ಒಂದೆರಡು ವರ್ಷ ಬಾಳೆ ಕೃಷಿ ಕೈಗೊಂಡ ಬಳಿಕ ಕೈಬಿಡುವವರೇ ಹೆಚ್ಚು. ಹಾಗೊಂದು ವೇಳೆ ಮುಂದುವರೆಸಿದರೂ ಸ್ಥಳ ಬದಲಾಯಿಸಿ, ಗಿಡ ಬದಲಿಸಿ ಬಾಳು ಬೆಳಗಿಸಿಕೊಳ್ಳುವ ರೈತರು ಸಾಮಾನ್ಯ. ಆದರೆ ಇಲ್ಲೋರ್ವ ರೈತರಿದ್ದಾರೆ. ಇವರು ಹನ್ನೊಂದು ವರ್ಷಗಳಿಂದ ಬಾಳೆ ಕೃಷಿ ಮುಂದುವರೆಸಿಕೊಂಡು ಬಂದಿದ್ದಾರೆ. ಅಚ್ಚರಿಯೇನೆಂದರೆ ಅರ್ಧ ಎಕರೆಯಲ್ಲಿ ಹನ್ನೊಂದು ವರ್ಷದ ಹಿಂದೆ ನಾಟಿ ಮಾಡಿದ ಬಾಳೆಯ ಕೂಳೆ ಬೆಳೆಯಿಂದ ಈಗಲೂ ಫಸಲು ಪಡೆಯುತ್ತಿದ್ದಾರೆ. ಕ್ರಮವಾಗಿ ಹತ್ತು ವರ್ಷದ, ಎಂಟು ವರ್ಷದ, ಆರು ವರ್ಷದ ಅರ್ಧರ್ಧ ಎಕರೆ ಕೂಳೆ ಬಾಳೆ ಇವರ ಜಮೀನಿನಲ್ಲಿ ನೋಡಲು ಸಿಗುತ್ತದೆ. ಬಾಳೆ ಇವರ ಪಾಲಿಗೆ ಬಾಳು ಬೆಳಗುವ ಸರಕಾಗಿದೆ. ಬಾಳೆ ಕೃಷಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ಪಡೆದಿದ್ದಾರೆ. ಇತ್ತೀಚೆಗೆ ಮನೆ ನಿರ್ಮಾಣ ಮಾಡುತ್ತಿದ್ದು ಗ್ರಾಮಾಭಿವೃದ್ದಿ ಯೋಜನೆಯ ಆರ್ಥಿಕ ನೆರವು ಪಡೆದಿದ್ದಾರೆ.
ಮೂರು ಎಕರೆಯಲ್ಲಿ ಬಾಳೆ ಕೃಷಿ ಮಾಡಿದ್ದಾರೆ. ಅರ್ಧ ಎಕರೆಯನ್ನು ತರಕಾರಿ ಕೃಷಿಗೆ ಮೀಸಲಿಡುತ್ತಾರೆ. ಬಾಳೆ ಕೃಷಿಗೆ ತಗಲುವ ಗೊಬ್ಬರದ ಖರ್ಚು, ಕೂಲಿಯ ವೆಚ್ಚ ತರಕಾರಿಯಿಂದ ನೀಗಿಸಿಕೊಳ್ಳಬೇಕು ಎನ್ನುವ ಆಲೋಚನೆ ಇವರದು. ಹಾಗಾಗಿ ಟೊಮೆಟೋ, ಬದನೆ, ಎಲೆಕೋಸು, ಹೂಕೋಸು ವಿವಿಧ ಬಗೆಯ ಸೊಪ್ಪು ತರಕಾರಿಗಳನ್ನು ಬೆಳೆಯುತ್ತಾರೆ. ಸಣ್ಣ ಭೂಮಿಯಲ್ಲಿ ತರಕಾರಿಯಿಂದ ಸಿಗುವ ಆದಾಯ ಲಕ್ಷ ರೂಪಾಯಿ ದಾಟುತ್ತದೆ.
ಹನ್ನೊಂದು ವರ್ಷಗಳ ಹಿಂದೆ ಜೋಳ ಬೆಳೆಯುತ್ತಿದ್ದ ಮೂರು ಎಕರೆಯಲ್ಲಿ ಅರ್ಧ ಎಕರೆಯನ್ನು ಬಾಳೆ ಕೃಷಿಗಾಗಿ ಒಗ್ಗಿಸಿದ್ದರು. ಜಿ.9 ತಳಿಯ ಬಾಳೆ ನಾಟಿ. ಮೊದಲ ಬೆಳೆಯೇ ಅಬ್ಬರಿಸಿ ಬಂದಿತ್ತು. 40-60 ಕೆಜಿ ತೂಗಬಲ್ಲ ಗೊನೆಗಳು ಇವರನ್ನು ಅಚ್ಚರಿಗೆ ನೂಕಿತ್ತು. ಜೋಳದಿಂದ ಮೂರು ಎಕರೆಯಿಂದ ಗಳಿಸುವ ಮೊತ್ತ ಅರ್ಧ ಎಕರೆಯಲ್ಲೇ ದೊರೆತ ಖುಷಿ ಇವರನ್ನು ಬಾಳೆ ಕೃಷಿಯಲ್ಲಿ ಉತ್ಸಾಹ ಇಮ್ಮಡಿಯಾಗುವಂತೆ ಮಾಡಿತ್ತು. ವರ್ಷದ ಬಳಿಕ ಇನ್ನರ್ಧ ಎಕರೆಗೆ ಬಾಳೆ ವಿಸ್ತರಿಸಿದ್ದರು. ಬಾಳೆ ಕೈ ಹಿಡಿದಿತ್ತು. ಬಾಳೆ ಕ್ಷೇತ್ರ ವಿಸ್ತರಿಸುವ ಪ್ರಕ್ರಿಯೆ ಮುಂದುವರೆಸತೊಡಗಿದರು. ಮೂರು ಎಕರೆ ಜೋಳ ಬೆಳೆಯುವ ಭೂಮಿಯಲ್ಲಿ ಬಾಳೆ ಗಿಡಗಳು ತಲೆಯೆತ್ತಿ ನಿಂತವು.
