ಇದೇ ಮೊದಲ ಬಾರಿ ಹಾರಕ ಬೆಳೆದಿದ್ದ ವಿರೂಪಾಕ್ಷಯ್ಯ ಹಿರೇಮಠರ ಮೊಗದಲ್ಲಿ ಹಾರಿ ಹೋಗದ ಮಂದಹಾಸ. ಮೂರು ಅಡಿಗಳಿಗೂ ಹೆಚ್ಚು ಎತ್ತರ ಬೆಳೆದಿದ್ದ ಹಾರಕದ ಸಸ್ಯರಾಶಿ ಇವರಲ್ಲಿ ಮೂಡಿಸಿದ ಬೆರಗು ಸುಲಭದಲ್ಲಿ ತಣ್ಣಗಾಗುವಂತಿರಲಿಲ್ಲ. ಊರಿಂದ ಹೊರಗೆ ನಾಲ್ಕಾರು ಕಿಲೋಮೀಟರ್ ದೂರದಲ್ಲಿರುವ ಹೊಲದಲ್ಲಿ ಹಾರಕದ ಬೆಳೆಯಿದ್ದರೂ ಆಪ್ತರನ್ನು, ಸ್ನೇಹಿತರನ್ನು, ನೆರೆಹೊರೆಯವರನ್ನು, ಹಿರಿಯರನ್ನು ಕರೆದುಕೊಂಡು ಹೋಗಿ ತೋರಿಸಿದ್ದೇ, ತೋರಿಸಿದ್ದು. ಕುತೂಹಲದಿಂದ ತೆರಳಿ ವೀಕ್ಷಿಸಿದ ಆಸಕ್ತರಿಗೂ ಹಾರಕ ಕಣ್ತಂಪು ಮಾಡಿತ್ತು. ಸರಾಸರಿ ಮೂರುವರೆ ಅಡಿಗಳಷ್ಟು ಬೆಳೆದು ನಿಂತಿರುವ ಬೆಳೆ, ಹುಲುಸಾದ ಕಾಳುಗಳ ತೆನೆ, ದೂರದಿಂದಲೇ ಕಣ್ಣಿಗೆಟುಕುವಂತಿತ್ತು.
ಕೊಪ್ಪಳದ ವಿರೂಪಾಕ್ಷಯ್ಯರ ಸಂತೋಷಕ್ಕೆ ಇನ್ನೊಂದು ಕಾರಣವಿದೆ. ಈ ಬಾರಿ ಮಳೆಯೇ ಇಲ್ಲ. ಭೂಮಿ ಪಾಳು ಬಿಡುವುದೆಂದು ಮನೆಯವರೆಲ್ಲಾ ನಿರ್ಧರಿಸಿಯಾಗಿತ್ತು. ಜೋಳ ಬೆಳೆಯುತ್ತಿದ್ದ ಭೂಮಿ ಬಿಸಿಲು ಹೊದ್ದು ನಿಲ್ಲುವುದು ಖಾತ್ರಿಯಾಗಿತ್ತು. ‘ಒಂದೆರಡು ಮಳೆಯಾದರೂ ಸಾಕು, ಉಳುಮೆ ಮಾಡಿ ಹಾರಕ ಬಿತ್ತಿ ನೋಡಿ, ಬೆಳೆ ಅಬ್ಬರಿಸಿ ಬರದಿದ್ದರೆ ಹೇಳಿ’ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಮೇಲ್ವಿಚಾರಕ ಮಂಜುನಾಥ್ ಹುರಿದುಂಬಿಸಿದ್ದರು. ಅವರ ಭರವಸೆಯ ಮಾತಿಗೆ ವಿರೂಪಾಕ್ಷಯ್ಯರ ತಕ್ಷಣದ ಬೇಡಿಕೆ ‘ಹಾಗಾದರೆ ಬಿತ್ತನೆ ಬೀಜ ತಂದುಕೊಡಿ, ಒಂದುವರೆ ಎಕರೆಯಲ್ಲಿ ಪ್ರಯೋಗ ಮಾಡುತ್ತೇನೆ’. ಮಾರನೆಯ ದಿನವೇ ‘ಸಿರಿ ಗ್ರಾಮೋದ್ಯೋಗ ಸಂಸ್ಥೆ’ ನಾಲ್ಕು ಕಿಲೋ ಗ್ರಾಂ ಬಿತ್ತನೆ ಬೀಜ ವಿರೂಪಾಕ್ಷಯ್ಯರ ಮನೆಬಾಗಿಲಿಗೆ ತಲುಪಿಸಿತ್ತು.
