success storyWomen Empowerment

ಬುಟ್ಟಿ ಹೆಣೆದು ಮಕ್ಕಳನ್ನು ಇಂಜಿನಿಯರಿಂಗ್ ಓದಿಸಿದ ಈರಮ್ಮ

ಈರಮ್ಮ ಓದಿದ್ದು ಏಳನೆಯ ತರಗತಿ. ವಿದ್ಯಾಭ್ಯಾಸ ಸ್ವಲ್ಪ ಕಡಿಮೆ. ಚುರುಕುತನ ಪದವಿ ಮುಗಿಸಿದವರಿಗಿಂತ ಕಡಿಮೆಯೇನಿಲ್ಲ. ಪತಿ ಮಲ್ಲೇಶ್ ಓದಿದ್ದು ಒಂಭತ್ತನೆಯ ತರಗತಿ. ಜೀವನಕ್ಕಾಗಿ ಸಾಂಪ್ರದಾಯಿಕ ಉದ್ಯೋಗ ಬಿದಿರಿನ ಬುಟ್ಟಿ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ತಾವು ಓದದಿದ್ದರೇನಂತೆ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು, ಉನ್ನತ ಶಿಕ್ಷಣ ಪಡೆಯಬೇಕು. ‘ಕಲಿಯಲಿಲ್ಲವಲ್ಲ’ ಎಂದು ಕೊರಗುತ್ತಲೇ ಇರುವ ನಮ್ಮ ಮನಸ್ಥಿತಿ ನಮ್ಮ ಮಕ್ಕಳಿಗೆ ಬರಬಾರದು ಎಂದು ನಿರ್ಧರಿಸಿ ‘ನೀವು ಎಷ್ಟಾದರೂ ಓದಿ ಖರ್ಚು ನಾವು ಸರಿದೂಗಿಸುತ್ತೇವೆ’ ಭರವಸೆಯ ಮಾತುಗಳಿಂದ ಮಕ್ಕಳನ್ನು ಉನ್ನತ ಶಿಕ್ಷಣ ಓದಿಸಿದ್ದಾರೆ. ಬಡತನದ ಸಂಕಟ ಮಕ್ಕಳಿಗೆ ಸೋಕದಂತೆ, ಹಣವಿಲ್ಲದ ನೋವನ್ನು ತಾವು ಅನುಭವಿಸಿ, ದುಡಿಮೆಯಿಂದ ಹೈರಾಣಾಗಿ, ಒಗ್ಗಟ್ಟಿನಿಂದ ದುಡಿದು ಸಂತಸಕರ ಜೀವನ ನಡೆಸುತ್ತಿದ್ದಾರೆ.

ಈರಮ್ಮ ಮಲ್ಲೇಶಪ್ಪ ಮೇಹರ್ ದಾವಣಗೆರೆ ಜಿಲ್ಲೆ ಜಗಳೂರಿನವರು. ಬುಟ್ಟಿ ಹೆಣೆಯುವ ಕಾಯಕ ಹಿರಿಯರಿಂದ ವರ್ಗಾವಣೆಯಾದದ್ದು. ಪುರಾತನ ಕಾಲದಿಂದಲೂ ಹಿರಿಯರು ಮಾಡುತ್ತಿದ್ದ ಕಸುಬನ್ನೇ ಇವರು ಮುಂದುವರೆಸಿಕೊಂಡು ಬಂದಿದ್ದಾರೆ. ಬಾಲ್ಯದಲ್ಲಿ ರೂಢಿಸಿಕೊಂಡ ಬುಟ್ಟಿ ಹೆಣೆಯುವ ಕಾಯಕ ವಿವಾಹದ ನಂತರವೂ ಮುಂದುವರೆಸಿದ್ದರು.

