MicrofinanceNews

ಗ್ರಾಹಕರ ಆರ್ಥಿಕ ವ್ಯವಹಾರಗಳ ಬದ್ದತೆ ಮಾಪನ – ಕ್ರೆಡಿಟ್ ಇನ್‍ಫಾರ್‍ಮೇಷನ್ ಸಂಸ್ಥೆಗಳ ಸ್ಥಾಪನೆ.

ಆರ್ಥಿಕ ಸೇವೆ ಮತ್ತು ಸವಲತ್ತುಗಳನ್ನು ನೀಡುವ ಸಂಸ್ಥೆಗಳು ನಮ್ಮ ದೇಶದಲ್ಲಿ ಸಾಕಷ್ಟಿವೆ. ಬ್ಯಾಂಕ್‍ಗಳು, ಕೋ ಆಪರೇಟಿವ್ ಬ್ಯಾಂಕ್‍ಗಳು, ರೀಜಿಯನಲ್ ರೂರಲ್ ಬ್ಯಾಂಕ್‍ಗಳು, ಬ್ಯಾಂಕೇತರ ವಿತ್ತ ಸಂಸ್ಥೆಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಲೇವಾದೇವಿದಾರರು, ಇತ್ಯಾದಿ ವ್ಯವಸ್ಥೆಗಳ ಮೂಲಕ ಜನರಿಗೆ ಆರ್ಥಿಕ ಸೇವೆ ಸಿಗುತ್ತಿದೆ. ಆರ್ಥಿಕ ಸೇವೆಯಲ್ಲಿ ಸಾಲ ಸೌಲಭ್ಯ, ನಿರಖು ಠೇವಣಿಗಳು, ದಿನ ಠೇವಣಿಗಳು, ಮಾಸಿಕ ಠೇವಣಿಗಳು, ಮೊತ್ತ ವರ್ಗಾವಣೆ ಸೇವೆಗಳು, ಸೇಫ್ ಲಾಕರ್ ಸೇವೆಗಳು, ಇವೆಲ್ಲವುಗಳನ್ನು ಒಳಗೊಂಡಿದೆ. ಸಾಲ ಸೌಲಭ್ಯ ಸೇವೆಯೊಂದನ್ನು ಹೊರತು ಪಡಿಸಿ ಇನ್ನುಳಿದ ಸೇವೆಗಳಲ್ಲಿ ಸಂಸ್ಥೆಗಳಿಗೆ ತೊಂದರೆ ಕಡಿಮೆ. ಸಾಲ ಸೌಲಭ್ಯ ಸೇವೆಯಲ್ಲಿ ಸಾಲಗಾರ ನಿರಂತರ ಮರುಪಾವತಿ ಕಾಯ್ದು ಕೊಳ್ಳುವರೇ ? ಎಂಬ ಪ್ರಶ್ನೆ ಸದಾ ಕಾಡುತ್ತಿರುತ್ತದೆ. ಸಾಲಗಾರನ ವ್ಯವಹಾರ ಕುಸಿದು ಬಿದ್ದರೆ, ಕೃಷಿ ನಷ್ಟವಾದರೆ, ಸಾಲಗಾರನೇ ಅವಘಡಕ್ಕೆ ಈಡಾದರೇ, ಮರಣ ಹೊಂದಿದರೆ ಹೀಗೆ ಹಲವಾರು ಅನಿರೀಕ್ಷಿತ ಪ್ರಸಂಗಗಳು ಒದಗುವುದು ಸಹಜ.

