ಕೆರೆ, ಕಾಡನ್ನೆಲ್ಲ ಮರೆತು ಕಾಂಕ್ರೀಟ್ ಕಾಡು ಕಟ್ಟಿದ್ದೇವೆ. ಮಣ್ಣು, ನೀರಿನ ಜತೆಗಿನ ಅನುಬಂಧವನ್ನೇ ಇಲ್ಲವಾಗಿಸಿದ್ದೇವೆ. ಕಾಡೇ ನದಿಗಳ ತಾಯಿ, ನದಿ ನಾಡಿನ ಜೀವನಾಡಿ ಎಂಬುದನ್ನೇ ಮರೆತಿದ್ದೇವೆ.

ಮರಳುಗಾಡಿನ ಓಯಸಿಸ್: ಇಂತಹ ವಿಚಿತ್ರ ಸನ್ನಿವೇಶದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯಂತಹವರು ನಮಗೆ ‘ಮರಳುಗಾಡಿನ ಓಯಸಿಸ್’ನಂತೆ ಕಾಣುತ್ತಿದ್ದಾರೆ. ಅವರ ಕಲ್ಪನೆಯಲ್ಲಿ ಮೂಡಿಬಂದ ‘ನಮ್ಮೂರು- ನಮ್ಮ ಕೆರೆ’ ಯೋಜನೆ ಗ್ರಾಮೀಣ ಭಾಗದ ಚಿತ್ರಣವನ್ನೇ ಬದಲಿಸಿಬಿಟ್ಟಿದೆ. ಬತ್ತಿದ ಕೆರೆಗಳಲ್ಲಿ ನೀರು ಅಲೆ ಅಲೆಯಾಗಿ ನಗುತ್ತಿದ್ದರೆ, ಈ ನೀರ ಕಂಡ ನವಿಲುಗಳು ತಾವೇನೂ ಕಮ್ಮಿಯಿಲ್ಲ ಎನ್ನುತ್ತ ಕೆರೆದಂಡೆಯಲ್ಲೇ ನರ್ತಿಸುತ್ತಿವೆ.

ಅಂತರ್ಜಲ ಮಟ್ಟ ಶೇ.70 ಸುಧಾರಣೆಯಾಗಿದೆ. ಒಣಗಿದ್ದ ಕೊಳವೆಬಾವಿಗಳಲ್ಲಿ ಮತ್ತೆ ನೀರು ಚಿಮ್ಮುತ್ತಿದೆ. ಜಮೀನುಗಳಲ್ಲಿ ಬೆಳೆ ಹಸಿರಿನಿಂದ ನಳನಳಿಸುತ್ತಿದೆ. ಕೆರೆ ಸುತ್ತಲಿನ ಜಮೀನಿನ ಬೆಲೆ ದುಪ್ಪಟ್ಟಾಗಿದೆ. ಇದನ್ನೆಲ್ಲ ಕಂಡ ಊರ ಹಿರಿಯರು ಹಿರಿಹಿರಿ ಹಿಗ್ಗಿ ‘ಎಲ್ಲ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆ’ ಎನ್ನುತ್ತ ಕೈಮುಗಿಯುತ್ತಿದ್ದರೆ, ಉದ್ಯೋಗಕ್ಕೆಂದು ಫ್ಯಾಕ್ಟರಿಗಳತ್ತ ಮುಖಮಾಡಿದ್ದ ಯುವಕರು ಖುಷಿಯಿಂದ ಕೃಷಿಯತ್ತ ಚಿತ್ತ ನೆಟ್ಟಿದ್ದಾರೆ. ಜನಸಹಭಾಗಿತ್ವದ ‘ನಮ್ಮೂರು- ನಮ್ಮ ಕೆರೆ’ ಜಲಜಾಗೃತಿಗೆ ಅದ್ಭುತ ಮಾದರಿಯಾಗಿ ನಿಂತಿದೆ. ಹಳ್ಳಿಗಳ ದಿಕ್ಕುದೆಸೆಯೇ ಬದಲಾಗಿದೆ. ಜನರ ಕಣ್ಣಲ್ಲಿ ಹೊಸ ಆಶಾಕಿರಣವೊಂದು ಮೂಡಿದೆ.