ಜೂನ್ ತಿಂಗಳ ಎರಡನೆಯ ವಾರ. ಮೂರು ತಾಳಿನ ಕೂರಿಗೆಯಿಂದ ಸಾಲಿನಿಂದ ಸಾಲು ಒಂದು ಅಡಿ ನಾಲ್ಕು ಇಂಚು ಅಂತರದಲ್ಲಿ ಬಿತ್ತನೆ. ಬಿತ್ತಿದ ಮೂರನೆಯ ದಿನಕ್ಕೆ ಮುಳ್ಳು ಕುಂಟೆಯ ಹೊಡೆತ. ಇಪ್ಪತ್ತನೆಯ ದಿನಕ್ಕೆ ಸಾಲಿನ ನಡುವೆ ಸಣ್ಣ ಕುಂಟೆಯ ಓಡಾಟ. ಬೆಳೆ ಅವಧಿಯಲ್ಲಿ ಎರಡು ಬಾರಿ ಎಡೆಕುಂಟೆ ಪ್ರಯೋಗ. ಬಿತ್ತನೆ ಮಾಡಿದ ತಿಂಗಳು ಹಾಗೂ ಗಿಡಗಳು ಹೊಡೆ ಹೊಡೆಯುವ ಸಮಯದಲ್ಲಿ (ಮೂರನೆಯ ತಿಂಗಳಿನಲ್ಲಿ) ಗೊಬ್ಬರದ ಉಣಿಕೆ. ಇವಿಷ್ಟು ಕೆಲಸ ಪೂರೈಸಲು ಹೊಲದೆಡೆಗೆ ಬಂದಿದ್ದು ಬಿಟ್ಟರೆ ಹಾರಕದೆಡೆಗೆ ವಿಪರೀತವೆಂಬಂತೆ ಗಮನ ನೀಡಿದ್ದು ಕಡಿಮೆ. ಆಗಾಗ ಹನಿಸಿದ ಸಣ್ಣ ಮಳೆ, ಮಣ್ಣು ಹಿಡಿದಿಟ್ಟುಕೊಂಡ ತೇವ ಇವಿಷ್ಟರಲ್ಲಿಯೇ ಬೆಳೆಯ ಅಬ್ಬರ ಬೆರಗು ಮೂಡಿಸಿತ್ತು. ಹನ್ನೆರಡು ಕ್ವಿಂಟಾಲ್ ಇಳುವರಿ ಪಡೆದಿದ್ದರು.
ನಿರೀಕ್ಷಿಸಿದ ಇಳುವರಿ ಸಿಕ್ಕ ಸಂಭ್ರಮ ಒಂದೆಡೆಯಾದರೆ ನೀರಿನ ಕೊರತೆಯ ನೆವವೊಡ್ಡಿ ಪಾಳು ಬಿಡಬೇಕಾಗಿದ್ದ ಭೂಮಿಯಲ್ಲಿ ಆದಾಯ ಕೈ ಸೇರಿದ ಸಂತಸ ಇನ್ನೊಂದೆಡೆ. ಏನಾದರೂ ಆಗಲಿ ಮುಂದಿನ ವರ್ಷ ಮೂರು ಎಕರೆಯನ್ನು ಸಿರಿಧಾನ್ಯ ಬೆಳೆಗೇ ಮೀಸಲು ಎನ್ನುವ ನಿರ್ಧಾರ ತಳೆದಿದ್ದಾರೆ ವಿರುಪಾಕ್ಷಯ್ಯ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನೀಡಿದ ಮಾಹಿತಿಯ ಬಲದಿಂದ ಈ ಸಾಧನೆ ಸಾಧ್ಯವಾಯಿತು ಎನ್ನುವ ಅಭಿಪ್ರಾಯ ಇವರದು.
ಬರಗಾಲದ ಮಿತ್ರ ಹಾರಕ

One thought on “ಬರಗಾಲದ ಮಿತ್ರ ಹಾರಕ”
nanagu siri danya beleyalu margadarshana nidi
kannada dalli uttarisi