ಆದರೆ, ಸಾಲಗಾರ ವೈಯಕ್ತಿಕವಾಗಿ ಚೆನ್ನಾಗಿಯೇ ಇದ್ದು, ಸಂಸ್ಥೆಗೆ ವಂಚನೆ ಮಾಡಿದರೆ, ಕಂತು ಮರುಪಾವತಿಯಲ್ಲಿ ಉದಾಸೀನತೆ ತೋರುವುದು ತನ್ನ ವ್ಯವಹಾರದಲ್ಲಿ ಅಸಮರ್ಪಕ ನಿರ್ಧಾರಗಳನ್ನು ತೆಗೆದುಕೊಂಡಾಗಲೆಲ್ಲಾ ಸಾಲ ಮರುಪಾವತಿಯಲ್ಲಿ ತೊಂದರೆ ಉಂಟಾಗಿ, ವಸೂಲಾತಿ ಮಾಡುವುದೇ ಒಂದು ಸವಾಲಾಗಿ ಬಿಡುತ್ತದೆ. ಈ ಸಂಧರ್ಭಗಳನ್ನು ನಿರೀಕ್ಷೆ ಮಾಡುವುದು ಕಷ್ಟ ಮತ್ತು ನಿಯಂತ್ರಣ ಮಾಡುವುದು ಕಷ್ಟ.

ಇವೆಲ್ಲಾ ಕಾರಣಕ್ಕಾಗಿ ಮತ್ತು ವ್ಯಕ್ತಿಯೊಬ್ಬ ಯಾವೆಲ್ಲಾ ಸಂಸ್ಥೆಯಲ್ಲಿ ಸಾಲ ಪಡೆದುಕೊಂಡಿದ್ದಾನೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಕೇಂದ್ರಿಯ ವಿತ್ತ ಬ್ಯಾಂಕ್ ಆದ ರಿಸರ್ವ್ ಬ್ಯಾಂಕ್ ಇಂಡಿಯಾವು “ಕ್ರೆಡಿಟ್ ಇನ್‍ಫಾರ್‍ಮೇಷನ್ ಕಂಪನಿಸ್ ರೆಗ್ಯೂಲೇಷನ್ ಆ್ಯಕ್ಟ್ 2005” ಕಾಯಿದೆಯ ಪ್ರಕಾರ ಸಾಲ ವ್ಯವಹಾರ ಮತ್ತು ಕ್ರೆಡಿಟ್ ಕಾರ್ಡ್ ವ್ಯವಹಾರಗಳ ಮಾಹಿತಿ ಕಲೆ ಹಾಕಿ ಇದನ್ನು ವಿತ್ತ ಸಂಸ್ಥೆಗಳಿಗೆ ನೀಡುವ ವ್ಯವಸ್ಥೆಗಳಿಗಾಗಿ “ಕ್ರೆಡಿಟ್ ಇನ್‍ಫಾರ್‍ಮೇಷನ್ ಕಂಪನಿ”ಗಳನ್ನು ಸ್ಥಾಪಿಸಿದೆ. ಈ ಕಾಯಿದೆಯನ್ನು 2006 ರಲ್ಲಿ ಮತ್ತೆ ಹೊಸ ವಿಚಾರಗಳನ್ನು ಸೇರಿಸಿ ಹೊರತರಲಾಗಿದ್ದು ಇದರ ಪ್ರಕಾರ ಒಟ್ಟು ಪ್ರಸ್ತುತ 4 ಕ್ರೆಡಿಟ್ ಇನ್‍ಫಾರ್‍ಮೇಷನ್ ಕಂಪನಿಗಳಿಗೆ ಭಾರತೀಯ ವಿತ್ತ ಬ್ಯಾಂಕ್ ಅನುಮತಿ ನೀಡಿದೆ. ಅವುಗಳೆಂದರೆ :-