ಬದಲಾವಣೆ ಗಾಳಿ…: ದನಕರು, ಕುರಿಗಳು ಮೇಯುವ ಪ್ರದೇಶವಾಗಿದ್ದ, ಇಟ್ಟಿಗೆಗೂಡು ಮಾಡುವ ತಾಣವಾಗಿದ್ದ ರಾಜ್ಯದ ಹಲವು ಕೆರೆಯಂಗಳದಲ್ಲೀಗ ಭರಪೂರ ನೀರಿದೆ. ದೋಣಿ ವಿಹಾರ ಕೇಂದ್ರ ಆರಂಭಗೊಂಡಿದೆ. ಮೀನುಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ. ಮೀನು ಸಾಕಣೆಯೂ ನಡೆದಿದೆ. ಕೆರೆಯ ಸುತ್ತ ಹಸಿರು ಕಂಗೊಳಿಸುತ್ತಿದೆ. ಬಟ್ಟೆ ತೊಳೆಯುವ ಹೆಂಗಸರ, ಜಾನುವಾರು ಮೇಯಿಸುವವರ ಓಡಾಟ ಜಾಸ್ತಿಯಾಗಿದೆ. ಕೆರೆಗೊಂದು ರಸ್ತೆ ನಿರ್ವಣವಾಗಿದೆ. ಕೆರೆ ಪಕ್ಕದಲ್ಲೇ ಮನೆಗಳೂ ನಿರ್ವಣವಾಗಿವೆ. ಕೆರೆಯ ಬಳಿ ಉದ್ಯಾನವನವೂ ನಿರ್ವಣವಾಗಿದೆ. ಕೆರೆ ಸುತ್ತ ಹೂ, ಹಣ್ಣಿನ ಗಿಡಗಳು ಬೆಳೆಯುತ್ತಿವೆ. ‘ನಮ್ಮೂರು- ನಮ್ಮ ಕೆರೆ’ ಎಂಬ ಯೋಜನಾ ಶೀರ್ಷಿಕೆಯಂತೆ ಕೆರೆ ನಮ್ಮದೆಂಬ ಭಾವ ಹಳ್ಳಿಗರಲ್ಲಿ ಮೂಡುತ್ತಿದೆ. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಹತ್ತಿರದ ಕೆರೆಪಾಳ್ಯದಂತಹ ಕೆಲ ಕೆರೆಗಳು ಸ್ಥಳೀಯರ ಹಾಗೂ ಪಂಚಾಯಿತಿ ನಿರ್ಲಕ್ಷ್ಯದಿಂದ ನೀರಿದ್ದರೂ ಅವಗಣನೆಗೊಳಗಾಗಿವೆ. ನಿರ್ವಹಣೆಯಿಲ್ಲದೆ ಸೊರಗಿವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ವತಿಯಿಂದ ಕೆರೆ ಅಭಿವೃದ್ಧಿಗೊಂಡಿದ್ದರೂ ಸ್ಥಳೀಯರು ಕೆರೆಯಲ್ಲೇ ಜಾನುವಾರುಗಳ ಮೈತೊಳೆದು ನೀರನ್ನು ಕಲುಷಿತಗೊಳಿಸಿದ್ದಾರೆ. ಆದರೆ, ಮೂರು ಕಿ.ಮೀ. ದೂರದಿಂದ ಮಗಳೊಟ್ಟಿಗೆ ಬಂದು ಬಟ್ಟೆ ತೊಳೆಯುವ ಭಾಗ್ಯಮ್ಮ ಅವರಿಗಿರುವಷ್ಟು ಕಾಳಜಿಯ ಅರ್ಧದಷ್ಟಾದರೂ ಬೇರೆಯವರಿಗಿದ್ದಿದ್ದರೆ ಅದರಲ್ಲೂ ಈ ಭಾಗದ ಮಹಿಳಾ ಪಿಡಿಒ (ಪಂಚಾಯಿತಿ ಅಭಿವೃದ್ಧಿ ಅಧಿಕಾರಿ)ಗಿದ್ದಿದ್ದರೆ ಕೆರೆ ಇಂದೂ ಹಸನಾಗಿಯೇ ಇರುತ್ತಿತ್ತು. ಕೆರೆಯಿಂದ ಅರ್ಧ ಫರ್ಲಾಂಗ್ ದೂರದವರೆಗೆ ನೀರನ್ನು ಹೊತ್ತು ತಂದು ಬಟ್ಟೆ ತೊಳೆಯುತ್ತಿದ್ದ ಬುಗಡೀಹಳ್ಳಿಯ ಭಾಗ್ಯಮ್ಮ ಅವರ ಕೆರೆಪ್ರೀತಿ ನಿಜಕ್ಕೂ ಶ್ಲಾಘನೀಯ.