ಒಮ್ಮೆ ನೆಟ್ಟ ಗಿಡಗಳಲ್ಲಿ ಕೂಳೆ ಬೆಳೆಯಿಂದ ಕೃಷಿ ಮುಂದುವರೆಸಿದ್ದಾರೆ. ಮೊದಲು ಊರಿದ ಗಡ್ಡೆಗಳನ್ನು ಕಿತ್ತೊಗೆದು ಹೊಸ ಗಿಡ ನಾಟಿ ಮಾಡಿಲ್ಲ. “ಗೊನೆ ಕತ್ತರಿಸಿದ ಬಳಿಕ ಹಂತ ಹಂತವಾಗಿ ಬಾಳೆ ಗಿಡಗಳನ್ನು ಕಡಿದೊಗೆದಾಗ ಪಕ್ಕದಲ್ಲಿ ಮೊಳೆತ ಗಿಡ ತಾಯಿ ಬಾಳೆಯಿಂದ ತಾಕತ್ತನ್ನು ಹೀರಿಕೊಂಡು ಸಧೃಢವಾಗಿ ಬೆಳೆಯುತ್ತಿರುವಾಗ ಹೊಸ ಗಿಡಗಳಿಗಾಗಿ ನಾನೇಕೆ ಹಣ ಖರ್ಚು ಮಾಡಬೇಕು? 50-60 ಕೆಜಿ ತೂಕದ ಗೊನೆಗಳು ಈಗಲೂ ಸಿಗುತ್ತಿವೆ” ಎನ್ನುತ್ತಾ ನೇತುಬಿದ್ದ ಉದ್ದನೆಯ ಗೊನೆಯಲ್ಲಿನ ಚಿಪ್ಪುಗಳನ್ನು ಎಣಿಸಿ ಲೆಕ್ಕ ಹೇಳ ತೊಡಗಿದರು ಬಸವರಾಜ್. ಒಂದೊಂದು ಗೊನೆಯಲ್ಲಿ 13-16 ಚಿಪ್ಪುಗಳಿದ್ದವು. ಸರಾಸರಿ 180-200 ಬಾಳೆ ಕಾಯಿಗಳು ನೆರೆತಿದ್ದವು.
ವರ್ಷಪೂರ್ತಿ ಇವರಲ್ಲಿ ಬಾಳೆಗೊನೆ ಕಟಾವಿಗೆ ಲಭ್ಯವಿರುತ್ತದೆ. ಪ್ರತೀ ಇಪ್ಪತ್ತು ದಿನಕ್ಕೊಮ್ಮೆ ಕಟಾವು ಮಾಡುತ್ತಾರೆ. ಪ್ರತೀ ಕಟಾವಿನಲ್ಲಿ 10-15 ಟನ್ ಇಳುವರಿ ಪಡೆಯುತ್ತಾರೆ. ವ್ಯಾಪಾರಸ್ಥರು ತೋಟಕ್ಕೇ ಬಂದು ಬಾಳೆ ಗೊನೆ ಖರೀದಿಸಿ ಒಯ್ಯುತ್ತಾರೆ. ಕೆಜಿ ಬಾಳೆಗೆ 8-10 ರೂಪಾಯಿ ದರ ಪಡೆಯುತ್ತಿದ್ದಾರೆ. ಬಾಳೆ ಗಿಡಗಳನ್ನು ನಾಟಿ ಮಾಡಿದಾಗ ಗಿಡ ಹಾಗೂ ಸಾಲಿನ ಮದ್ಯೆ ತರಕಾರಿ ಕೃಷಿ ಮಾಡುತ್ತಿರುವುದು ಇವರ ವಿಶೇಷತೆ. ಕಳೆದ ಬಾರಿ ನಾಟಿ ಮಾಡಿದ ಅರ್ಧ ಎಕರೆಯಲ್ಲಿ ಎಲೆಕೋಸು ಬೆಳೆದಿದ್ದರು. 80 ದಿನಕ್ಕೆ ಕಟಾವು ಆರಂಭಿಸಿದ್ದರು. ಖರ್ಚು ಕಳೆದು 35,000 ರೂಪಾಯಿ ಲಾಭ ಗಳಿಸಿದ್ದನ್ನು ನೆನಪಿಸಿಕೊಂಡರು.
ಕೃಷಿಯಲ್ಲಿ ವಿಭಿನ್ನವಾಗಿ ಯೋಚಿಸಿ ಆದಾಯ ಗಳಿಕೆಗೆ ತರಕಾರಿ, ಹೈನುಗಾರಿಕೆ, ಅಂತರ ಬೇಸಾಯದಂತಹ ಕ್ರಮ ಅನುಸರಿಸಿ ಕೃಷಿಯಲ್ಲಿ ಗೆದ್ದಿರುವ ಬಸವರಾಜ್ ರವರ ಸಾಧನೆ ಮಾದರಿಯೆನ್ನಿಸುತ್ತದೆ.
ಬಾಳು ಬೆಳಗಿತು ಬಾಳೆ