1. ಸಿಬಿಲ್CIBIL-Credit Information Bureau of India Limited) : ಈ ಸಂಸ್ಥೆಯು ಪ್ರಪ್ರಥಮವಾಗಿ ಸ್ಥಾಪಿಸಲಾದ ಸಂಸ್ಥೆಯಾಗಿದ್ದು 1900 ಕ್ಕಿಂತಲೂ ಅಧಿಕ ವಿತ್ತ ಸಂಸ್ಥೆಗಳ ಸದಸ್ಯತ್ವಗಳನ್ನು ಹೊಂದಿದೆ.
2. Equifax: ಈ ಸಂಸ್ಥೆ 1899 ರಲ್ಲಿ ಅಟ್ಲಾಂಟ ದೇಶದಲ್ಲಿ ಸ್ಥಾಪನೆಯಾಗಿದ್ದು ಭಾರತದಲ್ಲಿ 2010 ರಿಂದ ಸೇವೆ ನೀಡುತ್ತಿದೆ. ಈ ಸಂಸ್ಥೆಯು ಕ್ರೆಡಿಟ್ ಬ್ಯೂರೋ ವಿಭಾಗ ಪ್ರತ್ಯೇಕ ಕೆಲಸ ಮಾಡುತ್ತಿದ್ದು, ದೇಶದ ಕಿರು ಆರ್ಥಿಕ ವ್ಯವಹಾರದ ಸಂಸ್ಥೆಗಳಿಗೆ ಸಹಕರಿಸುತ್ತಿದೆ.
3. Experian : ಈ ಸಂಸ್ಥೆಯನ್ನು ನಮ್ಮ ದೇಶದ ಬ್ಯಾಂಕುಗಳು ಹಾಗೂ ಇತರ ವಿತ್ತ ಸಂಸ್ಥೆಗಳು ಸೇರಿ 2006 ರಲ್ಲಿ ಸ್ಥಾಪಿಸಲಾಗಿದೆ.
4. High Mark Credit Services : ಈ ಸಂಸ್ಥೆಯು ಸಾಲಗಾರರ ಮಾಹಿತಿಯ ವರದಿ ನೀಡುವುದು ಮಾತ್ರವಲ್ಲದೆ, ಸಾಲಗಾರರಿಗೆ ವಿಶೇಷ ಮಾಹಿತಿ ನೀಡಿ ಸುಲಭದಲ್ಲಿ ಸಾಲ ಪಡೆಯುವಂತೆ ಮಾಡುತ್ತದೆ.

ಕ್ರೆಡಿಟ್ ಇನ್‍ಫಾರ್‍ಮೇಷನ್ ಕಂಪನಿಗಳ ಕಾರ್ಯ ವಿಧಾನ ಹೇಗೆ ?