ದೊಡ್ಡ ಕುಟುಂಬ, ದೊಡ್ಡ ಖರ್ಚು, ಅವಿರತ ದುಡಿಮೆ ಅನಿವಾರ್ಯ. ಎಲ್ಲರೂ ಮೂಲ ವೃತ್ತಿಯನ್ನು ಬಿಡದೇ ಅನಿವಾರ್ಯತೆಯಿದ್ದರೆ ಹೊಲದ ಕೂಲಿಯನ್ನು ತಪ್ಪಿಸದೇ ಬಡತನ ದೂರವಾಗಿಸಿಕೊಂಡಿದ್ದಾರೆ. ಒಗ್ಗಟ್ಟಿನ ದುಡಿಮೆ. ಸಂತಸದ ಸಂಸಾರ. ಹೊಂದಾಣಿಕೆಗೆ ಪ್ರಥಮ ಆದ್ಯತೆ. ಹಿರಿಯರಾದ ಈರಮ್ಮರದು ಸಂಸಾರದ ಬಂಡಿ ಸುಗಮವಾಗಿ ಸಾಗಲು ವಿಶೇಷ ಕಾಳಜಿ. ಬೆಳಗಿನ ಜಾವದಿಂದಲೇ ಬುಟ್ಟಿ ಹೆಣೆಯಲು ತೊಡಗುತ್ತಾರೆ. ಪತಿ ದಾವಣಗೆರೆಯಿಂದ ಬಿದಿರುಗಳನ್ನು ಖರೀದಿಸಿ ತಂದು ಆಕಾರಕ್ಕೆ ತಕ್ಕಂತೆ ಕತ್ತರಿಸಿ ಕೊಡುತ್ತಾರೆ. ರೂಪ ಕೊಡುವ ಕೆಲಸ ಈರಮ್ಮರದು. ದೊಡ್ಡ ಹಾಗೂ ಸಣ್ಣ ಗಾತ್ರದ ಬುಟ್ಟಿಗಳು, ಸಣ್ಣ ರೊಟ್ಟಿ ಬುಟ್ಟಿ, ದೊಡ್ಡ ರೊಟ್ಟಿ ಬುಟ್ಟಿ, ಬೀಸಣಿಕೆ, ತೊಟ್ಟಿಲು, ಕರಾಂಡ, ಮೆಣಸಿನ ಬುಟ್ಟಿ, ಚಾಪೆ, ಜರಡಿ, ಪೊರಕೆ, ಏಣಿ ಹೀಗೆ ಹಲವು ಬಿದಿರಿನ ವಸ್ತುಗಳನ್ನು ತಯಾರಿಸುತ್ತಾರೆ.

ತಾವು ಕಲಿತಿದ್ದು ಕಡಿಮೆ. ಮೈ ಬಗ್ಗಿಸಿ, ಬೆವರು ಸುರಿಸಿ ದುಡಿದರೂ ಕೆಲವೊಮ್ಮೆ ಆದಾಯ ಗಿಟ್ಟಿಸಿಕೊಳ್ಳಲು ಕಷ್ಟ. ಸಾಲ ಮಾಡಿ ಅಗತ್ಯ ವಸ್ತುಗಳನ್ನು ಕೊಳ್ಳಬೇಕಾದ ಸ್ಥಿತಿ ಎದುರಾಗುತ್ತದೆ. ಇಂತಹ ಕ್ಲಿಷ್ಟ ಸನ್ನಿವೇಶ ಎದುರಾದಾಗ ಇವರ ಕಣ್ಣೆದುರಿಗೆ ಬರುವುದು ಎರಡು ಮಕ್ಕಳ ಭವಿಷ್ಯ. ತಮ್ಮಂತೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಕಷ್ಟದ ಜೀವನ ಅವರಿಗೆ ಎದುರಾಗಬಾರದು ಎಂದುಕೊಂಡು ಓದಿಸಿದ್ದಾರೆ. ಹಿರಿಯ ಮಗ ಇಂಜಿನಿಯರಿಂಗ್ ಮುಗಿಸಿದ್ದಾನೆ. ಎರಡನೆಯ ಮಗ ಡಿಪ್ಲೋಮಾ ಓದುತ್ತಿದ್ದಾನೆ. ಹಣದ ಅಗತ್ಯ ಎದುರಾದಾಗ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಎಂದಿಗೂ ಕೈಬಿಟ್ಟಿಲ್ಲ ಎನ್ನುವುದು ಇವರ ಅಂತರ್ಯದ ನುಡಿ. ಸ್ವ ಉದ್ಯೋಗಕ್ಕಾಗಿ ತಾವು ಇರುವ ಸ್ವ ಸಹಾಯ ಸಂಘದಿಂದ ಐವತ್ತು ಸಾವಿರ ರೂಪಾಯಿಗಳನ್ನು ಯೋಜನೆಯಿಂದ ಪಡೆದಿದ್ದನ್ನು ನೆನಪಿಸಿಕೊಳ್ಳುತ್ತಾರೆ.

ಅವಿಭಕ್ತ ಕುಟುಂಬಗಳಿದ್ದರೆ ತಮ್ಮ ಮಕ್ಕಳ ಭವಿಷ್ಯದ ನೆಪವೊಡ್ಡಿ ಒಬ್ಬೊಬ್ಬರಾಗಿ ವಿಭಕ್ತಗೊಳ್ಳುವ ಕುಟುಂಬಗಳೇ ಜಾಸ್ತಿ. ಆದರೆ ಹೊಂದಾಣಿಕೆಯಿಂದ ಕುಟುಂಬ ನಿರ್ವಹಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಎಲ್ಲರೂ ಸಂತಸದಿಂದ ಇರುವಂತೆ ಸರಿದೂಗಿಸಿಕೊಂಡು ಹೋಗುತ್ತಿರುವ ಈರಮ್ಮ ಇವರ ಸಾಧನೆ ಮಾದರಿಯೇ ಸರಿ.

Leave a Reply

Your email address will not be published. Required fields are marked *