ಜಾತಿ ಪದ್ಧತಿ ಹೋಯ್ತು: 18 ವರ್ಷದಿಂದ ಬುಗಡೀಹಳ್ಳಿ(ಕೆರೆಪಾಳ್ಯ) ಕೆರೇಲಿ ನೀರೇ ಇರ್ಲಿಲ್ಲ. ಅದಕ್ಕಿಂತ ಮುಂಚೆ ನೀರಿದ್ದರೂ ಜಾತಿ ಪದ್ಧತಿಯಿಂದಾಗಿ ಎಲ್ಲರೂ ಕೆರೆ ಬಳಿ ಸುಳಿಯೋ ಹಾಗಿರಲಿಲ್ಲ. ಆದರೀಗ ಕೆರೆ ಅಭಿವೃದ್ಧಿಯಾಗಿದೆ. ನೀರು ಬಂದಿದೆ. ಈ ನೀರನ್ನು ಈಗ ಎಲ್ರೂ ಮುಟ್ಬೋದು ಅಂತಾರೆ ಭಾಗ್ಯಮ್ಮ. ಕೆರೆಯಿಂದಾಗಿ ಜಾತಿ ಪದ್ಧತಿ ಹೋಯ್ತು ಅಂದ್ರು ಭಾಗ್ಯಮ್ಮ. ಕೆರೆ ನೀರನ್ನು ಜಾತಿ ಭೇದವಿಲ್ಲದೆ ಎಲ್ಲರೂ ಬಳಸುವಂತಾಗಲು ಮನೆಗಳಲ್ಲಿ ನಲ್ಲಿ ಇರೋದು ಕಾರಣ. ಅಲ್ಲದೆ, ಈ ಕೆರೆ ನೀರನ್ನೀಗ ಯಾರೂ ಕುಡಿಯಲು ಬಳಸುತ್ತಿಲ್ಲ. ಹೀಗಾಗಿ ನೀರಿನ ಬಳಕೆಗೆ ಜಾತಿ ನಿರ್ಬಂಧವಿಲ್ಲ.

ರಾಜ್ಯದಲ್ಲಿ ಕಳೆದ ವರ್ಷ ಅಭಿವೃದ್ಧಿಪಡಿಸಲಾದ 80 ಕೆರೆಗಳಲ್ಲಿ ಸಮೃದ್ಧ ನೀರಿದ್ದು, ಇದಕ್ಕೆ ಸಹಕರಿಸಿದ ಆಯಾ ಊರಿನ ಜನರನ್ನು ಅಭಿನಂದಿಸುತ್ತೇನೆ. ಕೆರೆಗಳಲ್ಲಿ ಸದಾ ನೀರಿರಲಿ, ರೈತರು ಉತ್ತಮ ಬೆಳೆ ಬೆಳೆಯುವಂತಾಗಲಿ.