 • ಈ ಸಂಸ್ಥೆಗಳಲ್ಲಿ ವಿತ್ತ ಸಂಸ್ಥೆಗಳು ನೋಂದಾವಣೆ ಮಾಡಿಕೊಳ್ಳುತ್ತವೆ. ಗ್ರಾಹಕರ ಮಾಹಿತಿ ಪಡೆದುಕೊಳ್ಳುವುದಕ್ಕಾಗಿ ಇದು ಅವಶ್ಯಕವಾಗಿದೆ.
 • ಯಾವುದೇ ಗ್ರಾಹಕನ ಸಾಲ/ಹೊಣೆಗಾರಿಕೆ ನಿರ್ವಹಣೆ ಮಾಹಿತಿಯನ್ನು ಈ ಸಂಸ್ಥೆಯ ಮೂಲಕ ಪಡೆದುಕೊಳ್ಳಬಹುದಾಗಿದೆ.
 • ಕ್ರೆಡಿಟ್ ಇನ್‍ಫಾರ್‍ಮೇಷನ್ ಸಂಸ್ಥೆಗಳು ವಿವಿಧ ಮೂಲಗಳಿಂದ ಗ್ರಾಹಕರ ಮಾಹಿತಿ ಕಲೆಹಾಕುತ್ತದೆ. ಮತ್ತು ತನ್ನ ಡಾಟಾ ಬೇಸ್‍ನಲ್ಲಿ ಅದನ್ನು ಅಫ್‍ಲೋಡ್ ಮಾಡಿಟ್ಟುಕೊಳ್ಳುತ್ತದೆ.
 • ಇದಕ್ಕಾಗಿ ಅದು ವಿವಿಧ ವಿತ್ತ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡು ಗ್ರಾಹಕರ ವ್ಯವಹಾರದ (ಸಾಲ ಮರುಪಾವತಿ, ಯಾವುದೇ ಮರುಪಾವತಿ ಸಮಸ್ಯೆಗಳು ಇತ್ಯಾದಿ) ಡಾಟಾ ಬೇಸ್‍ನಿಂದ ಮಾಹಿತಿ ಕೇಳಿದ ಸಂಸ್ಥೆಗೆ ಬೇಕಾದ ವರದಿ ತಯಾರಿಸಿ ನೀಡುತ್ತದೆ. ಈ ವರದಿಯಲ್ಲಿ ಗ್ರಾಹಕನನ್ನು ಆತನ ವ್ಯವಹಾರದ ನಿರ್ವಹಣೆಯ ಗುಣಮಟ್ಟದ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಅವನು ಗಳಿಸಿದ ಅಂಕದ ಆಧಾರದಲ್ಲಿ ಗ್ರೇಡಿಂಗ್ ಕಾರ್ಡ್ ತಯಾರಿಸಿ ನೀಡಲಾಗುತ್ತದೆ. ಉತ್ತಮ ಗ್ರೇಡಿಂಗ್ ಪಡೆದ ಗ್ರಾಹಕನು ಸುಲಭದಲ್ಲಿ ಆರ್ಥಿಕ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
 • ಸುಮಾರು 300-900 ಅಂಕಗಳ ಗ್ರೇಡಿಂಗ್ ಕಾರ್ಡ್ ಇದ್ದು ಇದರಲ್ಲಿ 750ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದವರನ್ನು ಅತ್ಯುತ್ತಮ ಗ್ರೇಡಿಂಗ್ ಎಂದು ಪರಿಗಣಿಸಲಾಗುತ್ತದೆ.
 • ಈ ಸಂಧರ್ಭ ಅದು ಮಾಹಿತಿ ಗೌಪ್ಯತೆ ಕಾಯ್ದುಕೊಳ್ಳುವುದು ಖಡ್ಡಾಯವಾಗಿರುತ್ತದೆ. ಗ್ರಾಹಕನ ಮಾಹಿತಿ ಯಾವ ಉದ್ದೇಶಕ್ಕಾಗಿ ಕೇಳಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಂಡು ವರದಿ ನೀಡಬೇಕು.
 • ಈ ಸಂಸ್ಥೆಯು ನೀಡಿದ ಮಾಹಿತಿ ಪ್ರಕಾರ ವಿತ್ತ ಸಂಸ್ಥೆಯು ತನ್ನ ಗ್ರಾಹಕನಿಗೆ ನೀಡಬಹುದಾದ ಆರ್ಥಿಕ ಸೌಲಭ್ಯವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ.

ಈ ಮೇಲಿನ ಹಂತಗಳಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳುವ ವ್ಯಕ್ತಿಯ ಸಾಲದ ನಿರ್ವಹಣೆ/ಕ್ರೆಡಿಟ್ ಕಾರ್ಡ್ ಮೊತ್ತ ನಿರ್ವಹಣೆ ಬಗ್ಗೆ ವರದಿಯನ್ನು ಕ್ರೆಡಿಟ್ ಇನ್‍ಫಾರ್‍ಮೇಷನ್ ಕಂಪನಿಗಳ ಮೂಲಕ ವಿತ್ತ ಸಂಸ್ಥೆಗಳಿಗೆ ರವಾನಿಸಲಾಗುತ್ತದೆ.

ವ್ಯಾಪಾರ/ವ್ಯವಹಾರ/ ಶೇರು ಮಾರುಕಟ್ಟೆ/ ಇನ್ವೆಸ್ಟ್‍ಮೆಂಟ್ ಕ್ಷೇತ್ರಗಳಲ್ಲಿ ಈ ವರದಿಯ ವ್ಯಾಪಕ ಬಳಕೆ ಇದ್ದು ಮುಂದಕ್ಕೆ ಆರ್ಥಿಕ ಸೌಲಭ್ಯ ಬೇಕಾದ್ದಲ್ಲಿ ಪ್ರತಿಯೊಬ್ಬನು ತನ್ನ ಆರ್ಥಿಕ ವ್ಯವಹಾರಗಳನ್ನು ಶಿಸ್ತುಬದ್ದವಾಗಿಸುವುದು ಬಹಳ ಮುಖ್ಯವಾಗಿರುತ್ತದೆ. ಇದು ಒಂದು ಉತ್ತಮ ವ್ಯವಸ್ಥೆಯಾಗಿದ್ದು ಇದರ ವ್ಯಾಪಕ ಬಳಕೆಯಾಗಬೇಕಾಗಿದೆ. ಭಾರತೀಯ ವಿತ್ತ ಬ್ಯಾಂಕ್ ಈ ವ್ಯವಸ್ಥೆಯನ್ನು ಕೋ ಆಪರೇಟಿವ್ ಬ್ಯಾಂಕ್‍ಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ವ್ಯಾಪಕವಾಗಿ ಬಳಕೆ ಮಾಡಬೇಕೆಂದು ನಿಯಮ ಜಾರಿ ಮಾಡಿದೆ.

