ಮಹಿಳೆಯರ ವೈಯಕ್ತಿಕ ಸ್ವಚ್ಛತೆ, ಪೌಷ್ಠಿಕ ಆಹಾರ ಸೇವನೆ, ಸಮುದಾಯದ ಬಗೆಗಿನ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ತಿ.ನರಸೀಪುರ ತಾಲ್ಲೂಕಿನ ವಡ್ಡರಕೊಪ್ಪಲು ಗ್ರಾಮದಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ತಿಮ್ಮಮ್ಮ ಉದ್ಘಾಟನೆ ಮಾಡಿ ಕಾರ್ಯಕ್ರಮದ ಕುರಿತು ಶುಭ ಹಾರೈಸಿದರು.
6 ವರ್ಷದೊಳಗಿನ ಮಕ್ಕಳ ಪೌಷ್ಠಿಕತೆ ಮಟ್ಟವನ್ನು ಹಾಗೂ ಆರೋಗ್ಯ ಸ್ಥಿತಿಯನ್ನು ಸುಧಾರಿಸುವುದು, ಮಗುವಿನ ಮಾನಸಿಕ, ಸಾಮಾಜಿಕ, ದೈಹಿಕ ಸಮರ್ಪಕ ಬೆಳವಣಿಗೆಗೆ ಬುನಾದಿ ಹಾಕುವುದು, ಶಿಶು ಮರಣ ದರ ಕಡಿಮೆ ಮಾಡುವುದು, ಅಪೌಷ್ಠಿಕತೆ ಕಾರಣ ಪೌಷ್ಠಿಕ ಆಹಾರಗಳ ಸೇವನೆ, ರೋಗನಿವಾರಣೆ, ತಾಯಿ ಮತ್ತು ಮಗುವಿನ ಸರ್ವಾಂಗೀಣ ಪೌಷ್ಠಿಕತೆಯ ಆಹಾರಗಳು, ಮಹಿಳೆಯರ ಆರೋಗ್ಯ ಸ್ವಚ್ಛತೆ, 40 ವರ್ಷ ದಾಟಿದ ಮಹಿಳೆಯರಿಗೆ ಬರುವ ತೊಂದರೆಗಳು ಹಾಗೂ ಗರ್ಭಿಣಿಯರು ಯಾವ ರೀತಿ ಇರಬೇಕು, ಬಾಣಂತಿಯರ ಹಾರೈಕೆ, ಈ ಎಲ್ಲಾ ವಿಚಾರಗಳ ಬಗ್ಗೆ ಸರಕಾರಿ ಆಸ್ಪತ್ರೆಯ ಆರೋಗ್ಯ ಸಹಾಯಕರಾದ ಶಂಕರೇಗೌಡರವರು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯೋಪಧ್ಯಾಯರು ಕಾಂತರಾಜುರವರು ಮಾತನಾಡಿ “ನಾನು ಇದುವರೆಗೂ ಕೂಡ ಮಕ್ಕಳ ಜೊತೆ ಮಾತ್ರ ಬೆರೆತಿದ್ದೆ. ಆದರೆ ಇವತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಷ್ಟೊಂದು ತಾಯಂದಿರ ಜೊತೆಯಲ್ಲಿ ಬೆರೆಯುವಂತಹ ಅವಕಾಶವನ್ನು ಕಲ್ಪಿಸಿಕೊಟ್ಟಂತಹ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರಿಗೆ ತುಂಬು ಹೃದಯದ ವಂದನೆಗಳನ್ನು ಸಲ್ಲಿಸುತ್ತೇನೆ. ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ನಾಣ್ನುಡಿಯ ಪ್ರಕಾರ ಮಹಿಳೆಯ ಶಕ್ತಿಯು ಅಗಾದವಾದುದು ಮಹಿಳೆ ಮನಸ್ಸು ಮಾಡಿದರೆ ಎನನ್ನಾದರೂ ಸಾಧಿಸಬಲ್ಲಳೆಂಬುವುದನ್ನು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ತಾಯಂದಿರೇ ಸಾಕ್ಷಿಯಾಗಿದೆ. ಇವತ್ತಿನ ವೈಜ್ಞಾನಿಕ ಯುಗದಲ್ಲಿ ನಾವೆಲ್ಲರೂ ನೆಮ್ಮದಿಯ ಜೀವನವನ್ನು ನಡೆಸಬೇಕಾದರೆ ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ, ಆರೋಗ್ಯದ ದೃಷ್ಠಿಯಿಂದ ಹಾಗೂ ಶೈಕ್ಷಣಿಕವಾಗಿ ಬದಲಾಗಬೇಕು ನಮ್ಮನ್ನು ಸರಿಯಾದ ಮಾರ್ಗಕ್ಕೆ ಕರೆದುಕೊಂಡು ಹೋಗಲು ಇವತ್ತಿನ ದಿನ ಈ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಹಕಾರಿಯಾಗಿದೆ. ಮತ್ತು ಆರೋಗ್ಯದ ದೃಷ್ಟಿಯಲ್ಲಿ ನಾವೆಲ್ಲರೂ ತುಂಬಾ ವಿಚಾರ ಮಾಡುವಂತಹ ಮುಖ್ಯ ಅಂಶವಾಗಿದೆ ತಮ್ಮ ತಮ್ಮ ಮನೆಗಳಿಗೆ ಶೌಚಾಲಯ ನಿರ್ಮಾಣ, ಚರಂಡಿಗಳ ಸ್ವಚ್ಛತೆ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ, ವೈಯಕ್ತಿಕ ಸುಚಿತ್ವ ಮಾಡಿದರೇ ಮಾತ್ರ ನಮ್ಮ ದೇಶ ಸ್ವಚ್ಛ ಭಾರತ್ ಆಗಲು ಸಾಧ್ಯ. ಮಹಿಳೆಯರು ವೈಯಕ್ತಿಕ ಶುಚಿತ್ವದ ಬಗೆಗಂತು ತುಂಬಾ ಗಮನ ಹರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ಸವಿತ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಿಮ್ಮಮ್ಮ, ನರ್ಸ್ ಸೌಮ್ಯ, ಸೇವಾಪ್ರತಿನಿಧಿಗಳಾದ ಜ್ಯೋತಿರವರು ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.
ವರದಿ : ಶ್ರೀಮತಿ ಸುನೀತಾ ಪ್ರಭು
ಯೋಜನಾಧಿಕಾರಿ