| ಹೇಮಾವತಿ ವಿ. ಹೆಗ್ಗಡೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟಿ

‘ನಮ್ಮೂರು- ನಮ್ಮ ಕೆರೆ’ ಹೆಸರೇ ಸೂಚಿಸುವಂತೆ ಜನರ ಭಾಗವಹಿಸುವಿಕೆಯಿಂದ ಕೆರೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ಈವರೆಗೆ 80 ಕೆರೆಗಳ ಹೂಳೆತ್ತುವ ಕಾರ್ಯ ಮಾಡಲಾಗಿದ್ದು, ಈ ವರ್ಷ ಮತ್ತೆ 100 ಕೆರೆಗಳನ್ನು ಪುನಃಶ್ಚೇತನ ಗೊಳಿಸಲಾಗುವುದು. ಅಭಿವೃದ್ಧಿಪಡಿಸಲಾದ ಕೆರೆಗಳ ಶಾಶ್ವತ ರಕ್ಷಣೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರಯತ್ನಿಸಲಾಗುವುದು.

| ಡಾ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳ, ಗ್ರಾಮಾಭಿವೃದ್ಧಿ ಯೋಜನೆ ಅಧ್ಯಕ್ಷರು

ಗ್ರಾಮಗಳ ಕೆರೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಧರ್ಮಸ್ಥಳದಿಂದ ನೀಡಲಾಗುವ ಹಣವನ್ನು ಊರಿನ ಜನರು ಪ್ರಸಾದವೆಂದು ಸ್ವೀಕರಿಸಿ ತನು-ಮನ- ಧನಗಳಿಂದ ತಮ್ಮ ಕಾಣಿಕೆ ನೀಡಿ ಕೆರೆ ಅಭಿವೃದ್ಧಿ ಗೊಳಿಸುತ್ತಿರುವುದು ನಿಜವಾದ ಭಗವಂತನ ಸೇವೆಯಾಗಿದೆ.

| ಡಾ. ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಕೆರೆ ಅಭಿವೃದ್ಧಿಗೆಷ್ಟು ಖರ್ಚು?

ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ, ಕಲಬುರಗಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಟ್ಟು 80 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಖರ್ಚು ಮಾಡಿದ ಹಣ ಒಂದೆರಡು ಲಕ್ಷವಲ್ಲ. ಬರೋಬ್ಬರಿ 6.16 ಕೋಟಿ ರೂಪಾಯಿ. ಪ್ರತಿ ಕೆರೆಗೆ ಸರಾಸರಿ 20 ಲಕ್ಷ ರೂ. ಖರ್ಚು ಮಾಡಲಾಗಿದೆ. ಒಂದೆರಡು ಕೆರೆಗೆ 30 ಲಕ್ಷ ರೂ.ವರೆಗೂ ವೆಚ್ಚ ಮಾಡಲಾಗಿದೆ. 1052.33 ಎಕರೆ ಕೆರೆ ಪ್ರದೇಶದಲ್ಲಿದ್ದ ಹೂಳನ್ನು ಎತ್ತಿ ಸಾಗಿಸಿದ್ದು ಸಾಹಸದ ಕಾಯಕವೆ. ಕೆರೆ ಕಾಮಗಾರಿಯಿಂದ 1.13 ಲಕ್ಷ ಕುಟುಂಬಗಳು ನೆಮ್ಮದಿಯ ನಿಟ್ಟುಸಿರುಬಿಟ್ಟಿವೆ. ಕೆರೆಗಳಿಂದ ಹೊರತೆಗೆದ 4.62 ಲಕ್ಷ ಲೋಡ್ ಮಣ್ಣನ್ನು 49,598 ರೈತರು ತಮ್ಮ ಹೊಲಕ್ಕೆ ಹಾಕಿ ಖುಷಿಪಟ್ಟಿದ್ದಾರೆ.