ಗ್ರಾಹಕರಿಗೆ ಏನು ಪ್ರಯೋಜನ:

 • ಕ್ರೆಡಿಟ್ ಇನ್‍ಫಾರ್‍ಮೇಷನ್ ಸಂಸ್ಥೆಯಿಂದ ಅತ್ಯುತ್ತಮ ಗ್ರೇಡಿಂಗ್ ಪಡಕೊಂಡ ಗ್ರಾಹಕನನ್ನು ವಿತ್ತ ಸಂಸ್ಥೆಗಳು ಸೌಲಭ್ಯ ನೀಡುವುದಕ್ಕಾಗಿ ಆಕರ್ಷಿಸುತ್ತವೆ.
 • ಅತ್ಯಂತ ಸ್ಪರ್ದಾತ್ಮಕ ದರದಲ್ಲಿ ಸೌಲಭ್ಯವನ್ನು ವಿತ್ತ ಸಂಸ್ಥೆಗಳಲ್ಲಿ ಬಾರ್‍ಗೈನ್ ಮಾಡಬಹುದು.
 • ಆರ್ಥಿಕ ಸೌಲಭ್ಯದ ಮಿತಿಯನ್ನು ಹೆಚ್ಚಿಸಬಹುದು ಮತ್ತು ಕೆಲವೊಂದು ನಿಭಂಧನೆಗಳನ್ನು ಸಡಿಲಿಸಿ ಗ್ರಾಹಕನಿಗೆ ತಕ್ಷಣದ ಸೇವೆ, ಉತ್ತಮ ಸೇವೆ ಪಡಕೊಳ್ಳಬಹುದು.
 • ತನ್ನ ವಲಯದಲ್ಲಿ, ಮಾರುಕಟ್ಟೆಯಲ್ಲಿ ವಿಶೇಷ ಗುರುತಿಸುವಿಕೆ ಸಾಧ್ಯವಾಗಿ, ಗುಡ್‍ವಿಲ್ ಹೆಚ್ಚಾಗುವುದು

ಗ್ರಾಹಕನು ಮಾಡಬೇಕಾದ ಜಾಗ್ರತೆಗಳು :

 • ತನ್ನ ಉತ್ತಮ ಗ್ರೇಡಿಂಗ್‍ನ್ನು ನಿರಂತರವಾಗಿ ಕಾಯ್ದುಕೊಳ್ಳುವುದು ಅವಶ್ಯಕ.
 • ತನ್ನ ಉತ್ತಮ ಗ್ರೇಡಿಂಗ್‍ನಲ್ಲಿ ಈ ಹಿಂದೆ ಕೊರತೆ ಇದ್ದಲ್ಲಿ ಅದನ್ನು ಸುಧಾರಣೆ ಕಾಯ್ದುಕೊಳ್ಳುವುದು ಅವಶ್ಯಕ.
 • ಗ್ರೇಡಿಂಗ್‍ನಿಂದಾಗಿ ಬರುವ ಉತ್ತಮ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು.

