ಹಾವೇರಿಯ ಸಂಗೂರು ಗ್ರಾಮದ ಚಂದ್ರಕಾಂತ್ ಸಂಗೂರು ಹಾರಕ ಕೃಷಿಯಲ್ಲಿ ಪಳಗಿದವರು. ಮಳೆಯ ಅಭಾವ ಹಾವೇರಿಯಲ್ಲಿ ಪ್ರತೀ ವರ್ಷ ಮರುಕಳಿಸುವುದು ಸರ್ವೇ ಸಾಮಾನ್ಯ. ಸಾವಿರಾರು ಎಕರೆಯಲ್ಲಿ ಬಿತ್ತಿದ ವಾಣಿಜ್ಯ ಬೆಳೆಗಳು, ಹೆಚ್ಚು ಹಣ ಗಳಿಕೆಯ ಉದ್ದೇಶದಿಂದ ಬೆಳೆಸಿದ ಕಬ್ಬು ಕೃಷಿ ನಷ್ಟ ತಂದೊಡ್ಡುವುದು ಸಹಜವೆಂಬಂತೆ ಇಲ್ಲಿ ಪುನರಾವರ್ತನೆ ಯಾಗುತ್ತಿರುತ್ತದೆ. ಆದರೆ ಸಿರಿಧಾನ್ಯದ ‘ಸಿರಿ’ ಯ ಅರಿವು ಪದವೀಧರರಾದ ಚಂದ್ರಕಾಂತ್‍ರಲ್ಲಿದೆ. ಹಾಗಾಗಿ ಬಹು ಹಿಂದಿನಿಂದಲೂ ಸಿರಿಧಾನ್ಯ ಕೃಷಿಯಲ್ಲಿ ತೊಡಗಿದ್ದಾರೆ. ತಮಗಿರುವ ನಲವತ್ತು ಎಕರೆಯನ್ನೂ ಸಿರಿಧಾನ್ಯ ಬೆಳೆಗೆ ಮೀಸಲಿಟ್ಟಿದ್ದಾರೆ. ಇದರಲ್ಲಿ ಹಾರಕ ಬೆಳೆಯ ವಿಸ್ತಾರ ಹತ್ತು ಎಕರೆ. ಇದು 150 ದಿನಕ್ಕೆ ಕಟಾವಿಗೆ ಬರುವುದರಿಂದ ಮುಂಗಾರಿನಲ್ಲಿ ಮಾತ್ರ ಬೆಳೆಯಬಹುದು. ಹಿಂಗಾರಿನಲ್ಲಿ ಬೆಳೆಯುವ ಸಾಹಸ ಮಾಡಿದರೆ ನೀರಿನ ಕೊರತೆ ಮಾರಕವಾಗಬಹುದು ಎನ್ನುತ್ತಾರೆ. ಈ ಬಾರಿ ಎಕರೆಯಿಂದ ಏಳು ಕ್ವಿಂಟಾಲ್ ಇಳುವರಿ ಗಿಟ್ಟಿಸಿಕೊಂಡಿದ್ದಾರೆ. ಉಳುಮೆ ಮಾಡುವಾಗ ಎಕರೆಗೆ ಒಂದು ಟ್ರಾಕ್ಟರ್ ಲೋಡ್ ಕೊಟ್ಟಿಗೆಯ ಗೊಬ್ಬರ ಮಣ್ಣಿಗೆ ಸೇರಿಸಿದ್ದು ಹೊರತು ಪಡಿಸಿದರೆ ಮತ್ತೇನನ್ನೂ ಬಳಸಲಿಲ್ಲ. ಹಾರಕದ ಬೆಳೆಗೆ ರೋಗ ಹತ್ತಿರವೂ ಸುಳಿಯದಿರುವುದರಿಂದ ಸಿಂಪರಣೆಯ ಮಾತು ದೂರ. ‘ಭರ್ತಿ ಲಾಭದಾಯಕ ಕೃಷಿ ಹಾರಕದ್ದು’ ಎನ್ನುವ ನುಡಿ ಚಂದ್ರಕಾಂತ್ ಅವರದು.
ಹಾರಕ ನೂರೈವತ್ತು ದಿನಕ್ಕೆ ಕಟಾವಿಗೆ ಬರುತ್ತದೆ. ಎಕರೆಗೆ 5-7 ಕಿಂಟಾಲ್ ಇಳುವರಿ ದೊರೆಯುತ್ತದೆ. ಕ್ವಿಂಟಾಲ್ ಹಾರಕಕ್ಕೆ 6,000-7,000 ದರವಿದೆ. ಚಂದ್ರಕಾಂತ್ ಅವರ ಲಾಭದ ಲೆಕ್ಕ ಹೇಳುವುದಾದರೆ ಒಂದುವರೆ ಎಕರೆಯಲ್ಲಿ ಹನ್ನೆರಡು ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ಕ್ವಿಂಟಾಲ್ ಹಾರಕಕ್ಕೆ 6,000 ರೂಪಾಯಿ ದರ ಸಿಕ್ಕಿದೆ. 72,000 ರೂಪಾಯಿ ಗಳಿಕೆ. ಕೃಷಿಗೆ ಖರ್ಚು ಮಾಡಿದ್ದು ಹತ್ತು ಸಾವಿರ ರೂಪಾಯಿಗಳು ಮಾತ್ರ. 62,000 ರೂಪಾಯಿ ಲಾಭದ ಬಾಪ್ತು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರಚುರಪಡಿಸುತ್ತಿರುವ ಸಿರಿಧಾನ್ಯ ಬೆಳೆ ಯೋಜನೆಯ ಬಗ್ಗೆ ಒಲವು ಹೊಂದಿದ್ದಾರೆ. ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾರೆ. ಹಾರಕ ಬೆಳೆದರೆ ರೈತನ ಆತ್ಮವಿಶ್ವಾಸ ಏರುವುದರಲ್ಲಿ ಸಂದೇಹವಿಲ್ಲ ಎನ್ನುವ ಮಾತು ಇವರದು.