ಕಾರ್ಯಕರ್ತರ ಶ್ರಮ

ಬತ್ತಿದ್ದ ಕೆರೆಗಳಲ್ಲಿ ನೀರು ಬರಿಸಿ ಹಳ್ಳಿಗರ ಕಣ್ಣಲ್ಲಿ ಆನಂದಭಾಷ್ಪ ಹರಿಸಿ ರಾಜ್ಯದ 21 ಜಿಲ್ಲೆಗಳ ನೂರಾರು ಹಳ್ಳಿಗಳ ವಾತಾವರಣವನ್ನೇ ಬದಲಿಸುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕರ್ತರ ಭಾರಿ ಶ್ರಮವಿದೆ. ಹಳ್ಳಿ ಜನರ ಮನವೊಲಿಸಿ ಲಕ್ಷಗಟ್ಟಲೆ ಹಣ ಸಂಗ್ರಹಿಸಿ ಯೋಜನಾ ನಿಧಿಯಿಂದಲೂ ಹಣ ಹೂಡಿ 80 ಕೆರೆಗಳಲ್ಲಿ ನೀರು ನಿಲ್ಲುವಂತೆ ಮಾಡಿದ್ದು ಸುಲಭದ ಕೆಲಸವಲ್ಲ. ನಿಷ್ಠಾವಂತ ಕಾರ್ಯಕರ್ತರಿಂದ ಇವೆಲ್ಲ ಸಾಧ್ಯವಾಯಿತು ಎನ್ನುತ್ತಾರೆ, ಯೋಜನೆಯ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ.

ಶಿವಪುರಕ್ಕೆ ಶುಕ್ರದೆಸೆ

ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ಶಿವಪುರದ ಅಮಾನಿಕೆರೆ. ಬ್ರಿಟಿಷ್ ಕಾಲದ ಈ ಕೆರೆಯಲ್ಲಿ 10 ವರ್ಷದಿಂದ ನೀರಿರಲಿಲ್ಲ. ಪರಿಸ್ಥಿತಿ ಈಗ ಬದಲಾಗಿದೆ. ಕೆರೆ ಅಭಿವೃದ್ಧಿ ಬಳಿಕ ನೀರು ಸಮೃದ್ಧವಾಗಿದೆ. 360 ಎಕರೆ ಪ್ರದೇಶ ವಿಸ್ತೀರ್ಣದ ಈ ಕೆರೆ ಏಳೂರಿನ 7-8 ಸಾವಿರ ಜನರಿಗೆ ಉಪಯೋಗಕ್ಕೆ ಸಿಗುತ್ತಿದೆ. ಶಿವಪುರದ ಜನರೂ ಈ ಕೆರೆಯನ್ನು ಬಲು ಜತನದಿಂದ ಕಾಪಾಡಿಕೊಳ್ಳುತ್ತಿದ್ದಾರೆ. ಕೆರೆ ಸುತ್ತ ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ಕೆರೆಗೊಂದು ಕಾಂಪೌಂಡ್ ಕಟ್ಟಲು ಯೋಜನೆ ರೂಪಿಸಿದ್ದಾರೆ. ಕೆರೆ ಪಕ್ಕದಲ್ಲೇ ರಸ್ತೆ ನಿರ್ವಿುಸಿದ್ದಾರೆ. ಎರಡು ಕಿ.ಮೀ. ಉದ್ದದ ಈ ಕೆರೆಯನ್ನು ತಮ್ಮೂರಿನ ಜೀವಾಳ ಎಂದೇ ಭಾವಿಸಿದ್ದಾರೆ ಏಳೂರಿನ ಜನ. ಕೆರೆಯಲ್ಲಿ ನೀರು ನಿಂತಿದ್ದರಿಂದ ಅಂತರ್ಜಲ ಪ್ರಮಾಣ ಹೆಚ್ಚಿದೆ. 1200 ಅಡಿ ಕೊರೆದರೂ ಸಿಗದ ನೀರು ಈಗ 600 ಅಡಿಗೇ ಉಕ್ಕುತ್ತಿದೆ. ಹಾಳಾಗಿದ್ದ 70 ಕೊಳವೆಬಾವಿಗಳಲ್ಲಿ ನೀರು ಚಿಮ್ಮುತ್ತಿದೆ. ಇದರ ಪರಿಣಾಮ ಸುತ್ತಮುತ್ತಲ ಪ್ರದೇಶದಲ್ಲಿ ತರಕಾರಿ ಬೆಳೆಗಳು ಹಸಿರಿನಿಂದ ನಳನಳಿಸುತ್ತಿವೆ. ಕೆರೆ ಅಭಿವೃದ್ಧಿಯಿಂದಾಗಿ ಕೆರೆ ಪಕ್ಕದಲ್ಲೇ ಮನೆಗಳೂ ತಲೆಯೆತ್ತಿವೆ. ಕೆರೆಯಿಂದಾಗಿ 50 ಲಕ್ಷಕ್ಕೆ ಮಾರಾಟವಾಗುತ್ತಿದ್ದ ಒಂದೆಕರೆ ಭೂಮಿ ಈಗ ಕೋಟಿ ರೂಪಾಯಿ ಕೊಟ್ಟರೂ ಸಿಗುತ್ತಿಲ್ಲ. ನೀರಿಲ್ಲದೆ ಕಂಗೆಟ್ಟು ದಾಬಸ್​ಪೇಟೆ ಫ್ಯಾಕ್ಟರಿಗಳತ್ತ ಮುಖ ಮಾಡಿದ್ದ ಯುವಕರು ಈಗ ಕೃಷಿ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆರೆಗೆ ಕೈಮುಗಿವ ಇವರೆಲ್ಲ ಕೆರೆ ಕಾಯುವ ಭಟರಾಗಿದ್ದಾರೆ. ಕೆರೆಗೆ ಪಂಪ್​ಸೆಟ್ ಅಳವಡಿಕೆಯನ್ನು ನಿಷೇಧಿಸಿದ್ದಾರೆ.