ಆರ್ಥಿಕ ವಲಯದಲ್ಲಿ ಸುಧಾರಣೆಗಳು, ಬೆಳವಣಿಗೆಗಳು, ತಂತ್ರಜ್ಞಾನ ಅಭಿವೃದ್ದಿಯಾದಂತೆ ವಿತ್ತ ಸಂಸ್ಥೆಗಳಿಂದ ದೊರಕುವ ಹೊಸ ಸೌಲಭ್ಯಗಳೊಂದಿಗೆ ಗ್ರಾಹಕನು ಬೆಳೆಯುವುದು ಅವಶ್ಯಕ. ಈ ಬಗ್ಗೆ ಪ್ರತಿಯೊಬ್ಬರೂ ಈ ವ್ಯವಸ್ಥೆಯ ವ್ಯಾಪ್ತಿಯೊಳಗೆ ತನ್ನನು ತಾನು ತೊಡಗಿಸಿಕೊಳ್ಳುವುದು ಅವಶ್ಯಕ.

ಕಿರು ಆರ್ಥಿಕ ವ್ಯವಹಾರ ಕ್ಷೇತ್ರದಲ್ಲಿ ಇದರ ಪ್ರಯೋಜನ : ಪ್ರಸಕ್ತ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಕಂಡುಕೊಂಡ ವಿಚಾರಗಳು:-

 • ಕಿರು ಆರ್ಥಿಕ ವ್ಯವಹಾರ ಕೇತ್ರದಲ್ಲಿ, ಸ್ವಸಹಾಯ ಸಂಘಗಳು ಮತ್ತು ಜಾಯಿಂಟ್ ಲಯಬಿಲಿಟಿ ಗ್ರೂಪ್ (AIU) ಸದಸ್ಯರು ಒಂದಕ್ಕಿಂತ ಅಧಿಕ ಸಂಸ್ಥೆಗಳಲ್ಲಿ ಸದಸ್ಯತ್ವವನ್ನು ಹೊಂದಿ, ಸಾಲ ಸೌಲಭ್ಯವನ್ನು ಪಡೆಯುತ್ತಿರುವುದು ಸಾಮಾನ್ಯ ವಿಚಾರವಾಗಿದೆ.
 • ಸದಸ್ಯರು ಸರಿಯಾದ ಯೋಜನೆಗಳಿಲ್ಲದೆ ಅನಗತ್ಯ ಸಾಲಗಳನ್ನು ಪಡೆದು ಮುಂದಿನ ದಿನಗಳಲ್ಲಿ ಸಾಲದ ಹೊರೆ ಅತಿಯಾಗಿ ಮರುಪಾವತಿಸಲು ಸಾದ್ಯ ಆಗದೇ ಸಮಸ್ಯೆಗಳಾಗುತ್ತದೆ.
 • ಸಂಘಗಳಿಗೆ ಸುಲಭವಾಗಿ ಸಾಲ ಸೌಲಭ್ಯ ಸಿಗುವುದರಿಂದ, ಬಹಳಷ್ಟು ಸನ್ನಿವೇಶಗಳಲ್ಲಿ ಮೊತ್ತವು ಸ್ಥಳೀಯ ದಲ್ಲಾಳಿಗಳಿಗೆ ಹರಿದು ಹೋಗುತ್ತಿರುವುದು ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವಂತೆ ಆಗಿದೆ.
 • ಸಂಘಗಳ ವತಿಯಿಂದ ಬ್ಯಾಂಕ್‍ಗಳಲ್ಲಿ ಸಾಲ ಪಡೆಯುವುದರಿಂದ ಸದಸ್ಯರು ಪಡಕೊಂಡ ಸಾಲದ ಮಾಹಿತಿಯು ದಾಖಲಾಗುವುದು ಅತೀ ವಿರಳ. ಆದುದರಿಂದ ಸದಸ್ಯರು/ಅವರ ಕುಟುಂಬದವರು ಪಡೆದ ಸಾಲದ ವಿವರಣೆಯು ಬಹಳ ಪ್ರಮುಖ. ಇದರ ಮಾಹಿತಿ ಲಭ್ಯವಿಲ್ಲದೇ ಇರುವುದರಿಂದ ಸಂಘಗಳಲ್ಲಿಯೂ ಸದಸ್ಯರ ಆರ್ಥಿಕ ವ್ಯವಹಾರಗಳನ್ನು ನಿರ್ಧರಿಸುವಲ್ಲಿ ತೊಂದರೆಯಾಗುತ್ತಿದೆ.

