NewsTraining

ಜಂಟಿ ಬಾಧ್ಯತಾ ಸಂಘಗಳ ಸದಸ್ಯರಿಗೆ ‘ಕೋಳಿ ಸಾಕಾಣಿಕೆ/ಕುಕ್ಕುಟ ಉದ್ಯಮ’ ತರಬೇತಿ

ಮೈಸೂರು ಮಾರ್ಚ್ 27: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ‘ಜಂಟಿ ಬಾಧ್ಯತಾ ಸಂಘ’ಗಳ ಸದಸ್ಯರಿಗೆ ‘ಕೌಶಲ್ಯಾಭಿವೃದ್ಧಿ ತರಬೇತಿ’ ಕಾರ್ಯಕ್ರಮದಡಿಯಲ್ಲಿ ಹಲವಾರು ತರಬೇತಿಗಳನ್ನು ನಿರುದ್ಯೋಗಿ ಯುವಕ ಯುವತಿಯರಿಗೆ ಹಮ್ಮಿಕೊಳ್ಳಲಾಗುತ್ತಿದ್ದು, ತತ್ಸಂಬಂಧ ದಿನಾಂಕ: 27.03.2018 ರಿಂದ 30.03.2018 ರವರೆಗೆ ‘ಕೋಳಿ ಸಾಕಾಣಿಕೆ/ಕುಕ್ಕುಟ ಉದ್ಯಮ’ ತರಬೇತಿಯನ್ನು ‘ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರು’ ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಕುಕ್ಕುಟ ಉದ್ಯಮ ತರಬೇತಿಯ ಮೂರನೇ ತಂಡವನ್ನು ಶ್ರೀಯುತ ಕೇಶವ ದೇವಾಂಗ, ಗುಂಪು ಲೆಕ್ಕಪರಿಶೋಧನಾ ಯೋಜನಾಧಿಕಾರಿಗಳು, ಪ್ರಾದೇಶಿಕ ಕಛೇರಿ, ಮೈಸೂರು ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯು ಹಲವಾರು ಕಾರ್ಯಕ್ರಮಗಳ ಮೂಲಕ ಪ್ರತಿಯೋರ್ವ ನಾಗರಿಕನನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸುತ್ತಿದೆ. ಭಾರತ ದೇಶವು ಇತರ ದೇಶಗಳಂತೆ ಉತ್ಸಾಹೀ\ ಹಾಗೂ ಉದ್ಯಮಶೀಲ ಯುವಕರನ್ನು ಸಮಾಜಕ್ಕೆ ನೀಡಬೇಕಾಗಿದ್ದು, ಇತರ ದೇಶಗಳಲ್ಲಿ ಯಾವುದೇ ಉದ್ಯೋಗಿಗಳು ಅಲ್ಲಿನ ಅವ್ಯವಸ್ಥೆಯನ್ನು ಪ್ರತಿಭಟಿಸಬೇಕಾದರೆ ಹೆಚ್ಚಿನ ಸಮಯ ಕೆಲಸ ನಿರ್ವಹಿಸಿ ನಂತರದಲ್ಲಿ ಪ್ರತಿಭಟನೆಯನ್ನು ನಡೆಸುತ್ತಾರೆ. ಅವರ ಪ್ರತಿಭಟನೆಯ ಆಶಯವು ದೇಶಕ್ಕೆ ನಷ್ಟ ತಾರದೇ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಆರೋಗ್ಯಕರ ಪ್ರತಿಭಟನೆಯಾಗಿರುತ್ತದೆ. ನಮ್ಮ ಯುವಕರೂ ತಮ್ಮೊಳಗಿರುವ ಆಲಸ್ಯವನ್ನು ತೊರೆದು ದೇಶಕ್ಕೆ ನಷ್ಟವಾಗುವ ಯಾವುದೇ ಚಟುವಟಿಕೆ ಮಾಡದೇ ದೇಶಕ್ಕೆ ಹೆಸರನ್ನು ತಂದುಕೊಡುವ ಅಥವಾ ದೇಶದ ಒಟ್ಟು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಶ್ರಮಿಸುವ ಯುವಕರಾಗಬೇಕು ಎಂದರು. ಕುಕ್ಕಟ ಉದ್ಯಮದಲ್ಲಿ ಪ್ರಮುಖವಾಗಿ ಮೊಟ್ಟೆ ಹಾಗೂ ಮಾಂಸ ವ್ಯಾಪಾರಕ್ಕೆ ಬೇಡಿಕೆಯಿದ್ದು, ವೈಜ್ಞಾನಿಕ ಮಾದರಿಯಲ್ಲಿ ಗುಣಮಟ್ಟದಿಂದ ವ್ಯವಹಾರವನ್ನು ನಡೆಸಬೇಕೆಂದು ತಿಳಿಸಿ ಶುಭಕೋರಿದರು.

ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಯುತ ಸಂತೋಷ್ ರಾವ್.ಪಿ ಇವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯು ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಸಮಾಜಕ್ಕೆ ಹಾಗೂ ಫಲಾನುಭವಿಗಳಿಗೆ ನೀಡುತ್ತಿದ್ದು, ಇದು ಕೇವಲ ಧಾರ್ಮಿಕ ಕೇಂದ್ರವಷ್ಟೇ ಆಗಿರದೇ ಸಮುದಾಯ ಅಭಿವೃದ್ಧಿ, ಕುಟುಂಬ ಬಲವರ್ಧನೆ ಹಾಗೂ ನ್ಯಾಯಯುತ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟಿದೆ. ನಮ್ಮ ದೇಶವು ನೈಸರ್ಗಿಕವಾಗಿ ಹಾಗೂ ಮಾನವ ಸಂಪನ್ಮೂಲದಲ್ಲಿಯೂ ಇತರ ಎಲ್ಲಾ ದೇಶಗಳಿಗಿಂತ ಹೆಚ್ಚು ಸಮೃದ್ಧಿಯಿಂದ ಕೂಡಿದ್ದು, ಕೌಶಲ್ಯದ ಕೊರತೆಯಿಂದಾಗಿ ಸಂಪನ್ಮೂಲದ ಸದ್ಭಳಕೆಗಾಗಿ ಇತರ ದೇಶಗಳನ್ನು ಅವಲಂಬಿಸಿದೆ. ಇದರ ಬದಲಾಗಿ ಇಂದಿನ ಯುವಕರು ವೈವಿಧ್ಯಮಯ ಕೌಶಲ್ಯಗಳನ್ನು ಗಳಿಸಿಕೊಂಡಾಗ ಈ ಪರಾವಲಂಬನೆಯಿಂದ ಹೊರಬಹುದಾಗಿದೆ. ಇದಕ್ಕೆ ಪೂರಕ ಮಾರ್ಗವೆಂದರೆ ‘ಸ್ವ-ಉದ್ಯೋಗ’ವನ್ನು ಕೈಗೊಳ್ಳುವುದು. ಸ್ವ-ಉದ್ಯೋಗದಿಂದ ಅನೇಕ ರೀತಿಯ ಉಪಯೋಗಗಳಿದ್ದು, ಇತರರ ಕೈಕೆಳಗೆ ದುಡಿಯುವ ಬದಲು ತನ್ನ ಬಂಡವಾಳದೊಂದಿಗೆ ತನ್ನದೇ ಉದ್ಯಮದಲ್ಲಿ ದುಡಿದು ಗಳಿಸುವಲ್ಲಿ ಗಮನವಹಿಸಬೇಕು ಹಾಗೂ ಕಡಿಮೆ ಬಂಡವಾಳದಿಂದ ಆರಂಭಿಸುವ ಉದ್ಯೋಗವೊಂದಿದ್ದರೆ ಅದು ಕುಕ್ಕಟ ಉದ್ಯ, ಈ ಉದ್ಯಮವನ್ನು ಆಸಕ್ತಿದಾಯಕವಾಗಿ ಮಾಡಿದ್ದಲ್ಲಿ ಧನಾತ್ಮಕ ಅಭಿವೃದ್ಧಿಯನ್ನು ಕಾಣಬಹುದಾಗಿದ್ದು ಇದಕ್ಕೆ ಪೂರಕವಾಗಿ ವೈಜ್ಞಾನಿಕ ಮಾದರಿಯನ್ನು ಅಳವಡಿಕೆ ಮಾಡಬೇಕಾಗಿದೆ ಎಂದು ತಿಳಿಸುತ್ತ ತರಬೇತಿಯಲ್ಲಿ ಅಳವಡಿಸಲಾಗಿರುವ ವಿಷಯಗಳ ರೂಪುರೇಷೆಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀ ಶಿವಕುಮಾರ್.ಆರ್ ಉಪಸ್ಥಿತರಿದ್ದರು.

4 ದಿನಗಳ ಈ ತರಬೇತಿಯಲ್ಲಿ ಚಾಮರಾಜನಗರ, ಕೋಲಾರ, ಬೆಂ.ಗ್ರಾಮಾಂತರ, ಮಂಡ್ಯ, ಮೈಸೂರು ಜಿಲ್ಲೆಗಳ ವಿವಿಧ ತಾಲೂಕುಗಳ ಒಟ್ಟು 29 ಮಂದಿ ಭಾಗವಹಿಸುತ್ತಿದ್ದು, ಮಾಹಿತಿ, ಪ್ರಾಯೋಗಿಕ ಕಲಿಕೆ, ವೀಡಿಯೋ ವೀಕ್ಷಣೆ, ವಿವಿಧ ಚಟುವಟಿಕೆಗಳು ಮತ್ತು ಕ್ಷೇತ್ರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿರುತ್ತದೆ.

Leave a Reply

Your email address will not be published. Required fields are marked *