ಕುರಿಯು ಕೆರೆಯೊಳಿಲ್ಲ…

ಹತ್ತಾರು ವರ್ಷಗಳಿಂದ ಕುರಿಮರಿಗಳು ಕೆರೆ ಏರಿ ಮೇಲೆ ಮೇಯ್ತಿರಲಿಲ್ಲ. ನೀರಿಲ್ಲದ ಕೆರೆ ಅಂಗಳದಲ್ಲೇ ಮೇಯುತ್ತಿದ್ದವು. ಆದರೀಗ ಪರಿಸ್ಥಿತಿ ಬದಲಾಗಿದೆ. ಕೆರೆಗಳಲ್ಲಿ ಹಿಂದಿನಂತೆ ಭರಪೂರ ನೀರಿದೆ. ಹೀಗಾಗಿ ಕುರಿಗಳೀಗ ಕೆರೆ ಏರಿಯಲ್ಲೇ ಮೇಯ್ದು ನೀರು ಕುಡಿದು ಕುಣಿದು ಕುಪ್ಪಳಿಸುತ್ತ ದೊಡ್ಡಿ ಸೇರುತ್ತಿವೆ.

ಬಾವಿ ಮಹಿಮೆ

ನೂರಾರು ಅಡಿ ಕೊಳವೆಬಾವಿ ಕೊರೆದರೆ ನೀರು ಸಿಗದು. ಬಾವಿ ತೋಡಲಾರಂಭಿಸಿದರೆ 30-40 ಅಡಿಗೆಲ್ಲ ಭರಪೂರ ನೀರು. 400 ಮನೆಗಳಿರುವ ಈ ಊರಲ್ಲಿ ಹಳೆಕಾಲದ 4 ಬಾವಿಗಳಿವೆ. ನಾಲ್ಕೂ ಬಾವಿಗಳಲ್ಲಿ ಎಂಟ್ಹತ್ತು ಅಡಿ ಆಳದಲ್ಲೇ ನೀರಿರುವುದಲ್ಲದೆ 20-30 ಅಡಿ ನೀರಿನ ಸಂಗ್ರಹವಿದೆ ಎನ್ನುತ್ತಾರೆ ಸ್ಥಳೀಯರು. ಈ ಬಾವಿಗಳಲ್ಲಿರುವ ಬೃಹತ್ ಆಮೆಗಳನ್ನು ನೋಡೋದೇ ಚೆಂದ.

Leave a Reply

Your email address will not be published. Required fields are marked *