ಆದುದರಿಂದ ಸ್ವ-ಸಹಾಯ ಸಂಘಗಳು ಮತ್ತು ಜೆ.ಎಲ್.ಜಿ. ಗಳ ಸದಸ್ಯರ ಸಾಲದ ನಿರ್ವಹಣೆ ಮಾಹಿತಿಯು ಈ ವ್ಯವಸ್ಥೆಯೊಳಗೆ ಪರಿಪೂರ್ಣವಾಗಿ ಬಂದಲ್ಲಿ ಮೈಕ್ರೋ ಫೈನಾನ್ಸ್ ಕ್ಷೇತ್ರದಲ್ಲಿ ಪ್ರಸಕ್ತ ಇರುವ ಹಲವಾರು ಸಮಸ್ಯೆಗಳು ಪರಿಹಾರವಾಗುತ್ತದೆ. ಅಲ್ಲದೇ ಈ ವಲಯದಲ್ಲಿ ಜಾಗೃತಿ ಮೂಡಿ, ಸದಸ್ಯರು ಸೀಮಿತ ಸಂಸ್ಥೆಗಳಲ್ಲಿ ಮಾತ್ರ ವ್ಯವಹಾರ ಮತ್ತು ತಮ್ಮ ಅವಶ್ಯಕತೆ, ಸಾಮಥ್ರ್ಯಕ್ಕೆ ಬೇಕಾಗುವಷ್ಟು ಸಾಲ ಪಡಕೊಳ್ಳುವುದು ಸಾಧ್ಯವಾಗುತ್ತದೆ.

ಇ-ಶಕ್ತಿ ಯೋಜನೆ : ನಬಾರ್ಡ್ ವತಿಯಿಂದ ಇ-ಶಕ್ತಿ ಎಂಬ ಯೋಜನೆಯ ಪ್ರಕಾರ ಸ್ವ-ಸಹಾಯ ಸಂಘಗಳು ಮತ್ತು ಜಾಯಿಂಟ್ ಲಯಬಿಲಿಟಿ ಗ್ರೂಪ್‍ಗಳ ಸದಸ್ಯರ ಆರ್ಥಿಕ ವ್ಯವಹಾರಗಳ ಡಿಜಿಟೈಸೇಶನ್ ಮಾಡಲಾಗುತ್ತಿದ್ದು, ಸದಸ್ಯರ ಪ್ರತಿಯೊಂದು ಆರ್ಥಿಕ ವ್ಯವಹಾರಗಳಾದ ಉಳಿತಾಯ, ಸಾಲಮರುಪಾವತಿ, ಸಾಲ ವಿತರಣೆ ಮಾಹಿತಿಯು ನಬಾರ್ಡ್ ಸಂಸ್ಥೆ ಅಭಿವೃದ್ದಿ ಪಡಿಸಿದ ವೆಬ್‍ಸೈಟ್‍ನಲ್ಲಿ ದಾಖಲಾಗುತ್ತದೆ. ಇದನ್ನು ಸಂಬಂಧಪಟ್ಟ ಸಂಸ್ಥೆಗಳು ವೆಬ್‍ಸೈಟ್‍ನಲ್ಲಿ ನೋಂದಾವಣೆ ಮಾಡಿಕೊಂಡು ಮಾಹಿತಿ ಪಡಕೊಳ್ಳುವ ವ್ಯವಸ್ಥೆಯು ಪ್ರಗತಿಯ ಹಂತದಲ್ಲಿದೆ.

3 thoughts on “ಗ್ರಾಹಕರ ಆರ್ಥಿಕ ವ್ಯವಹಾರಗಳ ಬದ್ದತೆ ಮಾಪನ – ಕ್ರೆಡಿಟ್ ಇನ್‍ಫಾರ್‍ಮೇಷನ್ ಸಂಸ್ಥೆಗಳ ಸ್ಥಾಪನೆ.

Leave a Reply to Mallikarjun A Danannavar Cancel reply

Your email address will not be published. Required fields are marked *