NewsTraining

ಜಂಟಿ ಬಾಧ್ಯತಾ ಸಂಘಗಳ ಸದಸ್ಯರಿಗೆ ‘ಸಿದ್ಧ ಉಡುಪು ತಯಾರಿಕಾ’ ತರಬೇತಿ

ಮೈಸೂರು ಫೆಬ್ರವರಿ 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ‘ಜಂಟಿ ಬಾಧ್ಯತಾ ಸಂಘ’ಗಳ ಸದಸ್ಯರಿಗೆ ‘ಕೌಶಲ್ಯಾಭಿವೃದ್ಧಿ ತರಬೇತಿ’ ಕಾರ್ಯಕ್ರಮದಡಿಯಲ್ಲಿ ಹಲವಾರು ತರಬೇತಿಗಳನ್ನು ನಿರುದ್ಯೋಗಿ ಯುವಕ ಯುವತಿಯರಿಗೆ ಹಮ್ಮಿಕೊಳ್ಳಲಾಗಿದ್ದು ತತ್ಸಂಬಂಧ ದಿನಾಂಕ:19.02.2017 ರಿಂದ 23.02.2017 ರವರೆಗೆ ‘ಸಿದ್ಧ ಉಡುಪು’ ತರಬೇತಿಯನ್ನು ‘ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರು’ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಿದ್ಧ ಉಡುಪು ತಯಾರಿಕಾ ತರಬೇತಿಯ ದ್ವಿತೀಯ ತಂಡವನ್ನು ಶ್ರೀಯುತ ಧ್ರುವಕುಮಾರ್, ಬಿ.ಸಿ ಯೋಜನಾಧಿಕಾರಿಗಳು, ಮೈಸೂರು ಪ್ರಾದೇಶಿಕ ಕಛೇರಿ, ಇವರು ಉದ್ಘಾಟಿಸಿ ಗ್ರಾಮಾಭಿವೃದ್ಧಿ ಯೋಜನೆಯು ಸಂಘಗಳ ಮೂಲಕ ಸದಸ್ಯರ ಆರ್ಥಿಕ ಬಲವರ್ಧನೆಗೆ ಶ್ರಮಿಸುತ್ತಿದ್ದು, ಹೊಸದಾಗಿ ರಚನೆಗೊಂಡ ಜಂಟಿ ಬಾಧ್ಯತಾ ಸಂಘಗಳಿಗೆ “ಸ್ವ-ಉದ್ಯೋಗವನ್ನು” ಕೈಗೊಳ್ಳಲು ವಿಶೇಷವಾದ ಪ್ರಾತಿನಿಧ್ಯವನ್ನು ನೀಡುವುದರೊಂದಿಗೆ ಆರ್ಥಿಕ ಸಹಕಾರದ ರೂಪದಲ್ಲಿ ಪ್ರಗತಿನಿಧಿಯನ್ನು ನೀಡುತ್ತಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ತಾವೆಲ್ಲರೂ ಶ್ರಮಿಸಬೇಕು. ಇಂದು ಉದ್ಯಮ ರಂಗದಲ್ಲಿ ಅತ್ಯಂತ ಹೆಚ್ಚು ಹಾಗೂ ನಿರಂತರವಾಗಿ ಬೇಡಿಕೆ ಇರುವ ಉದ್ಯಮವೆಂದರೆ ‘ಸಿದ್ಧ ಉಡುಪು ತಯಾರಿಕೆ’. ತಮ್ಮ ಉದ್ಯಮದಲ್ಲಿ ಉದ್ಯಮಿಯು ನಾವೀನ್ಯತೆಗೆ, ಗುಣಮಟ್ಟಕ್ಕೆ ಹಾಗೂ ಸಮಯದ ನಿರ್ವಹಣೆಯೊಂದಿಗೆ ಸಮಯೋಚಿತವಾಗಿ ಕೆಲಸ ನಿರ್ವಹಿಸಿದ್ದಲ್ಲಿ ಉದ್ಯಮಕ್ಕೆ ಬೇಡಿಕೆ ಹೆಚ್ಚಾಗುವುದು ಹಾಗೂ ಆರ್ಥಿಕವಾಗಿ ಸಬಲಗೊಳ್ಳಬಹುದೆಂದು ತಿಳಿಸಿದರು.

ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಯುತ ಸಂತೋಷ್ ರಾವ್.ಪಿ ಇವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 2017-18 ನೇ ಆರ್ಥಿಕ ವರ್ಷವನ್ನು ‘ಸ್ವ-ಉದ್ಯೋಗ ವರ್ಷ’ವೆಂದು ಆಚರಿಸಲಾಗುತ್ತಿದ್ದು, ಅದರ ಅಂಗವಾಗಿ ಸುಮಾರು ಹದಿನಾರು ವಿಷಯಗಳ ಕುರಿತಾದ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಹಮ್ಮಿಕೊಳ್ಳುವ ಮೂಲಕ ಕೇಂದ್ರ ಸರಕಾರದ ಮುಖ್ಯ ಆಶಯವಾದ ‘ಕೌಶಲ್ಯ ಭಾರತ’ ಯೋಜನಗೆ ಪೂರಕವಾಗಿ ಗ್ರಾಮೀಣ ನಿರುದ್ಯೋಗಿ ಯುವಕ ಯುವತಿಯರಿಗೆ ಕೇವಲ ಮಾಹಿತಿಯನ್ನಷ್ಟೇ ನೀಡದೇ ಅವರನ್ನು ಕೌಶಲ್ಯವಂತರನ್ನಾಗಿ ಮಾಡುವಲ್ಲಿ ಶ್ರಮಿಸುತ್ತಿದೆ ಎಂದು ತಿಳಿಸುತ್ತಾ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಯ ಸಮಗ್ರ ರೂಪುರೇಷೆಯ ಕುರಿತು ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ತರಬೇತಿ ಕೇಂದ್ರದ ಉಪನ್ಯಾಸಕರಾದ ಶ್ರೀ ಶಿವಕುಮಾರ್.ಆರ್, ಟೈಲರಿಂಗ್ ಶಿಕ್ಷಕಿಯಾದ ಶ್ರೀಮತಿ ಶ್ವೇತಾ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಯಶೋಧಾರವರು ಉಪಸ್ಥಿತರಿದ್ದರು.

5 ದಿನಗಳ ಈ ತರಬೇತಿಯಲ್ಲಿ ಚಾಮರಾಜನಗರ, ಕೋಲಾರ, ಬೆಂ.ಗ್ರಾಮಾಂತರ, ಮಂಡ್ಯ, ಮೈಸೂರು ಜಿಲ್ಲೆಗಳ ವಿವಿಧ ತಾಲೂಕುಗಳ ಒಟ್ಟು 19 ಮಂದಿ ಭಾಗವಹಿಸುತ್ತಿದ್ದು, ಮಾಹಿತಿ, ವಿವಿಧ ರೀತಿಯ ಬ್ಲೌಸ್ ತಯಾರಿಕೆ, ಅವುಗಳ ಮೌಲ್ಯವರ್ಧನೆ, ಕಟ್ಟಿಂಗ್ ವಿಧಾನಗಳು, ಅತ್ಯಂತ ಹೆಚ್ಚಿನ ಬೇಡಿಕೆಯಿರುವ ಬಟ್ಟೆಯ ಮಾದರಿಗಳ ಕುರಿತಾದ ಪ್ರಾಯೋಗಿಕ ಕಲಿಕೆ, ವೀಡಿಯೋ ವೀಕ್ಷಣೆ, ವಿವಿಧ ಚಟುವಟಿಕೆಗಳು ಮತ್ತು ಸ್ವ ಉದ್ಯೋಗವನ್ನು ನಿರ್ವಹಿಸುತ್ತಿರುವ ಉದ್ಯಮಿಗಳ ಕ್ಷೇತ್ರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿರುತ್ತದೆ.

Leave a Reply

Your email address will not be published. Required fields are marked *